ಆಂಧ್ರ ಕಾಲುವೆಗೆ ನಾಳೆಯಿಂದ ತುಂಗಭದ್ರಾ ನೀರು, ರಾಜ್ಯದ ಕಾಲುವೆಗಳಿಗೆ ಯಾವಾಗ?

By Kannadaprabha News  |  First Published Jul 27, 2023, 12:59 PM IST

ನೀರು ಬರುವ ಲೆಕ್ಕಚಾರ ಮಾಡುತ್ತಾ ‘ನೀರಾವರಿ ಸಲಹಾ ಸಮಿತಿ’ ಸಭೆ ನಡೆಸುವುದಕ್ಕೂ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದ್ದರೆ, ಅತ್ತ ಆಂಧ್ರ ಮತ್ತು ತೆಲಂಗಾಣ ಕಾಲುವೆಗಳಿಗೆ ಜು.28ರಂದು ನೀರು ಹರಿಸಲು ತುಂಗಭದ್ರಾ ಬೋರ್ಡ್‌ ತೀರ್ಮಾನಿಸಿದೆ.


ಸೋಮರಡ್ಡಿ ಅಳವಂಡಿ

 ಕೊಪ್ಪಳ (ಜು.27) : ನೀರು ಬರುವ ಲೆಕ್ಕಚಾರ ಮಾಡುತ್ತಾ ‘ನೀರಾವರಿ ಸಲಹಾ ಸಮಿತಿ’ ಸಭೆ ನಡೆಸುವುದಕ್ಕೂ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದ್ದರೆ, ಅತ್ತ ಆಂಧ್ರ ಮತ್ತು ತೆಲಂಗಾಣ ಕಾಲುವೆಗಳಿಗೆ ಜು.28ರಂದು ನೀರು ಹರಿಸಲು ತುಂಗಭದ್ರಾ ಬೋರ್ಡ್‌ ತೀರ್ಮಾನಿಸಿದೆ.

Tap to resize

Latest Videos

undefined

ರಾಜ್ಯದ ರೈತರ ಭೂಮಿಗೆ ನೀರುಣಿಸುವ ಕಾಲುವೆಗಳಿಗೆ ನೀರು ಬಿಡುವುದು ಯಾವಾಗ? ಎನ್ನುವುದೇ ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದೆ.

ಈಗಾಗಲೇ ರೈತರು ಜುಲೈ ತಿಂಗಳಲ್ಲಿ ನೀರು ಬಿಡುತ್ತಾರೆ ಎಂದು ಭತ್ತದ ಸಸಿಗಳನ್ನು ಸಿದ್ಧ ಮಾಡಿಕೊಂಡಿದ್ದಾರೆ. ಆದರೆ, ನೀರು ಬಿಡುವ ಕುರಿತು ನೀರಾವರಿ ಸಲಹಾ ಸಮಿತಿ ಸಭೆ ಕರೆಯುವ ನಿರ್ಧಾರವನ್ನು ರಾಜ್ಯ ಸರ್ಕಾರ ಮಾಡದೇ ಇರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.

ಸಭೆ ಕಡ್ಡಾಯವಲ್ಲ:

ನೀರಾವರಿ ಸಲಹಾ ಸಮಿತಿ ಸಭೆ ಕರೆದು ನೀರು ಬಿಡಬೇಕು ಎನ್ನುವ ನಿಯಮ ಇಲ್ಲ. ರಾಜ್ಯ ಸರ್ಕಾರದ ಕಾರ್ಯದರ್ಶಿ ಆದೇಶಿಸಿ, ನೀರು ಬಿಡುಗಡೆ ಮಾಡಬಹುದು. ಆದರೆ, ರಾಜ್ಯ ಸರ್ಕಾರ ಏಕೋ ಈ ದಿಸೆಯಲ್ಲಿ ತೀರ್ಮಾನ ಮಾಡಲು ಮುಂದಾಗುತ್ತಲೇ ಇಲ್ಲ.

