ಹೂವಿನಹಡಗಲಿ: ಒಂದೆಡೆ ಬೇಸಿಗೆಯ ಮುನ್ನವೇ ರಣಬಿಸಿಲಿನ ತಾಪ ನೆತ್ತಿ ಸುಡುತ್ತಿದೆ. ಇನ್ನೊಂದೆಡೆ ತುಂಗಭದ್ರೆಯ ಒಡಲು ಬರಿದಾಗಿದೆ. ಮೈಲಾರಲಿಂಗೇಶ್ವರ ಜಾತ್ರೆಗೂ ಮುನ್ನವೇ ತುಂಗಭದ್ರೆಯ ಒಡಲು ಬತ್ತಿದೆ. ಹನಿ ನೀರು ಕೂಡಾ ಸಿಗುತ್ತಿಲ್ಲ
ಚಂದ್ರು ಕೊಂಚಿಗೇರಿ
ಹೂವಿನಹಡಗಲಿ: ಒಂದೆಡೆ ಬೇಸಿಗೆಯ ಮುನ್ನವೇ ರಣಬಿಸಿಲಿನ ತಾಪ ನೆತ್ತಿ ಸುಡುತ್ತಿದೆ. ಇನ್ನೊಂದೆಡೆ ತುಂಗಭದ್ರೆಯ ಒಡಲು ಬರಿದಾಗಿದೆ. ಮೈಲಾರಲಿಂಗೇಶ್ವರ ಜಾತ್ರೆಗೂ ಮುನ್ನವೇ ತುಂಗಭದ್ರೆಯ ಒಡಲು ಬತ್ತಿದೆ. ಹನಿ ನೀರು ಕೂಡಾ ಸಿಗುತ್ತಿಲ್ಲ. ಕಳೆದೊಂದು ವಾರದಿಂದ ನದಿ ಬರಿದಾಗಿದೆ. ತಾಲೂಕಿನ ಬಹುತೇಕ ಹಳ್ಳಿಗಳ ಜನರಿಗೆ ಇದೇ ಜೀವಜಲವಾಗಿದೆ. ಸಕಾಲದಲ್ಲಿ ಮಳೆ ಇಲ್ಲದೇ ನದಿ ಸಂಪೂರ್ಣ ಬತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಭದ್ರಾ ಜಲಾಶಯದ ನೀರನ್ನೇ ಎದುರು ನೋಡುತ್ತಿದ್ದಾರೆ. ಕಳೆದ ಫೆ. 5ರಂದು ರಾತ್ರಿಯಿಂದ ನಿತ್ಯ 2 ಸಾವಿರ ಕ್ಯುಸೆಕ್ ನೀರನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಈವರೆಗೂ ಮೈಲಾರಕ್ಕೆ ನೀರು ಬಂದಿಲ್ಲ.
undefined
ಫೆ. 16ರಿಂದ ಫೆ. 27ರ ವರೆಗೂ ಮೈಲಾರಲಿಂಗೇಶ್ವರ ಜಾತ್ರೆ 12 ದಿನಗಳ ಕಾಲ ನಡೆಯಲಿದೆ. ಜಾತ್ರೆ ಆರಂಭಕ್ಕೆ ಇನ್ನು ಮೂರೇ ದಿನ ಬಾಕಿ ಇದ್ದು, ಇನ್ನೂ ತುಂಗಭದ್ರಾ ನದಿಗೆ ನೀರು ಬಂದಿಲ್ಲ. ಫೆ. 26ರಂದು ಮೈಲಾರಲಿಂಗೇಶ್ವರ ಕಾರ್ಣಿಕ ನಡೆಯಲಿದೆ. ಫೆ. 23ರಿಂದಲೇ ಮೈಲಾರ ಗ್ರಾಮಕ್ಕೆ ಭಕ್ತರು ಎತ್ತಿನ ಚಕ್ಕಡಿ ಸೇರಿದಂತೆ ವಾಹನಗಳಲ್ಲಿ ಆಗಮಿಸುತ್ತಾರೆ. ಈ ಬಾರಿ 10 ಲಕ್ಷಕ್ಕೂ ಹೆಚ್ಚು ಭಕ್ತರು ಸೇರುವ ನಿರೀಕ್ಷೆ ಇದೆ.
