* ರಾಯಚೂರು, ಬಳ್ಳಾರಿ, ಕೊಪ್ಪಳ ಒಕ್ಕೂಟದಲ್ಲಿಯೇ 40 ಸಾವಿರ ಲೀಟರ್ ಹೆಚ್ಚಳ
* ನಿತ್ಯ 1,65,000 ಲೀಟರ್ ಇದ್ದಿದ್ದು 2,05,000 ಲೀಟರ್ ಉತ್ಪಾದನೆ
* ಹೆಚ್ಚಿದ ಉತ್ಪಾದನೆಯ ನಡುವೆ ಕುಗ್ಗಿದ ಬೇಡಿಕೆ
ಸೋಮರಡ್ಡಿ ಅಳವಂಡಿ
ಕೊಪ್ಪಳ(ಮೇ.31): ಲಾಕ್‌ಡೌನ್‌ನಲ್ಲಿ ರಾಜ್ಯಾದ್ಯಂತ ಹಾಲು ಉತ್ಪಾದನೆಯಲ್ಲಿ ಗಣನೀಯ ಏರಿಕೆ ಕಂಡಿದ್ದು, ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಹಾಲು ಉತ್ಪಾದನೆಯಾಗುತ್ತಿದೆ. ಇದು ಹಾಲು ಒಕ್ಕೂಟಗಳಿಗೆ ನುಂಗಲಾರದ ತುತ್ತಾಗಿದ್ದು, ಉತ್ಪಾದನೆಯಾಗುವ ಹಾಲು ಬಳಕೆ ಮಾಡುವುದೇ ದೊಡ್ಡ ಸವಾಲು ಎನ್ನುವಂತೆ ಆಗಿದೆ.
ರಾಯಚೂರು, ಬಳ್ಳಾರಿ, ಕೊಪ್ಪಳ (ರಾಬಕೋ) ಹಾಲು ಒಕ್ಕೂಟವೊಂದರಲ್ಲಿ ಪ್ರತಿನಿತ್ಯ ಕೋವಿಡ್‌ಗೂ ಮುನ್ನ ಕೇವಲ 1,65,000 ಲೀಟರ್ ಪ್ರತಿನಿತ್ಯ ಉತ್ಪಾದನೆಯಾಗುತ್ತಿತ್ತು. ಆದರೆ, ಈಗ 2,05,000 ಲೀಟರ್ ಉತ್ಪಾದನೆಯಾಗುತ್ತಿದೆ.
ಈ ಮೊದಲಿನ ಉತ್ಪಾದನೆಯೂ ನಿರೀಕ್ಷಿತ ಮಟ್ಟದಲ್ಲಿ ಬಳಕೆಯಾಗುತ್ತಿರಲಿಲ್ಲ. ಆಗ ಹಾಲಿನ ಪೌಡರ್ ಇತರ ಉತ್ಪಾದನೆ ಮಾಡಿ, ಅದನ್ನು ಸರಿದೂಗಿಸಿಕೊಳ್ಳಲಾಗುತ್ತಿತ್ತು. ಆದರೆ, ಈಗ ದಿಢೀರ್ ಎಂದು 40 ಸಾವಿರ ಲೀಟರ್ ಉತ್ಪಾದನೆಯಾದರೆ ಅದನ್ನು ಬಳಕೆ ಮಾಡುವುದೇ ಬಹುದೊಡ್ಡ ಸಮಸ್ಯೆಯಾಗಿದೆ.
ಇದು ಕೇವಲ ಒಂದು ಒಕ್ಕೂಟದ ಪರಿಸ್ಥಿತಿಯಲ್ಲ, ರಾಜ್ಯದ ಬಹುತೇಕ ಹಾಲು ಒಕ್ಕೂಟಗಳ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಅಷ್ಟುಒಕ್ಕೂಟಗಳು ಪ್ರತಿನಿತ್ಯ 65 ಲಕ್ಷ ಹಾಲು ಸಂಗ್ರಹ ಮಾಡುತ್ತಿದ್ದವು. ಆದರೆ, ಈಗ ಅದು 88 ಲಕ್ಷ ಲೀಟರ್‌ಗೆ ಏರಿಕೆಯಾಗಿದೆ. ಅಂದರೆ ಬರೋಬ್ಬರಿ 23 ಲಕ್ಷ ಲೀಟರ್ ಅಧಿಕಗೊಂಡಿದೆ.
ರೈತರಿಂದ ಹೆಚ್ಚುವರಿ ಹಾಲು ಖರೀದಿ ನಿಲ್ಲಿಸಲು KMF ಚಿಂತನೆ..!
