ತುಮಕೂರು : ಕುಡಿಯುವ ನೀರನ್ನು ಪರೀಕ್ಷಿಸಿದ ನಂತರ ಪೂರೈಸಿ

By Kannadaprabha News  |  First Published Jun 9, 2024, 12:07 PM IST

ಮಳೆ ನೀರು ಕುಡಿಯುವ ನೀರಿನೊಂದಿಗೆ ಮಿಶ್ರಣವಾಗಿ ರೋಗಗಳು ಸಂಭವಿಸುವ ಮುನ್ನ ಕುಡಿಯುವ ನೀರಿನ ಪೈಪ್‌ಲೈನ್, ವಾಟರ್ ಟ್ಯಾಂಕ್, ಚರಂಡಿ, ತೊಟ್ಟಿಗಳನ್ನು ಸ್ವಚ್ಛಗೊಳಿಸುವ ಮೂಲಕ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ಸೂಚನೆ ನೀಡಿದರು.


 ತಿಪಟೂರು :  ಮಳೆ ನೀರು ಕುಡಿಯುವ ನೀರಿನೊಂದಿಗೆ ಮಿಶ್ರಣವಾಗಿ ರೋಗಗಳು ಸಂಭವಿಸುವ ಮುನ್ನ ಕುಡಿಯುವ ನೀರಿನ ಪೈಪ್‌ಲೈನ್, ವಾಟರ್ ಟ್ಯಾಂಕ್, ಚರಂಡಿ, ತೊಟ್ಟಿಗಳನ್ನು ಸ್ವಚ್ಛಗೊಳಿಸುವ ಮೂಲಕ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ಅಧಿಕಾರಿಗಳಿಗೆ ಉಪವಿಭಾಗಾಧಿಕಾರಿ ಬಿ.ಕೆ. ಸಪ್ತಶ್ರೀ ಸೂಚನೆ ನೀಡಿದರು.

ನಗರದ ತಾಲೂಕು ಆಡಳಿತ ಸೌಧದ ಕಚೇರಿಯಲ್ಲಿ ಶುಕ್ರವಾರ ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಉಪವಿಭಾಗ ಮಟ್ಟದ ಪರಿಸ್ಥಿತಿ ನಿರ್ವಹಣೆ ಕುರಿತ ಟಾಸ್ಕ್‌ಪೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು. ಮೂರು ತಾಲೂಕುಗಳಲ್ಲಿಯೂ ಉತ್ತಮ ಮಳೆಯಾಗಿದ್ದು, ಜಾನುವಾರುಗಳ ಕುಡಿಯುವ ನೀರು, ಮೇವಿನ ಸಮಸ್ಯೆ ಕಡಿಮೆಯಾಗುತ್ತಿದೆ. ಆದರೆ ಜನರು ಕುಡಿಯುವ ನೀರಿನೊಂದಿಗೆ ಕಲುಷಿತ ಬೆರೆತು ಹಲವಾರು ರೋಗಗಳು ಹೆಚ್ಚಾಗಲಿವೆ ಎಂದರು.

Tap to resize

Latest Videos

undefined

ಅಲ್ಲದೆ ಸೊಳ್ಳೆಗಳು ಮಳೆಗಾಲದಲ್ಲಿ ಹೆಚ್ಚಾಗುವ ಕಾರಣ ಮುಂಜಾಗ್ರತೆ ಕ್ರಮ ಕೈಗೊಳ್ಳಬೇಕು. ಕುಡಿಯುವ ನೀರನ್ನು ಪರೀಕ್ಷೆಗೆ ಕಳುಹಿಸಿಕೊಡಬೇಕು. ಪ್ರತಿ ತಿಂಗಳು ಟ್ಯಾಂಕ್, ಚರಂಡಿಗಳನ್ನು ಸ್ವಚ್ಛ ಮಾಡಬೇಕು. ಆಯಾ ತಾಲೂಕಿನ ತಹಸೀಲ್ದಾರ್‌ ಸಂಬಂಧಿಸಿದ ತಾಪಂ ಇಒ ಹಾಗೂ ಗ್ರಾಪಂ ಪಿಡಿಒಗಳಿಂದ ಮಾಹಿತಿ ಪಡೆದುಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಕಸಹಾಕಿದರೆ ಅಂತಹವರಿಗೆ ದಂಡ ವಿಧಿಸುವ ಕೆಲಸವನ್ನು ನಗರಸಭೆ ಮತ್ತು ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮಾಡಬೇಕು ಎಂದು ನಿರ್ದೇಶನ ನೀಡಿದರು.

