ಈಗಿನ ಕಾಲದಲ್ಲಿ ಯಾವುದೇ ಗ್ರಾಮಕ್ಕೆ ಹೋದರೂ ಅಲ್ಲಿ ದೊಡ್ಡ ದೊಡ್ಡ ಮನೆಗಳು ಕಾಣುತ್ತವೇ. ಅಭಿವೃದ್ಧಿ ಕಾಣದ ಊರುಗಳಲ್ಲೂ ಆರ್‌ಸಿಸಿ ಮನೆಗಳು ಕಾಣುತ್ತವೆ. ಆದರೆ, ಈ ಗ್ರಾಮದಲ್ಲಿ ಆರ್‌ಸಿಸಿ ಮನೆ ಹೋಗಲಿ, ಅಲ್ಲೊಂದು ಇಲ್ಲೊಂದು ಮಾತ್ರ ಇರುವ ಹೆಂಚಿನ ಮನೆ ಕೂಡ ಸರಿಯಾಗಿಲ್ಲ. ಯಾವಾಗ ಉರುಳಿ ಬೀಳುತ್ತದೆಯೋ ಗೊತ್ತಿಲ್ಲ.
ಗಣೇಶ್ ತಮ್ಮಡಿಹಳ್ಳಿ
ಶಿವಮೊಗ್ಗ(ಜೂ.10): ತುರ್ತು ಸಂದರ್ಭದಲ್ಲಿ ಅಂಬ್ಯುಲೆನ್ಸ್‌ಗಳು ಬಿಟ್ಟರೆ ಈ ಗ್ರಾಮಕ್ಕೆ ವಾಹನಗಳು ಬರುವುದು ಬಲು ಅಪರೂಪ... ಇಂತಹ ಸಂದರ್ಭದಲ್ಲಿ ಒಟ್ಟೊಟ್ಟಿಗೆ ನಾಲ್ಕೈದು ಕಾರುಗಳು ಬಂದು ನಿಂತಾಗ ಆ ಗ್ರಾಮದ ನಿವಾಸಿಗಳಲ್ಲಿ ಅಚ್ಚರಿ ಮೂಡಿತು. ದೊಡ್ಡವರು ಇವರಾರಯರು, ಏಕೆ ಬಂದಿದ್ದಾರೆ ಎಂದು ಒಂದು ಕ್ಷಣ ಯೋಚನೆಯಲ್ಲಿ ಮುಳುಗಿದರೆ, ಇದ್ಯಾವುದರ ಪರಿವೇ ಇಲ್ಲದ ಚಿಣ್ಣರು, ಬಿಳಿ ಕಾರೊಂದು, ಕಪ್ಪು ಕಾರೊಂದು ಎಂದು ಕಾರ್‌ನ ಸಂಖ್ಯೆ ಎಣಿಸುತ್ತಾ ಕಾರುಗಳು ಸುತ್ತ ಸುಳಿದಾಡುತ್ತಿದ್ದರು.
ಇದು ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹಮ್ಮಿಕೊಂಡಿದ್ದ ಗ್ರಾಮ ಭೇಟಿ ಕಾರ್ಯಕ್ರಮ ಅಂಗವಾಗಿ ಶಿವಮೊಗ್ಗದಿಂದ 30 ಕಿ.ಮೀ ದೂರದಲ್ಲಿರುವ ಬೆಳಗಲು ಗ್ರಾಮಕ್ಕೆ ಪತ್ರಕರ್ತರ ತಂಡ ಭೇಟಿ ನೀಡಿದಾಗ ಕಂಡು ಬಂದ ದೃಶ್ಯ.
ರೈತರ ಜಮೀನು ಕಬಳಿಸಲು ಕಾಂಗ್ರೆಸ್ ಯತ್ನ: ರತ್ನಾಕರ್ ಹೊನಗೋಡು
ಪತ್ರಕರ್ತರು ಕಾರಿನಿಂದ ಕೆಳಗಿಳಿಯುತ್ತಿದ್ದಂತೆ ಕೆಲ ಗ್ರಾಮಸ್ಥರು ಕಾರಿನ ಬಳಿ ಬಂದು ಯಾರ್ ನೀವು, ಯಾರ್ ನೀವು ಎಂದು ವಿಚಾರಿಸಿದರೆ, ಇನ್ನು ಕೆಲವರು ಇವರ ಸಹವಾಸ ನಮಗೇಕೆ ಎಂಬಂತೆ ಅಲ್ಲಿಂದ ಕಾಲ್ಕಿಳುತ್ತಿದ್ದ ದೃಶ್ಯ ಕಂಡು ಬಂತು. ಹತ್ತಿರ ಬಂದವರು ನಮಗೇನು ತಂದಿದ್ದೀರಿ ಎಂದು ಪ್ರಶ್ನಿಸಿದರು.
