ಕೇರಳದ ಗಡಿನಾಡಿನಲ್ಲೊಂದು ದೇಸೀ ಗೋ ತಳಿಗಳ ಗೋಶಾಲೆ. ಅಲ್ಲಿ ಗೋವುಗಳಿಗೆ ಸ್ವಚ್ಛಂದ ವಿಹಾರ, ಯಾವುದೇ ಕಟ್ಟುಪಾಡು ಇಲ್ಲ, ಹಾಲು ಹಿಂಡಿ ಮಾರಾಟ ಮಾಡುವುದಿಲ್ಲ, ದಿನನಿತ್ಯವೂ ಗೋವುಗಳಿಗೆ ಕಿವಿಗಿಂಪು ಸಂಗೀತ, ಇಲ್ಲಿನ ಗೋವು ಸಂಗೀತ ಲಹರಿಗೆ ಕಿವಿಯಾಗುತ್ತದೆ, ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಸೋಜಿಗ ಮೂಡಿಸುತ್ತದೆ.
ಆತ್ಮಭೂಷಣ್, ಮಂಗಳೂರು
ಕೇರಳದ ಗಡಿನಾಡಿನಲ್ಲೊಂದು ದೇಸೀ ಗೋ ತಳಿಗಳ ಗೋಶಾಲೆ. ಅಲ್ಲಿ ಗೋವುಗಳಿಗೆ ಸ್ವಚ್ಛಂದ ವಿಹಾರ, ಯಾವುದೇ ಕಟ್ಟುಪಾಡು ಇಲ್ಲ, ಹಾಲು ಹಿಂಡಿ ಮಾರಾಟ ಮಾಡುವುದಿಲ್ಲ, ದಿನನಿತ್ಯವೂ ಗೋವುಗಳಿಗೆ ಕಿವಿಗಿಂಪು ಸಂಗೀತ, ಇಲ್ಲಿನ ಗೋವು ಸಂಗೀತ ಲಹರಿಗೆ ಕಿವಿಯಾಗುತ್ತದೆ, ತಾಳಕ್ಕೆ ತಕ್ಕಂತೆ ಕುಣಿಯುತ್ತಾ ಸೋಜಿಗ ಮೂಡಿಸುತ್ತದೆ.
undefined
ಕಾಸರಗೋಡು ಜಿಲ್ಲಾ ಕೇಂದ್ರದ ಪೆರಿಯ ಎಂಬಲ್ಲಿ 12 ಎಕರೆ ವಿಶಾಲ ಪ್ರದೇಶ ಗೋಮಾತೆಗೆ ಮೀಸಲು. ಇಲ್ಲೇ ತಲೆ ಎತ್ತಿದೆ ‘ಗೋಕುಲಂ’ ಹೆಸರಿನ ಗೋಶಾಲೆ. 2010ರಲ್ಲಿ ಆರಂಭವಾದ ಈ ಗೋಶಾಲೆಯಲ್ಲಿ ಈಗ ವೈವಿಧ್ಯಮಯಿ ದೇಸೀ ಹಸುಗಳು. ಈ ಗೋಶಾಲೆಯ ಹಿಂಭಾಗದಲ್ಲಿ ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯ ಇದೆ. ಅಲ್ಲಿನ ಸಂಶೋಧನಾ ವಿದ್ಯಾರ್ಥಿಗಳಿಗೆ ಈ ಗೋಶಾಲೆ ಅಧ್ಯಯನ ಕೇಂದ್ರ. ಸಮೀಪವೇ ಇರುವ ಟಾಟಾ ಸಮೂಹದ ಬೇಕಲ್ ತಾಜ್ ಸ್ಟಾರ್ ಹೊಟೇಲ್‌ಗೆ ಬಂದವರಿಗೂ ಈ ಗೋಶಾಲೆ ಪ್ರವಾಸಿ ತಾಣ.