ಆಂಧ್ರ, ತೆಲಂಗಾಣ ಕಾಲುವೆಗಳಿಗೆ ಜು.28ರಿಂದ ನೀರು ಹರಿಯಲಾರಂಭಿಸಲಾಗುತ್ತದೆ. ಕುಡಿಯುವ ನೀರಿಗಾಗಿ ಎಂದು ನೀರು ಪ್ರಾರಂಭಿಸಿ, ನಂತರ ಆಗಸ್ಟ್‌ 1ರಿಂದ ಕೃಷಿಗಾಗಿ ನೀರು ಬಿಡುಗಡೆ ಮಾಡಲು ತೀರ್ಮಾನ ಮಾಡಲಾಗಿದೆ. ಆದರೆ, ಈ ಕಾಳಜಿ ರಾಜ್ಯ ಸರ್ಕಾರ ಏಕೆ ತೋರುತ್ತಿಲ್ಲ? ಎನ್ನುವುದು ರೈತರ ಪ್ರಶ್ನೆ.

45 ಟಿಎಂಸಿ:

ಜಲಾಶಯದಲ್ಲಿ ಈಗಾಗಲೇ (ಜು.26ರಂದು ಸಂಜೆ ವೇಳೆಗೆ) 45ಕ್ಕೂ ಅಧಿಕ ಟಿಎಂಸಿ ನೀರು ಸಂಗ್ರಹವಾಗಿದೆ. ಬರೋಬ್ಬರಿ 1 ಲಕ್ಷಕ್ಕೂ ಅಧಿಕ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಇದೇ ಹರಿವು ಮುಂದುವರಿದರೆ ಜಲಾಶಯ ವಾರದೊಳಗಾಗಿಯೇ ಭರ್ತಿಯಾಗುತ್ತದೆ. ನಿತ್ಯವೂ 7-8 ಟಿಎಂಸಿ ನೀರು ಹರಿದು ಬರುವ ಸಾಧ್ಯತೆ ಇದೆ.

ಜಲಾಶಯ ಭರ್ತಿಯಾಗುತ್ತಿದ್ದಂತೆ ಅನಿವಾರ್ಯವಾಗಿ ನದಿ ಮೂಲಕ ನೀರನ್ನು ಹರಿಬಿಡಲಾಗುತ್ತದೆ. ಆಗ ಈ ನೀರು ಬಳಕೆಯಾಗದೇ ಹರಿದು ನದಿ ಸೇರುತ್ತದೆ. ಹೀಗಾಗಿ, ಈಗಲೇ ಕಾಲುವೆಗಳಿಗೆ ನೀರು ಹರಿಯಬಿಟ್ಟರೆ ರೈತರಿಗೂ ಅನುಕೂಲವಾಗುತ್ತದೆ.

ರೈತರು ಸಸಿಗಳನ್ನು ಹಾಕಿಕೊಂಡಿದ್ದು, ಅವುಗಳನ್ನು 45 ದಿನದೊಳಗಾಗಿ ನಾಟಿ ಮಾಡದಿದ್ದರೆ ಹಾಳಾಗುತ್ತವೆ. ಹೀಗಾಗಿ, ಬೇಗನೆ ನೀರು ಬಿಡುವಂತೆ ರೈತರು ಆಗ್ರಹಿಸಿದ್ದಾರೆ.

72 ಟಿಎಂಸಿ ಬೇಕು:

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಮುಂಗಾರು ಹಂಗಾಮಿಗೆ ಕನಿಷ್ಠ 72 ಟಿಎಂಸಿ ನೀರು ಬೇಕೇಬೇಕು. ತುಂಗಭದ್ರಾ ಎಡದಂಡೆ ನಾಲೆಗೆ 45 ಟಿಎಂಸಿ ನೀರು ಬೇಕು. ಈಗ ಜಲಾಶಯದಲ್ಲಿ 45 ಟಿಎಂಸಿ ಇದ್ದು, ಒಳಹರಿವು ಲೆಕ್ಕಾಚಾರದ ಪ್ರಕಾರ ಮುಂಗಾರು ಹಂಗಾಮಿಗೆ ನೀರಿನ ಸಮಸ್ಯೆಯಾಗುವುದಿಲ್ಲ. ಆದರೆ, ತಕ್ಷಣ ನೀರು ಬಳಕೆ ಮಾಡಿಕೊಳ್ಳದೇ ಇದ್ದರೆ ಬೇಸಿಗೆಯಲ್ಲಿ ನೀರಿನ ಸಮಸ್ಯೆಯಾಗುತ್ತದೆ ಎನ್ನುವುದು ತಜ್ಞರ ಲೆಕ್ಕಾಚಾರ.

