ಗುಡ್ಡೆ ಬಾಡಿಗಾಗಿ ಮುಗಿ ಬಿದ್ದ ತುಮಕೂರು ಜನತೆ!

By Kannadaprabha News  |  First Published Mar 24, 2023, 5:16 AM IST

ಯುಗಾದಿ ಹಬ್ಬದ ಮಾರನೇ ದಿನವಾದ ಗುರುವಾರ ವರ್ಷದ ತೊಡಕನ್ನು ಖುಷಿಯಿಂದ ಆಚರಿಸುತ್ತಿರುವ ಜನಸಾಮಾನ್ಯರು ಗುಡ್ಡೆ ಬಾಡಿಗಾಗಿ ಮುಗಿ ಬಿದ್ದಿದ್ದು, ಭಾರೀ ಬೇಡಿಕೆ ಉಂಟಾಗಿದೆ.


 ತುಮಕೂರು :  ಯುಗಾದಿ ಹಬ್ಬದ ಮಾರನೇ ದಿನವಾದ ಗುರುವಾರ ವರ್ಷದ ತೊಡಕನ್ನು ಖುಷಿಯಿಂದ ಆಚರಿಸುತ್ತಿರುವ ಜನಸಾಮಾನ್ಯರು ಗುಡ್ಡೆ ಬಾಡಿಗಾಗಿ ಮುಗಿ ಬಿದ್ದಿದ್ದು, ಭಾರೀ ಬೇಡಿಕೆ ಉಂಟಾಗಿದೆ.

ವರ್ಷಕ್ಕೊಮ್ಮೆ ಯುಗಾದಿ ಹಬ್ಬದ ಮಾರನೇ ದಿನದ ವರ್ಷದ ತೊಡಕಿಗೆ ಜನಸಾಮಾನ್ಯರಲ್ಲಿ ಎಲ್ಲಿಲ್ಲದ ಆಸಕ್ತಿ. ಈ ವರ್ಷದ ತೊಡಕನ್ನು ದಿನಪೂರ್ತಿ ಯಾವುದೇ ಕೆಲಸ ಕಾರ್ಯ ಇದ್ದರೂ ಬದಿಗೊತ್ತಿ ಮಾಂಸಾಹಾರ ಸೇವನೆಯಲ್ಲಿ ಕಳೆಯುವುದು ಮೊದಲಿನಿಂದಲೂ ನಡೆದು ಬಂದಿರುವ ಪದ್ಧತಿ. ಹಾಗಾಗಿ ವರ್ಷದ ತೊಡಕು ಆಚರಣೆಗೆ ಮಾಂಸದ ಅಂಗಡಿಗಳ ಮುಂದೆ ಮುಂಜಾನೆಯಿಂದಲೇ ಜನ ಕಿಲೋ ಮೀಟರ್‌ ಗಟ್ಟಲೆ ಸರದಿ ಸಾಲು ನಿಲ್ಲುವುದುಂಟು. ಹಾಗೆಯೇ ಮಾಂಸದಂಗಡಿಗಳವರು ಸಹ ವರ್ಷದ ತೊಡಕಿನ ವಿಶೇಷವಾಗಿ ಪೆಂಡಾಲ್‌ಗಳನ್ನು ಹಾಕಿ ಹೆಚ್ಚಿನ ಸಂಖ್ಯೆಯಲ್ಲಿ ಮೇಕೆ, ಕುರಿಗಳ ಮಾಂಸ ಮಾರಾಟ ಮಾಡುವುದೂ ಉಂಟು.

Latest Videos

undefined

ನಗರ ಪ್ರದೇಶದ ಜನತೆ ಅದೇಕೋ ಏನೋ ಮಾಂಸದ ಅಂಗಡಿಗಳ ಬಗ್ಗೆ ಒಲವು ಕಡಿಮೆ ಮಾಡಿಕೊಂಡಿದ್ದು, ಹಳ್ಳಿಗಳಲ್ಲಿ ಸಿಗುವ ಗುಡ್ಡೆ ಬಾಡಿನತ್ತ ಚಿತ್ತ ಹರಿಸಿದ್ದಾರೆ. ಯುಗಾದಿ ಹಬ್ಬ ಮುಗಿದ ಬಳಿಕ ಮಧ್ಯರಾತ್ರಿಯಿಂದ ಹಳ್ಳಿಗಳಲ್ಲಿ ಶುರುವಾಗುವ ಮೇಕೆ, ಕುರಿಗಳ ಗುಡ್ಡೆ ಮಾಂಸ ಮಾರಾಟ ಇದೀಗ ನಗರ ಪ್ರದೇಶದ ಜನರನ್ನು ಆಕರ್ಷಿಸಿದೆ. ಹೀಗಾಗಿ ನಗರದ ಜನತೆಯೂ ಸಹ ತಮಗೆ ಪರಿಚಯಸ್ಥ ಹಳ್ಳಿಗಳ ಜನರೊಂದಿಗೆ ಗುಡ್ಡೆ ಬಾಡಿಗಾಗಿ ಬುಕ್‌ ಮಾಡಿಕೊಂಡು ಮಧ್ಯರಾತ್ರಿಯೇ ಹಳ್ಳಿಗಳೇ ಎಡತಾಕುತ್ತಿರುವ ದೃಶ್ಯಗಳು ಸಾಮಾನ್ಯವಾಗಿವೆ. ನಗರದ ಹೊರವಲಯದ ಜಗನ್ನಾಥಪುರ, ಶೆಟ್ಟಿಹಳ್ಳಿ, ಗೂಳಹರಿವೆ, ಕೆಸರಡುಮಡು, ಹೊನ್ನುಡಿಕೆ, ಕುಮಂಚಿಪಾಳ್ಯ, ಮಲ್ಲಸಂದ್ರ, ಹೆಗ್ಗೆರೆ, ಬುಗುಡನಹಳ್ಳಿ ಸೇರಿದಂತೆ ಇನ್ನಿತರೆ ಹಳ್ಳಿಗಳಲ್ಲಿ ಗುಡ್ಡೆ ಬಾಡು ಸಿಗುವ ಸ್ಥಳಗಳಿಗೆ ನಗರ ಪ್ರದೇಶದ ಜನತೆ ಮುಗ್ಗಿ ಬಿದ್ದಿರುವ ದೃಶ್ಯಗಳು ಕಂಡು ಬಂದವು.