ಎರಡು ಕಾಲಿನ ಕರು ಜನನ: ಪರಶಿವನ ಪುನರ್ಜನ್ಮವೆಂದು ಪೂಜಿಸಿದ ಜನ
ಗೋವುಗಳ ಆಡುಂಬೊಲ
ನಾಡಿನ ಅನೇಕ ಗೋಶಾಲೆಗಳಿಗಿಂತ ಈ ಗೋಕುಲಂ ಗೋಶಾಲೆ ವಿಭಿನ್ನ. ದೇಸೀಯ ಅಪರೂಪದ ಗೋ ತಳಿಗಳು ಇಲ್ಲಿವೆ. ವೆಚ್ಚೂರು, ಕಾಸರಗೋಡು ಗಿಡ್ಡ, ಮಲೆನಾಡು ಗಿಡ್ಡ, ಕಾಂಗಯಂ, ಬರಗೂರು, ಹಳ್ಳಿಕಾರ್, ಗೀರ್, ಕಾಂಕ್ರೆಜ್, ಓಂಗೋಲ್ ಸೇರಿದಂತೆ ಒಂಭತ್ತು ವಿಧದ ತಳಿಗಳ ಸಂಸಾರ. ಕಪಿಲಾ ಗೋವಿನಿಂದ ತೆರೆದ ಈ ಗೋಶಾಲೆಯಲ್ಲಿ ಪ್ರಸಕ್ತ 195 ಗೋವುಗಳಿವೆ. ಅದರಲ್ಲೂ 82 ಆಯಾ ತಳಿಗಳ ಹೋರಿ ಕರುಗಳು. ಕಸಾಯಿಖಾನೆಯಿಂದ ತಂದ ದೇಸೀ ತಳಿಗಳೂ ಇಲ್ಲಿವೆ.
ಹಾಲು ಮಾರಾಟ ಇಲ್ಲ
13 ವರ್ಷದ ಹಿಂದೆ ಗೋಶಾಲೆ ಆರಂಭವಾದಂದಿನಿಂದ ಇಲ್ಲಿವರೆಗೆ ಒಂದು ಲೀಟರ್ ಹಾಲು ಕೂಡ ಇಲ್ಲಿ ಮಾರಾಟ ಮಾಡುವುದಿಲ್ಲ. ಆಕಳ ಹಾಲನ್ನು ಕರುವಿಗೆ ಬಿಟ್ಟುಬಿಡುತ್ತಾರೆ. ಕೇವಲ ನಿತ್ಯದ ಆಗುಹೋಗುಗಳಿಗೆ ಮಾತ್ರ ಹಾಲು ಬಳಕೆ ಮಾಡುತ್ತಾರೆ. ಪಶು ಆಹಾರವನ್ನು ತರುವುದೇ ಇಲ್ಲ. ಹಸಿರು ಹುಲ್ಲು, ಜೋಳದ ಹುಲ್ಲು, ತೆಂಗಿನ ಹಿಂಡಿ, ಎಳ್ಳಿಂಡಿ, ಕಡ್ಲೆ ಹಿಂಡಿ ಮಾತ್ರ ಇಲ್ಲಿ ಪಶು ಆಹಾರ.
ಗೋ ಆರೋಗ್ಯ ಜೀವನ
ಕಳೆದ ವರ್ಷ ಅನೇಕ ರಾಜ್ಯಗಳನ್ನು ಕಂಗೆಡಿಸಿದ ಚರ್ಮ ಗಂಟು ರೋಗ ಇಲ್ಲಿ ಬಾಧಿಸಿಲ್ಲ, ಮಾತ್ರವಲ್ಲ ಗೋಶಾಲೆ ಶುರುವಾದ ಬಳಿಕದ ದಿನಗಳಲ್ಲಿ ಇಂದಿನ ವರೆಗೆ ಯಾವುದೇ ರೋಗ ಗೋವುಗಳಿಗೆ ಬಂದಿಲ್ಲ. ಪಶು ವೈದ್ಯಕೀಯ ಇಲಾಖೆಯೂ ಇತ್ತ ಸುಳಿದಿಲ್ಲ. ಇಷ್ಟೊಂದು ಸಂಖ್ಯೆಯಲ್ಲಿ ಗೋವು, ಗೋಮೂತ್ರ, ಸೆಗಣಿ, ಸ್ಲರಿ ಇದ್ದರೂ ಇಲ್ಲಿ ಸೊಳ್ಳೆಯ ಕಾಟವೇ ಇಲ್ಲ ಎನ್ನುವುದು ಗಮನಾರ್ಹ ಸಂಗತಿ.
