15 ವರ್ಷದ ಹಿಂದೆ ಇದೇ ಸ್ಥಳದಲ್ಲಿ ಇದ್ದ 80 ಕುಟುಂಬ ಸ್ಥಳಾಂತರ ಮಾಡಿದ್ದು ಅಂದು ಸ್ಥಳಾಂತರದ ಪ್ಯಾಕೇಜ್ ಒಪ್ಪದ ಎರಡು ಕುಟುಂಬಗಳು, ಇಂದು ಸ್ಥಳಾಂತರಕ್ಕೆ ಒತ್ತಾಯ ಮಾಡಿವೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಆ.17): ದಟ್ಟರಾಣ್ಯದಲ್ಲಿ ಬಂಧಿಯಾಗಿರೋ ಕುಟುಂಬಗಳು ದಶಕದಿಂದ ಅಭಯಾರಣ್ಯದಿಂದ ಹೊರಬರಲಾಗದೇ ಅರಣ್ಯ ರೋಧನೆಯನ್ನು ಅನುಭೋವಿಸುತ್ತಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಸಾರಗೋಡು ತತ್ಕೋಳ ಮೀಸಲು ಅರಣ್ಯದಲ್ಲಿ ನಡೆದಿದೆ. 15 ವರ್ಷದ ಹಿಂದೆ ಇದೇ ಸ್ಥಳದಲ್ಲಿ ಇದ್ದ 80 ಕುಟುಂಬ ಸ್ಥಳಾಂತರ ಮಾಡಿದ್ದು ಅಂದು ಸ್ಥಳಾಂತರದ ಪ್ಯಾಕೇಜ್ ಒಪ್ಪದ ಎರಡು ಕುಟುಂಬಗಳು, ಇಂದು ಸ್ಥಳಾಂತರಕ್ಕೆ ಒತ್ತಾಯ ಮಾಡಿವೆ. ಸಾರಗೋಡು ತತ್ಕೋಳ ಮೀಸಲು ಅರಣ್ಯದಲ್ಲಿರೋ ಕುಟುಂಬಗಳು ಕಾಡುಪ್ರಾಣಿಗಳ ನಡುವೆ ಜೀವನ ನಡೆಸುವ ಸ್ಥಿತಿ ನಿರ್ಮಾಣವಾಗಿದೆ.
ನಿತ್ಯವೂ ಭೀತಿಯಲ್ಲಿರೋ ಎರಡು ಕುಟುಂಬಗಳು
ಸುತ್ತಲೂ ದಟ್ಟ ಕಾನನ, ಕಗ್ಗತ್ತಲೆ ದಾರಿ, ಕಲ್ಲಿನ ಹಾದಿಯಲ್ಲಿ ಎರಡು ಕಿ.ಮೀ. ಸಾಗಿದ್ರೆ ಎದುರಾಗೋವುದು ಸಾರಗೋಡು ಮೀಸಲು ಅರಣ್ಯ. ಈ ದಟ್ಟರಾಣ್ಯದ ಮಧ್ಯೆ ಎರಡು ಮನೆ, ಆ ಮನೆಯ ಸುತ್ತಲು ದಟ್ಟ ಕಾನನ. ಕಾಡಿನ ಸುತ್ತಲು ಐ.ಬಿ.ಎಸ್. ವಿದ್ಯುತ್ ತಂತಿಯ ಬೇಲಿ.ಇಂತಹ ಪರಿಸ್ಥಿತಿ ಎದುರಾಗಿರುವುದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬೆಳಗೋಡು ಸಮೀಪದ ಕುಂಡ್ರಿ ಗ್ರಾಮದ ತತ್ಕೋಳ, ಸಾರಗೋಡು ಮೀಸಲು ಅರಣ್ಯದಲ್ಲಿ. ಇದೇ ಅರಣ್ಯ ಬದುಕು ಕಟ್ಟಿಕೊಂಡಿರೋ ಎರಡು ಕುಟುಂಬಗಳು ನಿತ್ಯವೂ ಭೀತಿಯಲ್ಲಿ ಜೀವನ ನಡೆಸುವ ದುಸ್ಥಿತಿ ನಿರ್ಮಾಣವಾಗಿದೆ. ಎರಡು ಕುಟುಂಬಗಳಿಗೆ ಆತಂಕ ಎದುರಾಗಿರುವುದು ಕಾಡು ಪ್ರಾಣಿಗಳಿಂದ ..ಇದು ನಿನ್ನೆ-ಮೊನ್ನೆಯದ್ದಲ್ಲ. ದಶಕಗಳ ಅಧಿಕದ್ದು. ಈ ದಟ್ಟ ಕಾನನದ ಮಧ್ಯೆ ಇದ್ದ 80 ಕುಟುಂಬಗಳನ್ನ 15 ವರ್ಷದ ಹಿಂದೆಯೇ ಸ್ಥಳಾಂತರಿಸಿದ್ದಾರೆ. ಆದ್ರೆ, ಈ ಎರಡು ಕುಟುಂಬಗಳನ್ನ ಮಾತ್ರ ಅಲ್ಲಿಯೇ ಉಳಿಸಿದ್ದರು. ನಿಮ್ಮನ್ನೂ ಸ್ಥಳಾಂತರ ಮಾಡ್ತೀವಿ ಅಂದೋರು ಮತ್ತೆ ಆ ಕಡೆ ತಿರುಗಿಯೂ ನೋಡಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಅಂದು ಸ್ಥಳಾಂತರವನ್ನು ವಿರೋಧಿಸಿದ್ದವರು, ಇಂದು ನಮ್ಮನ್ನ ಸ್ಥಳಾಂತರಿಸಿ, ನಾವು ಇಲ್ಲಿಂದ ಹೊರಗೆ ಹೋಗ್ತೀವಿ ಅಂದ್ರು ಅಧಿಕಾರಿಗಳು ಇವರನ್ನ ಸ್ಥಳಾಂತರಿಸುತ್ತಿಲ್ಲ. ಹಾಗಾಗಿ, ಈ ಕುಟುಂಬಗಳು ಕಾಡಿನ ಮಧ್ಯೆ ಕಾಡು ಪ್ರಾಣಿಗಳ ಜೊತೆ ಪ್ರಾಣಿಗಳಂತೆಯೇ ಬದುಕುವಂತಹಾ ಸ್ಥಿತಿ ನಿರ್ಮಾಣವಾಗಿದೆ.
