ದೂರಶಿಕ್ಷಣ ಕೋರ್ಸ್‌ಗಳಿಗೆ ಅನುಮತಿ ರದ್ದು ನಿರ್ಣಯ ಸರಿಯಲ್ಲ

By Kannadaprabha News  |  First Published Jun 19, 2020, 4:39 PM IST

ಕುವೆಂಪು ವಿವಿ ಸಾಂಪ್ರದಾಯಿಕ ಪದ್ದತಿಯಲ್ಲಿ ಕೋರ್ಸ್‌ಗಳನ್ನು ನೀಡುವುದರ ಜತೆಗೆ ದೂರಶಿಕ್ಷಣ ಪದ್ದತಿಯಲ್ಲಿ 2002-03ನೇ ಶೈಕ್ಷಣಿಕ ಸಾಲಿನಿಂದ ಅರ್ಹ ಮತ್ತು ಸಾಂಪ್ರದಾಯಿಕ ಶಿಕ್ಷಣದ ಲಭ್ಯತೆ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದಾಗಿ ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರೆಸಲು ದೂರಶಿಕ್ಷಣ ಕಾರ್ಯಕ್ರಮ ಪ್ರಾರಂಭಿಸಿದೆ. ಸರ್ಕಾರ ನಿರ್ಧಾರ ಇದೀಗ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಶಿವಮೊಗ್ಗ(ಜೂ.19): ಕರ್ನಾಟಕದ ಸಾಂಪ್ರದಾಯಿಕ ವಿಶ್ವವಿದ್ಯಾಲಯಗಳು ದೂರಶಿಕ್ಷಣ ಮುಖಾಂತರ ನೀಡುತ್ತಿರುವ ಕೋರ್ಸ್‌ಗಳಿಗೆ ಅನುಮತಿ ರದ್ದುಗೊಳಿಸುವ ಸಂಬಂಧ ಸರ್ಕಾರ ಸಚಿವ ಸಂಪುಟದಲ್ಲಿ ಕೈಗೊಂಡಿರುವ ನಿರ್ಣಯ ಮರು ಪರಿಶೀಲಿಸಿ, ಸಾಂಪ್ರದಾಯಿಕ ವಿವಿಗಳಿಗೂ ದೂರಶಿಕ್ಷಣ ನೀಡುವ ಅವಕಾಶ ಮುಂದುವರೆಸಬೇಕೆಂದು ಕುವೆಂಪು ವಿವಿ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಮುಖ್ಯಮಂತ್ರಿ ಯಡಿಯೂರಪ್ಪರಿಗೆ ಮನವಿ ಮಾಡಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮುಖ್ಯಮಂತ್ರಿ ಬಳಿ ನಿಯೋಗ ತೆರಳಿ ಮನವಿ ಮಾಡಿದ್ದು, ಮುಖ್ಯಮಂತ್ರಿಗಳು ನಿರ್ಣಯ ಮರುಪರಿಶೀಲಿಸುವ ಭರವಸೆ ನೀಡಿದ್ದಾರೆ ಎಂದರು. ವಿವಿಗಳು ಯುಜಿಸಿ ಅನುಮೋದನೆ ಪಡೆಯಲು ಕಠಿಣ ಮಾರ್ಗಸೂಚಿಗಳನ್ನು ಅನುಸರಿಸಬೇಕಾಗಿದೆ. ಯುಜಿಸಿ ನಿಗದಿಪಡಿಸಿದ ಎಲ್ಲಾ ಮಾರ್ಗಸೂಚಿ ಮತ್ತು ಮಾನದಂಡಗಳನ್ನು ಚಾಚೂ ತಪ್ಪದೆ ಕುವೆಂಪು ವಿವಿ ಅನುಸರಿಸಿಕೊಂಡು ಬರುತ್ತಿರುವುದರಿಂದ 2019-20ನೇ ಸಾಲಿನವರೆಗೂ ಯಾವುದೇ ತಡೆಗಳಿಲ್ಲದೇ ಯುಜಿಸಿಯ ಮಾನ್ಯತೆ ಮುಂದುವರೆದುಕೊಂಡು ಬಂದಿದೆ ಎಂದು ಹೇಳಿದರು.

