ಪಕ್ಕದ ಮನೆಯವನ ಜೊತೆಗೆ ಇರಿಸಿಕೊಂಡಿದ್ದ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಪ್ರಿಯಕರನ ಜೊತೆ ಸೇರಿ ಮಹಿಳೆ ಹತ್ಯೆ ಮಾಡಿದ್ದಾಳೆ. ಖತರ್ನಾಕ್ ಐಡಿಯಾ ಮಾಡಿ ಕೊಂದಿದ್ದಾಳೆ.
ಬೆಂಗಳೂರು (ಮಾ.16): ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಾರೆ ಎಂಬ ಕಾರಣಕ್ಕೆ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಹತ್ಯೆ ಮಾಡಿ, ಆಕಸ್ಮಿಕ ಸಾವು ಎಂದು ಬಿಂಬಿಸಿದ್ದ ಆರೋಪಿಗಳಿಬ್ಬರು ವರ್ತೂರು ಠಾಣೆ ಪೊಲೀಸರಿಗೆ ತಡವಾಗಿ ಸಿಕ್ಕಿ ಬಿದ್ದಿದ್ದಾರೆ.
ವರ್ತೂರಿನ ಸಿದ್ದಾಪುರ ನಿವಾಸಿ ಚಂದ್ರಶೇಖರ್(40) ಕೊಲೆಯಾದ ವ್ಯಕ್ತಿ. ಈ ಸಂಬಂಧ ಮೃತರ ಪತ್ನಿ ಪುಷ್ಪಾವತಿ (38) ಹಾಗೂ ಈಕೆಯ ಪ್ರಿಯಕರ ಮನು(42) ಎಂಬಾತನನ್ನು ಬಂಧಿಸಲಾಗಿದೆ.
ಖಾಸಗಿ ಕಂಪನಿಯಲ್ಲಿ ಸೂಪರ್‌ವೈಸರ್ ಆಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್ ಅವರು ಪುಷ್ಪಾವತಿ ಅವರನ್ನು ಕೆಲ ವರ್ಷಗಳ ಹಿಂದೆ ವಿವಾಹವಾಗಿದ್ದರು. ಏಳು ವರ್ಷಗಳ ಹಿಂದೆ ನಿರ್ಮಾಣ ಹಂತದ ಕಟ್ಟಡದಲ್ಲಿ ತಲೆಸುತ್ತು ಬಂದು ಕೆಳಗೆ ಬಿದ್ದು, ಚಂದ್ರಶೇಖರ್ ತಲೆಗೆ ಗಂಭೀರ ಗಾಯವಾಗಿತ್ತು. ಬಳಿಕ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ನಂತರ ಚಂದ್ರಶೇಖರ್ ಮೂರ್ಚೆ ರೋಗದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು.
ಏಕಾಂತದಲ್ಲಿದ್ದ ಜೋಡಿ ಮೇಲೆ ದುಷ್ಕರ್ಮಿಗಳ ದಾಳಿ, ಹೆದರಿ ಓಡಿದ ಗೆಳೆಯ
ಇತ್ತ ಪುಷ್ಪಾವತಿ ನೆರೆಮನೆ ನಿವಾಸಿ ಮನು ಎಂಬಾತನ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈ ವಿಚಾರ ತಿಳಿದು ಚಂದ್ರಶೇಖರ್ ಪತ್ನಿಗೆ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ದಂಪತಿ ನಡುವೆ ಇದೇ ವಿಚಾರಕ್ಕೆ ಹಲವು ಬಾರಿ ಜಗಳ ನಡೆದಿದೆ. ಅನೈತಿಕ ಸಂಬಂಧಕ್ಕೆ ಪತಿ ಅಡ್ಡಿಯಾಗುತ್ತಿದ್ದಾರೆಂದು ಪತಿಯೇ ಪ್ರಿಯಕರನ ಜತೆ ಸೇರಿ ಪತಿ ಹತ್ಯೆಗೆ ಸಂಚು ರೂಪಿಸಿದ್ದಳು. ಅದರಂತೆ ಫೆ.21ರಂದು ಪತಿ ಮನೆಗೆ ಬಂದಾಗ ಕಬ್ಬಿಣದ ರಾಡ್‌ನಿಂದ ಇಬ್ಬರೂ ಸೇರಿ ಚಂದ್ರಶೇಖರ್ ತಲೆಗೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ಬಳಿಕ ಯಾರಿಗೂ ಅನುಮಾನ ಬಾರದಂತೆ ಚಂದ್ರಶೇಖರ್ ಮೃತದೇಹವನ್ನು ಸ್ನಾನದ ಕೋಣೆಗೆ ಸಾಗಿಸಿ ಸ್ನಾನ ಮಾಡುತ್ತಿರುವ ವೇಳೆ ಬಿದ್ದು ಮೃತಪಟ್ಟಿರುವುದಾಗಿ ಬಿಂಬಿಸಿದ್ದರು.
ಪತಿ ಕುಟುಂಬದವರಿಗೂ ಇದೇ ರೀತಿ ಹೇಳಿ ಮಹಿಳೆ ನಂಬಿಸಿದ್ದಳು. ಈ ಸಂಬಂಧ ಮಹಿಳೆಯೇ ವರ್ತೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಎಂದು ದೂರು ನೀಡಿದ್ದಳು ಎಂದು ಪೊಲೀಸರು ತಿಳಿಸಿದರು.
ಸಿಕ್ಕಿಬಿದ್ದಿದ್ದು ಹೇಗೆ?
ಚಂದ್ರಶೇಖರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿತ್ತು. ಕುಟುಂಬಸ್ಥರು ಮೃತದೇಹವನ್ನು ಮೈಸೂರಿನಲ್ಲಿರುವ ಚಂದ್ರಶೇಖರ್ ಊರಿನಲ್ಲಿ ದಹನ ಮಾಡಿದ್ದರು. ಮೈಸೂರಿಗೆ ಮನು ಕೂಡ ತೆರಳಿದ್ದು, ಸಂಬಂಧಿಕರು ಆತನ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಈ ವೇಳೆ ಪುಷ್ಪಾವತಿ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ವಿಷಯ ಗೊತ್ತಾಗಿದೆ.
ಈ ನಡುವೆ ಚಂದ್ರಶೇಖರ್‌ನ ತಾಯಿ ಮಗನ ಸಾವಿನ ಬಗ್ಗೆ ಅನುಮಾನವಿದೆ ಎಂದು ವರ್ತೂರು ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಪುಷ್ಪಾವತಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಸಂಗತಿ ಹೊರಗೆ ಬಂದಿದೆ