ಕೊರೋನಮ್ಮ ನಮ್ಮ ಊರಿಗೆ ಬರಬೇಡಮ್ಮ: ಗ್ರಾಮಸ್ಥರಿಂದ ವಿಶಿಷ್ಟ ಆಚರಣೆ

By Kannadaprabha NewsFirst Published May 22, 2020, 11:54 AM IST
Highlights

ಹುಲಿ​ಕೆ​ರೆ​ಯಲ್ಲಿ ದೈವ​ತ್ವ​ಕ್ಕೇ​ರಿದ ಕೊರೋ​ನಾ| ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹುಲಿಕೆರೆ ಗ್ರಾಮಸ್ಥರಿಂದ ಕೊರೋನಮ್ಮಗೆ ಪೂಜೆ| ಕೊರೋನಮ್ಮನ ಮೂರ್ತಿ ಮಾಡಿ ಗ್ರಾಮಸ್ಥರೆಲ್ಲಾ ಪೂಜೆ ಮಾಡಿ ಊರಿನ ಗಡಿಗೆ ದಾಟಿಸಿದರು|  ಪ್ಲೇಗ್‌, ಚಿಕೂನ್‌ ಗುನ್ಯಾ ಬಂದಾ​ಗಲೂ ಜನ​ರಿಂದ ಇಂಥ ಆಚ​ರ​ಣೆ|

ಭೀಮಣ್ಣ ಗಜಾಪುರ

ಕೂಡ್ಲಿಗಿ(ಮೇ.22): ಕೊರೋನಾ ಮಹಾಮಾರಿ ಇಡೀ ಜಗತ್ತನ್ನೇ ತಲ್ಲಣಗೊಳಿಸಿದ್ದು, ಕೊರೋನಾ ವೈರಸ್‌ ನಮ್ಮೂರಿಗೆ ಬರಬಾರದೆಂದು ತಾಲೂಕಿನ ಹುಲಿಕೆರೆ ಗ್ರಾಮಸ್ಥರು ಮಂಗಳವಾರ ಕೊರೋನಾ ಬೊಂಬೆ ಮಾಡಿ, ಹೋಳಿಗೆ ಎಡೆಯಿಂದ ನೈವೇದ್ಯ ಮಾಡಿ ಕಟ್ಟಿಗೆಯಿಂದ ಮಾಡಿದ ಕೊರೋನಮ್ಮನನ್ನು ಊರ ಗಡಿಭಾಗಕ್ಕೆ ತೆಗೆದುಕೊಂಡು ಹೋಗಿ ಬಿಟ್ಟು ಬಂದಿರುವುದು ಬೆಳಕಿಗೆ ಬಂದಿದೆ.

ಈ ಮೊದಲೇ ಹಳ್ಳಿಗಳಲ್ಲಿ ಮಳೆಯಾಗದಿದ್ದರೆ ರೈತರು ಹಾಗೂ ಇಡೀ ಊರಿನ ಗ್ರಾಮಸ್ಥರು ಹೋಳಿಗೆ ಮಾಡಿ ‘ಅಮ್ಮ’ ಎನ್ನುವ ಹೆಸರಿನ ಹಬ್ಬ ಮಾಡುತ್ತಿದ್ದರು. ಧಾನ್ಯ ಹಸನು ಮಾಡುವ ಮೊರದಲ್ಲಿ ಹೋಳಿಗೆ ಎಡೆ, ಬೇವಿನ ಸೊಪ್ಪು ಇಟ್ಟು ಹಳ್ಳಿಯ ಪ್ರತಿಯೊಂದು ಕುಟುಂಬದವರು ಹೋಗಿ ಊರ ಗಡಿಗೆ ಹೋಗಿ ಅಲ್ಲಿ ಎಡೆಯನ್ನು ಇಟ್ಟು ಬರುತ್ತಾರೆ.

ರಾಜ್ಯದಲ್ಲಿವೆ ಪ್ಲೇಗಮ್ಮ, ಸಿಡುಬಮ್ಮ, ಏಡ್ಸಮ್ಮ ಗುಡಿ: ಈಗ ‘ಕೊರೋನಮ್ಮ’ ಹೆಸರಲ್ಲೂ ಪೂಜೆ!