ಗೋ ಉತ್ಪನ್ನ ಮಾರಾಟಕ್ಕಲ್ಲ
ಗೋವಿನಿಂದ ಪಂಚಗವ್ಯ ಮಾತ್ರವಲ್ಲ, ದೇಸಿ ಗೋವುಗಳ ಸೆಗಣಿಯಿಂದ ಎರೆಗೊಬ್ಬರ, ಕಟ್ಟಿಗೆ, ಅಗರಬತ್ತಿ, ವಿಭೂತಿ, ಟೂತ್‌ಪೌಡರ್, ವೈಶ್ವನರಾಯ ಚೂರ್ಣ(ಆ್ಯಸಿಡಿಟಿ, ಗ್ಯಾಸ್ಟ್ರಿಕ್‌ಗೆ), ಗೋಮೂತ್ರದಿಂದ ಅರ್ಕ, ಫಿನಾಯಿಲ್, ಪೇಯಿನ್ ಬಾಮ್ ಹೀಗೆ 40 ವಿಧದ ಉತ್ಪನ್ನ ತಯಾರಾಗುತ್ತದೆ. ಆದರೆ ಯಾವುದನ್ನೂ ವಾಣಿಜ್ಯ ದೃಷ್ಟಿಯಿಂದ ಮಾರುಕಟ್ಟೆ ಮಾಡುತ್ತಿಲ್ಲ. ಬೇಕಾದವರು ಗೋಶಾಲೆಗೆ ಬಂದು ತೆಗೆದುಕೊಂಡು ಹೋಗುತ್ತಾರೆ, ಇಲ್ಲವೇ ಬೇಡಿಕೆ ಇರುವಲ್ಲಿಗೆ ಕೊರಿಯರ್ ಮೂಲಕ ಕಳುಹಿಸುತ್ತಾರೆ.
Gadag: ಸಗಣಿಯಿಂದ ರಾಖಿ ತಯಾರಿಸಿದ ನರಗುಂದದ ರೈತ!
ದೇಸೀ ತುಪ್ಪ, ಮಜ್ಜಿಗೆ, ಮೊಸರಿಗೆ ಬೇಡಿಕೆ
ಗೋಕುಲಂ ದೇಸೀ ಗೋಶಾಲೆಯಲ್ಲಿ ತಯಾರಾಗುವ ತುಪ್ಪ, ಮಜ್ಜಿಗೆ ಹಾಗೂ ಮೊಸರಿಗೆ ಬಹು ಬೇಡಿಕೆ. ಇದೆ. ಎರಡು ದಿನಕ್ಕೆ ಮೂರ್ನಾಲ್ಕು ಕಿಲೋ ತುಪ್ಪ ಸಿದ್ಧವಾಗುತ್ತದೆ. ಇದನ್ನು ಮಾರಾಟ ಮಾಡುತ್ತಾರೆ. ಗೋವಿನ ಸೆಗಣಿ ಮತ್ತು ಸ್ಲರಿಯನ್ನು ಅಡಕೆ ತೋಟಕ್ಕೆ ಬಳಸುತ್ತಾರೆ. ಇಲ್ಲಿಯೂ ಸಾವಯವ ನೈಸರ್ಗಿಕ ಕೃಷಿ. 400 ಅಡಕೆ ಗಿಡ, 250 ತೆಂಗಿನ ಗಿಡ ಬೆಳೆಸಿದ್ದಾರೆ. ಉಳಿದ ಜಾಗ ಗೋವುಗಳಿಗೆ ಹುಲ್ಲುಗಾವಲು. ಬಂಡೆಯಂತೆ ಗಟ್ಟಿಮುಟ್ಟಾದ ಪ್ರದೇಶವಾದ್ದರಿಂದ ಇಲ್ಲಿ ಕೃಷಿ ಸುಲಭವಲ್ಲ ಎನ್ನುತ್ತಾರೆ ಅವರು.