Tap to resize

Latest Videos

ಕೊರೋನಾ ಹಿನ್ನೆಲೆ ಎನ್‌ಐಆರ್‌ಫ್‌ ಶ್ರೇಣಿಯಲ್ಲಿ ಪ್ರಥಮ 100 ವಿವಿಗಳಲ್ಲಿ ಸ್ಥಾನ ಪಡೆದ ವಿವಿಗಳಿಗೆ ದೂರ ಶಿಕ್ಷಣ ಮತ್ತು ಆನ್‌ಲೈನ್‌ ಕೋರ್ಸ್‌ ಆರಂಭಿಸಲು ಅನುಮತಿ ನೀಡುತ್ತಿದ್ದು, ರಾಷ್ಟ್ರೀಯ ಶಿಕ್ಷಣ ನೀತಿ ಇದಕ್ಕೆ ಪೂರಕವಾಗಿದೆ. ಹೀಗಿರುವಾಗ ಸಾಂಪ್ರದಾಯಿಕ ವಿವಿಗಳಿಗೆ ದೂರಶಿಕ್ಷಣ ನೀಡುವ ಅನುಮತಿ ರದ್ದುಗೊಳಿಸುವ ರಾಜ್ಯ ಸರ್ಕಾರದ ಕ್ರಮ ವಿವಿಗಳಿಗೆ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಿದರು.

ಕುವೆಂಪು ವಿವಿ ಸಾಂಪ್ರದಾಯಿಕ ಪದ್ದತಿಯಲ್ಲಿ ಕೋರ್ಸ್‌ಗಳನ್ನು ನೀಡುವುದರ ಜತೆಗೆ ದೂರಶಿಕ್ಷಣ ಪದ್ದತಿಯಲ್ಲಿ 2002-03ನೇ ಶೈಕ್ಷಣಿಕ ಸಾಲಿನಿಂದ ಅರ್ಹ ಮತ್ತು ಸಾಂಪ್ರದಾಯಿಕ ಶಿಕ್ಷಣದ ಲಭ್ಯತೆ, ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಂದಾಗಿ ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಮುಂದುವರೆಸಲು ದೂರಶಿಕ್ಷಣ ಕಾರ್ಯಕ್ರಮ ಪ್ರಾರಂಭಿಸಿದೆ. ಕುವೆಂಪು ವಿವಿ ನ್ಯಾಕ್‌ನಿಂದ ಎ ಶ್ರೇಣಿ ಮಾನ್ಯತೆ ಪಡೆದಿದೆ. ಕೇಂದ್ರ ಮಾನವ ಸಂಪನ್ಮೂಲ
ಸಚಿವಾಲಯ ಪ್ರಕಟಿಸಿರುವ ಎನ್‌ಐಆರ್‌ಎಫ್‌ -2019ರಲ್ಲಿ 73ನೇ ಸ್ಥಾನ ಪಡೆದಿದೆ. ಇದೆಲ್ಲವನ್ನು ಪರಿಗಣಿಸಿ ದೂರಶಿಕ್ಷಣದಲ್ಲಿ ಶಿಕ್ಷಣ ನೀಡಲು ಅನುಮತಿ ಮತ್ತು ಮಾನ್ಯತೆ ನವೀಕರಿಸಿದೆ. ಅಲ್ಲದೆ, ವಿವಿ ದೂರ ಶಿಕ್ಷಣ ನಿರ್ದೇಶನಾಲಯ ಯುಜಿಸಿ ಆದೇಶ ಹಾಗೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, 2013 ರಿಂದ 2018ರವರೆಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಮಾನ್ಯತೆ ರದ್ದಾಗಿದ್ದ ಸಂದರ್ಭದಲ್ಲಿಯೂ ಕುವೆಂಪು ವಿವಿ ರಾಜ್ಯದ
ವಿದ್ಯಾರ್ಥಿಗಳಿಗೆ ದೂರ ಶಿಕ್ಷಣದ ಮೂಲಕ ಉನ್ನತ ಶಿಕ್ಷಣ ನೀಡಿದೆ ಎಂದು ಹೇಳಿದರು.

