Tumakur : ಜಿಲ್ಲೆಯಲ್ಲಿ ಈ ಹಿಂದೆಯೇ ಇತ್ತು ಹುಲಿ ಜಾಡು!

Published : Feb 15, 2023, 05:31 AM IST
Tumakur :   ಜಿಲ್ಲೆಯಲ್ಲಿ ಈ ಹಿಂದೆಯೇ ಇತ್ತು ಹುಲಿ ಜಾಡು!

ಸಾರಾಂಶ

ಕಲ್ಪತರು ಜಿಲ್ಲೆಯ ತುಮಕೂರಿನಲ್ಲಿ ಹುಲಿಯ ಜಾಡು ಇಂದು ನಿನ್ನೆಯದಲ್ಲ. ಇದಕ್ಕೆ ಭರ್ತಿ ಏಳೂವರೆ ದಶಕಗಳ ಇತಿಹಾಸವಿದೆ. 1950ರಿಂದಲೂ ಹುಲಿ ಸಂಚಾರವಿದೆ ಎಂಬ ಮಾತುಗಳು ಕೇಳಿ ಬಂದಿದ್ದರೂ 2007ರಲ್ಲಿ ವ್ಯಾಘ್ರನ ಹೆಜ್ಜೆ ಗುರುತು ಹಾಗೂ ಅದರ ಮಲ ಪತ್ತೆಯಾಗುವುದರೊಂದಿಗೆ ಹುಲಿ ಜಾಡು ಇರುವುದು ಖಚಿತವಾಗಿತ್ತು.

 ಉಗಮ ಶ್ರೀನಿವಾಸ್‌

 ತುಮಕೂರು :  ಕಲ್ಪತರು ಜಿಲ್ಲೆಯ ತುಮಕೂರಿನಲ್ಲಿ ಹುಲಿಯ ಜಾಡು ಇಂದು ನಿನ್ನೆಯದಲ್ಲ. ಇದಕ್ಕೆ ಭರ್ತಿ ಏಳೂವರೆ ದಶಕಗಳ ಇತಿಹಾಸವಿದೆ. 1950ರಿಂದಲೂ ಹುಲಿ ಸಂಚಾರವಿದೆ ಎಂಬ ಮಾತುಗಳು ಕೇಳಿ ಬಂದಿದ್ದರೂ 2007ರಲ್ಲಿ ವ್ಯಾಘ್ರನ ಹೆಜ್ಜೆ ಗುರುತು ಹಾಗೂ ಅದರ ಮಲ ಪತ್ತೆಯಾಗುವುದರೊಂದಿಗೆ ಹುಲಿ ಜಾಡು ಇರುವುದು ಖಚಿತವಾಗಿತ್ತು.

ಹುಲಿ ನೋಡಿದ್ದ ಅರಣ್ಯಾಧಿಕಾರಿ:

2001ರವರೆಗೆ ದೇವರಾಯನದುರ್ಗ ಸುತ್ತಮುತ್ತದ ಅರಣ್ಯದಲ್ಲಿ ಹುಲಿ ಇದೆ ಎಂಬುದುರ ಬಗ್ಗೆ ಮಾತುಗಳು ಕೇಳಿ ಬಂದಿತ್ತು. ಆದರೆ ಯಾವುದೇ ಸ್ಪಷ್ಟದಾಖಲೆಗಳು ಕಂಡು ಬಂದಿರಲಿಲ್ಲ. 2006ರಲ್ಲಿ ಜುಲೈ ತಿಂಗಳಿನಲ್ಲಿ ನಾಮದ ಚಿಲುಮೆಯಲ್ಲಿ ನಡೆದ ಅರಣ್ಯಾಧಿಕಾರಿಗಳ ಸಭೆಯಲ್ಲಿ ಭಾಗಿಯಾಗಿದ್ದ ಆರ್‌ಎಫ್‌ಓ ಗಂಗಣ್ಣ ಎಂಬುವರು ಹುಲಿಯನ್ನು ನೋಡಿರುವುದಾಗಿ ಸ್ಪಷ್ಟಪಡಿಸಿದ್ದರು.