ಗೊಂದಲದಲ್ಲಿ ಒಕ್ಕೂಟಗಳು:
ಒಂದು ಕಡೆ ಈಗಾಗಲೇ ಲಾಕ್‌ಡೌನ್‌ನಿಂದಾಗಿ ರಾಜ್ಯದಲ್ಲಿ ಹಾಲಿನ ಬೇಡಿಕೆ ಅರ್ಧಕ್ಕರ್ಧ ಕುಸಿದಿದೆ. ಉದ್ಯಮಗಳು, ಹೋಟೆಲ್‌ಗಳು ಬಂದಾಗಿರುವುದರಿಂದ ಹಾಲಿನ ಬಳಕೆಯಲ್ಲಿ ಭಾರಿ ಇಳಿಕೆಯಾಗಿದೆ. ಒಂದು ಕಡೆ ಹಾಲು ಬೇಡಿಕೆಯಲ್ಲಿ ಕುಸಿತವಾಗಿರುವುದನ್ನು ನಿಯಂತ್ರಿಸಲು ಹೆಣಗಾಡುತ್ತಿದ್ದ ಒಕ್ಕೂಟಗಳಿಗೆ ಉತ್ಪಾದನೆಯಲ್ಲಿ ಆಗಿರುವ ಹೆಚ್ಚಳವೂ ಇನ್ನಷ್ಟು ಸಮಸ್ಯೆಗೆ ಸಿಲುಕುವಂತೆ ಮಾಡಿದೆ.
ಏನು ಕಾರಣ?:
ಉದ್ಯೋಗ ಕಳೆದುಕೊಂಡವರು ಹಾಲು ಉತ್ಪಾದನೆಯಲ್ಲಿ ತೊಡಗಿಕೊಂಡಿರಬಹುದು. ಇನ್ನ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಮತ್ತು ಬೆಲೆ ಇಲ್ಲದಿರುವುದರಿಂದ ಅದನ್ನು ಅವರು ಜಾನುವಾರುಗಳಿಗೆ ಮೇಯಿಸುತ್ತಿದ್ದಾರೆ. ಇದರಿಂದ ಹಾಲು ಕೊಡುವ ಪ್ರಮಾಣ ಶೇ. 20ರಷ್ಟುಹೆಚ್ಚಳವಾಗಿದೆ. ಇತರೆಡೆ ಹಾಲು ಮಾರುತ್ತಿದ್ದವರು ಈಗ ಮಾರುಕಟ್ಟೆಇಲ್ಲದಿರುವುದರಿಂದ ಅವರು ಒಕ್ಕೂಟದ ಡೈರಿಗಳಿಗೆ ಹಾಲು ಹಾಕುತ್ತಿದ್ದಾರೆ. ಇವೆಲ್ಲ ಹಾಲು ಉತ್ಪಾದನೆ ಹೆಚ್ಚಳಕ್ಕೆ ಪ್ರಮುಖ ಕಾರಣ ಎನ್ನುವುದು ಸ್ಪಷ್ಟ.
ದರ ತಗ್ಗಿಸಲು ಚಿಂತನೆ:
ಅತಿಯಾದ ಹಾಲು ಉತ್ಪಾದನೆಯಿಂದ ಕಂಗೆಟ್ಟಿರುವ ಹಾಲು ಒಕ್ಕೂಟಗಳು ವಿಧಿಯಿಲ್ಲದೆ ಈಗ ದರ ಇಳಿಕೆ ಮಾಡುವ ತಯಾರಿ ಮಾಡಿಕೊಂಡಿವೆ. ಜೂ. 1ರಿಂದಲೇ ಪ್ರತಿ ಲೀಟರ್‌ಗೆ . 1-2 ತಗ್ಗಿಸುವ ಚಿಂತನೆ ನಡೆಸಿವೆ. ಕೆಲವೊಂದು ಒಕ್ಕೂಟಗಳು ಇದರಿಂದ ಪಾರಾಗಲು ಈಗ ಖರೀದಿಯಲ್ಲಿ ಮಿತಿ ನಿಗದಿ ಮಾಡುತ್ತಿವೆ. ಇದು ರೈತ ಸಮುದಾಯಕ್ಕೆ ಭರ್ಜರಿ ಪೆಟ್ಟು ನೀಡಲಿದೆ. ಒಂದು ಕಡೆ ದರ ಕಡಿತ ಮತ್ತು ಮತ್ತೊಂದು ಕಡೆ ರೈತರಿಂದ ಹಾಲು ಉತ್ಪಾದನೆಯಲ್ಲಿ ಮಿತಿ ಹೇರುತ್ತಿರುವುದು ಎರಡು ರೈತರಿಗೆ ಪೆಟ್ಟು ಬೀಳಲಿದೆ ಎಂದೇ ಹೇಳಲಾಗುತ್ತಿದೆ.
