ಕೊರೋನಾ ವೈರಸ್ ನಿಯಂತ್ರಣದ ಕುರಿತಂತೆ ಚಿಕ್ಕಮಗಳೂರಿನ ಕೆಲವೆಡೆ ಸುಳ್ಳು ಅಪಪ್ರಚಾರ ಮಾಡಲಾಗುತ್ತಿದೆ. ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಜಿಲ್ಲಾ ರಕ್ಷಣಾಧಿಕಾರಿಗೆ ಡಿಸಿ ಸೂಚಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚಿಕ್ಕಮಗಳೂರು(ಜು.28): ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಕಳೆದ ಒಂದು ವಾರದಿಂದ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಈ ರೀತಿಯ ಪ್ರಚಾರ ವಾರಿಯರ್ಸ್‌ಗಳ ಸೇವೆಯನ್ನೇ ಪ್ರಶ್ನಿಸುವಂತಿದೆ. ಇಂತಹ ಸಂದರ್ಭದಲ್ಲಿ ಈ ರೀತಿಯ ಅಪಪ್ರಚಾರ ಮಾಡುವವರ ವಿರುದ್ಧ ಕೇಸ್ ದಾಖಲಿಸುವಂತೆ ಜಿಲ್ಲಾ ರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ತಿಳಿಸಿದ್ದಾರೆ.
ಜಿಲ್ಲಾ ಕೋವಿಡ್ ನಿಗಾಘಟಕ ಹಾಗೂ ತರೀಕೆರೆ ತಾಲೂಕಿನ ಲಿಂಗದಹಳ್ಳಿಯಲ್ಲಿ ನಡೆದಿರುವ ಎರಡು ಪ್ರಕರಣಗಳ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಸ್ತಾಪಿಸಿದ ಜಿಲ್ಲಾಧಿಕಾರಿಗಳು, ಇದೊಂದು ಶುದ್ಧ ಸುಳ್ಳು, ಅಪಪ್ರಚಾರ ಎಂದು ಹೇಳಿದರು.
ಜಿಲ್ಲೆಯಲ್ಲಿ ಈವರೆಗೆ 17095 ಮಂದಿಯ ಗಂಟಲ ಮತ್ತು ಮೂಗಿನ ದ್ರವವನ್ನು ಸಂಗ್ರಹ ಮಾಡಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ಪೈಕಿ 16108 ಮಂದಿಯ ವರದಿ ಬಂದಿದ್ದು, ಇವರಲ್ಲಿ 679 ಮಂದಿ ಪಾಸಿಟಿವ್ ವರದಿ ಬಂದಿದೆ. ಅಂದರೆ, ಶೇ.4.2ರಷ್ಟುಮಾತ್ರ ಪ್ರಕರಣಗಳು ಬೆಳಕಿಗೆ ಬಂದಿವೆ. ಈವರೆಗೆ 376 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿ ಮನೆಗಳಿಗೆ ತೆರಳಿದ್ದಾರೆ. ಅಂದರೆ, ಶೇ.55ರಷ್ಟುಮಂದಿ ಗುಣಮುಖರಾಗಿದ್ದಾರೆ ಎಂದರು.
