ಹಣ್ಣುಗಳ ರಾಜ ಮಾವು ಹೂ ಬಿಡುವ ಪ್ರಕ್ರಿಯೆ ಆರಂಭ- ಮಾವು ಸಸ್ಯ ಸಂರಕ್ಷಣಾ ಕ್ರಮ ಬಗ್ಗೆ ರೈತರಿಗೆ ಸಲಹೆ

By Kannadaprabha NewsFirst Published Dec 24, 2023, 9:52 AM IST
Highlights

ಹಣ್ಣುಗಳ ರಾಜ ಮಾವು ಬೇಸಿಗೆ ವೇಳೆಗೆ ಮಾರುಕಟ್ಟೆಗೆ ಲಗ್ಗೆ ಇರಿಸಲಿದ್ದು, ಈಗಾಗಲೇ ಹೂ ಬಿಡುವ ಪ್ರಕ್ರಿಯೆ ಆರಂಭವಾಗಿದೆ.

 ಬಿ. ಶೇಖರ್‌ ಗೋಪಿನಾಥಂ

 ಮೈಸೂರು :  ಹಣ್ಣುಗಳ ರಾಜ ಮಾವು ಬೇಸಿಗೆ ವೇಳೆಗೆ ಮಾರುಕಟ್ಟೆಗೆ ಲಗ್ಗೆ ಇರಿಸಲಿದ್ದು, ಈಗಾಗಲೇ ಹೂ ಬಿಡುವ ಪ್ರಕ್ರಿಯೆ ಆರಂಭವಾಗಿದೆ.

ಹೀಗಾಗಿ, ಮಾವಿನಲ್ಲಿ ಹೂ ಬಿಡುವ ಮುಂಚೆ ಹಾಗೂ ಹೂ ಬಿಟ್ಟ ನಂತರ ರೈತರು ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ಆ ಮೂಲಕ ಉತ್ತಮ ಇಳುವರಿ ಪಡೆಯಬಹುದಾಗಿದೆ.

ಪ್ರಸಕ್ತ ಕಾಲ ಘಟ್ಟದಲ್ಲಿ ಮಾವು ಹೂ ಬಿಡುವ ಹಂತದಲ್ಲಿದ್ದು, ಈಗಾಗಲೇ ಹೂ ಬಿಡುವ ಪ್ರಕ್ರಿಯೆ ಪ್ರಾರಂಭವಾಗಿರುತ್ತದೆ. ಹೂ ಬಿಟ್ಟಾಗ ಮತ್ತು ಪರಾಗಸ್ಪರ್ಶ ಆಗುತ್ತಿರುವ ಸಮಯದಲ್ಲಿ ಗಂಧಕವನ್ನು ಸಿಂಪಡಿಸಬಾರದು. ಏಕೆಂದರೆ ಗಂಧಕವು ಹೂವಗಳು ಮತ್ತು ಎಳೆಯ ಕಚ್ಚಿದ ಗಳಿಗೆ ಹಾನಿಯನ್ನುಂಟು ಮಾಡುತ್ತದೆ.

ಹಾಗೆಯೇ, ಹೂ ಬಿಟ್ಟಾಗ ಮತ್ತು ಪರಾಗಸ್ಪರ್ಶ ಆಗುತ್ತಿರುವ ಸಮಯದಲ್ಲಿ ಯಾವುದೇ ಕಾರಣಕ್ಕೂ ಗಿಡಗಳಿಗೆ ನೀರುಣಿಸಬಾರದು. ಕಾಯಿ ಕಚ್ಚುವಿಕೆ ಪೂರ್ಣಗೊಂಡ ನಂತರ ಎಳೆ ಕಾಯಿಗಳು ಕಡಲೆಕಾಳು ಗಾತ್ರವಾದಾಗ ಪೂರಕ ನೀರುಣಿಸುವಿಕೆಯನ್ನು ಕೈಗೊಳ್ಳಬೇಕು. ಕಚ್ಚಿದ ಕಾಯಿಗಳು ಉದುರಿ ಹೋಗದಂತೆ ನೋಡಿಕೊಳ್ಳಲು ಅವುಗಳಿಗೆ ಎನ್‌ಎಎ(ಪ್ಲಾನೋಫಿಕ್ಸ್) ಸಸ್ಯ ಬೆಳವಣಿಗೆ ಪ್ರಚೋಧಕವನ್ನು 100 ಪಿಪಿಎಂ ಪ್ರಮಾಣದಲ್ಲಿ (10 ಲೀಟರ್ ನೀರಿನಲ್ಲಿ 1 ಮಿ.ಲೀ. ಪ್ರಮಾಣದಲ್ಲಿ ಬೆರೆಸಿ) ಸಿಂಪಡಿಸಬೇಕು.

