Heavy Rain: ಮಂಡ್ಯದಲ್ಲಿ ವರುಣಾರ್ಭಟಕ್ಕೆ ಹಳ್ಳಿ ರಸ್ತೆ ಹಾಳು: ಕಬ್ಬು ಸಾಗಣೆಗೆ ಸಂಕಷ್ಟ

By Govindaraj SFirst Published Sep 7, 2022, 10:19 AM IST
Highlights

ಈ ಬಾರಿ ವರುಣಾರ್ಭಟಕ್ಕೆ ಬಹುತೇಕ ಗ್ರಾಮೀಣ ರಸ್ತೆಗಳು ಛಿದ್ರಗೊಂಡಿವೆ. ರಸ್ತೆ ಸಂಪರ್ಕ ಸೇತುವೆಗಳು ಕುಸಿದಿವೆ. ಲಾರಿಗಳು, ಎತ್ತಿನಗಾಡಿಗಳು ಓಡಾಡಲಾಗದ ಸ್ಥಿತಿಯಲ್ಲಿವೆ. ಇದರಿಂದ ಕಬ್ಬು ಸಾಗಣೆಗೆ ರೈತರು ತೀವ್ರ ತೊಂದರೆ ಎದುರಿಸುವಂತಾಗಿದೆ. 

ಮಂಡ್ಯ ಮಂಜುನಾಥ

ಮಂಡ್ಯ (ಸೆ.07): ಈ ಬಾರಿ ವರುಣಾರ್ಭಟಕ್ಕೆ ಬಹುತೇಕ ಗ್ರಾಮೀಣ ರಸ್ತೆಗಳು ಛಿದ್ರಗೊಂಡಿವೆ. ರಸ್ತೆ ಸಂಪರ್ಕ ಸೇತುವೆಗಳು ಕುಸಿದಿವೆ. ಲಾರಿಗಳು, ಎತ್ತಿನಗಾಡಿಗಳು ಓಡಾಡಲಾಗದ ಸ್ಥಿತಿಯಲ್ಲಿವೆ. ಇದರಿಂದ ಕಬ್ಬು ಸಾಗಣೆಗೆ ರೈತರು ತೀವ್ರ ತೊಂದರೆ ಎದುರಿಸುವಂತಾಗಿದೆ. ಹಾಳಾಗಿರುವ ರಸ್ತೆಗಳನ್ನು ತಾತ್ಕಾಲಿಕವಾಗಿ ಸರಿಪಡಿಸುವ ಕೆಲಸವೂ ಜಿಲ್ಲಾಡಳಿತದಿಂದ ನಡೆಯುತ್ತಿಲ್ಲ. ಸರ್ಕಾರವೂ ರಸ್ತೆಗಳ ಅಭಿವೃದ್ಧಿಗೆ ಪೂರಕವಾಗಿ ಹಣಕಾಸಿನ ನೆರವನ್ನೂ ನೀಡುತ್ತಿಲ್ಲ. ಇರುವ ಹಣವನ್ನು ಬಳಸಿಕೊಂಡು ರಸ್ತೆಗಳನ್ನು ಸರಿಪಡಿಸಲು ಜಿಲ್ಲಾಡಳಿತ ಆಸಕ್ತಿ ತೋರಿಸುತ್ತಿಲ್ಲ.

ಕೆ.ಆರ್‌.ಪೇಟೆ ತಾಲೂಕಿನ ಅಂಬಿಗರಹಳ್ಳಿಯಲ್ಲಿ ನಡೆಸಲು ಉದ್ದೇಶಿಸಿರುವ ಕುಂಭಮೇಳ, ಶ್ರೀರಂಗಪಟ್ಟಣ ದಸರಾ ಕಡೆಗೆ ಜಿಲ್ಲಾಧಿಕಾರಿ ಸೇರಿದಂತೆ ಎಲ್ಲಾ ಇಲಾಖಾ ಅಧಿಕಾರಿಗಳು ಹೆಚ್ಚಿನ ಮುತುವರ್ಜಿ, ಆಸಕ್ತಿ ವಹಿಸಿರುವುದು ರೈತರು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುವಂತೆ ಮಾಡಿದೆ. ಜಿಲ್ಲೆಯಲ್ಲಿರುವ ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬು ಅರೆಯುವಿಕೆ ಆರಂಭಿಸಿವೆ. ಕಟಾವಿಗೆ ಬಂದಿರುವ ಕಬ್ಬನ್ನು ಸಾಗಣೆ ಮಾಡುವುದು ರೈತರಿಗೆ ದೊಡ್ಡ ತಲೆನೋವಾಗಿದೆ. ಕೆಲವು ಕೆಡೆಗಳಲ್ಲಿ ಗದ್ದೆಗಳ ಬಳಿಗೆ ಲಾರಿಗಳು, ಎತ್ತಿನಗಾಡಿ ಹೋಗಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಖಾಲಿ ಲಾರಿ ಮತ್ತು ಎತ್ತಿನಗಾಡಿ ಹೋದರೂ ಮಣ್ಣಿನಲ್ಲಿ ಹೂತುಕೊಳ್ಳುತ್ತಿವೆ. ಹೀಗಾಗಿ ಕಬ್ಬು ಸಾಗಣೆ ಮಾಡುವುದು ದುಸ್ತರವಾಗಿದೆ.