ಇನ್ನು 989 ಮಂದಿಯ ವರದಿ ಬರಬೇಕಾಗಿದ್ದು, ಮಂಗಳೂರಿನ ವೆನ್‌ಲಾಕ್ ಲ್ಯಾಬ್‌ನಿಂದ 400, ಶಿವಮೊಗ್ಗದಿಂದ 300 ಹಾಗೂ ಹಾಸನ ಲ್ಯಾಬ್‌ನಿಂದ 289 ಮಂದಿಯ ವರದಿ ಬರಬೇಕಾಗಿದೆ. ಕಳೆದ ಒಂದು ವಾರದಿಂದ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ಸಂಖ್ಯೆ ಹೆಚ್ಚಳಕ್ಕೆ ಕಾರಣ, ರಾರಯಪಿಡ್ ಟೆಸ್ಟ್ . ಜಿಲ್ಲೆಗೆ ಈವರೆಗೆ 5200 ಪಿಪಿಇ ಕಿಟ್‌ಗಳು ಬಂದಿದ್ದು, ಇವುಗಳಲ್ಲಿ ಈಗಾಗಲೇ 4000 ಬಳಕೆಯಾಗಿವೆ. ಇನ್ನುಳಿದ ಕಿಟ್‌ಗಳು ಖಾಲಿಯಾಗುತ್ತಿದ್ದಂತೆ ಸರ್ಕಾರಕ್ಕೆ ವರದಿ ಕಳುಹಿಸಿಕೊಟ್ಟು ಮತ್ತೆ ತರಿಸಿಕೊಳ್ಳಲಾಗುವುದು ಎಂದು ಹೇಳಿದರು.
ರಾರಯಪಿಡ್ ಕಿಟ್‌ನಲ್ಲಿ ಪ್ರಮುಖವಾಗಿ ಪ್ರಾಥಮಿಕ ಸಂಪರ್ಕ, ಸೋಂಕಿನ ಲಕ್ಷಣ, ಗರ್ಭೀಣಿ ಮಹಿಳೆಯರು ಹಾಗೂ ಹೊರ ಜಿಲ್ಲೆಗಳಿಂದ ಬರುವವರಲ್ಲಿ ರೋಗದ ಲಕ್ಷಣ ಕಂಡು ಬಂದರೆ ಅಂತಹವರಿಗೆ ತಪಾಸಣೆ ಮಾಡಲಾಗುತ್ತಿದೆ. ಕಿಟ್‌ನಿಂದ ಅರ್ಧ ಗಂಟೆಯಲ್ಲಿ ಫಲಿತಾಂಶ ಬರಲಿದೆ ಎಂದು ತಿಳಿಸಿದರು.
ಕಿಟ್‌ನಲ್ಲಿ ಪರೀಕ್ಷೆ ಮಾಡುವಾಗ ಪಾಸಿಟಿವ್ ಬಂದರೆ, ಅದನ್ನು ಪಾಸಿಟಿವ್ ಆಗಿ ಪರಿಗಣಿಸಲಾಗುವುದು. ನೆಗೆಟಿವ್ ಬಂದರೆ ಟ್ರೋನೆಕ್‌ನಲ್ಲಿ ಪರೀಕ್ಷೆ ಮಾಡಲಾಗುವುದು, ಅಲ್ಲೂ ನೆಗೆಟಿವ್ ಬಂದರೆ ಅದನ್ನು ಅಂತಿಮ ವರದಿ ಎಂಬುದಾಗಿ ಪರಿಗಣಿಸಲಾಗುವುದು ಎಂದ ಜಿಲ್ಲಾಧಿಕಾರಿಗಳು, ಪಾಸಿಟಿವ್ ಅಥವಾ ನೆಗೆಟಿವ್ ತೀರ್ಮಾನ ಮಾಡುವುದು ಪರೀಕ್ಷಾ ವರದಿ ಎಂದು ಹೇಳಿದರು.
ಇತ್ತೀಚೆಗೆ ವ್ಯಕ್ತಿಯೊರ್ವರು ಚಿಕ್ಕಮಗಳೂರಿನ ಕೋವಿಡ್ ನಿಗಾ ಘಟಕದ ವ್ಯವಸ್ಥೆಯ ಬಗ್ಗೆ ವೀಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಟ್ಟು ಅಪಪ್ರಚಾರ ಮಾಡಿದ್ದರು. ಇಲ್ಲಿನ ಬೇಲೂರು ರಸ್ತೆಯಲ್ಲಿ ಹೊಸದಾಗಿ ಮಾಡಿರುವ ಕೋವಿಡ್ ನಿಗಾ ಘಟಕ ಅಲ್ಲ. ಇಲ್ಲಿ ಕಳೆದ 4 ತಿಂಗಳಿಂದ ನಿಗಾ ಘಟಕವನ್ನಾಗಿ ಪರಿವರ್ತನೆ ಮಾಡಲಾಗಿದೆ. ಅಂದರೆ, ಇಲ್ಲಿ ಎಲ್ಲಾ ಮೂಲಭೂತ ಸವಲತ್ತುಗಳು ಇವೆ ಎಂದು ತಿಳಿಸಿದರು.