6 ಅಡಿ ಉದ್ದ, 3 ಅಡಿ ಎತ್ತರವಿದ್ದ ಹುಲಿ:

ಅಂದು ಅವರು ಕಾರ್ಯನಿಮಿತ್ತ ಕಾರಿನಲ್ಲಿ ಆ ಮಾರ್ಗದಲ್ಲಿ ಹೋಗುವಾಗ ಕಾರಿನ ಹೆಡ್‌ಲೈಟ್‌ನಲ್ಲಿ ಹುಲಿಯು ರಸ್ತೆ ದಾಟುತ್ತಿದ್ದ ದೃಶ್ಯವನ್ನು ನೋಡಿದ್ದರು. ಅವರ ಪ್ರಕಾರ ಅವರು ನೋಡಿದ ಹುಲಿ 6 ಅಡಿ ಉದ್ದ 3 ಅಡಿ ಎತ್ತರವಿದ್ದು ಪಕ್ಕದ ಗಿಡಮರಗಳ ಸಂದಿಯಲ್ಲಿ ಮರೆಯಾಗಿತ್ತು. ಅಧಿಕಾರಿಗಳೇ ಹುಲಿಯನ್ನು ನೋಡಿದ್ದರಿಂದ ದೇವರಾಯನದುರ್ಗದಲ್ಲಿ ಹುಲಿ ಇದೆ ಎಂದು ಅಂದೇ ಖಚಿತವಾಗಿತ್ತು. ಅವರೊಬ್ಬರು ಹುಲಿಯನ್ನು ನೋಡಿದ್ದು ಬಿಟ್ಟರೆ ಬೇರೆ ಯಾರಿಗೂ ಕಂಡಿರಲಿಲ್ಲ. ಆದರೆ 2007ರಲ್ಲಿ ದೇವರಾಯನದುರ್ಗದಲ್ಲೇ ಹುಲಿಯ ಹೆಜ್ಜೆಗುರುತು ಹಾಗೂ ಅದರ ಮಲ ಕಂಡು ಬಂದಿದ್ದು ಹುಲಿಯ ಜಾಡು ಇರುವುದರ ಬಗ್ಗೆ ಶಂಕೆ ಮತ್ತಷ್ಟುಗಟ್ಟಿಯಾಯಿತು.

ತುಮಕೂರಿನಿಂದ 15 ಕಿಮೀ. ದೂರದಲ್ಲಿ 42.47 ಚದರ ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಹಬ್ಬಿಕೊಂಡಿರುವ ಈ ರಕ್ಷಿತ ಅರಣ್ಯದಲ್ಲಿ ಸುತ್ತಲೂ ಆವರಿಸಿರುವ ಹಳ್ಳಿಗಳಿಂದ ಹುಲಿಯಿಂದ ಮನುಷ್ಯರಿಗೆ ಅಥವಾ ಸಾಕು ಪ್ರಾಣಿಗಳಿಗೆ ಹಾನಿಯಾಗಿರುವ ಬಗ್ಗೆ ವರದಿಗಳು ಈವರೆಗೂ ಇಲ್ಲ. ಇಷ್ಟೆಲ್ಲಾ ಹುಲಿಜಾಡಿನ ಬಗ್ಗೆ ಚರ್ಚೆಗಳು ನಡೆಯುತ್ತಿರುವಾಗ ಕೆಲ ವನ್ಯಜೀವಿ ತಜ್ಞರು ದೇವರಾಯನದುರ್ಗ ರಕ್ಷಿಣ ಅರಣ್ಯ ಪ್ರದೇಶ ಹುಲಿಗಳ ವಾಸಕ್ಕೆ ಯೋಗ್ಯವಾದುದ್ದಲ್ಲ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸಲಾಗಿತ್ತು.