Heavy Rain : ಒಡೆದ ಕೆರೆ ಕಟ್ಟೆಗಳು; ಪರಿಹಾರ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ!

ದೂರಕ್ಕೆ ತಂದು ಹಾಕಬೇಕು: ಕಬ್ಬು ಕಟಾವು ಮಾಡಿದ ಸ್ಥಳದಿಂದ ರಸ್ತೆಗಳು ಸುಸ್ಥಿತಿಯಲ್ಲಿರುವ ಕಡೆಗೆ ಕಬ್ಬನ್ನು ಹೊತ್ತು ತರಬೇಕಿದೆ. ಅದಕ್ಕಾಗಿ ಎತ್ತಿನ ಗಾಡಿಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಅರ್ಧ ಟನ್‌ನಿಂದ ಒಂದು ಟನ್‌ವರೆಗೆ ಕಬ್ಬನ್ನು ತುಂಬಿಕೊಂಡು ಬಂದು ಹಾಕಬೇಕಿದೆ. ಅಲ್ಲಿಂದ ಲಾರಿಗಳಿಗೆ ಕಬ್ಬನ್ನು ತುಂಬಿಸಿಕೊಂಡು ಕಾರ್ಖಾನೆಗಳಿಗೆ ಸಾಗಿಸುತ್ತಿದ್ದಾರೆ. ಇದರಿಂದ ರೈತರಿಗೆ ಹೆಚ್ಚು ಖರ್ಚಾಗುತ್ತಿದೆ. ಹಲವು ಕಡೆ ಸಂಪರ್ಕ ರಸ್ತೆಗಳು ಕುಸಿದುಬಿದ್ದಿವೆ. ಹೀಗಾಗಿ ಹಲವು ಕಿ.ಮೀ. ಬಳಸಿಕೊಂಡು ಬರಬೇಕಾದಂತಹ ಸ್ಥಿತಿ ಇದೆ. ಇದೂ ಸಹ ರೈತರಿಗೆ ಹೊರೆಯಾಗಿ ಪರಿಣಮಿಸಿದೆ. ಬಾಡಿಗೆ ಹೆಚ್ಚಾಗುತ್ತಿರುವುದರಿಂದ ಕಬ್ಬು ಬೆಳೆ ಉತ್ತಮವಾಗಿ ಬಂದರೂ ವೆಚ್ಚ ಹೆಚ್ಚಾಗಿರುವುದರಿಂದ ಲಾಭ ನೋಡಲಾಗದಂತಹ ದೌರ್ಭಾಗ್ಯ ರೈತರದ್ದಾಗಿದೆ.