ಬಿಳಿಯಾನೆ ಬೋರ್ಡ್‌:

ತುಂಗಭದ್ರಾ ಜಲಾಶಯ ರಾಜ್ಯದಲ್ಲಿಯೇ ಇದ್ದರೂ ಇದರ ನಿಯಂತ್ರಣ ಮಾತ್ರ ಬೋರ್ಡ್‌ನ ಕೈಯ್ಯಲ್ಲಿದೆ. ಬೋರ್ಡ್‌ ರಾಜ್ಯದ ಹಿಡಿತದಲ್ಲಿಲ್ಲ. ತುಂಗಭದ್ರಾ ಜಲಾಶಯದಲ್ಲಿ ಶೇ.65 ನೀರು ಬಳಕೆ ಪಾಲು ಹೊಂದಿರುವ ರಾಜ್ಯ ಸರ್ಕಾರದ ಬಳಿಯೇ ನೀರು ಲೆಕ್ಕಾಚಾರ ಇಲ್ಲ. ಇದೆಲ್ಲವೂ ಆಂಧ್ರದ ಅಧಿಕಾರಿಗಳಿಂದ ತುಂಬಿರುವ ತುಂಗಭದ್ರಾ ಬೋರ್ಡ್‌ ಕೈಯಲ್ಲಿದೆ. ತುಂಗಭದ್ರಾ ಬೋರ್ಡ್‌ ರಾಜ್ಯದ ಪಾಲಿಗೆ ಬಿಳಿಯಾನೆಯಂತಿದೆ. ಇದನ್ನು ರದ್ದು ಮಾಡಬೇಕು ಎನ್ನುವ ಬಹು ವರ್ಷಗಳ ಬೇಡಿಕೆ ಇನ್ನು ಈಡೇರಿಲ್ಲ.

ಈಗ ಆಂಧ್ರ, ತೆಲಂಗಾಣ ಕಾಲುವೆಗಳಿಗೆ ನೀರು ಬಿಡಲು ಮುಂದಾಗಿರುವ ಬೋರ್ಡ್‌ ನಿರ್ಧಾರದ ಕುರಿತು ರಾಜ್ಯದ ರೈತರು ಆಕ್ರೋಶಗೊಂಡಿದ್ದಾರೆ.

ತುಂಗಭದ್ರಾ ಬೋರ್ಡ್‌ ಈಗಾಗಲೇ ತೆಲಂಗಾಣ, ಆಂಧ್ರ ಕಾಲುವೆಗಳಿಗೆ ಕುಡಿಯುವ ನೀರಿಗಾಗಿ ಜು.28ರಂದು ನೀರು ಬಿಡಲು ನಿರ್ಧರಿಸಿದೆ. ನಾವು ಸಹ ಕೂಡಲೇ ನೀರು ಬಿಡಬೇಕಿದೆ. ಆ.1ರಂದಾದರೂ ನೀರು ಬಿಡುವ ದಿಸೆಯಲ್ಲಿ ಸರ್ಕಾರದಿಂದ ಆದೇಶ ಮಾಡಿಸಲಾಗುವುದು. ನಂತರ ಸಲಹಾ ಸಮಿತಿ ಸಭೆ ನಡೆಸಲು ಅವಕಾಶವಿದೆ.

-ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ

ತುಂಗಭದ್ರಾ ಬೋರ್ಡ್‌ ಈಗಾಗಲೇ ಕುಡಿಯುವ ನೀರಿಗಾಗಿ ಆಂಧ್ರ ಕಾಲುವೆಗಳಿಗೆ ಜು.28ರಂದು ನೀರು ಬಿಡಲು ನಿರ್ಧರಿಸಿದೆ. ನಮ್ಮಲ್ಲಿ ನೀರಾವರಿ ಸಲಹಾ ಸಮಿತಿ ಸಭೆಯಾಗಿ ನಿರ್ಣಯ ಮಾಡಿ, ಬಿಡಬೇಕಾಗಿದೆ.

-ಬಸವರಾಜ, ಇಇ ತುಂಗಭದ್ರಾ ಕಾಡಾ

click me!