CHIKKAMAGALURU; 68 ಪಂಚಾಯಿತಿ ವ್ಯಾಪ್ತಿಯಲ್ಲಿ ಬಾಲ್ಯವಿವಾಹ ಅಧಿಕ, ಜಿಲ್ಲೆಯಲ್ಲಿ 25 ಬಾಲ್ಯ ವಿವಾಹ ತಡೆ!
ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಪ್ರಯೋಜವಿಲ್ಲ
ಎರಡು ಕುಟುಂಬಗಳಿಗೆ ರಾತ್ರಿ ಮಲಗಿದ ಬಳಿಕ ಬೆಳಗಾದರೆ ಸಾಕು ಅನ್ಸತ್ತೆ. ಬೆಳೆಗಾದರೆ, ಹೊರ ಹೋಗೋದು ಹೇಗಪ್ಪಾ ಅಂತ ಭಯ. ಮನೆ ಬಾಗಿಲ ಬಳಿ ಕಾಡಾನೆ, ಹುಲಿ ಸೇರಿದಂತೆ ಕಾಡುಪ್ರಾಣಿಗಳ ಹೆಜ್ಜೆ ಗುರುತುಗಳಿರುತ್ತವೆ. ಸಂಜೆ 6 ಆಯ್ತು ಅಂದ್ರೆ ಮನೆ ಸೇರಬೇಕು. ಇಲ್ಲವಾದ್ರೆ ಬೇರೆಯವರ ಮನೆಯಲ್ಲಿ ಉಳಿಯಬೇಕು. ಇತ್ತೀಚಿಗೆ ಕಾಡಾನೆಯೊಂದು ಅಟ್ಯಾಕ್ ಮಾಡಿ ಉಳಿದಿರೋದೇ ಹೆಚ್ಚು. ಕಾಡಾನೆ, ಹುಲಿ-ಚಿರತೆಯಂತು ದಟ್ಟರಾಣ್ಯದಲ್ಲಿ ಓಡಾಡ್ತಾನೇ ಇರುತ್ತೆ. ಈ ದಟ್ಟಕಾನನದ ಮಧ್ಯೆ ಓಡಾಡೋಕು ಹೆದರುತ್ತಾರೆ. ಓಡಾಡದಿದ್ದರೆ ಅನಿವಾರ್ಯ. ಕಾಡಿನ ಮಧ್ಯೆ ಇವರ ಬದುಕು ಕಾಡುಪ್ರಾಣಿಗಳಿಗಿಂತ ಕಡೆ. ಸಂಬಂಧಪಟ್ಟ ಅಧಿಕಾರಿಗಲಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಸ್ಥಳಾಂತರ ಮಾಡ್ತೀವಿ ಅಂತಾರೆ. ಆದ್ರೆ, ಮಾಡೋದಿಲ್ಲ. ನಮ್ಮ ಬದುಕು ನಿಜಕ್ಕೂ ದುರಂತದ ಬದುಕು ಎಂದು ಸ್ಥಳಿಯರಾದ ರಾಜೇಶ್ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.
ಒಟ್ಟಾರೆ, ಕಾಫಿನಾಡ ದಟ್ಟ ಕಾನನದಲ್ಲಿರೋ ಆ ಎರಡು ಕುಟುಂಬಗದ್ದು ನಿತ್ಯವೂ ನರಕದ ಬದುಕು. ದಟ್ಟಕಾನನದ ಮಧ್ಯೆ ಕಾಡು ಪ್ರಾಣಿಗಳ ಜೊತೆಯೇ ಬದುಕಬೇಕು. ಹೊರಗಡೆ ಹೋಗಬೇಕು ಅಂದ್ರೆ ಐ.ಬಿ.ಎಸ್. ವಿದ್ಯುತ್ ತಂತಿ ಬೇಲಿಯನ್ನ ದಾಟಿಯೇ ಹೋಗಬೇಕು. ಹೋದ್ರೆ ಮತ್ತೆ ವಾಪಸ್ ಬರುತ್ತೇವೆ ಎಂಬ ನಂಬಿಕೆ ಇಲ್ಲ. ಕೊಂಚ ಯಾಮಾರಿದ್ರು ಕಾಡುಪ್ರಾಣಿಗಳ ಬಾಯಿಗೆ ತುತ್ತಾಗೋದು ಗ್ಯಾರಂಟಿ. ಸರ್ಕಾರದಿಂದ ಅವರು ಬೇರೇನು ಕೇಳ್ತಿಲ್ಲ. ನಮ್ಮನ್ನ ಇಲ್ಲಿಂದ ಹೊರಗಡೆ ಕರೆತನ್ನಿ ಅನ್ನೋದೊಂದೇ ಅವರ ಕೂಗು. ಅಳಲು. ಆಗ್ರಹವಾಗಿದೆ.