ಕೊರೋನಾ ಭೀತಿಯಿಂದ ಬಾಗಿಲು ಹಾಕಿಕೊಂಡಿದ್ದ ದೇವಸ್ಥಾನಗಳು ಬರೋಬ್ಬರಿ ಎರಡೂವರೆ ತಿಂಗಳುಗಳ ಬಳಿಕ ಭಕ್ತರಿಗೆ ದರ್ಶನ ಭಾಗ್ಯ ಸಿಗಲಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಯಾವೆಲ್ಲಾ ದೇವಸ್ಥಾನಗಳು ಓಪನ್ ಆಗಲಿವೆ? ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನ, ವರದಳ್ಳಿಯ ಶ್ರೀ ವರದಾಶ್ರಮ ದೇವಸ್ಥಾನಗಳು ಓಪನ್ ಆಗುಲಿವೇ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
ಶಿವಮೊಗ್ಗ(ಜೂ.08): ಕಳೆದ ಎರಡೂವರೆ ತಿಂಗಳಿಂದ ಬಂದ್ ಆಗಿರುವ ದೇವಸ್ಥಾನಗಳನ್ನು ಜೂ. 8 ರಿಂದ ತೆರೆಯಲು ಸರ್ಕಾರ ಹೊರಡಿಸಿರುವ ಹೊಸ ಲಾಕ್‌ಡೌನ್ ನೀತಿಯಲ್ಲಿ ಒಪ್ಪಿಗೆ ನೀಡಿದೆ. ಆದರೆ ಜಿಲ್ಲೆಯಲ್ಲಿ ಎಲ್ಲ ದೇವಸ್ಥಾನಗಳು ಸೋಮವಾರ ತೆರೆಯುವ ಸಾಧ್ಯತೆ ಕಡಿಮೆ. ಮುಜರಾಯಿ ದೇವಸ್ಥಾನಗಳಿಗೆ ಕೊನೆ ಗಳಿಗೆಯಲ್ಲಿ ಆದೇಶ ಬಂದಿದ್ದು, ಅರೆಬರೆ ಸಿದ್ಧತೆಯೊಂದಿಗೆ ತೆರೆಯಲು ಸಿದ್ಧವಾಗಿವೆ.
ಜಿಲ್ಲೆಯಲ್ಲಿ ಪ್ರಮುಖ ದೇವಸ್ಥಾನಗಳು ಖಾಸಗಿ ಆಡಳಿತ ಮಂಡಳಿ ಮತ್ತು ಮುಜರಾಯಿ ನಿರ್ವಹಣೆಯಲ್ಲಿ ಇವೆ. ಎ ವರ್ಗದ ದೇವಸ್ಥಾನಗಳು ಸೋಮವಾರ ತೆರೆಯುವ ಸಾಧ್ಯತೆ ಕಡಿಮೆಯಿದೆ. ಬಿ ಮತ್ತು ಸಿ ವರ್ಗದ ದೇವಸ್ಥಾನಗಳು ಭಕ್ತರಿಗೆ ಮುಕ್ತವಾಗಲಿವೆ. ಸಾಗರ ತಾಲೂಕಿನ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನ, ವರದಳ್ಳಿಯ ಶ್ರೀ ವರದಾಶ್ರಮ ತೆರೆಯುವುದಿಲ್ಲ ಎಂದು ಈಗಾಗಲೇ ಆ ದೇವಸ್ಥಾನ ಸಮಿತಿಗಳು ಪ್ರಕಟಣೆ ಮೂಲಕ ಸ್ಪಷ್ಟಪಡಿಸಿವೆ. ತೆರೆಯುವ ದಿನಾಂಕವನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದೂ ಪ್ರಕಟಣೆಯಲ್ಲಿ ಹೇಳಲಾಗಿದೆ.
ಇನ್ನು ಮುಜರಾಯಿಗೆ ಸೇರಿದ ಶಿಕಾರಿಪುರದ ಶ್ರೀ ಹುಚ್ಚೂರಾಯ ಸ್ವಾಮಿ ದೇವಸ್ಥಾನಕ್ಕೆ ಕೊನೆ ಗಳಿಗೆಯಲ್ಲಿ ಸೂಚನೆ ಬಂದಿದ್ದು, ಸೋಮವಾರ ತೆರೆಯಲು ಕೊನೆ ಗಳಿಗೆಯಲ್ಲಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಇದೇ ರೀತಿ ಸೊರಬದ ಚಂದ್ರಗುತ್ತಿಯ ಶ್ರೀ ರೇಣುಕಾಂಬಾ ದೇವಿಯ ದೇವಸ್ಥಾನದಲ್ಲಿ ಕೂಡ ಕೊನೆಗಳಿಗೆಯ ಸಿದ್ಧತೆ ನಡೆದಿದೆ.
