ಅಬ್ಬರಿಸಿ ಪ್ರವಾಹ ಸೃಷ್ಟಿಸಿದ ಮಳೆ ನಿಂತಿದೆ. ಆದರೆ ಅಂತಹ ಭೀಕರ ಪ್ರವಾಹ ಪರಿಸ್ಥಿತಿಯಲ್ಲಿ ಎಲ್ಲವನ್ನೂ ಕಳೆದುಕೊಂಡವರ ಒಂದೊಂದೇ ಕಣ್ಣೀರಿನ ಕಥೆಗಳು ಇದೀಗ ಹೊರಬರುತ್ತಿವೆ. ಕೊಡಗಿನ ಕುಟುಂಬವೊಂದರ ಮನಕಲುಕುವ ಕಥೆ ಇಲ್ಲಿದೆ.
ಮಂಜುನಾಥ್ ಟಿ.ಎನ್. ವಿರಾಜಪೇಟೆ
ಕೊಡಗು[ಆ.19]: ಅಂಗಡಿ, ಮನೆಗೆ ನೀರು ತುಂಬಿದ ಸಂದರ್ಭ ಮಕ್ಕಳನ್ನು ಹೊತ್ತು ಸಾಗುತ್ತಿರುವ ಭೂಕುಸಿತ ಸಂತ್ರಸ್ತ ತೋರ ಗ್ರಾಮದ ಪ್ರಭು ಮತ್ತು ಹೆಂಡತಿಯ ಫೋಟೋ ದೃಶ್ಯಗಳು ಸಿಸಿಟಿವಿಯಲ್ಲಿ ಗೋಚರವಾಗಿದ್ದು ನೋಡುವವರ ಕಣ್ಣು ತುಂಬಿ ಬರುತ್ತದೆ.
ತೋರ ಗ್ರಾಮದಲ್ಲಿ ಆ.9ರಂದು ಭಾರಿ ಭೂಕುಸಿತ ಸಂಭವಿಸಿತ್ತು. ಗ್ರಾಮದ ಸಮೀಪದ ಸೇತುವೆ ಬಳಿ ನೀರು ಉಕ್ಕಿ ಹರಿದು ಪ್ರಭು ಅವರ ಮನೆಯ ಮೊದಲ ಮಹಡಿಗೆ ನೀರು ತುಂಬಿದಾಗ ಮೊದಲನೇ ಮಗಳನ್ನು ತನ್ನ ಹೆಗಲ ಮೆಲೆ ಹೊತ್ತುಕೊಂಡು ಹೊಗುವ ದೃಶ್ಯಗಳು ಸಮೀಪದ ಅವರದೇ ಅಂಗಡಿ ಮನೆಯಲ್ಲಿ ಅಳವಡಿಸಿರುವ ಸಿ.ಸಿ. ಟಿವಿಯಲ್ಲಿ ದಾಖಲಾಗಿವೆ. ಆದರೆ ಜವರಾಯ ಮಾತ್ರ ಪ್ರಭು ಅವರನ್ನು ಉಳಿಸಿ, ಅವರ ಇಬ್ಬರು ಮಕ್ಕಳು, ಹೆಂಡತಿ ಅನಸೂಯ, ತಾಯಿ ದೇವಕಿಯನ್ನು ಹೊತ್ತೊಯ್ದಿದ್ದಾನೆ. ಈಗ ಮನೆ ಮನೆಯವರಿಲ್ಲದೆ ಅನಾಥವಾಗಿ ನಿಂತಂತೆ ಕಾಣುತ್ತಿದೆ ತೋರ ಸೇತುವೆಯ ಬಳಿಯಿರುವ ಪ್ರಭು ಅವರ ಎರಡಂತಸ್ತಿನ ಅಂಗಡಿ ಮನೆ.
ಒಬ್ಬೊಬ್ಬರದ್ದು ಒಂದೊಂದು ಕಥೆ: ತೋರ ಗ್ರಾಮದಿಂದ ಬಂದು ಹೆಗ್ಗಳದ ಶಾಲೆಯ ಸಂತ್ರಸ್ತ ಶಿಬಿರದಲ್ಲಿರುವ ಗ್ರಾಮಸ್ಥರು ಒಬ್ಬೊಬ್ಬರಾಗಿ ತಮ್ಮ ಕಣ್ಣೀರ ಕಥೆಗಳನ್ನು ಹೇಳುತ್ತಿದ್ದಾರೆ.
