ಮಗುವಿನಂತೆ ಬೆಳೆಸಿದ್ದ ದ್ರಾಕ್ಷಿ ಬೆಳೆಗೆ ತಪ್ಪು ಔಷಧ ಸಿಂಪಡಣೆ: ಬೆಳೆ ನಾಶಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾದ ರೈತ

By Sathish Kumar KH  |  First Published Feb 5, 2023, 6:12 PM IST

ಕೈಗೆ ಬಂದಿದ್ದ ಬೆಳೆ ಬಾಯಿಗೆ ಬರಲಿಲ್ಲ ಎನ್ನುವಂತೆ ದ್ರಾಕ್ಷಿ ಬೆಳೆ ನಷ್ಟ
ದ್ರಾಕ್ಷಿ ಬಳ್ಳಿ ಹಳದಿ ಬಣ್ಣಕ್ಕೆ ತಿರುಗಿದ್ದು, ಮುದುರಿಕೊಂಡು ಬಿದ್ದಿದೆ
ದ್ರಾಕ್ಷಿ ಬೆಳೆಗಾಗಿ ಮಾಡಿದ್ದ 5 ಲಕ್ಷ ರೂ. ಸಾಲ ತೀರಿಸಲು ದಾರಿಯೇ ಕಾಣಲಿಲ್ಲ
ಮನೆಯ ಮಗನಂತೆ ಬೆಳೆಸಿದ್ದ ದ್ರಾಕ್ಷಿ ಬೆಳೆಯನ್ನು ಕೈಯಾರೆ ಕೊಂದೆನೆಂಬ ಹತಾಶೆ


ವಿಜಯಪುರ (ಫೆ.05): ಸುಮಾರು 5 ಲಕ್ಷ ರೂ. ಸಾಲ ಮಾಡಿಕೊಂಡು ಮಗುವಿನಂತೆ ಕಾಳಜಿ ಮಾಡಿ ಹೊಲದಲ್ಲಿ ಸೊಂಪಾಗಿ ಬೆಳೆಸಿದ್ದ ದ್ರಾಕ್ಷಿ ಬೆಳೆಗೆ ತಪ್ಪಾದ ಔಷಧವನ್ನು ಸಿಂಪಡಣೆ ಮಾಡಿದ್ದರಿಂದ ಇಡೀ ಬೆಳೆಯೇ ವಿನಾಶವಾಗಿ ಹೋಗಿದೆ. ಹಸಿರಿನಿಂದ ನಳನಳಿಸುತ್ತಿದ್ದ ಸ್ರಾಕ್ಷಿ ಬೆಳೆಯ ಫಸಲು ಕೈಸೇರುವ ಮುನ್ನ ನಷ್ಟವಾಗಿದ್ದಕ್ಕೆ ಸಾಲದ ಹೊರೆಯನ್ನು ತಾಳಲಾರದೇ ರೈತ ಮನೋಹರ ಆಯತವಾಡ (55) ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ನಡೆದಿದೆ. 

ಮನೆಯಲ್ಲಿ ಎಷ್ಟೇ ಬಡತನ ಇದ್ದರೂ ಹೊಲದಲ್ಲಿ ಬೆಳೆಯುತ್ತಿರುವ ಬೆಳೆಗೆ ಏನೊಂದು ಕಡಿಮೆಯಾಗದಂತೆ ಗೊಬ್ಬರ, ಔಷಧ ಹಾಗೂ ಇತರೆ ಪೋಷಕಾಂಶಗಳನ್ನು ನೀಡಿ ಬೆಳೆಸುತ್ತಾರೆ. ಮನೆಯಲ್ಲಿರುವ ಹೆಂಡತಿ, ಮಕ್ಕಳು ಹಾಗೂ ತನ್ನ ಹೊಟ್ಟೆ ಬಟ್ಟೆಗೆ ಕಡಿಮೆ ಮಾಡಿದರೂ ಹೊಲದಲ್ಲಿನ ಬೆಳೆಗೆ ಮಾತ್ರ ಸಾಲವನ್ನಾದರೂ ಮಾಡಿ ಎಲ್ಲವನ್ನೂ ಪೂರೈಕೆ ಮಾಡಿದ್ದಾನೆ. ರೈತನ ಕಾಳಜಿಗೆ ತಕ್ಕಂತೆ ತಿಕೋಟಾ ತಾಲೂಕಿನ ಬಾಬಾನಗರದ ಗ್ರಾಮದ ಹೊಲದಲ್ಲಿ ದ್ರಾಕ್ಷಿಯೂ ಹುಲುಸಾಗಿ ಬೆಳೆದು ನಿಂತಿತ್ತು. ಇನ್ನು ಒಂದೆರಡು ತಿಂಗಳಲ್ಲಿ ಕಟಾವಿಗೆ ಬರಲಿದ್ದು, ಅದನ್ನು ಮಾರಾಟ ಮಾಡಿ ಎಲ್ಲ ಸಾಲವನ್ನು ತೀರಿಸಬೇಕು ಎಂದು ಕೊಂಡಿದ್ದನು. ಆದರೆ, ವಿಧಿಯಾಟವೇ ಬೇರೆಯಿತ್ತು ಎನ್ನಿಸುತ್ತದೆ. ಕೈಗೆ ಬಂದಿದ್ದ ಬೆಳೆ ಬಾಯಿಗೆ ಬರಲಿಲ್ಲ ಎನ್ನುವಂತೆ ನಷ್ಟವಾಗಿ ಹೋಗಿತ್ತು.