ಸಾನಿಟೈಸೇಶನ್, ಸಾಮಾಜಿಕ ಅಂತರಕ್ಕೆ ವ್ಯವಸ್ಥೆ, ಪ್ರತ್ಯೇಕ ಸಿಬ್ಬಂದಿ ನಿಯೋಜನೆ, ಪ್ರತಿ ಭಕ್ತರ ದೇಹದ ಉಷ್ಣಾಂಶ ಪರಿಶೀಲನೆ ಇತ್ಯಾದಿಗಳಿಗೆ ಸಿದ್ಧತೆ ಬೇಕಿದ್ದು, ಕೆಲವೆಡೆ ಅದು ಪೂರ್ಣವಾಗಿ ಸಾಧ್ಯವಾಗುತ್ತಿಲ್ಲ. ಇನ್ನು ಕೆಲವು ಮುಜರಾಯಿ ದೇವಸ್ಥಾನಗಳವರು ಇಲಾಖೆ ಎಲ್ಲವನ್ನೂ ಸರಿಯಾಗಿ ಮಾಡಿಕೊಟ್ಟರೆ ಮಾತ್ರ ನಾವು ತೆರೆಯುತ್ತೇವೆ ಎಂದು ಕೆಲ ದೇವಸ್ಥಾನ ನಿರ್ವಹಣಾ ಸಮಿತಿ ಹೇಳುತ್ತಿವೆ.
ತೆರೆಯಲು ಸಿದ್ಧತೆ:
ಎರಡನೇ ವರ್ಗದ ಖಾಸಗಿ ಉಸ್ತುವಾರಿಯ ದೇವಸ್ಥಾನಗಳು ಸೋಮವಾರದಿಂದ ಭಕ್ತರಿಗೆ ಸೇವೆ ನೀಡಲು ನಿರ್ಧರಿಸಿವೆ. ಶಿವಮೊಗ್ಗದ ಶ್ರೀ ರಾಘವೇಂದ್ರ ಮಠ, ಶ್ರೀ ಶಂಕರ ಮಠ, ರವೀಂದ್ರನಗರದ ಶ್ರೀ ಗಣಪತಿ ದೇವಸ್ಥಾನ, ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಮ ದೇವಸ್ಥಾನಗಳು ತೆರೆಯಲಿವೆ. ಮುಜರಾಯಿ ಇಲಾಖೆಗೆ ಒಳಪಟ್ಟ ತೀರ್ಥಹಳ್ಳಿ ತಾಲೂಕಿನ ಹಣಗೆರೆಕಟ್ಟೆ ಶ್ರೀ ದುರ್ಗಾಚೌಡೇಶ್ವರಿ, ರಾಮೇಶ್ವರ ದೇವಾಲಯ, ಮೃಗವಧೆ ದೇವಸ್ಥಾನಗಳು ಸೋಮವಾರದಿಂದ ತೆರೆಯಲು ಸಿದ್ಧತೆ ನಡೆಸಿವೆ.
ಶಿವಮೊಗ್ಗಕ್ಕೆ ಮಹಾ ಕಂಟಕ: ಒಂದೇ ದಿನ 12 ಮಂದಿಗೆ ಕೊರೋನಾ ಸೋಂಕು
ಶಿವಮೊಗ್ಗ ನಗರದ ಶ್ರೀ ಕೋಟೆ ಮಾರಿಕಾಂಬಾ ದೇವಸ್ಥಾನ ಸೋಮವಾರದಿಂದ ತೆರೆಯಲು ಸಿದ್ಧತೆ ನಡೆಸಿದ್ದು, ದೇವಸ್ಥಾನವನ್ನು ಶುಚಿಗೊಳಿಸಲಾಗಿದೆ. ಆದರೆ ಭಕ್ತಾದಿಗಳು ಮಂಗಳವಾರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಬರಲಿದ್ದಾರೆ ಎನ್ನುತ್ತಾರೆ ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಎನ್. ಮಂಜುನಾಥ್. ಈ ಎಲ್ಲ ದೇವಸ್ಥಾನಗಳಲ್ಲಿಯೂ ಶನಿವಾರದಿಂದಲೇ ಸ್ವಚ್ಛತಾ ಕಾರ್ಯ ನಡೆದಿದ್ದು, ಉಳಿದ ವ್ಯವಸ್ಥೆಗಳು ಕೂಡ ನಡೆಯುತ್ತಿವೆ.
