ಮಹಾ ಶಿವರಾತ್ರಿಯಂದು ಸಾಮಾನ್ಯವಾಗಿ ಆಸ್ತಿಕರು ಶಿವಭಜನೆ ಮಾಡುತ್ತಾ ರಾತ್ರಿ ಜಾಗರಣೆ ಮಾಡುವುದು ಸಾಮಾನ್ಯ. ಆದರೆ ತಾಲೂಕಿನ ಸಾವಿರಾರು ರೈತರು ಕೊಬ್ಬರಿ ಖರೀದಿ ಕೇಂದ್ರದ ಬಳಿ ತಮ್ಮ ಹೆಸರನ್ನು ನೋಂದಣಿ ಮಾಡಿಸುವ ಸಲುವಾಗಿ ಜಾಗರಣೆ ಮಾಡಿದರು. ನಿದ್ರೆಗೆಟ್ಟು ಸರತಿ ಸಾಲಿನಲ್ಲಿ ನಿಂತು ಜಾಗರಣೆ ಮಾಡಿದರೂ ತಮ್ಮ ಹೆಸರನ್ನು ನೋಂದಣಿ ಮಾಡಿಸಲು ಸಾಧ್ಯವಾಗದೆ ಸರ್ಕಾರ ಹಾಗೂ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಾ ಮನೆಗೆ ಸಾಗಿದ ಘಟನೆ ನಡೆಯಿತು.
ಎಸ್.ನಾಗಭೂಷಣ
ತುರುವೇಕೆರೆ : ಮಹಾ ಶಿವರಾತ್ರಿಯಂದು ಸಾಮಾನ್ಯವಾಗಿ ಆಸ್ತಿಕರು ಶಿವಭಜನೆ ಮಾಡುತ್ತಾ ರಾತ್ರಿ ಜಾಗರಣೆ ಮಾಡುವುದು ಸಾಮಾನ್ಯ. ಆದರೆ ತಾಲೂಕಿನ ಸಾವಿರಾರು ರೈತರು ಕೊಬ್ಬರಿ ಖರೀದಿ ಕೇಂದ್ರದ ಬಳಿ ತಮ್ಮ ಹೆಸರನ್ನು ನೋಂದಣಿ ಮಾಡಿಸುವ ಸಲುವಾಗಿ ಜಾಗರಣೆ ಮಾಡಿದರು. ನಿದ್ರೆಗೆಟ್ಟು ಸರತಿ ಸಾಲಿನಲ್ಲಿ ನಿಂತು ಜಾಗರಣೆ ಮಾಡಿದರೂ ತಮ್ಮ ಹೆಸರನ್ನು ನೋಂದಣಿ ಮಾಡಿಸಲು ಸಾಧ್ಯವಾಗದೆ ಸರ್ಕಾರ ಹಾಗೂ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಾ ಮನೆಗೆ ಸಾಗಿದ ಘಟನೆ ನಡೆಯಿತು.
undefined
ಹೌದು! ಇದು ತಾಲೂಕಿನಲ್ಲಿ ಕೊಬ್ಬರಿ ಬೆಳೆದ ರೈತಾಪಿಗಳ ಸಂಕಟ. ಕಳೆದ ಸೋಮವಾರದಿಂದ ಕೊಬ್ಬರಿ ಖರೀದಿಸಲು ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿತ್ತು. ಜಿಲ್ಲೆಗೆ ಒಟ್ಟು ೩.೫ ಲಕ್ಷ ಕ್ವಿಂಟಲ್ ಕೊಬ್ಬರಿ ಖರೀದಿಗೆ ಅವಕಾಶ ನೀಡಲಾಗಿತ್ತು. ಆದರೆ ಅರಸೀಕೆರೆ ಶಾಸಕ ಶಿವಲೀಂಗೇಗೌಡರ ಒತ್ತಾಯಕ್ಕೆ ಮಣಿದ ಸರ್ಕಾರ ತುಮಕೂರು ಜಿಲ್ಲೆಯಿಂದ ೨೫ ಸಾವಿರ ಕ್ವಿಂಟಲ್ ಕೊಬ್ಬರಿಯನ್ನು ಕಡಿಮೆಗೊಳಿಸಿತು. ಪುನಃ7 ಸಾವಿರ ಕ್ವಿಂಟಲ್ ಕೊಬ್ಬರಿ ಖರೀದಿಗೆ ಕೊಕ್ಕೆ ಹಾಕಿತು.