ರಸ್ತೆ ಅಭಿವೃದ್ಧಿಗೆ ಸಿಗುತ್ತಿದ್ದ ಸೆಸ್‌ ಹಣ ರದ್ದು: ಹಿಂದೆ ಸಕ್ಕರೆ ಕಾರ್ಖಾನೆಗಳು ಸಕ್ಕರೆ ಮಾರಾಟದಿಂದ ಬರುತ್ತಿದ್ದ ಹಣದಲ್ಲಿ ಶೇ.2ರಷ್ಟುಹಣವನ್ನು ಆಯಾ ಕಾರ್ಖಾನೆ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ನೀಡಲಾಗುತ್ತಿತ್ತು. ಈ ಹಣ ನೇರವಾಗಿ ಜಿಲ್ಲಾಧಿಕಾರಿಗಳ ಖಾತೆಗೆ ಜಮಾವಣೆಗೊಳ್ಳುತ್ತಿತ್ತು. ಕಾರ್ಖಾನೆ ವ್ಯಾಪ್ತಿಯಲ್ಲಿ ಕಬ್ಬು ಸಾಗಣೆಗೆ ತೊಂದರೆಯಾಗಿರುವ ರಸ್ತೆಗಳು, ಸಂಪರ್ಕ ರಸ್ತೆಗಳು, ಎತ್ತಿನಗಾಡಿ ರಸ್ತೆಗಳ ಬಗ್ಗೆ ರೈತರಿಂದ ಬಂದ ಮನವಿಗಳನ್ನು ಪರಿಗಣಿಸಿ ಆದ್ಯತೆಯ ಮೇರೆಗೆ ರಸ್ತೆಗಳ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುತ್ತಿತ್ತು. ಈ ರಸ್ತೆಗಳ ಅಭಿವೃದ್ಧಿಗೆ ಸರ್ಕಾರವನ್ನು ಎದುರುನೋಡಬೇಕಾದ ಪರಿಸ್ಥಿತಿಯೇ ಇರಲಿಲ್ಲ.

ಇದೀಗ ಸಕ್ಕರೆ ಮೇಲೆ ಕೇಂದ್ರ ಸರ್ಕಾರ ಜಿಎಸ್‌ಟಿ ವಿಧಿಸಿರುವುದರಿಂದ ಸೆಸ್‌ ಹಣ ಸಿಗದಂತಾಗಿದೆ. ಇದರೊಂದಿಗೆ ಕಬ್ಬು ಸಾಗಿಸುವ ರಸ್ತೆಗಳ ಅಭಿವೃದ್ಧಿಗೆ ಸಿಗುತ್ತಿದ್ದ ಹಣವೂ ಸಿಗದಂತಾಗಿದೆ. ಹೀಗಾಗಿ ಮಳೆ ಬಂದರೂ, ಬಾರದಿದ್ದರೂ, ಸಕ್ಕರೆ ಕಾರ್ಖಾನೆ ಸ್ಥಗಿತಗೊಂಡರೂ, ಕಬ್ಬು ಅರೆಯುವಿಕೆ ಆರಂಭಿಸಿದರೂ ಕಬ್ಬು ಬೆಳೆಗಾರರ ಪರಿಸ್ಥಿತಿ ಶೋಚನೀಯವಾಗಿದೆ.

ಬಿಡುಗಡೆಯಾಗದ ಅನುದಾನ: ಜಿಲ್ಲಾ ಪಂಚಾಯಿತಿಯಲ್ಲಿ ಜನಪ್ರತಿನಿಧಿಗಳಿಲ್ಲದೆ ಒಂದು ವರ್ಷವಾಗಿದೆ. ಜಿಪಂ-ತಾಪಂ ಚುನಾವಣೆ ನಡೆಯುವ ಲಕ್ಷಣವೂ ಕಾಣುತ್ತಿಲ್ಲ. ಹೀಗಾಗಿ ಜಿಲ್ಲಾ ಪಂಚಾಯಿತಿಗೆ ಜನಪ್ರತಿನಿಧಿಗಳಿಗೆ ಬಿಡುಗಡೆಯಾಗುತ್ತಿದ್ದ ಅನುದಾನವೂ ಇಲ್ಲದಂತಾಗಿದೆ. ಜನಪ್ರತಿನಿಧಿಗಳಿಗೆ ನೀಡುತ್ತಿದ್ದ ಅನುದಾನದಿಂದ ಒಂದಷ್ಟುರಸ್ತೆಗಳು ಅಭಿವೃದ್ಧಿಯಾಗುತ್ತಿದ್ದವು. ಒಂದು ವರ್ಷದಿಂದ ಆಡಳಿತಾಧಿಕಾರಿಗಳೇ ದರ್ಬಾರ್‌ ನಡೆಸುತ್ತಿದ್ದು, ಹಳ್ಳಿ ರಸ್ತೆಗಳ ಅಭಿವೃದ್ಧಿ ಮೂಲೆಗುಂಪಾಗಿದೆ.