Tap to resize

Latest Videos

Vijayapura: ದ್ರಾಕ್ಷಿ ಬೆಳೆ ರಕ್ಷಣೆಗೆ ಹೊಸ ಅಸ್ತ್ರ ಹುಡುಕಿಕೊಂಡ ರೈತರು: ಹಕ್ಕಿಗಳ ಕಾಟಕ್ಕೆ ಸಿಕ್ತು ಮುಕ್ತಿ

ತಪ್ಪಾದ ಔಷಧ ಸಿಂಪಡಣೆ: ಹೊಲದಲ್ಲಿ ಸುಮಾರು 5 ಲಕ್ಷ ರೂ. ಸಾಲ ಮಾಡಿ ಬೆಳೆದಿದ್ದ ದ್ರಾಕ್ಷಿ ಬೆಳೆ ಕಟಾವಿಗೆ ಬರುವ ಮುನ್ನ ಸ್ವಲ್ಪ ಹಳದಿ ಬಣ್ಣಕ್ಕೆ ತಿರುಗುತ್ತಿದೆ ಎಂದು ಔಷಧಿಯನ್ನು ಸಿಂಪಡಣೆ ಮಾಡಲು ಮುಂದಾಗಿದ್ದಾನೆ. ಈ ವೇಳೆ ಯಾರ ಮಾತು ಕೇಳಿದ್ದರೋ ಏನು ಗೊತ್ತಿಲ್ಲ. ಯಾರು ಸಲಹೆ ನೀಡಿದರೋ ಗೊತ್ತಿಲ್ಲ. ಬೆಳೆಯ ರಕ್ಷಣೆ ಮಾಡಲು ಸಿಂಪಡಣೆ ಮಾಡಬೇಕಾದ ಔಷಧಿಯನ್ನು ಬಿಟ್ಟು ಬೇರೊಂದು ಔಷಧಿಯನ್ನು ಹುಲುಸಾಗಿ ಬೆಳೆದಿದ್ದ ದ್ರಾಕ್ಷಿ ಬೆಳೆಯ ಮೇಲೆ ಸಿಂಪಡಣೆ ಮಾಡಿದ್ದಾನೆ. ಔಷಧಿ ಸಿಂಪಡಣೆಯಿಂದ ದ್ರಾಕ್ಷಿ ಬೆಳೆ ಚೇತರಿಕೆ ಕಾಣಿಸಿಕೊಳ್ಳುತ್ತದೆ ಎಂದು ನಿರೀಕ್ಷೆ ಮಾಡಿದ್ದ ರೈತನ ಭರವಸೆ ಹುಸಿಯಾಗಿದೆ.