ಸಿದ್ಧತೆ:
ತೆರೆಯಲು ಸಿದ್ಧವಾಗಿರುವ ಎಲ್ಲ ದೇವಸ್ಥಾನಗಳನ್ನು ಶನಿವಾರದಿಂದ ಸ್ವಚ್ಛಗೊಳಿಸಲಾಗುತ್ತಿದ್ದು, ಸರ್ಕಾರದ ಸೂಚನೆಯಂತೆ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸೇಶನ್‌ಗೆ ವ್ಯವಸ್ಥೆ ಮಾಡಲಾಗಿದೆ. ಸಾಮಾಜಿಕ ಅಂತರ, ಮಾಸ್ಕ್ ಕಡ್ಡಾಯ, ದೇಹದ ಉಷ್ಣತೆ ಪರೀಕ್ಷಾ ಮಾಪಕ ಇತ್ಯಾದಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಕೆಲವೊಂದು ದೇವಸ್ಥಾನಗಳಲ್ಲಿ ಇದಕ್ಕಾಗಿ ಪ್ರತ್ಯೇಕ ಸಿಬ್ಬಂದಿ ನಿಯೋಜಿಸಲಾಗಿದೆ. ತೀರ್ಥಪ್ರಸಾದ ಮಾತ್ರ ಇರುವುದಿಲ್ಲ. ತಿಲಕ್‌ನಗರದ ಶ್ರೀ ರಾಘವೇಂದ್ರ ಮಠದಲ್ಲಿ ಮಂತ್ರಾಕ್ಷತೆಯನ್ನು ಪ್ರತ್ಯೇಕವಾಗಿ ಇಡಲಾಗುತ್ತದೆ. ಭಕ್ತರೇ ನೇರವಾಗಿ ತೆಗೆದುಕೊಂಡು ಹೋಗಬಹುದಾಗಿದೆ.
ಶ್ರೀ ಕೋಟೆ ಸೀತಾರಾಮಾಂಜನೇಯ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ಸೋಮವಾರದಿಂದ ಅವಕಾಶ ಮಾಡಿಕೊಡಲಾಗುವುದು. ಭಾನುವಾರ ದೇವಸ್ಥಾನ ಆವರಣವನ್ನು ಸಮಪೂರ್ಣ ಶುಚಿಗೊಳಿಸಲಾಗಿದೆ. ದೇವಸ್ಥಾನ ಪ್ರವೇಶ ದ್ವಾರದಲ್ಲಿ ಸ್ಯಾನಿಟೈಸರ್ ಇಡಲಾಗಿದೆ. ಭಕ್ತರು ಮಾಸ್ಕ್ ಧರಿಸಿ ಬರುವುದು ಕಡ್ಡಾಯವಿದೆ. ದೇವಸ್ಥಾನ ಒಳ ಪ್ರವೇಶಿಸುವುದಕ್ಕೂ ಮೊದಲು ಭಕ್ತರು ಕೈಕಾಲುಗಳನ್ನು ಶುಚಿಗೊಳಿಸಿಕೊಂಡೇ ಬರಬೇಕು. ಪ್ರತಿಯೊಬ್ಬ ಭಕ್ತರ ಥರ್ಮಲ್ ಸ್ಕಿ್ರೕನಿಂಗ್ ನಡೆಸಲು ಉದ್ದೇಶಿಸಲಾಗಿದೆ. ದೇವರ ದರುಶನ ಪಡೆಯಬಹುದು. ಆದರೆ ತೀರ್ಥ, ಪ್ರಸಾದ ವಿತರಣೆ ಇರುವುದಿಲ್ಲ. -ರಾಮಪ್ರಸಾದ್, ಅರ್ಚಕರು, ಕೋಟೆ ಶ್ರೀ ಸೀತಾರಾಮಾಂಜನೇಯ ದೇವಸ್ಥಾನದ ಅರ್ಚಕ.