ಶಿವರಾತ್ರಿಯಾದರೂ ಸಹ ಹಬ್ಬ ಮಾಡದೇ ಕೊಬ್ಬರಿ ನೋಂದಣಿಗಾಗಿ ರಾತ್ರಿಯಿಡೀ ಜಾಗರಣೆ ಮಾಡಿದ್ದ ರೈತಾಪಿಗಳಿಗೆ ಮಧ್ಯಾಹ್ನದ ವೇಳೆಗೆ ಶಾಕ್ ಉಂಟಾಯಿತು. ಕಾರಣ ಜಿಲ್ಲೆಗೆ ನಿಗದಿಪಡಿಸಿದ್ದ ಪ್ರಮಾಣ ಸಂಪೂರ್ಣಗೊಂಡಿದ್ದರಿಂದ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದರು.
ರಾತ್ರಿಯಿಡೀ ಜಾಗರಣೆ ಮಾಡಿ, ತಿಂಡಿ, ಊಟ, ನಿದ್ದೆ, ನೀರು ಇಲ್ಲದೇ ನಿನ್ನೆಯಿಂದಲೂ ನಿಂತಿದ್ದವರಿಗೆ ಭೂಮಿಯೇ ಕುಸಿದಂತಾಯಿತು. ಏನೂ ತೋಚಲಾರದೇ ಹಲವು ರೈತರು, ಮಹಿಳೆಯರೂ ಸಹ ಅಸಹಾಯಕರಾದರು. ಆಕ್ರೋಶ ನೆತ್ತಿಗೇರಿತ್ತು, ಸರ್ಕಾರಕ್ಕೆ ಹಿಡಿಶಾಪ ಹಾಕಿದರು, ಕೂಗಿದರು, ಕಿರಿಚಾಡಿದರು. ಆದರೂ ಏನೂ ಪ್ರಯೋಜನವಾಗಲಿಲ್ಲ. ಅಂತಿಮವಾಗಿ ನಮ್ಮ ಗೋಳು ಇಷ್ಠೇ ಎಂದು ತಮ್ಮನ್ನು ತಾವೇ ಹಳಿದುಕೊಂಡು ತಮ್ಮ ಮನೆಯತ್ತ ಹೆಜ್ಜೆ ಹಾಕಿದರು.
ತಾಲೂಕಿನಲ್ಲಿ ಒಟ್ಟು5613 ರೈತರಿಂದ ೬೭೯೦೨ ಕ್ವಿಂಟಲ್ ಕೊಬ್ಬರಿಗೆ ನೋಂದಣಿ ಮಾಡಿಕೊಳ್ಳಲಾಗಿದೆ.
ಖರೀದಿ ಕಡಿತಗೊಳಿಸಿದ್ದು ಅನ್ಯಾಯ: ಜಿಲ್ಲೆಯಲ್ಲಿ ಸಾಕಷ್ಟು ಕೊಬ್ಬರಿ ಬೆಳೆಯುತ್ತಿದ್ದರೂ ಸರ್ಕಾರ ಕನಿಷ್ಠ ಖರೀದಿಗೆ ಅವಕಾಶ ನೀಡಿತ್ತು. ಕೆಲ ದಿನಗಳ ನಂತರ ರಾಜಕೀಯ ಪ್ರಭಾವಕ್ಕೆ ಒಳಗಾಗಿ ೩೨ ಸಾವಿರ ಕ್ವಿಂಟಲ್ ಕೊಬ್ಬರಿ ಖರೀದಿಯನ್ನು ಕಡಿತಗೊಡಿಸಿದ್ದು ಖಂಡನೀಯ ಎಂದು ತಾಲೂಕು ತೆಂಗು ಮತ್ತು ಅಡಿಕೆ ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ಲೋಕಮ್ಮನಹಳ್ಳಿ ಕಾಂತರಾಜ್ ಹೇಳಿದ್ದಾರೆ. ಇದು ರೈತರಿಗೆ ಸರ್ಕಾರ ಮಾಡಿದ ವಂಚನೆ ಎಂದು ಅವರು ಕಿಡಿಕಾರಿದ್ದಾರೆ. ನೋಂದಣಿ ಮಾಡಿಸಲು ಸಾಧ್ಯವಾಗದಿರುವ ಸಾವಿರಾರು ರೈತರು, ತಾವು ಬೆಳೆದ ಬೆಳೆಗೆ ಬೆಲೆಯಿಲ್ಲದೇ ಪರದಾಡುತ್ತಿದ್ದಾರೆ. ಇತ್ತ ಮುಕ್ತ ಮಾರುಕಟ್ಟೆಯಲ್ಲೂ ಬೆಲೆ ಇಲ್ಲ. ಅತ್ತ ಸರ್ಕಾರವೂ ಕೊಂಡುಕೊಳ್ಳುತ್ತಿಲ್ಲ. ಬೆಳೆದ ಬೆಳೆಯನ್ನು ಸಿಕ್ಕಷ್ಟು ಬೆಲೆಗೆ ಮಾರಿ ಕೈತೊಳೆದುಕೊಳ್ಳುವ ಸ್ಥಿತಿಯಲ್ಲಿ ರೈತರಿದ್ದಾರೆ.