ಬೆಳಗಾಗುವಷ್ಟರಲ್ಲಿ ಬೆಳೆ ಹಾನಿ: ಹೊಲದಲ್ಲಿ ಬೆಳೆಗಳ ನಡುವಿರುವ ಕಳೆಯ ಗಿಡಗಳನ್ನು ನಾಶಗೊಳಿಸಲು ಕಳೆನಾಶಕ ಸಿಂಪಡಿಸಿದ ಕೆಲವೇ ಗಂಟೆಗಳಲ್ಲಿ ಕಳೆಯ ಗಿಡಗಳು ಒಣಗಿ ಬಾಡಿಕೊಂಡು ಬಿದ್ದಿರುತ್ತವೆ. ಒಂದು ದಿನ ಕಳೆಯುವಷ್ಟರಲ್ಲಿ ಕಳೆಯ ಗಿಡಗಳ ಜೀವವೇ ಹೋಗಿರುತ್ತದೆ. ಅದೇ ರೀತಿ ದ್ರಾಕ್ಷಿ ಬೆಳೆಗೆ ರೈತನು ಸಿಂಪಡಣೆ ಮಾಡಿದ ಔಷಧದಿಂದ ಸಂಜೆ ವೇಳೆಗೆ ಹೊಲದಲ್ಲಿನ ದ್ರಾಕ್ಷಿ ಬೆಳೆ ಮುದುರಿಕೊಂಡಿದೆ. ಎಲೆಗಳು ಒಣಗಲು ಆರಂಭವಾಗಿವೆ. ಇನ್ನು ದೇವರ ಮೇಲೆ ಭಾರ ಹಾಕಿ ರಾತ್ರಿ ಮನೆಗೆ ಹೋಗಿ ಬೆಳಗ್ಗೆ ಬಂದು ತೋಟವನ್ನು ನೋಡಿದಾಗ ಇಡೀ ತೋಟವೇ ಸುಟ್ಟು ಹೋಗಿದೆ. ಸಂಪೂರ್ಣ ದ್ರಾಕ್ಷಿ ಬಳ್ಳಿ ಹಳದಿ ಬಣ್ಣಕ್ಕೆ ತಿರುಗಿದ್ದು, ಮುದುರಿಕೊಂಡು ಬೀಳಲು ಶುರುವಾಗಿದೆ.

ಬೆಳೆ ರಕ್ಷಣೆಗೆ ಯಾರಿಂದಲೂ ಸಿಗಲಿಲ್ಲ ಪರಿಹಾರ: ಇನ್ನು ದ್ರಾಕ್ಷಿ ಬೆಳೆಗೆ ತಾನು ತಪ್ಪಾಗಿರುವ ಔಷಧ ಸಿಂಪಡಣೆ ಮಾಡಿದ್ದೇನೆ ಎಂದು ರೈತನಿಗೆ ಅರಿವಾಗಿದೆ. ಆಗ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳುವುದಕ್ಕೆ ನೆರೆಹೊರೆಯ ರೈತರು, ಗ್ರಾಮದ ಹಿರಿಯರು ಹಾಗೂ ಕೃಷಿ ಇಲಾಖೆ ತಜ್ಞರ ಬಳಿಯೂ ಹೋಗಿದ್ದಾನೆ. ಯಾರನ್ನೇ ಸಲಹೆ ಕೇಳಿದರೂ ಬೆಳೆ ರಕ್ಷಣೆ ಮಾಡಿಕೊಳ್ಳಲು ಸೂಕ್ತ ಸಲಹೆ ಅಥವಾ ಮಾರ್ಗವಾಗಲೀ ಸಿಗಲಿಲ್ಲ. ಮೂರ್ನಾಲ್ಕು ದಿನಗಳು ಕಳೆಯುವಷ್ಟರಲ್ಲಿ ಇಡೀ ದರಾಕ್ಷಿ ಬೆಳೆ ಸಂಪೂರ್ಣ ನೆಲಕಚ್ಚಲು ಆರಂಭವಾಗಿದ್ದು ಬೆಳೆ ಮಣ್ಣಿನಲ್ಲಿ ಮಣ್ಣಾಗುವ ಹಂತಕ್ಕೆ ತಲುಪಿದೆ. ಆಗ ಹೊಲದಲ್ಲಿ ತಲೆಯ ಮೇಲೆ ಕೈ ಹೊತ್ತುಕೊಂಡು ರೈತ ಅಳುತ್ತಾ ಕುಳಿತಿದ್ದಾನೆ.

