ಪೀಣ್ಯದಾಸರಹಳ್ಳಿ (ಜ.07): ಕೇಬಲ್ ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಬಂದ್ ಆಗಿರುವ ತುಮಕೂರು (Tumakuru) ರಸ್ತೆ (ಶಿವಕುಮಾರ ಸ್ವಾಮೀಜಿ) ಮೇಲ್ಸೇತುವೆ ಸದ್ಯಕ್ಕೆ ಸಾರ್ವಜನಿಕರ ಸೇವೆಗೆ ಲಭ್ಯವಾಗುವ ಲಕ್ಷಣಗಳು ಕಂಡು ಬರುತ್ತಿಲ್ಲ. ದುರಸ್ತಿ ಕಾರ್ಯ ಪೂರ್ಣಗೊಳ್ಳದ ಕಾರಣ ರಾಷ್ಟ್ರೀಯ ಹೆದ್ದಾರಿ (National highway) ಪ್ರಾಧಿಕಾರ ಮತ್ತಷ್ಟುದಿನ ಸಮಯ ಕೇಳಿದ್ದು, ಮೇಲ್ಸೇತುವೆ ಪುನಃ ಕಾರ್ಯಾರಂಭ ಮಾಡಲು ಇನ್ನೂ 8 ದಿನ ಆಗಲಿದೆ ಎಂದು ಪೀಣ್ಯ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಮೇಲ್ಸೇತುವೆಗೆ ಅಳವಡಿಸಿರುವ ಕೇಬಲ್ (Cable) ತುರ್ತು ದುರಸ್ತಿ ಕಾರ್ಯದ ಹಿನ್ನೆಲೆಯಲ್ಲಿ ಡಿ.25ರಿಂದ 31ರ ತನಕ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಆದರೆ, ದುರಸ್ತಿ ಕಾಮಗಾರಿ ಪೂರ್ಣಗೊಳ್ಳದ ಹಿನ್ನಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಜ.14ರ ತನಕ ಕಾಲವಾಕಾಶ ಕೇಳಿದ್ದು, ಅಲ್ಲಿಯ ತನಕ ಮೇಲ್ಸೇತುವೆ ಬಂದ್ ಆಗಿರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಿಲ್ಲರ್ ಸಂಖ್ಯೆ 102 ಮತ್ತು 103ರ ನಡುವಿನ ಸ್ಲಾಬ್‌ಗಳ ಸೆಗ್ಮೆಂಟ್ ಜಾಯಿಂಟ್‌ಗೆ ಅಳವಡಿಸಿರುವ ಕಬ್ಬಿಣದ ವೈಯರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಪರಿಣಾಮ ಬೆಂಗಳೂರು (Bengaluru) ನಗರಕ್ಕೆ ರಾಜ್ಯದ ಬಹುತೇಕ ಜಿಲ್ಲೆಗಳ ಸಂಪರ್ಕ ಕಲ್ಪಿಸುವ ತುಮಕೂರು ರಸ್ತೆ (Road) ಮೇಲ್ಸೇತುವೆಯನ್ನು ಬಂದ್ ಮಾಡಲಾಗಿದೆ. ಪರ್ಯಾಯ ಮಾರ್ಗವಾಗಿ ನೈಸ್ ರಸ್ತೆ ಬಳಸಲು ಸೂಚಿಸಿದ್ದರೂ, ಬಹುತೇಕ ಪ್ರಯಾಣಿಕರೂ ಸವೀರ್‍ಸ್ ರಸ್ತೆಯನ್ನೇ ಬಳಸುತ್ತಿರುವ ಕಾರಣ ಸಂಚಾರ ದಟ್ಟಣೆ ಹೆಚ್ಚಾಗುತ್ತಿದೆ. 10 ನಿಮಿಷಕ್ಕೆ ಕ್ರಮಿಸುವ ದೂರವನ್ನು 3 ಗಂಟೆ ಆದರೂ ಕ್ರಮಿಸಲು ಸಾಧ್ಯವಾಗದೇ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಸರ್ಕಾರ ಇತ್ತ ಗಮನ ಹರಿಸಿ, ಸಮಸ್ಯೆ ಬಗೆ ಹರಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಹೆಬ್ಬಾಳ - ಟಿ ಏರ್ಪೋರ್ಟ್ ದಶಪತ :
ಮುಂದಿನ 2051ರಲ್ಲಿನ ಸಂಚಾರ ಅಗತ್ಯವನ್ನು ಪೂರೈಸಲು ಸಾಮರ್ಥ್ಯ ವರ್ಧನೆಗಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೇರುವ ರಸ್ತೆಗಳಲ್ಲಿ (Road) ದಟ್ಟಣೆ ಸಮಸ್ಯೆ ನಿವಾರಿಸಲು ಮಾಸ್ಟರ್ ಪ್ಲಾನ್‌ಗೆ ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಸಮಗ್ರ ಯೋಜನಾ ವರದಿ ತಯಾರಿಸಲು ಬಿಎಂಆರ್‌ಸಿಎಲ್‌ಗೆ (BMRCL) ಸೂಚನೆ ನೀಡಲಾಗಿದೆ. ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ವಿವರ ನೀಡಿದ ಕಾನೂನು ಮತ್ತು ಸಂಸದೀಯ ಸಚಿವ ಜೆ.ಸಿ.ಮಾಧುಸ್ವಾಮಿ, ಹೆಬ್ಬಾಳ ಜಂಕ್ಷನ್ ಸಾಮರ್ಥ್ಯ ಹೆಚ್ಚಳ ಮಾಡಲು ಉದ್ದೇಶಿಸಲಾಗಿದೆ. ಹೆಬ್ಬಾಳ (Hebbala), ತುಮಕೂರು ರಸ್ತೆ ಮತ್ತು ಕೆ.ಆರ್.ಪುರ ರಸ್ತೆಯಿಂದ ವಿಮಾನ ನಿಲ್ದಾಣಕ್ಕೆ ಎರಡು ಬದಿ 10 ಪಥ ನಿರ್ಮಿಸಲು ಉದ್ದೇಶಿಸಲಾಗಿದೆ. ನಗರದಿಂದ ವಿಮಾನ ನಿಲ್ದಾಣಕ್ಕೆ 5 ಪಥ ಮತ್ತು ವಿಮಾನ ನಿಲ್ದಾಣದಿಂದ ನಗರಕ್ಕೆ 5 ಪಥಗಳು ಇರಲಿವೆ ಎಂದು ವಿವರಿಸಿದರು.