ಕೊನೆಗೆ ಪತ್ರಕರ್ತರಿಗೆ ಪರಿಚಯವಿದ್ದ ವ್ಯಕ್ತಿಯೊಬ್ಬರು ಇವರು ಪತ್ರಕರ್ತರು ನಿಮ್ಮ ಸಮಸ್ಯೆಗಳನ್ನು ಕೇಳಲು ಬಂದಿದ್ದಾರೆ ಎಂದಾಗ ಅಲ್ಲಿದ್ದ ನಿವಾಸಿಗಳು ಮನೆಯೊಳಗಿಂದ ಚಾಪೆ ತಂದು ಪಡಸಾಲೆಯಲ್ಲಿ ಹಾಕಿದರು. ದೂರದಲ್ಲಿ ನಿಂತ ಮಹಿಳೆಯೊಬ್ಬರು ‘ಹಿಂಗೆ ಬರ್ತೀರಿ.. ಹೋಗ್ತೀರಿ..ಎಂತ ಮಾಡಿದ್ದೀರಿ. ಮನೆ ಕಟ್ಟಕೊಡ್ತೀರಾ ಎಂದೆಲ್ಲ ಪ್ರಶ್ನಿಸತೊಡಗಿದಾಗ ಮಂಡಗದ್ದೆಯಿಂದ ಬಂದಿದ್ದ ಪಂಚಾಯ್ತಿ ಲೀಡರ್ ಒಬ್ಬರು ಇವರೆಲ್ಲ ಪತ್ರಕರ್ತರು ಎಂದು ಸಮಜಾಯಿಸಿ ನೀಡಿದರು.
ಪತ್ರಕರ್ತರು ನಾವು ಬಂದ ಉದ್ದೇಶದ ಬಗ್ಗೆ ವಿವರಿಸುವವರೆಗೆ ಅಲ್ಲಿದ್ದವರಲ್ಲಿ ಆತಂಕವೇ ಇತ್ತು. ಪತ್ರಕರ್ತರ ಸಂಘದ ಅಧ್ಯಕ್ಷರು ನಮ್ಮ ತಂಡ ಯಾಕೆ ಬಂದಿದೆ, ಇದರ ಉದ್ದೇಶ ಏನು ಎಂಬ ಬಗ್ಗೆ ವಿವರವಾಗಿ ಹೇಳುತ್ತಿದ್ದಂತೆ ಅಲ್ಲಿದ್ದವೊಬ್ಬ ಸಾರ್ ನೀವು ಅರಣ್ಯ ಇಲಾಖೆ ಅಧಿಕಾರಿಗಳು ಎಂದುಕೊಂಡು ಕಾಡಿನೊಳಗೆ ಓಡಿ ಹೋಗಬೇಕೆಂದು ಕೊಂಡಿದ್ದೆ ಎಂದು ಹೇಳಿದಾಗ ಅಲ್ಲಿನ ಜನರ ಆತಂಕದ ಬಗ್ಗೆ ಅರಿವಾಯಿತು.
ಇಲ್ಲ ನಾವು ಬಂದಿದ್ದು ನಿಮ್ಮ ಸಮಸ್ಯೆ ಕೇಳುವುದಕ್ಕೆ ಎಂದು ಪತ್ರಕರ್ತರ ತಂಡ ಹೇಳಿದಾಗÜ ಒಂದೊಂದು ಸಮಸ್ಯೆ ಹೇಳುತ್ತಾ ಸಾಗಿದರು. ಕೆಲವರು ‘ಸಾರ್ ಊರಿಗೆ ಮೊದಲು ರಸ್ತೆ ಆಗಬೇಕು, ಮನೆ ಕಟ್ಟಿಕೊಳ್ಳಲು ಹಕ್ಕುಪತ್ರ ಸಿಗಬೇಕು. ಕುಡಿಯುವ ನೀರಿನ ವ್ಯವಸ್ಥೆ ಆಗಬೇಕು. ಇಲ್ಲಿ ವಾಸಿಸುವ ಎಲ್ಲರಿಗೂ ಶೌಚಾಲಯ ಇಲ್ಲ’ ಹೀಗೆ ಆ ಗ್ರಾಮದ ಸಮಸ್ಯೆಗಳನ್ನು ಸರಣಿಯನ್ನೇ ಪತ್ರಕರ್ತರ ಬಳಿ ಬಿಚ್ಚಿಟ್ಟರು.