ತಪ್ಪಿನ ಅರಿವಾಗಿ ಕಣ್ಣೀರು ಹಾಕುತ್ತಾ ಕೊನೆಯುಸಿರೆಳೆದ: ಕಳೆದೊಂದು ವರ್ಷದಿಂದ ಹಗಲು ರಾತ್ರಿ ಎನ್ನದಂತೆ ಜಮೀನಿನಲ್ಲಿ ದ್ರಾಕ್ಷಿ ಬೆಳೆಯನ್ನು ಮಗುವಿನಂತೆ ಪೋಷಣೆ ಮಾಡಿ ಬೆಳೆಸಿದ ರೈತನು ತನ್ನ ಒಂದೇ ಒಂದು ತಪ್ಪು ನಿರ್ಧಾರದಿಂದ ಸಂಪೂರ್ಣ ಬೆಳೆ ಹಾಳಾಗಿದೆ. ಇದಕ್ಕೆ ಯಾರಿಂದಲೂ ಪರಿಹಾರ ಕೇಳಲು ಸಾಧ್ಯವಿಲ್ಲ. ಬರೋಬ್ಬರಿ ಐದು ಲಕ್ಷ ರೂ. ಸಾಲವನ್ನೂ ಮಾಡಲಾಗಿದ್ದು, ಸಾಲ ತೀರಿಸಲಾಗದೇ ಊರಲ್ಲಿ ಮರ್ಯಾದೆ ಕೂಡ ಇರುವುದಿಲ್ಲ. ಮನೆ ಹಾಗೂ ಹೊಲವನ್ನು ಕೂಡ ಜಪ್ತಿ ಮಾಡುತ್ತಾರೆ ಎಂಬ ಭಯ ಕಾಡಿದೆ. ಹೆಂಡತಿ, ಮಕ್ಕಳಿಗೆ ನನ್ನಿಂದ ಅನ್ಯಾಯವಾಗುತ್ತಿದೆ. ಜೊತೆಗೆ ತಾನು ಬೆಳೆದ ದ್ರಾಕ್ಷಿ ಬೆಳೆಯನ್ನು ತನ್ನ ಕೈಯಾರೆ ಹಾಳು ಮಾಡಿದೆನೆಂದು ಮನನೊಂದು ರೈತ ಆತ್ಮಹತ್ಯೆಗೆ ಶರಣಾಗಿದ್ದಾನೆ. 

ಇದನ್ನೂ ಓದಿ: ಮೂವರು ಮಕ್ಕಳೊಂದಿಗೆ ನೀರಿನ ಸಂಪ್‌ಗೆ ಹಾರಿದ ತಾಯಿ: ಹೃದಯವಿದ್ರಾವಕ ಘಟನೆಗೆ ಗ್ರಾಮಸ್ಥರ ಕಣ್ಣೀರು

ಗ್ರಾಮದಲ್ಲಿ ಸೂತಕ ಮೌನ: ಇನ್ನು ಹೊಲದಲ್ಲಿ ಬೆಳೆಯನ್ನು ಬೆಳೆಯಲು ತನ್ನ ಸರ್ವಸ್ವವವನ್ನೂ ತ್ಯಾಗ ಮಾಡಿದ್ದ ರೈತ ಅದರಿಂದ ತನ್ನ ಜೀವನ ಹಸನಾಗಬಹುದು ಎಂದು ನಿರೀಕ್ಷಿಸಿದ್ದನು. ಆದರೆ, ತಪ್ಪಾದ ಔಷಧ ಬೆಳೆಯನ್ನು ನಾಶ ಮಾಡಿದ್ದು, ಅದರೊಂದಿಗೆ ರೈತನೂ ಸಾವನ್ನಪ್ಪಿದ್ದಾನೆ. ಸಾಲ ತೀರಿಸಲು ಬೇರೆ ಮಾರ್ಗವನ್ನು ಹುಡುಕಬಹುದಿತ್ತು. ಆದರೆ, ಸಾವಿನ ನಿರ್ಧಾರ ಮಾಡಬಾರದಿತ್ತು ಎಂದು ಗ್ರಾಮಸ್ಥರು ಮಾತನಾಡುತ್ತಿದ್ದಾರೆ. ಆದರೆ, ದ್ರಾಕ್ಷಿ ಬೆಳೆ ಮತ್ತು ಅದನ್ನು ಬೆಳೆದ ರೈತ ಎರಡೂ ಮಣ್ಣಲ್ಲಿ ಮಣ್ಣಾಗುತ್ತಿವೆ ಎಂದು ಇಡೀ ಗ್ರಾಮವೇ ಸೂತಕದ ಮನೆಯಂತಾಗಿತ್ತು. ಇನ್ನು ಮನೆಗೆ ಆಸರೆಯಾಗಿದ್ದ ಮನೆಯೊಡೆಯನ್ನು ಕಳೆದುಕೊಂಡ ಕುಟುಂಬದ ಆಕ್ರಂದನವೂ ಕೂಡ ಮುಗಿಲು ಮುಟ್ಟಿತ್ತು. 

click me!