ವಲಸೆ ಬರುತ್ತಿತ್ತೇ ವ್ಯಾಘ್ರ?:

ಇನ್ನು ಕೆಲವು ವನ್ಯಜೀವಿ ತಜ್ಞರ ಪ್ರಕಾರ ಹುಲಿಗಳಿಗೆ ದೇವರಾಯನದುರ್ಗದಲ್ಲಿ ಆವಾಸಸ್ಥಾನವಿಲ್ಲ. ಆದರೂ ಹುಲಿ ಕಂಡಿರುವ ಬಗ್ಗೆ ಹುಲಿಯ ಹೆಜ್ಜೆ ಗುರುತು ಹಾಗೂ ಅದರ ಮಲ ಪತ್ತೆಯಾಗಿರುವ ಬಗ್ಗೆ ಮತ್ತೊಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ಇಲ್ಲಿ ಹುಲಿ ಏನಾದರೂ ಯಾರಿಗಾದರೂ ಕಂಡಿದ್ದರೆ ಅದು ಭದ್ರಾ ಅಭಯಾರಣ್ಯ ಅಥವಾ ಬನ್ನೇರುಘಟ್ಟಅರಣ್ಯ ವ್ಯಾಪ್ತಿಯ ಬಂದು ಹೋಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 2008ರಲ್ಲಿ ಹುಲಿಯ ಹೆಜ್ಜೆಗುರುತು ಮತ್ತು ಮಲ ಪತ್ತೆಯಾದ ಬಳಿಕ ಹುಲಿಯ ಇರುವಿಕೆಯಾಗಲಿ ಅಥವಾ ಅದನ್ನು ನೋಡಿರುವ ಉದಾರಹಣೆಗಳು ಇಲ್ಲದೇ ಇದ್ದುದ್ದರಿಂದ ದೇವರಾಯದುರ್ಗ ಮತ್ತಿತರೆ ಅರಣ್ಯದಲ್ಲಿ ಹುಲಿ ಬಂದು ಹೋಗಿರಬಹುದಷ್ಟೆಎಂಬ ತೀರ್ಮಾನಕ್ಕೆ ಬಂದರು. ಆದರೆ ಇವೆಲ್ಲಾ ಘಟನೆ ನಡೆದ 15 ವರ್ಷದ ಬಳಿಕ ತುಮಕೂರು ಜಿಲ್ಲೆಯಲ್ಲೇ ಹುಲಿಯ ಶವ ಪತ್ತೆಯಾಗುವುದರೊಂದಿಗೆ ಹುಲಿಯ ಜಾಡಿನ ಇರುವಿಕೆ ಬಗ್ಗೆ ಪುಷ್ಠಿ ಸಿಕ್ಕಂತಾಗಿದೆ. ಆದರೆ ಇದರ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಬೇಕಾದರೆ ಈ ಕುರಿತು ವಿವರವಾದ ಸಂಶೋಧನೆ ನಡೆಯಬೇಕಾಗಿದೆ.

ಹುಲಿಯ ಗುರುತುಗಳು.....

1. 1950ನೇ ಇಸವಿಯಲ್ಲೇ ಹುಲಿ ಇರುವಿಕೆ ಬಗ್ಗೆ ಚರ್ಚೆ

2. ವಲಸೆ ಬಂದು ಹೋಗಿರಬಹುದೆಂಬ ತಜ್ಞರ ಶಂಕೆ

3. 2008ರಲ್ಲಿ ಹುಲಿಯ ಹೆಜ್ಜೆಗುರುತು, ಮಲ ಪತ್ತೆ

4. ಭದ್ರಾ ಅಭಯಾರಣ್ಯ ಅಥವಾ ಬನ್ನೇರುಘಟ್ಟದಿಂದ ಬಂದಿರಬಹುದೆಂಬ ಶಂಕೆ

ಕೆನತ್‌ ಅಂಡರ್‌ಸನ್‌ ತಮ್ಮ ‘ರುಜ್ಸ ಅಂಡ್ ಒನ್‌ ಮ್ಯಾನ್‌ ಈಟರ್‌’ ಪುಸ್ತಕದಲ್ಲಿ ದೇವರಾಯನದುರ್ಗದಲ್ಲಿ ಕೊಂದ ನರಭಕ್ಷಕ ಹುಲಿಯ ಬಗ್ಗೆ ಉಲ್ಲೇಖಿಸಿದ್ದಾರೆ’. ಅದನ್ನು ಅವರು ‘ದೇವರಾಯನದುರ್ಗದ ಹರ್ಮಿಟ್‌’ ಎಂದು ಹೆಸರಿಸಿದ್ದಾರೆ 

PREV
Read more Articles on
click me!

Recommended Stories

ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ
ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್