ಈಗಾಗಲೇ ತಾಲೂಕಿನ ಹರವಿ, ಕುರುವತ್ತಿ, ಮೈಲಾರ, ಬನ್ನಿಮಟ್ಟಿ, ನಂದಿಗಾವಿ, ಬ್ಯಾಲಹುಣ್ಸಿ ಸೇರಿದಂತೆ ಇನ್ನಿತರ ಕಡೆ ನದಿಯಲ್ಲಿ ನೀರಿಲ್ಲ. ಇದರಿಂದ ತಾಲೂಕಿನಲ್ಲಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಜಾಕ್‌ವಾಲ್‌ಗಳಿಗೂ ನೀರಿನ ಲಭ್ಯತೆ ಕಡಿಮೆಯಾಗುತ್ತಿದೆ.
ಜೂನ್ ಅಂತ್ಯದವರೆಗೂ 4 ಜಿಲ್ಲೆಗಳಿಗೆ ತುಂಗಭದ್ರಾ ನೀರು: ಸಚಿವ ಶಿವರಾಜ ತಂಗಡಗಿ
ಇನ್ನು ಸಿಂಗಟಾಲೂರು ಬ್ಯಾರೇಜ್‌ನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದು, ನದಿ ತೀರಪ್ರದೇಶ ಆಟದ ಮೈದಾನದಂತಾಗಿದೆ. ಜತೆಗೆ ಬ್ಯಾರೇಜ್ ಕೆಳಗಿರುವ ರಾಜವಾಳ, ಹೊನ್ನೂರು, ನವಲಿ, ಮದಲಗಟ್ಟಿ, ಕಂದಗಲ್ಲು, ಪುರ, ಸೋವೇನಹಳ್ಳಿ, ಹಕ್ಕಂಡಿ ಗ್ರಾಮಗಳಲ್ಲಿ ಹಾಯ್ದು ಹೋಗಿರುವ ತುಂಗಭದ್ರೆ ಒಡಲು ನೀರಿಲ್ಲದೇ ಬರಿದಾಗಿದೆ. ಅಲ್ಲಲ್ಲಿ ಸಣ್ಣಪುಟ್ಟ ಗುಂಡಿಗಳಲ್ಲಿರುವ ನೀರೇ ಆಸರೆಯಾಗಿದೆ.
ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಚರಗಳಿಗೂ ಕುತ್ತು ಬಂದಿದೆ. ನದಿ ತೀರದ ಸಾಕಷ್ಟು ಕಡೆಗಳಲ್ಲಿನ ಗುಂಡಿಗಳಲ್ಲಿನ ನೀರನ್ನು ಕುಡಿಯಲು ಬಳಕೆ ಮಾಡುತ್ತಿದ್ದಾರೆ. ಆದರೆ ಆ ನೀರು ಬಹಳ ವಾಸನೆಯಿಂದ ಕೂಡಿದೆ. ಇಂತಹ ನೀರನ್ನು ಕುಡಿದರೆ ರೋಗರುಜಿನದ ಭಯದಲ್ಲಿ ಜನರಿದ್ದಾರೆ.
ಪಾತಾಳ ಸೇರಿದ ಅಂತರ್ಜಲ: ತಾಲೂಕಿನ ಬಹುತೇಕ ಹಳ್ಳಿಗಳ ಜನ- ಜಾನುವಾರುಗಳಿಗೆ ಕುಡಿಯುವ ನೀರು ಒದಗಿಸಲು ನದಿ ತೀರದ ಉದ್ದಕ್ಕೂ 11 ಬಹುಗ್ರಾಮ ಕುಡಿವ ನೀರಿನ ಯೋಜನೆಗಳಿವೆ. ಕೆಲ ಯೋಜನೆಗಳ ಜಾಕ್‌ವಾಲ್‌ಗಳಿಗೆ ನೀರಿನ ಲಭ್ಯತೆಯೇ ಇಲ್ಲ. ಇನ್ನು ಕೆಲವು ಹಳ್ಳಿಗಳಲ್ಲಿ ಬಹುಗ್ರಾಮ ಕುಡಿವ ನೀರಿನ ಯೋಜನೆ ಇದ್ದರೂ ಸರಿಯಾಗಿ ನೀರು ಬರುತ್ತಿಲ್ಲ. ಇದರಿಂದ ಜನ ಕೊಳವೆಬಾವಿ ನೀರಿಗೆ ಮೊರೆ ಹೋಗಿದ್ದಾರೆ.