ಕಲಿತದ್ದು ಕೇಂಬ್ರಿಡ್ಜ್‌ನಲ್ಲಿ, ಉಸ್ತುವಾರಿ ಗೋಶಾಲೆಯದ್ದು!
ಗೋಕುಲಂ ಗೋಶಾಲೆಯ ದೇಸೀ ತಳಿಗಳ ಅಚ್ಚುಮೆಚ್ಚಿನ ಮೇಲ್ವಿಚಾರಕಿ ಡಾ.ನಾಗರತ್ನ ಹೆಬ್ಬಾರ್. ಇಡೀ ಗೋಶಾಲೆಯ ಉಸ್ತುವಾರಿ ಡಾ.ನಾಗರತ್ನ ಹೆಬ್ಬಾರ್ ಅವರದ್ದು. ಪತಿ ವಿಷ್ಣು ಹೆಬ್ಬಾರ್ ಜ್ಯೋತಿಷ್ಯದ ನಿಮಿತ್ತ ಊರೂರು ತೆರಳಿದರೆ, ಗೋಶಾಲೆಯ ಎಲ್ಲಾ ಆಗುಹೋಗುಗಳ ಜವಾಬ್ದಾರಿ ಡಾ.ನಾಗರತ್ನ ಹೆಬ್ಬಾರ್ ಹೆಗಲಿಗೆ.
ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕರ್ಕಿಯವರಾದ ನಾಗರತ್ನ ಅವರು ಕೆಮಿಕಲ್ ಬಯಾಲಜಿಯಲ್ಲಿ ಡಾಕ್ಟರೇಟ್ ಪದವಿ ಪಡೆದದ್ದು ಇಂಗ್ಲೆಂಡ್‌ನ ಕೇಂಬ್ರಿಡ್ಜ್‌ನಲ್ಲಿ. 2012ರಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಅಲೋಪತಿಯಲ್ಲಿ ಸಂಶೋಧನೆ ಕೈಗೊಂಡಿದ್ದರು. ಕಾಸರಗೋಡು ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವೃತ್ತಿ ನಡೆಸಿದ್ದರು. ಇವರ ಸಂಶೋಧನೆ ಕುರಿತ ಬರಹ ‘ನ್ಯಾಚುರಲ್’ ಹೆಸರಿನ ಅಂತಾರಾಷ್ಟ್ರೀಯ ಜರ್ನಲ್‌ನಲ್ಲಿ ಪ್ರಕಟವಾಗಿದೆ. ಗೋವಿನ ಬಗ್ಗೆ ವಿಶೇಷ ಆಸಕ್ತಿ, ಮುತುವರ್ಜಿಯಿಂದ ಉದ್ಯೋಗಕ್ಕೆ ತಿಲಾಂಜಲಿ ನೀಡಿ ಈಗ ಗೋ ಸಾಕಣಿಕೆಯನ್ನೇ ಮುಖ್ಯ ವೃತ್ತಿಯಾಗಿ ಮಾಡಿಕೊಂಡಿದ್ದಾರೆ.
‘ಗೋಕರ್ಣ ಮಂಡಲಾಧೀಶ್ವರ ಶ್ರೀರಾಘವೇಶ್ವರ ಭಾರತೀ ಮಹಾಸ್ವಾಮೀಜಿ ಅವರು ದೇಸೀ ಗೋ ತಳಿ ಬಗೆಗಿನ ಕಾಳಜಿ, ಪ್ರೇರಣೆಯೇ ನಮ್ಮ ಗೋಶಾಲೆಗೆ ಮೂಲಾಧಾರ’ ಎನ್ನುತ್ತಾರೆ ವಿಷ್ಣು ಪ್ರಸಾದ್ ಹೆಬ್ಬಾರ್.