ಕೊರೋನಾ ಬಂದ ಸಮಯದಿಂದಲೂ ಜಿಲ್ಲಾ ಪಂಚಾಯಿತಿ ರಸ್ತೆಗಳ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗಿಲ್ಲ. ಜನಪ್ರತಿನಿಧಿಗಳಿಲ್ಲದೆ ಗ್ರಾಮೀಣ ರಸ್ತೆಗಳ ದುಸ್ಥಿತಿಯ ಬಗ್ಗೆ ಹಳ್ಳಿ ಜನರು ಯಾರ ಬಳಿಯೂ ಹೇಳಿಕೊಳ್ಳಲಾಗುತ್ತಿಲ್ಲ. ಶಾಸಕರ ಅನುದಾನವಿದ್ದರೂ ಎಲ್ಲವನ್ನೂ ರಸ್ತೆಗಳ ಅಭಿವೃದ್ಧಿಗೆ ನೀಡಲು ಅವಕಾಶವಿಲ್ಲ. ವರುಣಾರ್ಭಟದಿಂದ ಬಹುತೇಕ ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮೀಣ ರಸ್ತೆಗಳೇ ಹಾನಿಗೊಳಗಾಗಿವೆ. ಆದರೂ, ಈ ರಸ್ತೆಗಳ ಅಭಿವೃದ್ಧಿ ಬಗ್ಗೆ ಯಾರೊಬ್ಬರೂ ಸೊಲ್ಲೆತ್ತುತ್ತಿಲ್ಲ.

ಸಂಪೂರ್ಣ ಗುಂಡಿಮಯ: ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗಳು ಮಳೆಯಿಂದ ಸಂಪೂರ್ಣ ಗುಂಡಿಮಯವಾಗಿದ್ದರೂ ಸರ್ಕಾರ ಹಣ ಬಿಡುಗಡೆ ಮಾಡದ ಕಾರಣ ಇಲಾಖೆ ಅಧಿಕಾರಿಗಳು ಯಾವ ಕಾಮಗಾರಿಯನ್ನೂ ಕೈಗೊಳ್ಳುತ್ತಿಲ್ಲ. ಮಳೆಯಿಂದ ಹಾನಿಗೊಳಗಾದ ರಸ್ತೆಗಳನ್ನು ಸಚಿವರು, ಸರ್ಕಾರದ ಉನ್ನತಾಧಿಕಾರಿಗಳು ವೀಕ್ಷಿಸಿಕೊಂಡು ಹೋಗುತ್ತಿದ್ದಾರೆಯೇ ವಿನಃ ಹಣ ಬಿಡುಗಡೆಗೊಳಿಸುವ ಪ್ರಯತ್ನವನ್ನು ಯಾರೂ ಮಾಡುತ್ತಿಲ್ಲವೆಂಬ ಆರೋಪಗಳು ಕೇಳಿಬರುತ್ತಿವೆ.

ಕುಂಭಮೇಳ, ಶ್ರೀರಂಗಪಟ್ಟಣ ದಸರಾಗೆ ಎಲ್ಲಿಲ್ಲದ ಉತ್ಸಾಹ: ಮಳೆ ಮತ್ತು ಪ್ರವಾಹದಿಂದ ಉಂಟಾಗಿರುವ ಹಾನಿಗೆ ಸಂಬಂಧಿಸಿದ ಕಾಮಗಾರಿಗಳಿಗೆ ಮೊದಲ ಆದ್ಯತೆಯನ್ನು ನೀಡದಿದ್ದರೂ ಕೆ.ಆರ್‌.ಪೇಟೆ ಅಂಬಿಗರಹಳ್ಳಿಯಲ್ಲಿ ನಡೆಯುವ ಕುಂಭಮೇಳ ಹಾಗೂ ಶ್ರೀರಂಗಪಟ್ಟಣ ದಸರಾ ಕಡೆಗೆ ಅಧಿಕಾರಿಗಳು ಎಲ್ಲಿಲ್ಲದ ಉತ್ಸಾಹವನ್ನು ತೋರಿಸುತ್ತಿರುವುದು ಸಾರ್ವಜನಿಕ ಟೀಕೆಗೆ ಗುರಿಯಾಗಿದೆ. ಹಿಂದೆಂದೂ ಕಾಣದ ದಾಖಲೆ ಮಳೆ ಈ ವರ್ಷ ಸುರಿದಿದೆ. ನೂರಾರು ಕೆರೆಗಳು ಒಡೆದುಹೋಗಿವೆ, ಇನ್ನಷ್ಟುಕೆರೆಗಳು ಒಡೆಯುವ ಸ್ಥಿತಿಯಲ್ಲಿವೆ. ರಸ್ತೆಗಳು, ಸೇತುವೆಗಳೆಲ್ಲಾ ಹಾನಿಗೊಳಗಾಗಿವೆ. ಇನ್ನೂ ಭಾರೀ ಮಳೆಯಾಗುವ ಮುನ್ಸೂಚನೆಗಳಿವೆ. 