ಹೀಗೆ ಅಮ್ಮನ ಆಚರಣೆ ಮಾಡಿದರೆ ಮಳೆ ಬರುತ್ತದೆ ಎನ್ನುವ ನಂಬಿಕೆ ಈಗಲೂ ಜಿಲ್ಲೆಯಲ್ಲಿ ಇದ್ದು, ಈ ಆಚರಣೆ ಪ್ರಚಲಿತದಲ್ಲಿದೆ. ಪ್ಲೇಗ್‌, ಮಲೇರಿಯಾ ಇತರ ವೈರಸ್‌ ಕಾಯಿಲೆಗಳು ಬಂದಾಗ ಇಡೀ ಊರನ್ನೇ ಖಾಲಿ ಮಾಡುವ ಗುಳೇದ ಲಕ್ಕಮ್ಮ ದೇವಿಯ ಆಚರಣೆಯನ್ನು ಈಗಲೂ ಮುಂದುವರಿಸಿಕೊಂಡು ಬಂದಿದ್ದಾರೆ. ಇದೇ ರೀತಿ ಇತ್ತೀಚೆಗೆ ಚಿಕೂನ್‌ ಗುನ್ಯಾ ಬಂದಾಗಲೂ ‘ಕುಂಟಮ್ಮ’ ಎನ್ನುವ ಹೆಸರಿನಲ್ಲಿ ಕಟ್ಟಿಗೆ ಮೂರ್ತಿ ಮಾಡಿ, ಅದಕ್ಕೆ ಪೂಜೆ ಮಾಡಿ, ಊರ ಗಡಿಗೆ ತಂದು ಬಿಡುತ್ತಿದ್ದರು. ಆನಂತರ ಅದನ್ನು ಮುಂದಿನ ಊರಿನವರು ಪೂಜೆ ಮಾಡಿ ನಂತರ ಮತ್ತೊಂದು ಊರಿನ ಗಡಿಗೆ ಅವರು ಬಿಡುತ್ತಾರೆ. ಈಗಲೂ ಈ ಆಚರಣೆಗಳು ನಮ್ಮ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ರೂಢಿಯಲ್ಲಿವೆ.

ಆಚರಣೆಗಳ ಸಾಲಿಗೆ ಕೊರೋನಮ್ಮ

ನಾಡಿನ ಗ್ರಾಮೀಣ ಭಾಗಗಳಲ್ಲಿ ಈಗಾಗಲೇ ಹೋಳಿಗೆ ಅಮ್ಮ, ಗುಳೇದ ಲಕ್ಕಮ್ಮ, ಕುಂಟಮ್ಮ ಆಚರಣೆಗಳು ನಡೆಯುತ್ತಿದೆ. ಈ ಸಾಲಿಗೆ ಈಗ ಕೊರೋನಮ್ಮ ಆಚರಣೆ ಸದ್ದಿಲ್ಲದೆ ಸೇರಿಕೊಂಡಿದೆ. ತಾಲೂಕಿನ ಹುಲಿಕೆರೆ ಗ್ರಾಮಸ್ಥರು ಮಂಗಳವಾರ ಕೊರೊನಮ್ಮ ದೇವಿಯ ಪೂಜೆ ಮಾಡಿದ್ದು, ಇಡೀ ಊರೇ ಹಬ್ಬದ ರೀತಿ ಆಚರಿಸಿದೆ. ಇನ್ನು ಮುಂದೆ ಅಕ್ಕಪಕ್ಕದ ಗ್ರಾಮಗಳ ಜನತೆ ಆಚರಣೆ ಮಾಡುವ ದಿನಗಳು ದೂರವಿಲ್ಲ. ಮುಂದಿನ ದಿನಗಳಲ್ಲಿ ಪರಂಪರೆಯ ಹಬ್ಬಗಳ ಸಾಲಿನಲ್ಲಿ ಈ ಹಬ್ಬ ಸೇರಿದರೂ ಆಶ್ಚರ್ಯಪಡುವ ಆಗಿಲ್ಲ.

ಈಗಾಗಲೇ ನಮ್ಮ ಹಿರಿಯರು ಮಲೇರಿಯಾ, ಪ್ಲೇಗ್‌ ಬರಬಾರದೆಂದು ಊರನ್ನು ತೊರೆಯುವ ಆಚರಣೆಯನ್ನು ಹಬ್ಬದ ರೀತಿಯಲ್ಲಿ ಆಚರಿಸುವುದು ನಾಡಿನ ಅಲ್ಲಲ್ಲಿ ಕಾಣುತ್ತೇವೆ, ಕುಂಟಮ್ಮ ಆಚರಣೆ ಮಾಡುತ್ತೇವೆ. ಊರಲ್ಲಿ ಮಳೆ ಬಾರದಿದ್ದಾಗ ಅಮ್ಮನ ಆಚರಣೆ ಮಾಡುತ್ತೇವೆ. ಅದೇ ರೀತಿ ಇಡೀ ಜಗತ್ತಿಗೆ ಕಂಠಕವಾಗಿರುವ ಕೊರೋನಾ ಮಹಾಮಾರಿ ಹರಡಬಾರದೆಂದು ಮಾರಿಯಲ್ಲಿ ಪ್ರಾರ್ಥಿಸಿ ನಮ್ಮ ಊರಲ್ಲಿ ಎಲ್ಲರೂ ಹೋಳಿಗೆ ಮಾಡಿ ಕೊರೋನಮ್ಮನ ಮೂರ್ತಿಯನ್ನು ಗಡಿಯವರೆಗೆ ಹೋಗಿ ಬಿಟ್ಟು ಬಂದಿದ್ದೇವೆ ಎಂದು ಹುಲಿಕೆರೆ ಗ್ರಾಮಸ್ಥ ಶಶಿಧರ ಅವರು ಹೇಳಿದ್ದಾರೆ.  
 

click me!