ಎಲ್ಲವೂ ನನಗೇ ಬೇಕು, ನಾನು ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನಕ್ಕೇರಬೇಕು ಎಂಬ ಬಯಕೆ ನಿಮ್ಮಲ್ಲಿದೆಯೇ? ಇನ್ನೊಬ್ಬರ ಕಷ್ಟಗಳಿಗೆ ಅವರೇ ಹೊಣೆ ನಾನೇಕೆ ಸಹಾಯ ಮಾಡಬೇಕು ಎಂಬ ಮನೋಭಾವ ನಿಮ್ಮದೇ? ಹಾಗಿದ್ದರೆ ನಿಮ್ಮ ಆಯಸ್ಸು ಕಡಿಮೆಯಾಗಬಹುದು ಎಚ್ಚರ.
ನನಗೇನೂ ತೊಂದರೆಯಾಗದಿದ್ದರೆ ಸಾಕು,ಬೇರೆಯವರಿಗೆ ಏನು ಬೇಕಾದರೂ ಆಗಲಿ. ನನಗೂ ಅದಕ್ಕೂ ಸಂಬಂಧವಿಲ್ಲ ಎಂಬಂತೆ ಕೆಲವರು ವರ್ತಿಸುತ್ತಾರೆ. ಇನ್ನೂ ಕೆಲವರು ಇನ್ನೊಬ್ಬರಿಗೆ ಅಗತ್ಯ ಸಂದರ್ಭದಲ್ಲಿ ನೆರವು ನೀಡುತ್ತಾರೆ, ಆದರೆ ಅದಕ್ಕೆ ಪ್ರತಿಯಾಗಿ ಅವರಿಂದ ಬೇರೇನಾದರೂ ನಿರೀಕ್ಷಿಸುತ್ತಾರೆ. ಇಂಥ ವರ್ತನೆಗಳಿಗೆ ಮೂಲ ಕಾರಣ ಸ್ವಾರ್ಥ.ಎಷ್ಟೋ ಬಾರಿ ನಮಗೆ ತಿಳಿಯದಂತೆ ನಮ್ಮೊಳಗೆ ಅಡಗಿ ಕುಳಿತಿರುವ ಸ್ವಾರ್ಥಿಯೊಬ್ಬ ಎದ್ದು ನಿಲ್ಲುತ್ತಾನೆ.‘ನಾನು’, ‘ನನ್ನದು’ ಎಂಬ ಸ್ವಾರ್ಥ ನಮ್ಮೊಳಗಿನ ಪ್ರೀತಿ, ಸಹಕಾರ, ಕರುಣೆ ಎಂಬ ಭಾವನೆಗಳನ್ನು ಕೊಂದು ಹಾಕುತ್ತದೆ. ಅಷ್ಟೇ ಅಲ್ಲ, ಸ್ವಾರ್ಥ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದ್ದಲ್ಲ ಕೂಡ. ಇತ್ತೀಚೆಗೆ ನಡೆದ ಅಧ್ಯಯನವೊಂದರ ಪ್ರಕಾರ ನಾವು ಇನ್ನೊಬ್ಬರಿಗೆ ಮಾಡುವ ನಿಸ್ವಾರ್ಥ ಸಹಾಯದಿಂದ ನಮ್ಮ ಆಯಸ್ಸು ಹೆಚ್ಚುತ್ತದಂತೆ.
ಆರೋಗ್ಯದ ಮೇಲೆ ಪಾಸಿಟಿವ್ ಪ್ರಭಾವ: ಇನ್ನೊಬ್ಬರಿಗೆ ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಮಾಡುವ ಸಹಾಯ ನಮ್ಮ ದೈಹಿಕ ಆರೋಗ್ಯಕ್ಕೆ ಹಿತಕಾರಿ. ಸ್ವಹಿತಾಸಕ್ತಿಗಳಿಗಿಂತ ಇನ್ನೊಬ್ಬರ ಒಳಿತಿಗಾಗಿ ಕಾರ್ಯನಿರ್ವಹಿಸುವುದರಿಂದ ಒತ್ತಡ, ಖಿನ್ನತೆ ಸೇರಿದಂತೆ ಅನೇಕ ಮಾನಸಿಕ ಸಮಸ್ಯೆಗಳು ಕಡಿಮೆಯಾಗುತ್ತವೆ. ಅಷ್ಟೇ ಅಲ್ಲದೆ, ಇಂಥ ಚಟುವಟಿಕೆಯಿಂದ ವ್ಯಕ್ತಿಯ ಜೀವಿತಾವಧಿ ಕೂಡ ಹೆಚ್ಚುತ್ತದೆ ಎಂದು ಸಿಎನ್‍ಎನ್ ಆರೋಗ್ಯ ವರದಿ ಹೇಳಿದೆ.