ಕೀಟ- ರೋಗಗಳ ಕಾಟ

ಈ ಹಂತದಲ್ಲಿ ಹೂ ಮೊಗ್ಗು, ಅರಳಿದ ಹೂ ತೆನೆ ಮತ್ತು ಹೂ ಕಚ್ಚಿದ ಎಳೆಯ ಕಾಯಿಗಳನ್ನು (ಹರಳು) ಮಾರಕ ಕೀಟ ಮತ್ತು ರೋಗಗಳಿಂದ ರಕ್ಷಿಸುವುದು ಅತ್ಯಗತ್ಯ. ಈ ಹಂತದಲ್ಲಿ ಮಾವಿಗೆ ಬೀಳುವ ಪ್ರಮುಖ ಕೀಟವೆಂದರೆ ಜಿಗಿಹುಳು ಮತ್ತು ರೋಗಗಳಾದ ಹೂ ತೆನೆ ಒಣಗುವುದು/ ಕಪ್ಪಾಗುವುದು, ಚಿಬ್ಬು ರೋಗ ಮತ್ತು ಬೂದಿ ರೋಗ. ಅಲ್ಲದೆ, ಕಡಿಮೆ ಪ್ರಮಾಣದಲ್ಲಿ ಥ್ರಿಪ್ಸ್, ಹೇನು ಇತ್ಯಾದಿ ಕೀಟಗಳು ಸಹ ಹಾನಿ ಉಂಟು ಮಾಡುತ್ತವೆ. ಈ ಎಲ್ಲಾ ಕೀಟಗಳು ಮತ್ತು ರೋಗಗಳನ್ನು ನಿಯಂತ್ರಿಸಲು ಸಸ್ಯ ಸಂರಕ್ಷಣಾ ಕ್ರಮಗಳನ್ನು ಅನುಸರಿಸುವುದು ಅಗತ್ಯ.

ಮೊದಲ ಸಿಂಪರಣೆ- ಮಾವು ಹೂ ಬಿಡುವ ಮುಂಚೆ ಅಥವಾ ಹೂ ಬಿಡುವ ಹಂತದಲ್ಲಿ (ನವೆಂಬರ್- ಡಿಸೆಂಬರ್) ಜಿಗಿಹುಳು, ಥ್ರಿಪ್ಸ್, ಹೂ ತೆನೆ ಒಣಗುವ ರೋಗ ಮತ್ತು ಹೂ ತೆನೆ ಕೊರಕ ಹೆಚ್ಚಿನ ಪ್ರಮಾಣದಲ್ಲಿ ಹಾನಿ ಮಾಡುವುದರಿಂದ ಇಮಿಡಕ್ಲೋಪ್ರಿಡ್ (ಕೀಟನಾಶಕ) 0.5 ಮಿ.ಲೀ./ 1 ಲೀ+ ಕರಗುವ ಗಂಧಕ (ಶಿಲೀಂಧ್ರನಾಶಕ) 3 ಗ್ರಾಂ/ 1 ಲೀ. ದ್ರಾವಣವನ್ನು ಸಿಂಪಡಿಸಬೇಕು.