ಹಾವೇರಿ ಮೆಗಾ ಡೇರಿಗೆ ಅಸ್ತು: ಹೈನುಗಾರರಲ್ಲಿ ಸಂತಸ
ಹಳ್ಳಿಯೊಂದರಲ್ಲಿ ಹೆಚ್ಚಳ:
ಕೊಪ್ಪಳ ತಾಲೂಕಿನ ಡೊಂಬರಳ್ಳಿ ಗ್ರಾಮದ ಡೇರಿಯಲ್ಲಿ ಪ್ರತಿನಿತ್ಯ 6 ಕ್ಯಾನ್ ಹಾಲು ಸಂಗ್ರಹಣೆಯಾಗುತ್ತಿದ್ದವು, ಈಗ ಅದು 10 ಕ್ಯಾನ್‌ಗೆ ಏರಿಕೆಯಾಗಿವೆ. ಒಂದು ಪುಟ್ಟ ಹಳ್ಳಿಯ ಡೈರಿ ಲೆಕ್ಕಾಚಾರ ತೆಗೆದುಕೊಂಡರೇ ಶೇ. 40ರಷ್ಟು ಹಾಲು ಉತ್ಪಾದನೆ ಹೆಚ್ಚಿದೆ ಎಂದರೆ ರಾಜ್ಯಾದ್ಯಂತ ಎಷ್ಟು ಉತ್ಪಾದನೆಯಾಗುತ್ತಿರಬಹುದು ಎಂದು ಲೆಕ್ಕ ಹಾಕಬಹುದು.
ನಮ್ಮಲ್ಲಿ ನಿತ್ಯವೂ 6 ಕ್ಯಾನ್ ಹಾಲು ಸಂಗ್ರಹಣೆಯಾಗುತ್ತಿರುವುದು ಈಗ ಏಕಾಏಕಿ 10 ಕ್ಯಾನ್‌ಗಳು ಆಗುತ್ತಿವೆ. ಹೀಗಾಗಿ, ದರ ಕಡಿತ ಮಾಡುವುದು ಮತ್ತು ಹಾಲು ಖರೀದಿ ಮಿತಿ ನಿಗದಿ ಮಾಡುತ್ತಾರೆ ಎನ್ನುವ ಮಾಹಿತಿ ಬಂದಿದೆ ಎಂದು ಡೊಂಬರಳ್ಳಿ ಹಾಲಿನ ಡೈರಿ ಅಧ್ಯಕ್ಷ ಹನುಮರಡ್ಡಿ ಕರಡ್ಡಿ ತಿಳಿಸಿದ್ದಾರೆ.
ಹಾಲು ಉತ್ಪಾದನೆಯಲ್ಲಿ ವಿಪರೀತ ಹೆಚ್ಚಳವಾಗಿದೆ. ನಮ್ಮ ವ್ಯಾಪ್ತಿಯ ಮೂರು ಜಿಲ್ಲೆಯಲ್ಲಿ 40 ಸಾವಿರ ಲೀಟರ್ ಪ್ರತಿನಿತ್ಯ ಹೆಚ್ಚಳವಾಗಿದೆ. ರಾಜ್ಯಾದ್ಯಂತವೂ ಸುಮಾರು 23 ಲಕ್ಷ ಲೀಟರ್ ಹೆಚ್ಚಳವಾಗಿದೆ. ಹೀಗಾಗಿ, ಇದನ್ನು ಬಳಕೆ ಮಾಡುವುದು ದೊಡ್ಡ ಸವಾಲು ಆಗಿದೆ. ಸರ್ಕಾರ ಶಾಲಾ ಮಕ್ಕಳಿಗೆ ಖರೀದಿ ಮಾಡುತ್ತಿರುವುದನ್ನು ಮುಂದುವರಿಸಿ, ಮನೆ ಮನೆ ಹಂಚಿಕೆ ಮಾಡಿದರೆ ಅನುಕೂಲವಾಗುತ್ತದೆ ಎಂದು ರಾಬಕೊ ಹಾಲು ಒಕ್ಕೂಟ ನಿರ್ದೇಶಕ ವೆಂಕನಗೌಡ ಕಾತರಕಿ ಹೇಳಿದ್ದಾರೆ.