ಜ್ಯೋತಿಷ್ಯದ ಆದಾಯವೂ ಗೋಶಾಲೆಗೆ
ವಿಷ್ಣು ಪ್ರಸಾದ್ ಹೆಬ್ಬಾರ್ ಅವರು ವೃತ್ತಿಯಲ್ಲಿ ಜ್ಯೋತಿಷಿ, ಪಶುಪಾಲನೆ ಇವರ ಪ್ರವೃತ್ತಿ. ವರ್ಷಪೂರ್ತಿ ದೇಶದ ನಾನಾ ಕಡೆಗಳಲ್ಲಿ ಸುತ್ತಾಟ. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮ ಸೇರಿದಂತೆ ರಾಜಕಾರಣಿಗಳ ಜತೆ ನಿಕಟ ಒಡನಾಟ. ಗೋಶಾಲೆಗೆ ಯಾರಿಂದಲೂ ದೇಣಿಗೆ ಸಂಗ್ರಹಿಸುತ್ತಿಲ್ಲ, ಸರ್ಕಾರಗಳ ನೆರವನ್ನೂ ಯಾಚಿಸುವುದಿಲ್ಲ. ತನ್ನ ವೃತ್ತಿಯಿಂದ ಬರುವ ಎಲ್ಲ ಆದಾಯವನ್ನು ಗೋಶಾಲೆಗೆ ಮುಡಿಪಾಗಿಡುತ್ತಾರೆ. ಗೋಕುಲಂ ಗೋಶಾಲೆಯಲ್ಲಿ 19 ಮಂದಿ ಕೆಲಸಗಾರರಿದ್ದಾರೆ, ಅವರ ಖರ್ಚು, ಗೋಶಾಲೆಯ ವೆಚ್ಚ ಎಲ್ಲವನ್ನೂ ಸರಿದೂಗಿಸುತ್ತಾ ಗೋಶಾಲೆ ಮುನ್ನಡೆಯುತ್ತಿದೆ.
ಎಲ್ಲೆಲ್ಲೂ ಸಂಗೀತವೇ...
ಗೋಕುಲಂ ಪರಿಸರ ಪೂರ್ತಿ ಸಂಗೀತಮಯ. ಗೋವುಗಳಿಗೆ ಬೆಳಗ್ಗಿನಿಂದ ಸಂಜೆವರೆಗೆ ಶಾಸ್ತ್ರೀಯ ಸಂಗೀತದ ಕರ್ಣಾನಂದ. ಸಂಗೀತ ನಾದ ಕೇಳುತ್ತಾ ಗೋವುಗಳ ಸುತ್ತಾಟ.. 2021ರ ದೀಪಾವಳಿಯಂದು ಗೋಕುಲಂನಲ್ಲಿ ಸಂಗೀತ ಕಛೇರಿ ಶುರು ಮಾಡಿದ್ದರು. ವಿಷ್ಣು ಹೆಬ್ಬಾರ್ ಮತ್ತು ಡಾ.ನಾಗರತ್ನ ಹೆಬ್ಬಾರ್ ಅವರು ಪ್ರತಿಭೆಗಳಿಗೆ ಸಾಕಷ್ಟು ಅವಕಾಶ ನೀಡುವುದರ ಜತೆಗೆ ರಾಷ್ಟ್ರ ಮಟ್ಟದ ಖ್ಯಾತನಾಮ ಕಲಾವಿದರನ್ನೂ ಕರೆಸಿ ಸಂಗೀತ ಕಛೇರಿಯ ರಸದೌತಣ ನೀಡಲಾರಂಭಿಸಿದರು. ಮೂರು ವರ್ಷಗಳ ಹಿಂದೆ ಮೂರು ದಿನಗಳ ಕಛೇರಿ ಇದ್ದುದು ಕಳೆದ ವರ್ಷ ಎಂಟು ದಿನಗಳಿಗೆ ವಿಸ್ತರಣೆಗೊಂಡಿತು. ಈ ವರ್ಷವೂ ನ.10ರಿಂದ 19ರ ವರೆಗೆ 10 ದಿನಪೂರ್ತಿ ಸಂಗೀತ ಕಛೇರಿ ಜತೆಗೆ ಭರತನಾಟ್ಯ ಶಾಸ್ತ್ರೀಯ ನೃತ್ಯದ ಸಾಕ್ಷಾತ್ಕಾರ ನಡೆಯಲಿದೆ. ಈ ಬಾರಿ ಸುಮಾರು 350 ಮಂದಿ ಕಲಾವಿದರು ಆಗಮಿಸಲಿದ್ದು, ಎಲ್ಲರೂ ಸ್ವಯಂ ಆಗಿ ಕಲಾ ಸೇವೆ ಸಲ್ಲಿಸುತ್ತಿರುವುದು ವಿಶೇಷ. ಗೋಕುಲಂನಲ್ಲಿ ವರ್ಷಂಪ್ರತಿ ಅಲ್ಲದೆ, ಪ್ರತಿ ತಿಂಗಳೂ ಸಂಗೀತ ಕಛೇರಿ ನಡೆಯುತ್ತಿರುತ್ತದೆ.
