ಬಿಜೆಪಿ ನಾಯಕರೇ. ನಿಮ್ಮನ್ನ ಗೆಲ್ಲಿಸೋದು ಗೊತ್ತು... ಸೋಲಿಸೋದು...ಗೊತ್ತು: ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೈರಲ್
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಜು.29): ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಈಗಾಗಲೇ ಬಿಜೆಪಿ ಯುವಮೋರ್ಚಾದ ಕಾರ್ಯಕರ್ತರು ರಾಜೀನಾಮೆ ನೀಡುವ ಮೂಲಕ ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸಲು ಮುಂದಾಗಿದ್ದಾರೆ. ಮತ್ತೊಂದೆಡೆ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ವೈರಲ್ ಆಗುವ ಮೂಲಕ ಭಾರೀ ಸಂಚಲನವನ್ನು ಮೂಡಿಸಿದೆ.
ನಾವು ಮತ ನೀಡಿದ್ದೇವೆ, ಬಿಜೆಪಿ ನಾಯಕರ ಗುಲಾಮರಲ್ಲ
ಬಿಜೆಪಿ ನಾಯಕರೇ... ನಿಮ್ಮನ್ನ ಗೆಲ್ಲಿಸೋದು ಗೊತ್ತು. ಸೋಲಿಸೋದು....! ನೀವು ಸರಿಯಾಗಿ ನಡೆಸಿದರೆ ಬೆನ್ನು ತಟ್ಟೋದು ಗೊತ್ತು. ದಾರಿ ತಪ್ಪಿದರೆ ಬೆನ್ನಿಗೆ ಬಾರಿಸೋದು ಗೊತ್ತು...! ಹೀಗೊಂದು ವಾಟ್ಸಾಪ್ ಸ್ಟೇಟಸ್‌ವೊಂದು ಮಲೆನಾಡು ಭಾಗದಲ್ಲಿ ಭಾರೀ ಸದ್ದು ಮಾಡುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹೀಗೊಂದು ಸಂದೇಶ ಹಾಕುವ ಮೂಲಕ ಹಿಂದೂ ಕಾರ್ಯಕರ್ತರು ರಾಜಕೀಯ ನಾಯಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ. ವಾಟ್ಸಾಪ್ ಸ್ಟೇಟಸ್ ಹಾಕುತ್ತಿರುವ ಮಲೆನಾಡ ಹಿಂದೂ ಕಾರ್ಯಕರ್ತರು ಬಿಜೆಪಿ ರಾಜಕೀಯ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದಾರೆ.
ಬಿಜೆಪಿ ಕಾರ್ಯಕರ್ತರ ರಕ್ಷಣೆ ಮಾಡುವುದು ನಮ್ಮ ಕೈಯಲ್ಲಿ ಆಗುತ್ತಿಲ್ಲ - ಈಶ್ವರಪ್ಪ
ಪ್ರತಿಫಲಾಪೇಕ್ಷೆ ಇಲ್ಲದೆ ಪ್ರಚಾರ
ನಾವು ಹಿಂದೂ ಕಾರ್ಯಕರ್ತರು, ರಾಜಕೀಯವಾಗಿ ಬಿಜೆಪಿಗೆ ಮತ ನೀಡಿದ್ದೇವೆ. ಪಕ್ಷಕ್ಕಾಗಿ ಯಾವುದೇ ಲಾಭವಿಲ್ಲದೆ, ಪ್ರತಿಫಲಾಪೇಕ್ಷೆ ಇಲ್ಲದೆ ಪ್ರಚಾರ ಮಾಡುತ್ತಿದ್ದೇವೆ. ಹಾಗಾಂತ ನಾವು ಬಿಜೆಪಿ ನಾಯಕರ ಗುಲಾಮರಲ್ಲ. ನಮ್ಮ ನಿಷ್ಠೆ ಏನಿದ್ದರೂ ತತ್ವ-ಸಿದ್ಧಾಂತಕ್ಕೆ ಮಾತ್ರ ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಮಂಗಳೂರಿನ ಬಿಜೆಪಿ ಯುವ ಮುಖಂಡ ಪ್ರವೀಣ್ ಹತ್ಯೆ ಬಳಿಕ ಹಿಂದೂ ಕಾರ್ಯಕರ್ತರು ಸರ್ಕಾರ ಹಾಗೂ ಬಿಜೆಪಿ ನಾಯಕರ ವಿರುದ್ಧ ಬಹಿರಂಗವಾಗಿ ಆಕ್ರೋಶ ಹೊರಹಾಕಿದ್ದಾರೆ. ಮಲೆನಾಡಿನಾದ್ಯಂತ ನೂರಾರು ಕಾರ್ಯಕರ್ತರು ಪಕ್ಷದ ಪದಾಧಿಕಾರಿಗಳ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಪ್ರತಿ ಬಾರಿ ಹಿಂದೂ ಕಾರ್ಯಕರ್ತರು ಕೊಲೆಯಾದಾಗಲೂ ಸರ್ಕಾರ ಆರೋಪಿಗಳನ್ನು ಕೂಡಲೇ ಬಂಧಿಸುತ್ತೇವೆ. ಸರ್ಕಾರ ಕಠಿಣ ಕಾನೂನು ಕ್ರಮ ಕೈಗೊಳ್ಳುತ್ತೆ ಎಂದು ಹೇಳುತ್ತಲೇ ಬಂದಿದೆ. ಆದರೆ, ಆರೋಪಿಗೆ ಕಠಿಣ ಶಿಕ್ಷೆ ಆಗಿಲ್ಲ. ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷನನ್ನ ಕೊಂದವರಿಗೆ ಜೈಲಿನಲ್ಲಿ ರಾಜಾಥೀತ್ಯ ಸಿಗುತ್ತಿದೆ. ಸರ್ಕಾರದ "ಕಠಿಣ ಕಾನೂನು ಕ್ರಮದ" ಸಿದ್ಧ ಉತ್ತರದ ಹೇಳಿಕೆಯಿಂದ ನೊಂದಿರುವ ಹಿಂದೂ ಪರ ಸಂಘಟನೆ ಕಾರ್ಯಕರ್ತರು ಈ ರೀತಿಯಾಗಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕುತ್ತಿದ್ದಾರೆ. ಇನ್ನು ಹಲವು ಕಾರ್ಯಕರ್ತರು ಪ್ರವೀಣ್ ಸಾವಿಗೆ ಸೂಕ್ತ ನ್ಯಾಯ ಸಿಗುವವರೆಗೂ ಪಕ್ಷದ ಯಾವುದೇ ಕಾರ್ಯಕ್ರಮದಲ್ಲೂ ಭಾಗಿಯಾಗಬಾರದೆಂದು ತೀರ್ಮಾನಿಸಿದ್ದಾರೆ.