Heavy Rain in Mandya: ಕೆರೆ ಕೋಡಿ ಹರಿದು 45 ಆಡು, ಒಂದು ಕರು ಸಾವು

ಈ ಸಂದರ್ಭದಲ್ಲಿ ಮಳೆಯಿಂದ ಹೆಚ್ಚಿನ ಅನಾಹುತಗಳು ಸಂಭವಿಸದಂತೆ ತಡೆಯುವ ಕಡೆಗೆ ಆಸಕ್ತಿ ತೋರಬೇಕಾದ ಅಧಿಕಾರಿಗಳು ಕುಂಭಮೇಳ, ಶ್ರೀರಂಗಪಟ್ಟಣ ದಸರಾ ವಿಜೃಂಭಣೆಯಿಂದ ಆಚರಿಸಲು ಮುತುವರ್ಜಿ ವಹಿಸುತ್ತಿರುವುದು ಹಲವರ ಆಕ್ರೋಶಕ್ಕೂ ಕಾರಣವಾಗಿದೆ. ಒಡೆಯುವ ಹಂತದಲ್ಲಿರುವ ಕೆರೆಗಳನ್ನು ಸುಭದ್ರಪಡಿಸುವ, ಹಾಳಾಗಿರುವ ರಸ್ತೆಗಳಿಗೆ ಕಾಯಕಲ್ಪ ನೀಡುವ, ಜಮೀನುಗಳಿಗೆ ನೀರು ನುಗ್ಗದಂತೆ ತಡೆಯುವ, ಹೆಚ್ಚು ನೀರು ಹರಿದುಬರುವ ಸ್ಥಳಗಳನ್ನು ಗುರುತಿಸಿ ಜನವಸತಿ, ಜಮೀನುಗಳಿಗೆ ನೀರು ನುಗ್ಗದಂತೆ ಪರ್ಯಾಯ ವ್ಯವಸ್ಥೆ ಮಾಡುವ, ಗ್ರಾಮೀಣ ಜನರ ಬಳಿ ತೆರಳಿ ಸಮಸ್ಯೆಗಳನ್ನು ಆಲಿಸುವ ಅವುಗಳಿಗೆ ಪರಿಹಾರ ಸೂಚಿಸುವ ಕನಿಷ್ಠ ಆಸಕ್ತಿ, ಕಾಳಜಿ ಸರ್ಕಾರಿ ಅಧಿಕಾರಿಗಳಿಗೆ ಇಲ್ಲ.

ಅಂಬಿಗರಹಳ್ಳಿ ಕುಂಭಮೇಳ ಕಳೆದ ಏಳೆಂಟು ವರ್ಷಗಳಿಂದ ನಡೆದಿಲ್ಲ. ಅದನ್ನು ಈಗ ನಡೆಸುತ್ತಿರುವ ಉದ್ದೇಶ, ಅನಿವಾರ್ಯತೆ ಏನೆಂಬುದು ಯಾರಿಗೂ ಗೊತ್ತಿಲ್ಲ. ಶ್ರೀರಂಗಪಟ್ಟಣ ದಸರಾವನ್ನು ಸರಳವಾಗಿ ಆಚರಿಸಿಕೊಂಡು ಅದಕ್ಕೆ ಖರ್ಚು ಮಾಡುವ ಕೋಟ್ಯಂತರ ರು. ಹಣದಿಂದ ಒಂದಷ್ಟುರಸ್ತೆಗಳನ್ನು ಅಭಿವೃದ್ಧಿಪಡಿಸಿ, ಕೆರೆಗಳನ್ನು ಸುಭದ್ರಗೊಳಿಸಿದ್ದರೆ ಎಷ್ಟೋ ಜನರಿಗೆ ಅನುಕೂಲವಾಗುತ್ತಿತ್ತು. ಮೇಳಗಳ ಮೇಲಾಟದಲ್ಲಿ ರೈತರು, ಕಬ್ಬು ಬೆಳೆಗಾರರ ಸಮಸ್ಯೆಗಳು ಗೌಣವಾಗಿವೆ.

click me!