ಗುಡ್ಡೆ ಬಾಡಿನಲ್ಲಿ ಒಂದು ಮೇಕೆಯ ಎಲ್ಲ ಭಾಗದ ಮಾಂಸ ಲಭ್ಯ ಇರುವುದು ಸಹ ಇದಕ್ಕೆ ಬೇಡಿಕೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ವರ್ಷದ ತೊಡಕನ್ನು ಆಚರಿಸಲು ಹಳ್ಳಿಗಳಲ್ಲಿ ಬಾಡಿನ ಚೀಟಿ ಮಾಡಿಕೊಂಡಿರುತ್ತಾರೆ. ಇಂತಹ ಹಳ್ಳಿಗಳ ಮಾಹಿತಿ ಪಡೆದುಕೊಂಡಿರುವ ನಗರ ಪ್ರದೇಶದ ಜನತೆ ತಮ್ಮ ಸ್ನೇಹಿತರ ಮೂಲಕ ಗುಡ್ಡೆ ಬಾಡಿಗೆ ಬೇಡಿಕೆ ಇಟ್ಟಿರುವ ಪರಿಣಾಮ ಹಳ್ಳಿಗಳಲ್ಲೂ ಮಾಂಸ ಮಾರಾಟಕ್ಕೆ ಹೊಸ ಹುರುಪು ಬಂದಂತಾಗಿದೆ.

ತಡರಾತ್ರಿಯೇ ಹಳ್ಳಿಗಳಿಗೆ ತೆರಳಿರುವ ನಗರದ ಜನತೆ ಬೆಳಗಿನ ಜಾವದವರೆಗೂ ಅಲ್ಲಿಯೇ ಕಾದು ಕುಳಿತು ಮಾಂಸ ಖರೀದಿಸಿಕೊಂಡು ನಗರಗಳತ್ತ ಮರಳುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ. ಹಾಗೆಯೇ ನಗರದ ಪ್ರದೇಶದ ಅಂಗಡಿಗಳಲ್ಲೂ ಸಹ ಇಂದು ಚಿಕನ್‌, ಮಟನ್‌ ವ್ಯಾಪಾರ ಭರ್ಜರಿಯಾಗಿಯೇ ನಡೆದಿದ್ದು, ಬೈಲರ್‌ ಕೋಳಿ ಕೆ.ಜಿ.ಗೆ 240, ಫಾರಂ ಕೋಳಿ ಕೆ.ಜಿ.ಗೆ 190, ಮಟನ್‌ ಕೆ.ಜಿಗೆ 750 ರು. ವರೆಗೆ ಮಾರಾಟ ಮಾಡಲಾಗುತ್ತಿದೆ ಎಂಬ ಮಾತುಗಳು ಸಹ ಸಾರ್ವಜನಿಕರಿಂದ ಕೇಳಿ ಬರುತ್ತಿವೆ.

ದೇಗುಲದಲ್ಲಿ ಪೂಜೆ, ಹಬ್ಬದ ಶುಭಾಶಯ ವಿನಿಮಯ

ಶೋಭಕೃತ್‌ ನಾಮ ಸಂವತ್ಸರ ಯುಗಾದಿ ಹಬ್ಬವನ್ನು ನಗರ ಸೇರಿದಂತೆ ಜಿಲ್ಲೆಯಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಈ ಬಾರಿ ದ್ವಿತೀಯ ಪಿಯು ಪರೀಕ್ಷೆ ನಡೆಯುತ್ತಿರುವುದರಿಂದ ಪಿಯುಸಿ ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದಂತೆ ಜನಸಾಮಾನ್ಯರು ಹಿಂದೆಂದಿಗಿಂತಲೂ ಬೆಲೆ ಏರಿಕೆ ದುಪ್ಪಟವಾಗಿದ್ದರೂ ಸಹ ಕಂಗೆಡದೆ ಯುಗಾದಿ ಹಬ್ಬವನ್ನು ಖುಷಿಯಿಂದ ಆಚರಿಸಿದ್ದು ಎಲ್ಲೆಡೆ ಕಂಡು ಬಂತು.

ಹಬ್ಬದ ದಿನ ಮುಂಜಾನೆಯೇ ಸುಮಂಗಲಿಯರು, ಯುವತಿಯರು, ಯುವಕರು, ಮಕ್ಕಳು ಸೇರಿದಂತೆ ಮನೆ ಮಂದಿಯೆಲ್ಲ ಎದ್ದು, ಹರಳೆಣ್ಣೆ ಸ್ನಾನ ಮಾಡಿ ಮನೆಯ ಬಾಗಿಲಿಗೆ ಹಸಿರು ತೋರಣ ಕಟ್ಟಿದೇವರ ಪೂಜೆ ನೆರವೇರಿಸಿ, ಬೇವು-ಬೆಲ್ಲದೊಂದಿಗೆ ಹೊಸ ಉಡುಪುಗಳನ್ನು ಧರಿಸಿ ದೇವಾಲಯಗಳಿಗೆ ತೆರಳಿ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದ ನಂತರ ಪರಸ್ಪರ ಬೇವು-ಬೆಲ್ಲ ಹಂಚಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು.

click me!