ಹಿಂಗೆ ಮಾಡಿದ್ರೆ ಕಿರಿಕ್ ಮಾಡದೆ ಡ್ರೆಸ್ ಹಾಕೊಳ್ತಾರೆ ಮಕ್ಕಳು
ಸ್ವಾರ್ಥ ಎಷ್ಟಿದ್ದರೆ ಚೆನ್ನ: ಹಾಗಾದ್ರೆ ಸ್ವಾರ್ಥ ಸ್ವಲ್ಪವೂ ಇರಬಾರದೆ ಎಂಬ ಪ್ರಶ್ನೆ ಕಾಡುತ್ತದೆ. ಖಂಡಿತಾ ಇರಬೇಕು. ಆದರೆ, ಅದು ಅಗತ್ಯಕ್ಕಿಂತ ಹೆಚ್ಚಿರಬಾರದು ಅಷ್ಟೆ. ನಮ್ಮೊಳಗಿನ ಮನುಷ್ಯತ್ವವನ್ನು ಕೊಲ್ಲುವ ಹಂತ ತಲುಪದಂತೆ ಎಚ್ಚರ ವಹಿಸಬೇಕು.
undefined
ಮಿತಿಮೀರಿದ ಸ್ವಾರ್ಥ ಗುರುತಿಸುವುದು ಹೇಗೆ?: ನಮ್ಮ ಆಸೆಗಳು, ಕನಸುಗಳು ಹಾಗೂ ಗುರಿಗಳನ್ನು ಪೂರ್ಣಗೊಳಿಸುವ ಹಾದಿಯಲ್ಲಿ ಬೇರೆಯವರ ಹಿತವನ್ನು ನಿರ್ಲಕ್ಷಿಸುವ ಗುಣ ನಮ್ಮಲ್ಲಿದ್ದರೆ, ಅದು ಖಂಡಿತವಾಗಿಯೂ ಅತಿಯಾದ ಸ್ವಾರ್ಥ. ಇನ್ನೊಬ್ಬರ ಹಿತವನ್ನು ಪರಿಗಣಿಸದೆ ಅಥವಾ ಅವರಿಗೆ ಕೆಡುಕು ಮಾಡಿಯಾದರೂ ನನ್ನ ಗುರಿ ತಲುಪಬೇಕು ಎನ್ನುವ ಮನಸ್ಥಿತಿ ಅತ್ಯಂತ ಅಪಾಯಕಾರಿ. ಇದು ನಿಮ್ಮನ್ನು ದುರ್ಮಾರ್ಗ ಅಥವಾ ಅನ್ಯಾಯದ ಹಾದಿಯಲ್ಲಿ ಸಾಗುವಂತೆ ಮಾಡಬಲ್ಲದು. ಆದಕಾರಣ ನಿಮ್ಮಲ್ಲಿ ಇಂಥ ಗುಣವಿದೆ ಎಂದಾದರೆ ಅದನ್ನು ಬೇಗ ಸರಿಪಡಿಸಿಕೊಳ್ಳಿ.
ಅಪ್ಪುಗೆಯಲ್ಲಿರುವ ಸುಖ ಗೊತ್ತೇ ಇಲ್ಲವಾ?
ಸ್ವಾರ್ಥ ದೂರ ಮಾಡುವುದು ಹೇಗೆ?:
•ಯಾರಾದರೂ ಕಷ್ಟದಲ್ಲಿದ್ದರೆ ಅವರ ನೋವಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಿ. ಅವರಿಗೆ ನಿಮ್ಮ ಕೈಲಾದಷ್ಟು ನೆರವು ನೀಡಿ.
•ನಿಮ್ಮ ಗುರಿ, ಆಸೆಗಳನ್ನು ನೆರವೇರಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಈ ಹಾದಿಯಲ್ಲಿ ಇನ್ನೊಬ್ಬರಿಗೆ ತೊಂದರೆಯಾಗದಂತೆ ನೋಡಿಕೊಳ್ಳಿ.
•ನಮ್ಮ ಕೆಲಸ ಅಥವಾ ವರ್ತನೆಗಳ ಮೂಲಕ ಇನ್ನೊಬ್ಬರಿಗೆ ಸಂತೋಷ ನೀಡುವುದು ಒಳ್ಳೆಯ ಗುಣ.ಬೇರೆಯವರ ಸಂತೋಷಕ್ಕಾಗಿ ಯಾವುದಾದರೂ ವಸ್ತುವನ್ನು ತ್ಯಾಗ ಮಾಡಬೇಕಾಗಿ ಬಂದಾಗ ಒಂದು ವಿಷಯವನ್ನು ಸ್ಪಷ್ಟಪಡಿಸಿಕೊಳ್ಳಬೇಕು- ಆ ವಸ್ತು ನಮ್ಮ ಬಳಿ ಇರುವುದರಿಂದ ಹೆಚ್ಚಿನ ಸಂತೋಷ ಸಿಗುತ್ತದೆಯೋ ಅಥವಾ ಅದನ್ನು ಇನ್ನೊಬ್ಬರಿಗೆ ನೀಡಿದಾಗ ಅವರಿಗಾಗುವ ಸಂತೋಷ ನೋಡಿ ನಮಗೆ ನೆಮ್ಮದಿ ಸಿಗುತ್ತದೆಯೋ ಎಂಬುದನ್ನು ಮೊದಲು ಖಚಿತಪಡಿಸಿಕೊಳ್ಳಬೇಕು. ಒಮ್ಮೆ ಈ ಕುರಿತು ಒಂದು ನಿರ್ಧಾರಕ್ಕೆ ಬಂದು, ಆ ಕೆಲಸವನ್ನು ಪೂರ್ಣಗೊಳಿಸಿದ ಬಳಿಕ ನೊಂದುಕೊಳ್ಳಬಾರದು.
