ಕಲ್ಯಾಣ ಕರ್ನಾಟಕದ ಜನರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಈ ವರ್ಷ ಸೆಪ್ಟೆಂಬರ್ ಪ್ರಾರಂಭವಾದರೂ ಭರ್ತಿಯಾಗದೇ ಇರುವುದು ಜಲಾಶಯ ನೆಚ್ಚಿರುವ ರೈತರಲ್ಲಿ ಎರಡನೇ ಬೆಳೆಗೆ ನೀರು ದೊರೆಯದ ಆತಂಕವನ್ನುಂಟು ಮಾಡಿದೆ.
ಕೃಷ್ಣ ಎನ್. ಲಮಾಣಿ
ಹೊಸಪೇಟೆ (ಸೆ.02): ಕಲ್ಯಾಣ ಕರ್ನಾಟಕದ ಜನರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯ ಈ ವರ್ಷ ಸೆಪ್ಟೆಂಬರ್ ಪ್ರಾರಂಭವಾದರೂ ಭರ್ತಿಯಾಗದೇ ಇರುವುದು ಜಲಾಶಯ ನೆಚ್ಚಿರುವ ರೈತರಲ್ಲಿ ಎರಡನೇ ಬೆಳೆಗೆ ನೀರು ದೊರೆಯದ ಆತಂಕವನ್ನುಂಟು ಮಾಡಿದೆ. ತುಂಗಭದ್ರಾ ಜಲಾಶಯದ ಒಳಹರಿವು ಈ ವರ್ಷ ಕಡಿಮೆ ಪ್ರಮಾಣ ದಾಖಲಾಗಿದೆ. ಕೆಲವು ದಿನಗಳು ಮಾತ್ರ ಒಂದು ಲಕ್ಷ ಕ್ಯುಸೆಕ್‌ನಷ್ಟಿತ್ತು. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ, ಈ ವರ್ಷ ಜಲಾಶಯಕ್ಕೆ ನೀರು ಭಾರಿ ಕಡಿಮೆ ಪ್ರಮಾಣದಲ್ಲಿ ಹರಿದುಬಂದಿದೆ. ಇದರಿಂದ ಆ. 15ರ ಹೊತ್ತಿಗೆ ಭರ್ತಿಯಾಗುತ್ತಿದ್ದ ಜಲಾಶಯ ಈ ವರ್ಷ ಸೆಪ್ಟೆಂಬರ್ ಬಂದರೂ ಭರ್ತಿಯಾಗಿಲ್ಲ.
undefined
ರೈತರ ಜೀವನಾಡಿ: ಮದ್ರಾಸ್ ಪ್ರಾಂತ್ಯ ಹಾಗೂ ಹೈದರಾಬಾದ್ ನವಾಬರು ಜಂಟಿಯಾಗಿ ತುಂಗಭದ್ರಾ ಜಲಾಶಯ ನಿರ್ಮಾಣ ಮಾಡಿದ್ದಾರೆ. ಹಾಗಾಗಿ ಈ ಜಲಾಶಯ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ಮೂರು ರಾಜ್ಯಗಳಿಗೂ ನೀರು ಒದಗಿಸುತ್ತದೆ. ಕರ್ನಾಟಕದಲ್ಲಿ 3.5 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರು ಒದಗಿಸುತ್ತದೆ. ಇನ್ನೂ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೂ ನೀರು ಒದಗಿಸಲಾಗುತ್ತದೆ. ಶೇ. 60:40ರ ಅನುಪಾತದಲ್ಲಿ ನೀರು ಹಂಚಿಕೆಯಾಗುತ್ತದೆ. ಕರ್ನಾಟಕ ರಾಜ್ಯ ಈ ಜಲಾಶಯದಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಪಡೆಯುತ್ತದೆ. ಶೇ. 40ರಷ್ಟುಪ್ರಮಾಣ ಆಂಧ್ರಪ್ರದೇಶ ರಾಜ್ಯ ನೀರು ಪಡೆಯುತ್ತದೆ. ಇದರಲ್ಲಿ ಸ್ವಲ್ಪ ಪ್ರಮಾಣದ ನೀರನ್ನು ಆಂಧ್ರಪ್ರದೇಶ ರಾಜ್ಯ ತೆಲಂಗಾಣಕ್ಕೆ ಹಂಚಿಕೆ ಮಾಡುತ್ತದೆ.