ಕೆಎಸ್‌ಒಯುಗೆ ಮಾತ್ರ ದೂರಶಿಕ್ಷಣ: ಪುನರ್‌ಪರಿಶೀಲಿಸಲು ಸಿಎಂ ಬಳಿ ಮನವಿ

ಇನ್ನೊಂದೆಡೆ ಇತ್ತೀಚಿನ ದಿನಗಳಲ್ಲಿ ಕುವೆಂಪು ವಿವಿ ಒಳಗೊಂಡಂತೆ ಎಲ್ಲ ವಿಶ್ವವಿದ್ಯಾಲಯಗಳ ದೂರ ಶಿಕ್ಷಣ ನೊಂದಣಿಯಲ್ಲಿ ಭಾರೀ ಇಳಿಕೆಯಾಗಿದೆ. ಜೊತೆ ಜೊತೆಗೆ ಎಲ್ಲ ವಿಶ್ವವಿದ್ಯಾಲಯಗಳಲ್ಲಿನ ಸಾಂಪ್ರದಾಯಿಕ ಕೋರ್ಸ್‌ಗಳಿಗೆ ಕೂಡ ವಿದ್ಯಾಥಿಗಳ ಪ್ರವೇಶದಲ್ಲಿ ಗಣನೀಯ ಇಳಿಕೆಯಾಗಿದೆ. ದೂರ ಶಿಕ್ಷಣ ಕ್ರಮದಿಂದ ವಿಶ್ವವಿದ್ಯಾಲಯಕ್ಕೆ ಸ್ವಲ್ಪಮಟ್ಟಿನ ಆಂತರಿಕ ಸಂಪನ್ಮೂಲ ಲಭ್ಯವಾಗುತ್ತಿದೆ. ಇದನ್ನು ಅತಿಥಿ ಉಪನ್ಯಾಸಕರು ಮತ್ತು ಎಜೆನ್ಸಿ ನೌಕರರ ವೇತನ,
ಶೈಕ್ಷಣಿಕ ಹಾಗೂ ಸಂಶೋಧನಾ ಚಟವಟಿಕೆಗಳಿಗೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ವಿನಿಯೋಗಿಸಲಾಗುತ್ತಿದೆ. ಇದರಿಂದಾಗಿ ಸರ್ಕಾರಕ್ಕೂ ಕೂಡ ಆರ್ಥಿಕವಾಗಿ ಸ್ವಲ್ಪಮಟ್ಟಿನ ಹೊರೆ ಕಡಿಮೆಯಾಗಿದೆ. ಹೀಗಾಗಿ ಈ ಹಿಂದಿನಂತೆ ಪುನಃ ಸಾಂಪ್ರದಾಯಿಕ ವಿವಿಗಳಿಗೂ ದೂರ ಶಿಕ್ಷಣ ನೀಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಕುಲಸಚಿವ ಪ್ರೊ. ಎಸ್‌.ಎಸ್‌.ಪಾಟೀಲ್‌, ಸಿಂಡಿಕೇಟ್‌ ಸದಸ್ಯ ಧರ್ಮಪ್ರಸಾದ್‌, ಬಳ್ಳೆಕೆರೆ ಸಂತೋಷ್‌, ರಮೇಶ್‌ ಬಾಬು ಜಾದವ್‌, ರಾಮಲಿಂಗಪ್ಪ, ಎಸ್‌.ಆರ್‌.ನಾಗರಾಜ್‌, ಪ್ರೊ.ಕಿರಣ್‌ ದೇಸಾಯ್‌, ಕುವೆಂಪು ವಿವಿ ದೂರಶಿಕ್ಷಣ ನಿರ್ದೆಶನಾಲಯದ ನಿರ್ದೇಶಕ ಡಾ.ಜಿ. ನಾರಾಯಣ್‌, ಸತ್ಯಪ್ರಕಾಶ್‌ ಇದ್ದರು.

click me!