ಬೆಂಗಳೂರಿನ 87 ವಾರ್ಡಲ್ಲಿ 100ಕ್ಕೂ ಹೆಚ್ಚು ಕೇಸ್, ಸೋಂಕಿತರ ಸಂಖ್ಯೆ 47000 ಗಡಿಗೆ
ಜಿಲ್ಲೆಯಲ್ಲಿ 10 ಸಾವಿರ ಕೊರೋನಾ ಪಾಸಿಟಿವ್ ಕೇಸ್‌ಗಳು ಬಂದರೂ, ಅದನ್ನು ನಿಭಾಯಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿಕೊಂಡಿದೆ. ಸರ್ಕಾರಿ ಆಸ್ಪತ್ರೆಗಳು ಮಾತ್ರವಲ್ಲ, ಖಾಸಗಿ ಆಸ್ಪತ್ರೆಯಲ್ಲೂ ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. 9 ಫಿವರ್ ಕ್ಲಿನಿಕ್ ತೆರೆಯಲಾಗಿದೆ. ಈವರೆಗೆ ಮೃತಪಟ್ಟ18 ಮಂದಿಯಲ್ಲಿ ಸರಾಸರಿ 61 ವರ್ಷದವರೇ ಹೆಚ್ಚು. ಅವರು ಬರೀ ಕೋವಿಡ್‌ನಿಂದ ಮಾತ್ರ ಮೃತಪಟ್ಟಿಲ್ಲ. ಬಿಪಿ, ಶುಗರ್, ಹೃದಯ ಸಂಬಂಧಿ ಹಾಗೂ ಇತರೆ ಕಾಯಿಲೆಗಳಿಂದ ಮೃತಪಟ್ಟಿದ್ದಾರೆ ಎಂದರು.
ಲಾಕ್‌ಡೌನ್ ಮತ್ತು ಕಂಟೈನ್ಮೆಂಟ್ ಝೋನ್‌ಗಳ ನಿಯಮ ಉಲ್ಲಂಘನೆ ಮಾಡಿರುವ ಸಂಬಂಧ 134 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಮಾಸ್ಕ್ ಹಾಕದೆ ಇರುವ ಕಾರಣಕ್ಕಾಗಿ 19550 ಮಂದಿಗಳಿಗೆ ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಅಕ್ಷಯ್ ಮಚೇಂದ್ರ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದರು. ಜಿಲ್ಲೆಯಲ್ಲಿ ಎಎನ್‌ಎಫ್‌ನ 11 ಮಂದಿ ಸೇರಿ 38 ಮಂದಿ ಪೊಲೀಸ್ ಸಿಬ್ಬಂದಿಗೆ ಕೋರೋನಾ ಸೋಂಕು ತಗಲಿದ್ದು, ಈ ಸಂಬಂಧ ಒಂದು ಎಎನ್‌ಎಫ್ ಕ್ಯಾಂಪ್ ಹಾಗೂ 6 ಪೊಲೀಸ್ ಠಾಣೆಗಳನ್ನು ಸೀಲ್‌ಡೌನ್ ಮಾಡಲಾಗಿತ್ತು. ಈಗ 15 ಮಂದಿ ಚಿಕಿತ್ಸೆ ಪಡೆಯುತ್ತಿದ್ದು, ಇನ್ನುಳಿದ ಸಿಬ್ಬಂದಿ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.