ಎರಡನೇ ಸಿಂಪರಣೆಯನ್ನು ಹೂ ಅರಳುವಾಗ ಅಥವಾ ಕಾಯಿ ಕಚ್ಚುವ ಸಮಯದಲ್ಲಿ (ಡಿಸೆಂಬರ್- ಜನವರಿ - ಫೆಬ್ರವರಿ) ಈ ಹಂತದಲ್ಲಿ ಹೂ ತೆನೆ ಸಂಪೂರ್ಣವಾಗಿ ಅರಳಿರುತ್ತದೆ ಹಾಗೂ ಕಾಯಿ ಕಚ್ಚುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಈ ಹಂತದಲ್ಲಿ ಥ್ರಿಪ್ಸ್, ಹೂ ತೆನೆ/ ಎಳೆ ಕಾಯಿ ಕೊರಕ, ಚಿಬ್ಬು ರೋಗ, ಬೂದಿರೋಗ ಕಂಡು ಬರುವುದರಿಂದ ಕೀಟನಾಶಕ ಮತ್ತು ಶಿಲೀಂಧ್ರನಾಶಕ (ಲ್ಯಾಮ್ಡಸೈಹಾಲೋಥ್ರಿನ್ - ೦.5 ಮಿ.ಲೀ./ 1 ಲೀ+ ಹೆಕ್ಸಕೋನಜೋಲ್ 3 ಮಿ.ಲೀ/ 1 ಲೀ. ಅಥವಾ ಕಾರ್ಬನ್‌ಡೈಜಿಮ್ 3 ಗ್ರಾಂ/ 1 ಲೀ) ಸೇರಿಸಿದ ದ್ರಾವಣವನ್ನು ಸಿಂಪಡಿಸಬೇಕು ಎಂದು ನಾಗನಹಳ್ಳಿಯ ವಿಸ್ತರಣಾ ಶಿಕ್ಷಣ ಘಟಕದ ತೋಟಗಾರಿಕೆ ಸಹಾಯಕ ಪ್ರಾಧ್ಯಾಪಕ ರಾಹುಲ್ ದಾಸ್ ಸಲಹೆ ನೀಡಿದ್ದಾರೆ.

ರೈತರು ಹೆಚ್ಚಿನ ಮಾಹಿತಿಗಾಗಿ ಮೊ. 98803 38630 ಸಂಪರ್ಕಿಸಬಹುದು.

ಮಾವಿನಲ್ಲಿ ಚಿಕ್ಕ ಕಾಯಿಗಳು ಬೆಳೆಯುತ್ತಿರುವ ಹಂತದಲ್ಲಿ ಅವುಗಳಿಗೆ ಭಾರತೀಯ ತೋಟಗಾರಿಕೆ ಸಂಶೋಧನ ಸಂಸ್ಥೆ ಹೊರ ತಂದಿರುವ ಮಾವು ಸ್ಪೆಶಲ್ ಅನ್ನು ಪ್ರತಿ 10 ಲೀಟರ್ ನೀರಿನಲ್ಲಿ 50 ಗ್ರಾಂ ಪ್ರಮಾಣದಲ್ಲಿ ಬೆರೆಸಿ ಸಿಂಪಡಿಸುವುದು. ಈ ಸಿಂಪರಣಾ ದ್ರಾವಣಕ್ಕೆ ಒಂದು ಶಾಂಪು ಹಾಗೂ ಅರ್ಧ ಹೋಳು ನಿಂಬೆ ರಸವನ್ನು ಬೆರೆಸಿ ಸಿಂಪಡಿಸಿದರೇ ಅದು ಪರಿಣಾಮಕಾರಿಯಾಗಿ ಅಂಟಿಕೊಳ್ಳುವುದು.

- ರಾಹುಲ್ ದಾಸ್, ಸಹಾಯಕ ಪ್ರಾಧ್ಯಾಪಕ, ವಿಸ್ತರಣಾ ಶಿಕ್ಷಣ ಘಟಕ, ನಾಗನಹಳ್ಳಿ, ಮೈಸೂರು

click me!