
ಲಂಕೇಶ್ ಪತ್ರಿಕೆಯನ್ನು ಜನಪ್ರಿಯವಾಗಿಸಿದ್ದು ಗುಂಡೂರಾವ್. ಪತ್ರಿಕೆಗೆ ಬರೆಯುವವರು ಇರಬಹುದು. ಆದರೆ ಚರ್ವಿತವರ್ಣ ವಸ್ತುವಿಲ್ಲದಿದ್ದರೆ ಬರವಣಿಗೆ ಕಷ್ಟ. ಗುಂಡೂರಾಯರ ಸರ್ಕಾರ ವರ್ಣರಂಜಿತವಾಗಿತ್ತು. ತುಂಬಾ ಸಾಮಾನ್ಯನಾಗಿದ್ದು, ಮುಖ್ಯಮಂತ್ರಿಯಾದ ಅವರಿಗೆ ಎಲ್ಲವೂ ಹೊಸತು. ತನ್ನ ಅಧಿಕಾರ ಸರ್ವಸ್ವ ಎಂಬ ಅಮಲು ಅವರದ್ದಾಗಿತ್ತು. ಅವರ ಸುತ್ತ ಇದ್ದವರೇನೂ ಭಿನ್ನವಾಗಿರಲಿಲ್ಲ. ಅವರೂ ಅಷ್ಟೇ. ದಿನಕ್ಕೊಂದು ಹಗರಣ, ದಿನಕ್ಕೊಂದು ವಿಪರೀತ. ಇವೇ ಸಾಕಾಯಿತು ಲಂಕೇಶ್ ಪತ್ರಿಕೆಗೆ. ಇವಾವುವೂ ಇಲ್ಲವಾದಾಗ ಗುಂಡೂರಾಯರ ಪತ್ರಿಕಾಗೋಷ್ಠಿಯೇ ಸಾಕು. ಮನರಂಜನೆ ಯಥೇಚ್ಛವಾಗಿರುತ್ತಿತ್ತು. ಗುಂಡೂರಾಯರು ತೊಡುತ್ತಿದ್ದ, ಆ ಕಾಲದ 3-4 ಸಾವಿರ ಬಾಳುತ್ತಿದ್ದ ದುಬಾರಿ ಸಾರಿ ಸೂಟ್‌ಗಳು, ದುಬಾರಿ ಸೆಂಟುಗಳು, ಲಕ್ಷದ ಬೆಲೆ ಮುಟ್ಟುತ್ತಿದ್ದ ಅವರ ವಾಚುಗಳು, ಹತ್ತು ಸಾವಿರ ರೂಪಾಯಿ ಹತ್ತಿರದ ಅವರ ಕೂಲಿಂಗ್ ಗ್ಲಾಸ್‌ಗಳು, ಸರಕಾರ ಹೆಲಿಕಾಪ್ಟರ್ ಕೊಂಡದ್ದು, ಎಗ್ಗಿಲ್ಲದೆ ನಡೆಯುತ್ತಿದ್ದ ಅವರ ಮೋಜು-ಮಸ್ತಿಗಳು, ಸಿನಿಮಾ ತಾರೆಯರೊಡನೆ ಅವರ ಒಡನಾಟ, ಸಿಎಂ ಇಬ್ರಾಹಿಂ, ಎ.ಎಂ. ಖಾನ್‌ರಂತ ಚೇಲಾಗಳ ಮತ್ತು ಅವರ ಬಂಧುಗಳ ದಾದಾಗಿರಿ... ಒಂದೇ ಎರಡೇ? ಲಂಕೇಶ್ ಪತ್ರಿಕೆ ಪ್ರಸಾರ ಏರುತ್ತಲೇ ಹೋಯಿತು. ಬರೆಯುವವರಿಗೆ ಲಂಕೇಶ್, ಭಾಷೆ ಬಳಕೆಯ ಬಗ್ಗೆ ಕೊಟ್ಟ ಸ್ವಾತಂತ್ರ್ಯ ಪತ್ರಿಕೆಯ ಸೋ ಕಾಲ್ಡ್ ವರದಿಗಾರರ ಅಫೀಮಾಯಿತು.
ಲಂಕೇಶರು ಹೇಳಿದ್ದು; ನೋಡ್ರಯ್ಯ ನನ್ನ ಪತ್ರಿಕೆ ಇರುವುದೇ ಎಂಟು ಪೇಜು, ಸುಮ್ಮನೆ ಉದ್ದುದ್ದ ಬರೆಯಬೇಡಿ. ನೇರವಾಗಿ ಬರೆಯಿರಿ. ತಿರುಪತಿ ದೇವರ ಹೆಸರಿನ ಮಂತ್ರಿಯೊಬ್ಬ ಎಂದು ಬರೆಯುವ ಬದಲು, ನೇರವಾಗಿ ಕಾಗೋಡು ತಿಮ್ಮಪ್ಪ ಎಂದೇ ಬರೆಯಿರಿ. ಅದೇನೋ ಸರಿ. ಬರುಬರುತ್ತಾ ಅಲ್ಲಿನ ಬರಹಗಾರರು ಯಾವ ಮಟ್ಟಕ್ಕಿಳಿದ್ದರೆಂದರೆ ಕಾಗೋಡು ತಿಮ್ಮಪ್ಪ, ಕಾಗೋಡು ತಿಮ್ಮನಾದ. ಮುಂದೆ ಬರೇ ತಿಮ್ಮನಾದ. ದುಡ್ಡು ಎಣಿಸುತ್ತಿದ್ದ ಲಂಕೇಶರು ಇದನ್ನೆಲ್ಲಾ ಗಮನಿಸಲೇ ಇಲ್ಲ. ಅಂಕಿ ಪ್ರೇಮಿಯಾಗುತ್ತಿದ್ದ ಲಂಕೇಶರು ಅಕ್ಷರ ವಂಚಿತರಾಗುವ ಸೂಚನೆ ಕೊಟ್ಟಿದ್ದರು.