ಮಾಮ್ಕೋಸ್ ಯಶಸ್ಸಿನ ಹಾದಿಯಲ್ಲೇ ಮುಂದುವರಿಯಲಿ: ಯಡಿಯೂರಪ್ಪ
ತುಂಗಭದ್ರಾ ಜಲಾಶಯ ರಾಜ್ಯದ ರಾಯಚೂರು, ಬಳ್ಳಾರಿ, ವಿಜಯನಗರ ಮತ್ತು ಕೊಪ್ಪಳ ಜಿಲ್ಲೆಗಳಿಗೆ ನೀರು ಒದಗಿಸುತ್ತದೆ. ರಾಜ್ಯದಲ್ಲಿ 3.5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನೀರಾವರಿ ಮಾಡಲಾಗುತ್ತಿದೆ. ಭತ್ತ, ಮೆಣಸಿನಕಾಯಿ, ಬಾಳೆ ಸೇರಿದಂತೆ ವಿವಿಧ ಬೆಳೆಗಳನ್ನು ರೈತರು ಬೆಳೆಯುತ್ತಾರೆ. ತುಂಗಭದ್ರಾ ಜಲಾಶಯ ಭರ್ತಿಯಾದರೆ, ರೈತರು ಎರಡನೆ ಬೆಳೆ ಬೆಳೆಯುತ್ತಾರೆ. ಆದರೆ, ಈ ಬಾರಿ ಜಲಾಶಯ ಭರ್ತಿಯಾಗದ್ದರಿಂದ ಎರಡನೇ ಬೆಳೆಗೆ ಆತಂಕ ಶುರುವಾಗಿದೆ.
ಕೈಗಾರಿಕೆಗಳಿಗೂ ಆಸರೆ: ತುಂಗಭದ್ರಾ ಜಲಾಶಯದಿಂದ ಈ ಭಾಗದ ಕೈಗಾರಿಕೆಗಳಿಗೂ ನೀರು ಒದಗಿಸುತ್ತದೆ. ಇದರಿಂದ ಕೈಗಾರಿಕೋದ್ಯಮಕ್ಕೂ ಅನುಕೂಲವಾಗುತ್ತಿದೆ. ಈ ಜಲಾಶಯದಿಂದ ಕೃಷಿ ವಲಯದಲ್ಲಿ ಭಾರೀ ಉದ್ಯೋಗ ಸೃಷ್ಟಿಯಾಗುತ್ತಿದೆ. ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಲಕ್ಷಾಂತರ ಕುಟುಂಬಗಳು ಜಲಾಶಯವನ್ನೇ ನೆಚ್ಚಿವೆ. ಇನ್ನು ಈ ಭಾಗದ ಕೈಗಾರಿಕೆಗಳು ಕೂಡ ಜಲಾಶಯವನ್ನೇ ನೆಚ್ಚಿರುವುದರಿಂದ ನೇರ ಉದ್ಯೋಗ ಕೂಡ ಸೃಷ್ಟಿಯಾಗುತ್ತಿದೆ. ತುಂಗಭದ್ರಾ ಜಲಾಶಯ ಭರ್ತಿಯಾದರೆ ಈ ಭಾಗದಲ್ಲಿ ಆರ್ಥಿಕ ಚಟುವಟಿಕೆಯೂ ಗರಿಗೆದರಲಿದೆ. ಈಗ ಒಂದೇ ಬೆಳೆಗೆ ನೀರು ಲಭ್ಯವಾಗುವ ಲಕ್ಷಣ ಗೋಚರಿಸಿದ್ದು, ಕೃಷಿ ವಲಯ ಹಾಗೂ ಕೃಷಿ ಸಂಬಂಧಿತ ಆರ್ಥಿಕ ಚಟುವಟಿಕೆಗೂ ಹಿನ್ನಡೆಯಾಗಲಿದೆ.