•ಕೆಲವೊಮ್ಮೆ ನಾವು ನಮಗೆ ಯಾವುದೇ ಉಪಯೋಗವಿಲ್ಲದಿದ್ದರೂ ಇನ್ನೊಬ್ಬರಿಗೆ ನೋವಾಗುವಂತಹ ಕೆಲವು ಕೆಲಸಗಳನ್ನು ಮಾಡುತ್ತೇವೆ. ಉದಾಹರಣೆಗೆ ವಿಷಯವನ್ನು ಸರಿಯಾಗಿ ತಿಳಿದುಕೊಳ್ಳದೆ ಇನ್ನೊಬ್ಬರ ಕುರಿತು ಕೆಟ್ಟದ್ದಾಗಿ ಮಾತನಾಡುವುದು ಅಥವಾ ಇನ್ನೊಬ್ಬರ ಮನಸ್ಸು ನೋಯಿಸುವುದು. ಈ ರೀತಿಯ ವರ್ತನೆಗಳನ್ನು ಬಿಟ್ಟು ಬಿಡಬೇಕು. ಇದು ಅತಿ ನೀಚವಾದ ಸ್ವಾರ್ಥ.
ಮನೆ ಕೆಲಸವೇನಿದ್ರೂ ಪತ್ನಿಗೆ ಎಂಬ ಪತಿ ನೀವಾ?
•ನಮ್ಮ ಇತಿ, ಮಿತಿಗಳನ್ನು ತಿಳಿದುಕೊಂಡು, ಅದಕ್ಕೆ ಅನುಗುಣವಾಗಿ ಅನ್ಯರಿಗೆ ಕಷ್ಟ ನೀಡದೆ ಸಂತೋಷದಿಂದ ಬದುಕಲು ಪ್ರಯತ್ನಿಸಬೇಕು. ಈ ರೀತಿ ಬದುಕು ನಡೆಸುವ ವ್ಯಕ್ತಿ ನಿಸ್ವಾರ್ಥಿಯಾಗಿರುತ್ತಾನೆ.
•ಇನ್ನೊಬ್ಬರಿಗೆ ನೆರವು ನೀಡಿದ ಬಳಿಕ ಅವರಿಂದ ಪ್ರತಿಯಾಗಿ ಏನನ್ನೂ ನಿರೀಕ್ಷಿಸಬಾರದು. ನಾನು ನನ್ನ ಕರ್ತವ್ಯವನ್ನು ನಿಭಾಯಿಸಿದ್ದೇನೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು. ನಾವು ಮಾಡಿದ ಸಹಾಯಕ್ಕೆ ಪ್ರತಿಯಾಗಿ ಇನ್ನೊಬ್ಬರಿಂದ ಏನನ್ನಾದರೂ ನಿರೀಕ್ಷಿಸಿದರೆ ಅದು ಸ್ವಾರ್ಥವಾಗುತ್ತದೆ.
•ಕೆಲವರು ತಾವು ಅಭಿವೃದ್ಧಿ ಹೊಂದುವ ಜೊತೆಗೆ ಇನ್ನೊಬ್ಬರನ್ನು ಕೂಡ ಬೆಳೆಸುತ್ತಾರೆ. ಇದು ನಿಜಕ್ಕೂ ಶ್ರೇಷ್ಠವಾದ ಗುಣವಾಗಿದೆ. ಇಂಥ ವಿಶಾಲ ಮನೋಭಾವ ಹೊಂದಿರುವ ವ್ಯಕ್ತಿಗಳಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ.
ನಮ್ಮ ಸಂತೋಷವನ್ನು ತ್ಯಾಗ ಮಾಡಿಕೊಂಡು ಇನ್ನೊಬ್ಬರಿಗೆ ಸಹಾಯ ಮಾಡುವುದಕ್ಕಿಂತಲೂ ಇನ್ನೊಬ್ಬರಿಗೆ ಮಾಡುವ ಸಹಾಯದಲ್ಲೇ ಸಂತೋಷ ಕಂಡುಕೊಳ್ಳುವಂತಹದ್ದು ಸಾರ್ಥಕತೆಯ ಲಕ್ಷಣ.