ಲಂಕೇಶ್ ಪತ್ರಿಕೆಯಲ್ಲಿ ಮುಖ್ಯವಾಗಿ ಎದ್ದು ಕಾಣುತ್ತಿದ್ದದ್ದು ಬ್ರಾಹ್ಮಣ ವಿರೋಧಿ ಅಥವಾ ದ್ವೇಷ. ಅದರ ಸಮಸ್ತ ಕಾಂಟ್ರಾಕ್ಟ್ ಪಡೆದಿದ್ದು ಒಬ್ಬ ನಾಜೂಕಯ್ಯ. ಕೊಟ್ಟವರು ಯಾರು? ಎಷ್ಟಕ್ಕೆ ಎಂಬುದು ಸ್ಪಷ್ಟವಿರಲಿಲ್ಲ. ಗುಂಡೂರಾಯರು ಅನೇಕ ಒಳ್ಳಯದನ್ನೂ ಮಾಡಿದ್ದರು. ವಿಧಾನ ವೀದಿಯನ್ನು ಅಂಬೇಡ್ಕರ್ ವೀದಿ ಎಂದು ಹೆಸರಿಸಿದ್ದು, ಲಿಂಗಾಯಿತರ ಮನಾಪಲಿಯಾಗಿದ್ದ (ಏಕಸ್ವಾಮ್ಯ) ಖಾಸಗಿ ಮೆಡಿಕಲ್-ಇಂಜಿನಿಯರಿಂಗ್ ಕಾಲೇಜುಗಳನ್ನು ಒಕ್ಕಲಿಗ, ದಲಿತ, ಮುಸ್ಲಿಂ ಜನಾಂಗಕ್ಕೆ ಕೊಟ್ಟದ್ದು, ಗುಲ್ಬರ್ಗ, ಮಂಗಳೂರು ವಿಶ್ವವಿದ್ಯಾಲಯಗಳ ಸ್ಥಾಪನೆ, ವಿಭಾಗ ಮಟ್ಟದಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದು, ರೈತರಿಗೆ ಹತ್ತು ಎಚ್.ಪಿ.ವರೆಗೆ ಕರೆಂಟು ಬಿಲ್ ಇಲ್ಲವೆಂದು ಘೋಷಿಸಿದ್ದು, ರೈತರು 1ನೇ ತಾರೀಖು ಕರೆಂಟು ಬಿಲ್ ಕಟ್ಟದಿದ್ದರೆ ಕರೆಂಟು ಕಿತ್ತು ಹಾಕುತ್ತಿದ್ದನ್ನು ನಿಲ್ಲಿಸಿ ರೈತರು ವರ್ಷಕ್ಕೆರಡು ಬಾರಿ ಬಿಲ್ ಕಟ್ಟಲಿ ಎಂದು ಆದೇಶಿಸಿದ್ದು, ರಾಜ್ಯ ಸರ್ಕಾರದ ನೌಕರರ ವರ್ಗಾವಣೆಗಾಗಿ ಒಂದು ಶಾಶ್ವತ ನೀತಿ, ವಿಶ್ವ ಕನ್ನಡ ಸಮ್ಮೇಳನಕ್ಕೆ ನಾಂದಿ, ಮೈಸೂರಿನ ಕಲಾಮಂದಿರ, ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣದ ಕಲ್ಪನೆ, ಹೆಚ್ಚು ದಲಿತರನ್ನು ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳನ್ನಾಗಿಸಿದ್ದು- ಇನ್ನೂ ಅನೇಕ ಶ್ರೇಷ್ಠ ಕೆಲಸಗಳನ್ನು ಲಂಕೇಶ್ ಬಳಗ ಮರೆತದ್ದು ಬೇಕಂತಲೇ. ಇದರಲ್ಲಿ ಒಂದಷ್ಟು ಬರವಣಿಗೆ ನನ್ನದೂ ಇತ್ತು. ಆದರೆ ಕಡಿಮೆ. ಗುಂಡೂರಾಯರಿಗೆ ಕನ್ನಡ ವಿರೋಧಿ ಪಟ್ಟ ಕಟ್ಟಿದ್ದೂ ಇದೇ ನಾಜೂಕಯ್ಯಗಳು. ಈವತ್ತು ನಾವೆಲ್ಲ ಹೆಮ್ಮೆ ಪಡುವ ಗೋಕಾಕ್ ವರದಿಗೆ, ವಿ.ಕೃ. ಗೋಕಾಕರನ್ನು ನೇಮಿಸಿದ್ದೂ ಇದೇ ಗುಂಡೂರಾವ್.
ಲೆಕ್ಕಾಚಾರದ ಕವಿಯಾಗಿದ್ದರು ಪಿ.ಲಂಕೇಶ್!
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.