ತಾಲೂಕಿನ 26 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಟ್ಟು 507 ಕೊಳವೆ ಬಾವಿಗಳಿವೆ. ಇದರಲ್ಲಿ 401 ಕೊಳವೆ ಬಾವಿಗಳಲ್ಲಿ ನೀರಿನ ಲಭ್ಯತೆ ಇದೆ. ಉಳಿದಂತೆ 140 ಕೊಳವೆ ಬಾವಿಗಳು ಸಂಪೂರ್ಣ ಬತ್ತಿವೆ. ತಾಲೂಕಿನ ವಿವಿಧ ಕಡೆಗಳಲ್ಲಿರುವ ಕೆರೆಯಲ್ಲಿನ ನೀರು ಕಡಿಮೆಯಾಗುತ್ತಿದ್ದು, ಇದರಿಂದ ಅಕ್ಕಪಕ್ಕದ ಕೊಳವೆ ಬಾವಿಗಳಲ್ಲಿ ಅಂತರ್ಜಲವೂ ಇಳಿದಿದೆ.
ಕೊಳವೆ ಬಾವಿಗಳನ್ನು ನಂಬಿ ನೀರಾವರಿ ಮಾಡಿಕೊಂಡಿರುವ ರೈತರ ಜಮೀನುಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಕೆಲವು ಕಡೆ ನೀರು ಬತ್ತಿವೆ. ಇದರಿಂದ ರೈತರೂ ತಮ್ಮ ಬೆಳೆಗಳನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಹೆಚ್ಚುವರಿ ಕೊಳವೆಬಾವಿಗಳನ್ನು ತಮ್ಮ ಜಮೀನುಗಳಲ್ಲಿ ಕೊರೆಸುತ್ತಿದ್ದಾರೆ.
ನೀರು ಬಿಡುಗಡೆ: ಕುಡಿಯುವ ನೀರಿನ ಬೇಡಿಕೆ ಹೆಚ್ಚಾಗಿದೆ. ಆದರೆ ಸಿಂಗಟಾಲೂರು ಬ್ಯಾರೇಜ್‌ನಲ್ಲಿ 0.595 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಇದರಲ್ಲಿ ಗದಗ, ಕೊಪ್ಪಳ, ಹೂವಿನಹಡಗಲಿ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ ಕೊಟ್ಟೂರಿಗೆ ಕುಡಿಯುವ ನೀರು ಪೂರೈಕೆ ಮಾಡಬೇಕಿದೆ. ಭದ್ರಾ ಜಲಾಶಯದಿಂದ ನಿತ್ಯ 2 ಸಾವಿರ ಕ್ಯುಸೆಕ್ ನೀರು ಬಿಡುಗಡೆಯಾಗುತ್ತಿದೆ ಎಂದು ಸಿಂಗಟಾಲೂರು ಏತ ನೀರಾವರಿ ಯೋಜನೆಯ ಎಇಇ ರಾಘವೇಂದ್ರ ತಿಳಿಸಿದರು.
ರೈತರಿಗಾಗಿ ಹತ್ತು ಕೇಸ್ ಬಿದ್ದರೂ ಹೆದರಲ್ಲ: ಶಾಸಕ ಜನಾರ್ದನ ರೆಡ್ಡಿ
ನೀರಿನ ಸಮಸ್ಯೆ: ಪ್ರತಿ ಮೈಲಾರ ಜಾತ್ರೆ ವೇಳೆ ನೀರಿನ ಸಮಸ್ಯೆ ಎದುರಿಸುತ್ತಿದ್ದೇವೆ. ಜಾತ್ರೆಗೂ ಮುನ್ನವೇ ನದಿ ಸಂಪೂರ್ಣ ಬತ್ತಿದೆ. ಭದ್ರ ಜಲಾಶಯದಿಂದ ನೀರು ಬಂದಿಲ್ಲ. ಜಾತ್ರೆ ಫೆ. 16ರಂದು ಜಾತ್ರೆ ಆರಂಭವಾಗಲಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆಸಕ್ತಿ ವಹಿಸಿ ಬೇಗನೆ ನೀರು ಬಿಡುಗಡೆ ಮಾಡಿಸಬೇಕಿದೆ ಮೈಲಾರ ಗ್ರಾಮದ ನಿವಾಸಿ ಪುಟ್ಟಪ್ಪ ತಂಬೂರಿ ಆಗ್ರಹಿಸಿದರು.