ಯಾದಗಿರಿ ಪ್ರವಾಸೋದ್ಯಮ ಇಲಾಖೆ ಈ ಬಾರಿ ಪ್ರವಾಸೋದ್ಯಮ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಯಾದಗಿರಿ
ಯಾದಗಿರಿ(ಸೆ. 27): ಇವತ್ತು ವಿಶ್ವ ಪ್ರವಾಸೋದ್ಯಮ ದಿನವಾಗಿದ್ದು ಯಾದಗಿರಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಹಾಗೂ ಅಭಿವೃದ್ಧಿ ಸಮಿತಿ ವತಿಯಿಂದ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಪ್ರಸಿದ್ಧ ಪ್ರವಾಸಿ ತಾಣವಾದ ಯಾದಗಿರಿ ತಾಲೂಕಿನ ಹತ್ತಿಕುಣಿ ಜಲಾಶಯದಿಂದ ಯಾದಗಿರಿ ನಗರದ ಕನ್ನಡ ಭವನ ವರೆಗೆ ಸೈಕಲ್ ಜಾಥಾ ಕಾರ್ಯಕ್ರಮ ಮಾಡಲಾಯಿತು. ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ್, ಕರ್ನಾಟಕ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ದೇವಿಂದ್ರನಾಥ್ ಕೆ.ನಾದ್, ಡಿಸಿ ಸ್ನೇಹಲ್.ಆರ್, ಎಸ್ಪಿ ಡಾ.ಸಿ.ಬಿ.ವೇದಮೂರ್ತಿ, ಎಸಿ ಶಾ ಆಲಂ ಹುಸೇನ್ ಇತರರು ಸೈಕಲ್ ತುಳಿದರು.
undefined
ಪ್ರಸಿದ್ಧ ಪ್ರವಾಸಿ ತಾಣ ಹತ್ತಿಕುಣಿ ಜಲಾಶಯದಿಂದ ಸೈಕಲ್ ಜಾಥಾ ಆರಂಭ
ಭಾರತ ಹಲವಾರು ಪ್ರವಾಸಿ ತಾಣಗಳನ್ನು ಹೊಂದಿರುವ ದೇಶ. ನಮ್ಮ ಇತಿಹಾಸವೇ ನಮ್ಮ ಪರಂಪರೆ, ನಮ್ಮ ದೇಶದ ಇತಿಹಾಸ, ವೈಭವವನ್ನು ತಿಳಿಸುತ್ತದೆ. ಹಲವಾರು ದೇವಸ್ಥಾನಗಳು, ಜಲಾಶಯಗಳು, ಪ್ರಾಣಿ ಸಂಗ್ರಾಲಯಗಳು, ಪ್ರೇಕ್ಷಣೀಯ ಸ್ಥಳಗಳನ್ನು ಭಾರತ ಹೊಂದಿದೆ. ಇದರಿಂದಾಗಿ ಯಾದಗಿರಿ ಪ್ರವಾಸೋದ್ಯಮ ಇಲಾಖೆ ಈ ಬಾರಿ ಪ್ರವಾಸೋದ್ಯಮ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು. ಯಾಕಂದ್ರೆ ದೇಶದ ಆರ್ಥಿಕತೆಯಲ್ಲಿ ಪ್ರವಾಸೋದ್ಯಮ ಇಲಾಖೆಯ ಪಾತ್ರವೂ ಅಷ್ಟೇ ಪ್ರಮಾಣದಲ್ಲಿ ಕೊಡುಗೆಯಿದೆ. ಯಾದಗಿರಿಯಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾದ ಯಾದಗಿರಿ ತಾಲೂಕಿನ ಹತ್ತಿಕುಣಿ ಜಲಾಶಯದಿಂದ ಸೈಕಲ್ ಜಾಥಾ ಆರಂಭವಾಗಿ, ಕನ್ನಡ ಭವನದ ವರೆಗೆ ಅಂದ್ರೆ ಸುಮಾರು 15 ಕಿ.ಮೀ ವರೆಗೆ ಸೈಕಲ್ ಜಾಥಾ ಮಾಡಿದರು. ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಯುವಕರು ಮತ್ತು ಯುವತಿಯರು ಸಾಥ್ ಕೊಟ್ಟು ಸೈಕಲ್ ಜಾಥಾ ಯಶಸ್ವಿಗೊಳಿಸಿದರು.
ದಿಲ್ಲಿ ಏಮ್ಸ್‌ಗೆ ಕನ್ನಡಿಗ, ಯಾದಗಿರಿಯ ಡಾ. ಶ್ರೀನಿವಾಸ್ ಮುಖ್ಯಸ್ಥ
ದೇಶದ ಆರ್ಥಿಕತೆಗೆ ಪ್ರವಾಸೋದ್ಯಮ ಸಹಕಾರಿ: ಶಾಸಕ ವೆಂಕಟರೆಡ್ಡಿ ಮುದ್ನಾಳ್
ದೇಶದ ಆರ್ಥಿಕತೆ ಬಲಿಷ್ಠವಾಗಲು ಪ್ರವಾಸೋದ್ಯಮ ಇಲಾಖೆಯು ಕಾರಣ. ನಮ್ಮ ಯಾದಗಿರಿ ಜಿಲ್ಲೆಯಲ್ಲಿ ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳಿವೆ, ಆದ್ರೆ ಆ ಪ್ರವಾಸಿ ತಾಣಗಳ ಬಗ್ಗೆ ಜನರಿಗೆ ಹೆಚ್ಚು ಗೊತ್ತಿಲ್ಲ, ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಪ್ರಸಿದ್ಧ ಸ್ಥಳಗಳ ಬಗ್ಗೆ ಪ್ರಚಾರ ಮಾಡಬೇಕು, ಇದರಿಂದ ಹೆಚ್ಚು ಜನರಿಗೆ ಗೊತ್ತಾಗುತ್ತದೆ. ಜಿಲ್ಲಾ ಕೇಂದ್ರದಲ್ಲಿರುವ ಕೋಟೆಯ ಅಭಿವೃದ್ಧಿ ಹಾಗೂ ಸಂರಕ್ಷಣೆಗಾಗಿ 2 ಕೋಟಿ ರೂ. ಕೆರೆ ಅಭಿವೃದ್ಧಿಗಾಗಿ 2 ಕೋಟಿ ರೂ. ಹಣ ಮೀಸಲಿಡಲಾಗಿದೆ ಎಂದು ಹೇಳಿದರು.