ಅಂದು ಶುಕ್ರವಾರ, ಮಳೆ ಜಾಸ್ತಿ ಬರ್ತಾಯಿತ್ತು. ಆ ಕಡೆ, ಈ ಕಡೆ ಓಡಾಟವೇ ಕಷ್ಟವಾಯ್ತು. ಕಾಫಿತೋಟಗಳಲ್ಲಿ ಕೆಲಸ ನಿಲ್ಲಿಸಿದರು. ನಮ್ಮ ಗ್ರಾಮದಲ್ಲಿ ಮೊದಲಿನಿಂದಲೂ ಮಳೆ ಜಾಸ್ತಿಯೇ, ಒಮ್ಮೊಮ್ಮೆ ಬಿರುಬೇಸಿಗೆಯಲ್ಲೂ ಮಧ್ಯಾಹ್ನದ ಸಮಯವೂ ಮಳೆ ಬಂದು ಹೋಗುವಂಥ ಜಾಗ. ಆದರೆ, ಯಾವತ್ತೂ ಕೂಡಾ ಬೆಟ್ಟವೇ ಜಾರುವುದು, ಗುಡ್ಡಗಳನ್ನು ಕುಸಿದಿದ್ದನ್ನು ಕೇಳಿರಲಿಲಲ್ಲ. ಈಗ ಸರ್ವ ನಾಶವಾಗಿರುವ ಜಾಗಕ್ಕೆ ಪರ್ಚಿಕಾಡು ಕಾಲೋನಿ, ತೋಮರ ಕಾಲೋನಿ ಎಂದು ಹೇಳುತ್ತಿದ್ದರು. ಕುಸಿದಿರುವ ಬೆಟ್ಟದ ಹೆಸರು ಕೊರ್ತಿಕಾಡು ಬೆಟ್ಟ. ನಮ್ಮ ಮನೆಗಳ ಹತ್ತಿರ ಜಲ ಬಂತು, ಮನೆಗಳಲ್ಲಿ ಬಿರುಕು ಬಂತು. ಏನೋ ದೇವರ ದಯೆ. ನಾವು ಬದುಕಿದೆವು. ಪಂದಿಬುದ್ಧಕಾಡು ಬೆಟ್ಟಕುಸಿದಿದ್ದರೆ ನಾವು ಹೋಗ್ತಾ ಇದ್ವಿ. ನಾವು ಇರುವ ಜಾಗದಿಂದ ಸುಮಾರು ಕೆಳಗಿನ ಭಾಗದಲ್ಲಿ ಕುಸಿತವಾಗಿದ್ದು ನಮಗೆ ಕಣುತ್ತಿತ್ತು ಎಂದು ನಿವಾಸಿ ಬೆಳ್ಳಿಯಪ್ಪ ಹೇಳುತ್ತಾರೆ.
ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಅಪಾರ ಕಾಫಿ ತೋಟಗಳಿಗೆ ಹಾನಿ: ಇಲ್ಲಿನ ಸ್ಥಳೀಯರ ಅಂದಾಜಿನ ಪ್ರಕಾರ ಸುಮಾರು 150 ಎಕರೆಯಷ್ಟುಭೂಮಿ ಹಾಳಾಗಿದೆ. ಇನ್ನು ಇಲ್ಲಿ ಜನವಸತಿ ಇರುವುದು ಕಷ್ಟ, ಬದುಕು ಕಷ್ಟಎನ್ನುವಂತಾಗಿದೆ. ಅಲ್ಲಿಯೇ ಇದ್ದರೂ ಪ್ರತಿವರ್ಷ ಮಳೆಗಾಲಕ್ಕೆ ಬೇರೆಡೆಗೆ ತೆರಳಬೇಕು. ಅಲ್ಲಿಗೆ ಉಳಿದ ಆಸ್ತಿ, ಮನೆ ಹೀಗೆ ವರ್ಷದಿಂದ ಹಾಳಾಗುತ್ತ ಬಂದರೆ ಬದುಕಿರುವವರ ಕಥೆಯೇನು? ಶಾಶ್ವತವಾಗಿ ಸ್ಥಳಾಂತರ ಮಾಡಿ ಬೇರೆಡೆ ಪುರ್ನವಸತಿ ಅಷ್ಟುಸುಲಭವಾ? ಬೆಟ್ಟದ ತಪ್ಪಲಿನ ಜನ ಬೇರೆಡೆಗೆ ಹೋಗಲು ಒಪ್ಪುತ್ತಾರಾ? ಅವರು ಒಪ್ಪಿದರೂ ಸರ್ಕಾರ ಅಷ್ಟುಹಸನಾಗಿ ಅವರಿಗೆ ಪುರ್ನವಸತಿ ಕೊಡುತ್ತದೆಯಾ? ಏಕೆಂದರೆ ಕಳೆದ ವರ್ಷದ ಸಂತ್ರಸ್ತರ ಪಾಡು ಇನ್ನೂ ಬಗೆಹರಿದಿಲ್ಲ .