ತಲೆದೂಗುವ ಗೋವು
ಗೋಕುಲಂ ಗೋಶಾಲೆಯ ಗೋವುಗಳೂ ಸಂಗೀತ ಆಸ್ವಾದಿಸುತ್ತವೆ ಎಂದರೆ ಅಚ್ಚರಿ ಪಡಲೇ ಬೇಕು. ಕಳೆದ ವರ್ಷ ಪ್ರಸಿದ್ಧ ಕಲಾವಿದ ಬೆಂಗಳೂರಿನ ಪಟ್ಟಾಭಿರಾಮ ಪಂಡಿತ್ ಅವರ ಸಂಗೀತ ಕಛೇರಿ ನಡೆಯುತ್ತಿದ್ದಾಗ ಅಲ್ಲೇ ಗೋಶಾಲೆಯಲ್ಲಿದ್ದ ಕಾಂಕ್ರಿಜ್ ತಳಿಯ ‘ರಾಣಿ’ ಗೋವು ಸಂಗೀತಕ್ಕೆ ತಲೆದೂಗುವಂತೆ ಹಾವಭಾವ ಪ್ರಕಟಪಡಿಸಿತ್ತು. ಈ ಸುದ್ದಿ ಸಾಕಷ್ಟು ವೈರಲ್ ಕೂಡ ಆಗಿತ್ತು. ಬಳಿಕ ಈಗ ಗೀರ್ ತಳಿಯ ಗೋವು ಸಂಗೀತದ ನಾದಕ್ಕೆ ಮೈಯಾಡಿಸುತ್ತಾ ಅಚ್ಚರಿ ಮೂಡಿಸುತ್ತಿದೆ ಎನ್ನುತ್ತಾರೆ ವಿಷ್ಣು ಪ್ರಸಾದ್ ಹೆಬ್ಬಾರ್.
ಪರಂಪರಾ ವಿದ್ಯಾಪೀಠ
ಗೋಕುಲಂ ಗೋಶಾಲೆ ಒಂದೆಡೆಯಾದರೆ, ಪರಂಪರಾ ಹೆಸರಿನ ವಿದ್ಯಾಪೀಠವನ್ನೂ ವಿಷ್ಣು ಪ್ರಸಾದ್ ಹೆಬ್ಬಾರ್ -ಡಾ.ನಾಗರತ್ನ ಹೆಬ್ಬಾರ್ ದಂಪತಿ 2022ರಲ್ಲಿ ಆರಂಭಿಸಿದ್ದಾರೆ.
ಭಾರತೀಯ ಕಲೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದಕ್ಕೆ ಇಲ್ಲಿ ಪ್ರಾಮುಖ್ಯತೆ ನೀಡುತ್ತಿದ್ದಾರೆ. ಇಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ರೆಕಾರ್ಡನ್ನು ಅಮೆಜಾನ್, ಸ್ಫೋಟಿಫೈ, ಆ್ಯಪಲ್, ಯೂಟ್ಯೂಬ್‌ಗಳಲ್ಲಿ ಪಸರಿಸುತ್ತಾರೆ. ವರ್ಲಿ ಪೈಂಟಿಂಗ್ ಮೂಲಕ ಗೋಶಾಲೆಯ ಅಂದಕ್ಕೆ ಚಿತ್ತಾರ ಬರೆಯುತ್ತಿದ್ದಾರೆ.