ಯಾದಗಿರಿ ಜಿಲ್ಲೆಯ ಸುರಪುರ 'ಶೂರರ ಬೀಡು'
ಯಾದಗಿರಿ ಜಿಲ್ಲೆಯಲ್ಲಿ ಹತ್ತಾರು ಪ್ರವಾಸಿ ತಾಣಗಳಿವೆ. ಅವುಗಳೆಂದರೆ ಕಕ್ಕೇರಾದ ಸೌರಾಷ್ಟ್ರ ಸೋಮನಾಥ ದೇವಾಲಯ, ಕೊಡೇಕಲ್ ನ ಕಾಲಜ್ಞಾನಿ ಬಸವೇಶ್ವರ ದೇವಸ್ಥಾನ, ಸುರಪುರದ ವೇಣುಗೋಪಾಲ ಸ್ವಾಮಿ ದೇವಾಲಯ, ತಿಂಥಣಿಯ ಮೌನೇಶ್ವರ, ಶಹಾಪುರದ ಬುದ್ಧ ಮಲಗಿದ ಬೆಟ್ಟ, ಮೈಲಾಪುರ ಮೈಲಾರಲಿಂಗೇಶ್ವರ, ನಗರದ ಕೋಟೆ, ದಭದಭಿ ಜಲಪಾತ, ಹತ್ತಿಕುಣಿ ಜಲಾಶಯ, ನಾರಾಯಪುರದ ಬಸವಸಾಗರ ಜಲಾಸಾಯ, ಚಿಂತನಹಳ್ಳಿ ಗವಿಸಿದ್ದ ಲಿಂಗೇಶ್ವರ, ಬೋನಾಳದ ಪಕ್ಷಿಧಾಮ, ರಾಜನಕೋಳೂರಿನ ಬುಡ್ಡರ ಮನೆಗಳು ಹೀಗೆ ಹಲವಾರು ಪ್ರವಾಸಿ ತಾಣಗಳ ತವರೂರು ಯಾದಗಿರಿ ಜಿಲೆಯಾಗಿದೆ. ಆದ್ರೆ ಯಾದಗಿರಿ ಜಿಲ್ಲೆಯಲ್ಲಿರುವ ಹಲವಾರು ಪ್ರವಾಸಿ ತಾಣಗಳು ಅಭಿವೃದ್ದಿಯಲ್ಲಿ ಸ್ವಲ್ಪ ಚೇತರಿಕೆ ಕಾಣಬೇಕಾಗಿದೆ. ನಮ್ಮ ಯಾದಗಿರಿ ಜಿಲ್ಲೆಯ ಸುರಪುರವನ್ನು 'ಶೂರರ ಬೀಡು' ಎಂದು ಕರೆಯುತ್ತಾರೆ. ಈ ಸುರಪುರ ನಮ್ಮ ಯಾದಗಿರಿ ಜಿಲ್ಲೆಯ ಅಪ್ರತಿಮ ಹೋರಾಟದ ಅಮೃತಭೂಮಿಯಾಗಿದೆ. ದೇಶದ 1857 ರಲ್ಲಿ ಮೊಟ್ಟ ಮೊದಲ ಬಾರಿಗೆ ಸ್ವಾತಂತ್ರ್ಯ ಸಂಗ್ರಾಮ ಸುರಪುರದಿಂದಲೇ ಆರಂಭವಾಯಿತು.
ನಾಲ್ವಡಿ ರಾಜಾ ವೆಂಕಟಪ್ಪ ನಾಯಕರು ಸ್ವಾತಂತ್ರ್ಯ ಸಂಗ್ರಾಮವನ್ನು ಈ ಭಾಗದಲ್ಲಿ ನೇತೃತ್ವ ವಹಿಸಿದ್ದರು. ಹಾಗಾಗಿ ಭಾರತದ ಇತಿಹಾಸದಲ್ಲಿ ಸುರಪುರವನ್ನು ಎಂದು ಮರೆಯಲು ಸಾಧ್ಯವಿಲ್ಲ, ಸುರಪುರಕ್ಕೆ ಬಹಳ ಮಹತ್ವವಾದ ಸ್ಥಾನವಿದೆ. ಜೊತೆಗೆ ಶಹಾಪುರ ತಾಲೂಕಿನ ಕೊಳ್ಳೂರು(ಎಂ) ನ ಕೃಷ್ಣಾ ನದಿತೀರದಲ್ಲಿ ಇತ್ತೀಚಿಗೆ ನಿಧನರಾದ ಬ್ರಿಟನ್ ರಾಣಿ ಎಲಿಜಬೆತ್-2 ಕೀರಿಟದಲ್ಲಿ ಧರಿಸುತ್ತಿದ್ದ ಜಗತ್‌ಪ್ರಸಿದ್ಧ ಕೋಹಿನೂರು ವಜ್ರ ನಮ್ಮ ಜಿಲ್ಲೆಯದಾಗಿದೆ ಎಂದು ಖ್ಯಾತ ಇತಿಹಾಸತಜ್ಞ ಭಾಸ್ಕರ್ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.