ರಾಮನಗರದ ದೇವಪ್ಪ ಪೂಜಾರಿ ಹಾಗೂ ತೋರ ಗ್ರಾಮದ ಸಂತ್ರಸ್ತ ಪ್ರಭು ಅವರ ತಂದೆ ಒಳ್ಳೆಯ ಸ್ನೇಹಿತರಾಗಿದ್ದರೂ. ದೇವಪ್ಪ ಪೂಜಾರಿ ಅವರ ತೋಟದಲ್ಲಿ ನೆಲೆನಿಂತಿರುವ ಕಿರಾತೇಶ್ವರ ದೇವಾಲಯದ ಅರ್ಚಕರಾಗಿ ಪ್ರಭು ಅವರ ತಂದೆ ಕೆಲಸ ಮಾಡುತ್ತಿದ್ದರು. ಆ ಸ್ನೇಹದಲ್ಲೇ ಅಲ್ಲಿನ ಕೊರ್ತಿ ದೇವರ ಪೂಜೆಗೆ ದೇವಪ್ಪ ಪೂಜಾರಿಯವರು ತೋರದ ಏರುಬೆಟ್ಟದ ದಾರಿಯಲ್ಲಿ ಹೋಗಿ ಬರುತ್ತಿದ್ದರು ಮತ್ತು ಆ ಊರಿನವರ ಹಳೆ ತಲೆಮಾರಿನವರ ಪರಿಚಯವೂ ಅವರಿಗೆ ಇತ್ತಂತೆ.
ಅವರು ಹೇಳುವ ಪ್ರಕಾರ, ತೋಮರದ ಹಳಬರು ಹೇಳುವಂತೆ 1960ರ ಸುಮಾರಿನಿಲ್ಲಿ ಚೋಮುಕುಂದು ಬೆಟ್ಟದಲ್ಲಿ ಹೀಗೆಯೇ ಭೂಕುಸಿತವಾದಾಗ ಅಲ್ಲಿಂದ ವಲಸೆ ಬಂದ ಜನರು ಹಲವರು ತೋರ ಬೆಟ್ಟದ ತಪ್ಪಲಿಗೆ ಬಂದು ನೆಲೆಸಿದ್ದರಂತೆ. ಆಗೆಲ್ಲಾ ತಂತ್ರಜ್ಞಾನ ಇಷ್ಟೊಂದು ಮುಂದುವರಿಯದ ಕಾರಣ ಯಾರು ಕೂಡಾ ಆ ಜಾಗದಲ್ಲಿ ಯಾರಿದ್ದರು? ಏನಾದರೂ ಎಂದು ಹುಡುಕಲು ಹೋಗಲಿಲ್ಲಾವೆಂದು ಹೇಳುತ್ತಾರೆ.
ದೇವಪ್ಪ ಪೂಜಾರಿ ಅವರು ನೆನಪಿಸುವಂತೆ, ಆಗಲೂ ಭಾರಿ ಮಳೆ ಬರುತ್ತಿತ್ತು. ಆದರೆ ಒಂದೇ ಸಮ ಹೀಗೆ ವರ್ಷದ ಮಳೆ ಮೂರೇ ದಿನದಲ್ಲಿ ಬಂದು ಎಲ್ಲವನ್ನೂ ಕೊಚ್ಚಿಕೊಂಡು ಹೋಗುತ್ತಿರಲಿಲ್ಲ. ನಿಧಾನವಾಗಿ ಸುರಿಯುತ್ತಿದ್ದ ಮಳೆ ಭೂಮಿಗೆ ಇಳಿಯುತ್ತಾ ಬರುತ್ತಿತ್ತು ಎನ್ನುತ್ತಾರೆ.