ಮಾಸ್ಟರ್ ಪ್ಲಾನ್ ತಯಾರಿಸಲು ಬಿಎಂಆರ್‌ಸಿಎಲ್‌ಗೆ ತಿಳಿಸಲಾಗಿದ್ದು, ಸಮಗ್ರ ಅಧ್ಯಯನವನ್ನು ಕೈಗೊಂಡಿದೆ. ಇನ್ನು ಅನುದಾನದ ಕುರಿತು ಯಾವುದೇ ಚರ್ಚೆಯಾಗಿಲ್ಲ. ಸಂಚಾರ ದಟ್ಟಣೆಯಿಂದ ನಗರದಿಂದ ವಿಮಾನ ನಿಲ್ದಾಣಕ್ಕೆ ತೆರಳಲು ಮತ್ತು ಹಿಂದಿರುಗಲು ವಿಳಂಬವಾಗುತ್ತಿದೆ. ತುಮಕೂರು ರಸ್ತೆ, ಕೆ.ಆರ್.ರಸ್ತೆಯಲ್ಲಿಯೂ ಸಿಗ್ನಲ್‌ನಿಂದಾಗಿ ವಾಹನ ಸಂಚಾರ ಸ್ಥಗಿತಗೊಳ್ಳುತ್ತಿದೆ. ಹೀಗಾಗಿ ಮೂಲಸೌಕರ್ಯಗಳ ಸಾಮರ್ಥ್ಯ ವರ್ಧನೆಗೆ ತೀರ್ಮಾನಿಸಲಾಗಿದೆ ಎಂದರು.
ಸದ್ಯಕ್ಕೆ ಪ್ರಸ್ತಾವನೆಯಲ್ಲಿ ನಗರದಿಂದ ವಿಮಾನ ನಿಲ್ದಾಣಕ್ಕೆ (airport) ಅಸ್ತಿತ್ವದಲ್ಲಿರುವ ಮೇಲ್ಸೇತುವೆಯ ಪಶ್ಚಿಮಕ್ಕೆ ನಾಲ್ಕು ಪಥದ ಮೇಲ್ಸೇತುವೆ ಮತ್ತು ಈ ಮೇಲ್ಸೇತುವೆ ಮೂರು ಪಥಗಳು ವಿಮಾನ ನಿಲ್ದಾಣದ ಕಡೆಗೆ ಮುಂದುವರಿಯುತ್ತವೆ. ಎರಡು ಪಥಗಳು ತುಮಕೂರು ಕಡೆಗೆ ಇಳಿಯಲಿವೆ. ತುಮಕೂರಿನಿಂದ ಕೆ.ಆರ್.ಪುರದ ಕಡೆಗೆ ಹೊಸ ಮೂರು ಪಥದ ಕೆಳಸೇತುವೆ, ಕೆ.ಆರ್.ಪುರದಿಂದ ನಗರಕ್ಕೆ ಹೊಸ ಎರಡು ಪಥದ ಮೇಲ್ಸೇತುವೆ, ಕೆ.ಆರ್.ಪುರದಿಂದ ವಿಮಾನ ನಿಲ್ದಾಣಕ್ಕೆ ಹೊಸ ಎರಡು ಪಥದ ಮೇಲ್ಸೇತುವೆ ಮತ್ತು ಪ್ರಸ್ತುತ ಇರುವ ಹೆಬ್ಬಾಳ ಮೇಲ್ಸೇತುವೆ ಪೂರ್ವಕ್ಕೆ ಹೊಸ ಮೂರು ಪಥದ ಮೇಲ್ಸೇತುವೆ ನಿರ್ಮಿಸುವ ಪ್ರಸ್ತಾಪ ಇದೆ. ಕೆ.ಆರ್.ಪುರನಿಂದ ನಗರಕ್ಕೆ ಎರಡು ಪಥದ ಮೇಲ್ಸೇತುವೆಯು ಹೊಸ ಮೇಲ್ಸೇತುವೆ ಹೊಸ ಮೇಲ್ಸೇತುವೆಯಲ್ಲಿ ವಿಲೀನಗೊಳ್ಳಲಿದೆ ಮತ್ತು 4 ಪಥ ಅಗಿ ಇಳಿಯಲಿವೆ ಎಂದು ಹೇಳಿದರು.