ಚರ್ಚ್, ಮಸೀದಿಗಳೂ ಪ್ರಾರಂಭ
ದೇವಾಲಯದಂತೆ ಜಿಲ್ಲೆಯ ಚರ್ಚ್ ಮತ್ತು ಮಸೀದಿಗಳನ್ನು ಕೂಡ ಸೋಮವಾರದಿಂದ ತೆರೆಯಲಿದ್ದು, ಎಲ್ಲ ಧಾರ್ಮಿಕ ಅನುಯಾಯಿಗಳಿಗೆ ಪ್ರವೇಶ ಸಿಗಲಿದೆ. ಆದರೆ ಸರ್ಕಾರ ನೀಡಿದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದ್ದು, ಇದರಂತೆ ಧಾರ್ಮಿಕ ಅನುಯಾಯಿಗಳು ನಡೆದುಕೊಳ್ಳಬೇಕು ಎಂದು ಸೇಕ್ರೇಡ್ ಹಾರ್ಟ್ ಚರ್ಚ್‌ನ ಮುಖ್ಯಸ್ಥರಾದ ಫಾದರ್ ಗಿಲ್ಬರ್ಟ್ ಲೋಬೋ ಹಾಗೂ ಮುಸ್ಲಿಂ ಧರ್ಮಗುರುಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕ್ಯಾಥೋಲಿಕ್ ಮತ್ತು ಪೊಟೆಸ್ಟೆಂಟ್ ಸಮುದಾಯಕ್ಕೆ ಸೇರಿದ ಸುಮಾರು 20-30 ಚಚ್‌ರ್‍ಗಳಿದ್ದು, ಎಲ್ಲ ಚಚ್‌ರ್‍ಗಳಲ್ಲಿಯೂ ಈ ನಿಯಮವನ್ನು ಕಡ್ಡಾಯವಾಗಿ ಪಾಲಿಸಲಾಗುತ್ತದೆ. ಇದೇ ರೀತಿ ಜಿಲ್ಲೆಯಲ್ಲಿ ಸುಮಾರು 150 ಕ್ಕೂ ಅಧಿಕ ಮಸೀದಿಗಳಿದ್ದು, ಇಲ್ಲಿಯೂ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.
• ಸರ್ಕಾರದ ಮಾರ್ಗಸೂಚಿಯೇನು?
-ಪ್ರತಿ ದೇವಸ್ಥಾನ, ಚರ್ಚ್ , ಮಸೀದಿಯ ಪ್ರವೇಶ ದ್ವಾರದಲ್ಲಿ ಭಕ್ತರ ದೇಹದ ಉಷ್ಣಾಂಶ ಅಳೆಯುವ ವ್ಯವಸ್ಥೆ ಇರಬೇಕು.
-ಸ್ಯಾನಿಟೈಸರ್‌ನಲ್ಲಿ ಕೈಗಳನ್ನು ಸ್ವಚ್ಛ ಮಾಡಿಕೊಂಡು, ಸಾಧ್ಯವಾದರೆ ಕಾಲು ತೊಳೆದುಕೊಂಡು ಪ್ರವೇಶಿಸಬೇಕು.
-10 ವರ್ಷಕ್ಕಿಂತ ಕಡಿಮೆ ಮತ್ತು 65 ವರ್ಷ ಮೇಲ್ಪಟ್ಟವರಿಗೆ ಸಧ್ಯಕ್ಕೆ ಪ್ರವೇಶ ಇಲ್ಲ.
-ಯಾವುದೇ ರೀತಿಯ ಕೊರೋನಾ ಸೋಂಕಿನ ಲಕ್ಷಣಗಳಿದ್ದವರಿಗೆ ಪ್ರವೇಶವಿಲ್ಲ.
-ಕೆಲವೊಂದು ಧಾರ್ಮಿಕ ಕೇಂದ್ರಗಳಲ್ಲಿ ಹೋಂ ಕ್ವಾರಂಟೈನ್‌ನಲ್ಲಿ ಇದ್ದವರು ಮತ್ತು ಇತ್ತೀಚೆಗೆ ಪೂರ್ಣಗೊಳಿಸಿದವರಿಗೂ ಪ್ರವೇಶವಿಲ್ಲ.
-ಧಾರ್ಮಿಕ ಕೇಂದ್ರದ ಒಳ ಭಾಗದಲ್ಲಿನ ಗೋಡೆಗಳನ್ನು ಮುಟ್ಟುವಂತಿಲ್ಲ.
-ಧಾರ್ಮಿಕ ಕೇಂದ್ರ ಪ್ರವೇಶಿಸುವ ಪ್ರತಿಯೊಬ್ಬರಿಗೂ ಮಾಸ್ಕ್ ಕಡ್ಡಾಯ.
-ಸಾಮಾಜಿಕ ಅಂತರ ಕಡ್ಡಾಯ. ಪ್ರಾರ್ಥನೆ ಮತ್ತು ಸರದಿ ಸಾಲಿನಲ್ಲಿ ನಿಲ್ಲಲು ಪ್ರತ್ಯೇಕ ಬಾಕ್ಸ್ ಮಾರ್ಕ್ ಮಾಡಿರಬೇಕು.
-ಸಾಮೂಹಿಕ ಭಜನೆ ನಿಷೇಧ, ತೀರ್ಥ, ಪ್ರಸಾದ ಇರುವುದಿಲ್ಲ.