ಮಳೆ, ಗಾಳಿಗೆ ವಿದ್ಯುತ್ ತಂತಿಗಳು ಜಗ್ಗಿದ್ದರೆ, ವಿದ್ಯುತ್ ಕಂಬಗಳು ಬಾಗಿದ್ದರೆ ಅವುಗಳನ್ನು ತಕ್ಷಣವೇ ರಿಪೇರಿ ಮಾಡಬೇಕೆಂದು ಬೆಸ್ಕಾಂ ಇಲಾಖೆಗೆ ಸೂಚಿಸಿದರು. ಮಳೆಯಿಂದ ಮನೆ, ಜಾನುವಾರುಗಳಿಗೆ ಹಾನಿಯಾಗಿದ್ದರೆ, ಪ್ರಾಣಾಪಾಯ ಸಂಭವಿಸಿದ್ದರೆ ಕೂಡಲೇ ನಮಗೆ ದಾಖಲೆ ಸಹಿತ ವರದಿ ನೀಡಿದರೆ ತುರ್ತು ಪರಿಹಾರ ಕೊಡಲು ಅನುಕೂಲವಾಗಲಿದ್ದು, ಸಂಬಂದಪಟ್ಟ ಅಧಿಕಾರಿ ನಿಗಾವಹಿಸಬೇಕು. ಬಿ.ಎಚ್. ರಸ್ತೆಯಲ್ಲಿ ಹಾಕಿರುವ ಅವೈಜ್ಞಾನಿಕ ಹಂಪ್ಸ್‌ಗಳ ಬಗ್ಗೆ ಮಾಹಿತಿ ಬಂದಿದ್ದು, ಈ ಬಗ್ಗೆ ಪಿಡಬ್ಯ್ಲುಡಿ ಇಲಾಖೆ ಗಮನಹರಿಸುವಂತೆ ತಿಳಿಸಿದರು.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಕೇಶವಮೂರ್ತಿ ಮಾತನಾಡಿ, ಪ್ರಸ್ತುತ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಪೂರ್ವ ಮುಂಗಾರು ಬೆಳೆ 451 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ತಾಲೂಕಿನ ನಾಲ್ಕು ಹೋಬಳಿಯ ರೈತ ಸೇವಾ ಕೇಂದ್ರಗಳಲ್ಲಿ 181 ಕ್ವಿಂಟಲ್ ರಾಗಿ ಹಾಗೂ 1249 ಟನ್ ರಸಗೊಬ್ಬರ ದಾಸ್ತಾನು ಮಾಡಲಾಗಿದೆ ಎಂದರು.

18700 ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆಯ ಗುರಿ ಹೊಂದಿದ್ದು, ಈ ವರ್ಷ ಇದಕ್ಕಿಂತಲೂ ಹೆಚ್ಚು ರಾಗಿ ಬಿತ್ತನೆಯಾಗಲಿದೆ. ರೈತರಿಗೆ ರಾಗಿ ಬಿತ್ತನೆ ವೇಳೆ ಯಾವುದೇ ಸಮಸ್ಯೆಯಾಗದಂತೆ ಸಮರ್ಪಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಉಪವಿಭಾಗಾಧಿಕಾರಿ ಪ್ರತಿಕ್ರಿಯಿಸಿ, ರೈತರಿಗೆ ಬೆಳೆ ವಿಮೆ ಬಗ್ಗೆಯೂ ಮಾಹಿತಿ ನೀಡಿ, ಯಾರಿಗೆ ಬೆಳೆ ವಿಮೆ ಬಂದಿಲ್ಲ ಏನೂ ಲೋಪದೋಷವಿದೆ ಎಂದು ಗುರುತಿಸಿ ಫಲಾನುಭವಿಗೆ ಬೆಳೆ ವಿಮೆ ಬರುವಂತೆ ನೋಡಿಕೊಳ್ಳಿ ಎಂದು ಹೇಳಿದರು.

ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಮಾತನಾಡಿ, ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಕುಡಿಯುವ ನೀರನ್ನು ಪರೀಕ್ಷಿಸಿ ನಂತರ ಜನರ ಬಳಕೆಗೆ ನೀಡಲಾಗುತ್ತಿದೆ. ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಪಶು ಇಲಾಖೆ ಕೈಜೋಡಿಸಿದರೆ ಇದಕ್ಕೊಂದು ಪರ್ಯಾಯ ವ್ಯವಸ್ಥೆ ಮಾಡಬಹುದು ಎಂದರು.

ಗ್ರಾಮೀಣ ಕುಡಿಯುವ ನೀರು ಕಾರ್ಯನಿರ್ವಾಹಕ ಚಂದ್ರಶೇಖರ್ ಮಾತನಾಡಿ, ದಸರೀಘಟ್ಟ ಮತ್ತು ಗಂಗನಘಟ್ಟ ಗ್ರಾಮಗಳಿಗೆ ಹೊಸ ಬೋರ್‌ವೆಲ್ ಕೊರೆಸಲು ಅನುಮತಿ ಸಿಕ್ಕಿದೆ. ಎಲ್ಲಾ ಕಡೆ ಶುದ್ಧ ಕುಡಿಯುವ ನೀರಿನ ಘಟಕಗಳು ಕೆಲಸ ಮಾಡುತ್ತಿದ್ದು, ತಾಲೂಕಿನ 117 ಘಟಕಗಳಿದ್ದು 77 ಘಟಕಗಳ ಜವಾಬ್ದಾರಿಯನ್ನು ಸಂಬಂಧಪಟ್ಟ ಗ್ರಾಪಂಗೆ ವಹಿಸಲಾಗಿದೆ. ಇನ್ನುಳಿದ ಘಟಕಗಳನ್ನು ನಾವು ನೋಡಿಕೊಳ್ಳುತ್ತಿದ್ದೇವೆ ಎಂದರು. ಉಪವಿಭಾಗಾಧಿಕಾರಿ ಪ್ರತಿಕ್ರಿಯಿಸಿ, ಘಟಕಗಳು ಕೆಟ್ಟಾಗ ತಿಂಗಳುಗಟ್ಟಲೆ ಕಾಯಿಸದೆ ಮೂರು ದಿನಗಳೊಳಗೆ ರಿಪೇರಿ ಮಾಡಿಸುವಂತೆ ಸೂಚಿಸಿದರು.

ತಹಸೀಲ್ದಾರ್ ಪವನ್‌ಕುಮಾರ್, ತಾಪಂ ಇಒ ನಾಗರಾಜು, ಬೆಸ್ಕಾಂ ಎಇಇ ಮನೋಹರ್, ಚಿಕ್ಕನಾಯಕನಹಳ್ಳಿ, ತುರುವೇಕೆರೆ ತಾಲೂಕಿನ ಅಧಿಕಾರಿ, ಸಿಬ್ಬಂದಿ ಭಾಗವಹಿಸಿದ್ದರು.

click me!