ಅಂತರ್ಜಲಕ್ಕೂ ಪೆಟ್ಟು: ತುಂಗಭದ್ರಾ ಜಲಾಶಯ ಭರ್ತಿಯಾಗಿ ನದಿಗೆ ನೀರು ಹರಿದರೆ, ಜೀವವೈವಿಧ್ಯ ಸೇರಿದಂತೆ ಅಪರೂಪದ ನೀರುನಾಯಿಗಳು ಹಾಗೂ ಆಮೆಗಳಿಗೂ ಅನುಕೂಲವಾಗುತ್ತಿತ್ತು. ಈಗ ಜಲಾಶಯದಲ್ಲಿ 76.224 ಟಿಎಂಸಿ ನೀರಿದೆ. ಜಲಾಶಯದ ಸಂಗ್ರಹ ಸಾಮರ್ಥ್ಯ 105.788 ಟಿಎಂಸಿಯಷ್ಟಿದೆ. ಒಳಹರಿವು ತಗ್ಗಿರುವ ಹಿನ್ನೆಲೆಯಲ್ಲಿ ಈ ವರ್ಷ ಜಲಾಶಯ ಭರ್ತಿಯಾಗುವ ಲಕ್ಷಣ ಗೋಚರಿಸುತ್ತಿಲ್ಲ. ಕಳೆದ ವರ್ಷ ಜಲಾಶಯ ಭರ್ತಿಯಾಗಿ ನದಿಗೆ ನೀರು ಹರಿಸಲಾಗಿತ್ತು.
ಜಲಾಶಯ ಭರ್ತಿಯಾಗದ್ದರಿಂದ ಕೆರೆ, ಕುಂಟೆಗಳು, ಹಳ್ಳ, ಕೊಳ್ಳಗಳು ಕೂಡ ಭರ್ತಿಯಾಗಿಲ್ಲ. ಜಲಾಶಯ ಭರ್ತಿಯಾಗಿ ನದಿಗೆ ನೀರು ಹರಿಸಿದರೆ ಅಂತರ್ಜಲಮಟ್ಟಕೂಡ ವೃದ್ಧಿಯಾಗುತ್ತಿತ್ತು. ಈಗ ಜಲಾಶಯದಲ್ಲಿ ನೀರು ಕಡಿಮೆ ಇರುವುದರಿಂದ ನದಿಗೆ ನೀರು ಹರಿಸುವ ಸಾಧ್ಯತೆ ಇಲ್ಲ. ಆಂಧ್ರಪ್ರದೇಶ ರಾಜ್ಯ ತನ್ನ ಪಾಲಿನ ಕೋಟಾವನ್ನು ನದಿ ಮೂಲಕ ಪಡೆದುಕೊಂಡರೆ ಮಾತ್ರ ನದಿಗೆ ನೀರು ಹರಿಸಬಹುದು. ಒಂದು ವೇಳೆ ಕಾಲುವೆ ಮೂಲಕವೇ ತನ್ನ ಕೋಟಾದ ನೀರನ್ನು ಪಡೆದರೆ ನದಿಗೆ ನೀರು ಹರಿಸುವುದು ಕನಸಿನ ಮಾತಾಗಿದೆ.
ಕಾಡನ್ನು ಉಳಿಸಿದರೆ ಕಾಡು ನಮ್ಮನ್ನು ಉಳಿಸುತ್ತದೆ: ಸಚಿವ ಮಹದೇವಪ್ಪ
ಈ ಬಾರಿ ಮುಂಗಾರು ಕೈಕೊಟ್ಟಿದೆ. ಮಳೆ ಉತ್ತಮವಾಗಿ ಸುರಿಯದ್ದರಿಂದ ಜಲಾಶಯ ಕೂಡ ಭರ್ತಿಯಾಗಿಲ್ಲ. ಮೊದಲ ಬೆಳೆಗೆ ನೀರು ಖಾತರಿಯಾಗಿದೆ. ಎರಡನೇ ಬೆಳೆಗೆ ಆತಂಕ ಶುರುವಾಗಿದೆ. ಮಳೆ ಸುರಿದರೆ ಜಲಾಶಯ ಭರ್ತಿಯಾದರೆ ರೈತರಿಗೆ ಎರಡನೇ ಬೆಳೆ ದೊರೆಯಬಹುದು. ಜಲಾಶಯದಲ್ಲಿ ತುಂಬಿರುವ ಹೂಳನ್ನು ಕೂಡ ಸರ್ಕಾರ ತೆಗೆಸಲು ಕ್ರಮವಹಿಸಬೇಕು.
-ಸಿ.ಎ. ಗಾಳೆಪ್ಪ, ಜಿಲ್ಲಾಧ್ಯಕ್ಷರು ರೈತ ಸಂಘ, ವಿಜಯನಗರ