ಜಲಪ್ರಳಯಕ್ಕೊಳಗಾಗಿ ಊರು, ಗದ್ದೆ, ಮನೆ, ಗಂಡ -ಹೆಂಡತಿ, ಮಗಳು, ಕಂದಮ್ಮನ ನಿರೀಕ್ಷೆಯಲ್ಲಿದ್ದ ತಾಯಿ, ಎರಡು ಮಕ್ಕಳ ಕಣ್ಮಣಿಯಾಗಿದ್ದ ಅಮ್ಮ, ಹಲವಾರು ಜಾನುವಾರುಗಳ ಕಣ್ಮರೆ, ಕಾಣೆಯಾಗಿರುವ ಪೈಕಿ ಹುಡುಕಾಟದಲ್ಲಿ ನಮ್ಮ ಮಕ್ಕಳ ದೇಹ ಸಿಗಬಹುದೇನೊ ಎಂಬ ನಿರಿಕ್ಷೆಯಲ್ಲಿರುವ ತಂದೆ ಇವೆಲ್ಲ ಈಗ ತೋರ ಸಂತ್ರಸ್ತರ ಶಿಬಿರದಲ್ಲಿ ಕಾಣಸಿಗುತ್ತಿರುವ ದೃಶ್ಯಗಳು.
ತೋರದಲ್ಲಿ ಇನ್ನೂ ಐದು ಜನರ ಮೃತದೇಹಗಳು ಆಳುದ್ದದ ಕೆಸರಿನಡಿಯೇ ಇವೆ. ಹಿಟಾಚಿ, ಜೆಸಿಬಿಗಳು ಭೋರ್ಗರೆಯುತ್ತಲೇ ಇವೆ. ನಿರ್ಭಾವುಕವಾಗಿ, ಬತ್ತಿದ ಕಣ್ಣೀರ ಜೊತೆ ಪ್ರಭು ಅವರು ಕೆಸರಿನಡಿ ಹೂತು ಹೋದ ಮನೆಯ ಮೇಲೆ ಕುಳಿತು ಇಲ್ಲಿ ಅಗೆಯಿರಿ, ಇಲ್ಲೇ ಮನೆ ಬಾಗಿಲು ಎಂದು ಹಿಟಾಚಿಯವರಿಗೆ ಸೂಚನೆ ಕೊಡುತ್ತಿದ್ದರೆ ಅಲ್ಲಿ ನೆರೆದಿದ್ದವರ ಕಣ್ಣಾಲಿಗುಳು ತುಂಬಿ ಬರುತ್ತಿದ್ದವು.
ತೋರ ಗ್ರಾಮದ ಊರಿನ ರಸ್ತೆಗಳ ದುರಸ್ತಿ, ವೈಜ್ಞಾನಿಕವಾಗಿ ಸೇತುವೆ ನಿರ್ಮಾಣ, ಅಪಾಯದ ಸ್ಥಳದಲ್ಲಿರುವ ಜನರ ಸ್ಥಳಾಂತರ, ಅವರು ಬದುಕಿಗೆ ಸರ್ಕಾರದ ಹಣಕಾಸಿನ ನೆರವು, ಸ್ಥಳೀಯರಿಂದ ನೈತಿಕ ಬೆಂಬಲ ಎಲ್ಲವೂ ಬೇಕಾಗಿದೆ. ತೋರದ ದಾರಿಯುದ್ದಕ್ಕೂ ಹಸಿದು ಕಂಗಾಲಾಗಿ ಕಾಯುತ್ತಿರುವ ಶ್ವಾನಗಳು, ದಿಕ್ಕೆಟ್ಟು ನಿಂತ ಜಾನುವಾರುಗಳು, ಬದುಕು ಅತಂತ್ರವಾಗಿರುವ ಜನರೇ ಕಾಣುತ್ತಿದ್ದಾರೆ. ಈ ಚಿತ್ರಣ ಬದಲಾಗಬೇಕಿದೆ. ಆದರೆ, ಇಂಥ ಸಂಕಷ್ಟದ ಸಮಯದಲ್ಲಿ ಆ ಜಾಗದಲ್ಲಿ ಜಾತಿ, ಧರ್ಮದ ಹಂಗಿಲ್ಲದೆ ಸ್ವಯಂಸೇವಕರೂ ಜೀವದ ಹಂಗು ತೊರೆದು ಕಾರ್ಯಾಚರಣೆಗೆ ಸಹಾಯ ಮಾಡುತ್ತಿದ್ದಾರೆ.