ಎಲ್ಲಿದೆ ಗೋಕುಲಂ ಗೋಶಾಲೆ?
ಗೋಕುಲಂ ಗೋಶಾಲೆ ಮಂಗಳೂರು-ಕೊಚ್ಚಿನ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಸರಗೋಡು ಸಮೀಪ ಪೆರಿಯ ಎಂಬಲ್ಲಿ ಹೆದ್ದಾರಿಯಿಂದ ಕೇವಲ 1 ಕಿ.ಮೀ. ದೂರದಲ್ಲಿದೆ. ವಾರ್ಷಿಕ ಸಂಗೀತೋತ್ಸವ ಹೊರತುಪಡಿಸಿ ಬೇರೆ ದಿನಗಳಲ್ಲಿ ಬೆಳಗ್ಗೆ 9ರಿಂದ ಸಂಜೆ 6 ಗಂಟೆ ವರೆಗೆ ಭೇಟಿ ನೀಡಬಹುದು. ಸಂಪರ್ಕಕ್ಕೆ-9446423641 ಕರೆ ಮಾಡಬಹುದು.
ಈ ಬಾರಿಯ ಸಂಗೀತೋತ್ಸವದಲ್ಲಿ
ಈ ಬಾರಿ ನ.10ರಿಂದ 19ರ ವರೆಗೆ ನಡೆಯುವ ದೀಪಾವಳಿ ಸಂಗೀತೋತ್ಸವದಲ್ಲಿ ರಾಷ್ಟ್ರ ಮಟ್ಟದ ಘಟಾನುಘಟಿ ಕಲಾವಿದರು ಭಾಗವಹಿಸುತ್ತಿದ್ದಾರೆ. ವಿಶ್ವಪ್ರಸಿದ್ಧ ವಯಲಿನ್ ವಾದಕ ಸುಬ್ರಹ್ಮಣಿಯನ್, ಪ್ರಸಿದ್ಧ ನೃತ್ಯಪಟು ಪದ್ಮಾಸುಬ್ರಹ್ಮಣ್ಯಂ, ಪಟ್ಟಾಭಿರಾಮ ಪಂಡಿತ್, ಖ್ಯಾತ ಹಿನ್ನೆಲೆ ಗಾಯಕ ಅನೂಪ್ ಶಂಕರ್, ಕಾಂಚನ ಸಿಸ್ಟರ್ಸ್, ಅಭಿಷೇಕ, ರಘುರಾಮ್, ಕುನ್ನುಕ್ಕುಡಿ ಬಾಲಮುರಳಿ ಕೃಷ್ಣ, ಎನ್.ಜೆ.ನಂದಿನಿ, ಮೃದಂಗ ವಿದ್ವಾನ್ ಪೇತ್ರಿ ಸತೀಶ್ ಮತ್ತಿತರರು ಆಗಮಿಸಲಿದ್ದಾರೆ.
ಗೋ ಸಾಕಣೆಯಿಂದ ಸಾಕಷ್ಟು ಆದಾಯ ಕಂಡುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ನಮ್ಮ ಕಪಿಲಾ ಬ್ರಾಂಡ್‌ನ ಗೋ ಉತ್ಪನ್ನ ಮಾರ್ಕೆಟ್ ಮಾಡುತ್ತಿಲ್ಲ. ದೇಸೀ ಗೋತಳಿಗಳ ಬಗ್ಗೆ ಎಲ್ಲರಿಗೆ ಅರಿವು ಮೂಡಬೇಕು. ಈ ತಳಿಗಳ ಅಭಿವೃದ್ಧಿಯಾಗಬೇಕು ಎಂಬುದೇ ಏಕೈಕ ಉದ್ದೇಶ.
-ವಿಷ್ಣು ಪ್ರಸಾದ್ ಹೆಬ್ಬಾರ್, ಗೋಕುಲಂ ಗೋಶಾಲೆಯ ರೂವಾರಿ