ಇಲ್ಲಿನ ಸಮಸ್ಯೆಗಳನ್ನು ಆಲಿಸಿ ಎಲ್ಲ ಪತ್ರಕರ್ತರು ಅಲ್ಲಿಂದ ಹೊರಡುವ ತಯಾರು ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಅಲ್ಲಿದ್ದ ಒಬ್ಬ ವೃದ್ದೆ ಪತ್ರಕರ್ತರೊಬ್ಬರ ಬಳಿ ಬಂದು ಸ್ವಾಮಿ ಅಲ್ಲಿದ್ದ ಮನೆ ನೋಡಿದಾ ಎಂದು ಹೇಳಿದಾಗ ಆ ಅಜ್ಜಿಯ ಮಾತಿನ ತಾತ್ಪರ್ಯ ಏನು ಎಂಬುದು ಅರ್ಥವಾಗಿಲ್ಲ. ಹೂ ಅಜ್ಜಿ ನೋಡಿದ್ದೇವೆ ಯಾಕೆ ಎಂದು ಕೇಳಿದಾಗ ಆಗ ಆ ಅಜ್ಜಿ ‘ಅದು ನನ್ನ ಮನೆ. ಇವತ್ತೊ, ನಾಳೆನೋ ಬೀಳೋ ಸ್ಥಿತಿಯಲ್ಲಿದೆ. ನನಗೂ ವಯಸ್ಸಾಗಿದೆ... ಅವರಿವರ ಕಾಲು ಹಿಡಿದು ಇರಕ್ಕೊಂದು ಸೂರು ಮಾಡಿಕೊಳ್ಳೋಣ ಎಂದರೆ ಇಲ್ಲಿನ ಫಾರೆಸ್ಟರ್‌ಗಳು ಬಿಡಲ್ಲ. ಒಂದು ತುಂಡು ಕಟ್ಟಿಗೆ ತಂದರೂ ತಕರಾರು ಮಾಡುತ್ತಾರೆ. ಇನ್ನೆಲ್ಲಿ ಮನೆ ಕಟ್ಟಿಕೊಳ್ಳೋಕೆ ಬಿಡುತ್ತಾರೆ ಸ್ವಾಮಿ’
ಶರಾವತಿ ಹಿನ್ನೀರಿನ ಕಣ್ಣೀರ ಕತೆ ದೃಶ್ಯ ಕಾವ್ಯವಾಗಿಇ ಅನಾವರಣ!
‘ನನಗೆ ಸಣ್ಣ ವಯಸ್ಸಿನ ಮೊಮ್ಮಕ್ಳಿದ್ದಾರೆ. ಅವರನ್ನು ಇಲ್ಲಿಂದ ನಾಲ್ಕೈದು ಕಿ.ಮೀ ದೂರದಲ್ಲಿರುವ ಶಾಲೆಗೆ ನಾನು ಹೋಗಿ ಬಿಟ್ಟು ಬರಲು ಸಾಧ್ಯವಿಲ್ಲ. ಹೀಗಾಗಿ ಅವರನ್ನು ಅವರ ತಾಯಿ ಮನೆಗೆ ಕಳುಹಿಸುತ್ತಿದ್ದೇನೆ. ಅಷ್ಟುದೂರ ನಡೆದುಕೊಂಡು ಹೋಗಿ ನೀರು ತರುವ ಶಕ್ತಿಯೂ ನನಗಿಲ್ಲ. ನಾನೊಬ್ಬಳೇ ಇರುವುದರಿಂದ ಸರ್ಕಾರ ಅಕ್ಕಿ ಕೊಡುತ್ತಲ್ಲ, ಅದರಲ್ಲೆ ಹೇಗೋ ಜೀವನ ಮಾಡ್ತಾ ಇದೀನಿ’ ಎನ್ನುವಾಗ ಆ ಅಜ್ಜಿಯ ಕಣ್ಣಿಂದ ಕಣ್ಣೀರು ಹರಿಯಿತು..
ಈಗಿನ ಕಾಲದಲ್ಲಿ ಯಾವುದೇ ಗ್ರಾಮಕ್ಕೆ ಹೋದರೂ ಅಲ್ಲಿ ದೊಡ್ಡ ದೊಡ್ಡ ಮನೆಗಳು ಕಾಣುತ್ತವೇ. ಅಭಿವೃದ್ಧಿ ಕಾಣದ ಊರುಗಳಲ್ಲೂ ಆರ್‌ಸಿಸಿ ಮನೆಗಳು ಕಾಣುತ್ತವೆ. ಆದರೆ, ಈ ಗ್ರಾಮದಲ್ಲಿ ಆರ್‌ಸಿಸಿ ಮನೆ ಹೋಗಲಿ, ಅಲ್ಲೊಂದು ಇಲ್ಲೊಂದು ಮಾತ್ರ ಇರುವ ಹೆಂಚಿನ ಮನೆ ಕೂಡ ಸರಿಯಾಗಿಲ್ಲ. ಯಾವಾಗ ಉರುಳಿ ಬೀಳುತ್ತದೆಯೋ ಗೊತ್ತಿಲ್ಲ. ಉಳಿದಂತೆ ಇರುವ ಎಲ್ಲ ಮನೆಗಳೂ ಮುರುಕಲು ಗುಡಿಸಲುಗಳೇ.. ಈ ಕಾಲದಲ್ಲೂ ಇದು ಹೇಗೆ ಸಾಧ್ಯ ಎಂದು ಕೇಳಿದಾಗ ಈ ಗ್ರಾಮದ ಜನರು ಅಧಿಕಾರಿಗಳ ನಿರ್ಲಕ್ಷ್ಯ, ಅರಣ್ಯ ಇಲಾಖೆ ಅಧಿಕಾರಿಗಳ ಶಾಪಕ್ಕೆ ಒಳಗಾಗಿದ್ದಾರೆ ಎಂಬುದು ಸ್ಪಷ್ಟವಾಯಿತು.