ಸರ್ಕಾರಿ ಶಾಲೆ ಉಳಿಸಲು ಶಿಕ್ಷಕರೇ ಬಸ್ ಖರೀದಿಸಿದರು!| 3 ಲಕ್ಷ ರು. ಸಾಲ ಮಾಡಿ ಬಸ್ ತಂದ ಮುಖ್ಯ ಶಿಕ್ಷಕ| ಬಸ್ ನೋಡಿ ಶಾಲೆಗೆ ಸೇರುವ ಮಕ್ಕಳ ಸಂಖ್ಯೆ ಏರಿಕೆ!
ನಾರಾಯಣ ಹೆಗಡೆ, ಕನ್ನಡಪ್ರಭ
ಹಾವೇರಿ[ಮೇ.14]: ಖಾಸಗಿ ಹಾಗೂ ಆಂಗ್ಲ ಮಾಧ್ಯಮ ಶಾಲೆಗಳ ಭರಾಟೆ ನಡುವೆ ಸರ್ಕಾರಿ ಕನ್ನಡ ಶಾಲೆಗಳನ್ನು ಉಳಿಸುವ ಸಲುವಾಗಿ ಶಿಕ್ಷಕ ವೃಂದ ಹಾಗೂ ಶಾಲಾಭಿವೃದ್ಧಿ ಸಮಿತಿಗಳು ನಡೆಸುತ್ತಿರುವ ಕಸರತ್ತುಗಳು ಒಂದೆರಡಲ್ಲ. ಮೂಲಸೌಲಭ್ಯದೊಂದಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಮನೆಮಾತಾಗಿರುವ ಸರ್ಕಾರಿ ಶಾಲೆಯೊಂದು ವಿದ್ಯಾರ್ಥಿಗಳನ್ನು ಹಿಡಿದಿಟ್ಟುಕೊಳ್ಳುವ ಸಲುವಾಗಿ ಇದೀಗ ಮಿನಿ ಬಸ್ ಖರೀದಿ ಮಾಡಿದೆ. ಈ ಮೂಲಕ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪೈಪೋಟಿ ನೀಡುತ್ತಿದೆ.
undefined
ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಸರ್ಕಾರಿ ಮಾದರಿ ಕನ್ನಡ ಶಾಲೆಗಾಗಿ 32 ಸೀಟಿನ ಮಿನಿ ಬಸ್ ಖರೀದಿಸಲಾಗಿದ್ದು, ಇದಕ್ಕಾಗಿ ಇಲ್ಲಿನ ಮುಖ್ಯ ಶಿಕ್ಷಕರೇ ಸ್ವತಃ ಬ್ಯಾಂಕಿನಲ್ಲಿ .3 ಲಕ್ಷ ಸಾಲ ಮಾಡಿದ್ದಾರೆ. ಶಾಲಾ ಶಿಕ್ಷಕರು, ಎಸ್‌ಡಿಎಂಸಿ, ಪಾಲಕರು, ಹಳೇ ವಿದ್ಯಾರ್ಥಿಗಳೊಂದಿಗೆ ಚರ್ಚಿಸಿ ಪ್ರತ್ಯೇಕ ವಾಹನ ವ್ಯವಸ್ಥೆ ಕಲ್ಪಿಸುವ ಯೋಜನೆ ಸಾಕಾರಗೊಳಿಸಿದ್ದಾರೆ. ಕಳೆದ ಆಗಸ್ಟ್ ತಿಂಗಳಲ್ಲೇ ಬಸ್ ಖರೀದಿಸಲಾಗಿದ್ದು, ಇದರಿಂದ ಶಾಲೆ ಬಿಟ್ಟಿದ್ದ ಅನೇಕ ವಿದ್ಯಾರ್ಥಿಗಳು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಮಕ್ಕಳಂತೆ ಶಾಲಾ ವಾಹನದಲ್ಲಿ ಪ್ರಯಾಣಿಸುತ್ತಿದ್ದಾರೆ. ಇದರ ಫಲವಾಗಿ ಬರುವ ಶೈಕ್ಷಣಿಕ ಸಾಲಿಗಾಗಿ ಮಕ್ಕಳಿಗೆ ಪ್ರವೇಶ ಪಡೆಯಲು ಈಗಾಗಲೇ ಹತ್ತಾರು ಪಾಲಕರು ಶಾಲೆಯನ್ನು ಸಂಪರ್ಕಿಸಿದ್ದಾರೆ.
.3 ಲಕ್ಷ ನೀಡಿ ಬಸ್ ಖರೀದಿ:
ಖಾಸಗಿ ಶಿಕ್ಷಣ ಸಂಸ್ಥೆಗಳು ಸುತ್ತಮುತ್ತಲಿನ ಗ್ರಾಮಗಳಲ್ಲಿ ವಾಹನದ ಮೂಲಕ ಮಕ್ಕಳನ್ನು ಕರೆದೊಯ್ಯುತ್ತಿರುವುದರಿಂದ ಸರ್ಕಾರಿ ಶಾಲೆಗೆ ಮಕ್ಕಳ ಪ್ರವೇಶಾತಿಯೇ ಕಡಿಮೆಯಾಗುತ್ತಾ ಬಂದಿತ್ತು. ಇದರಿಂದ ಎಚ್ಚೆತ್ತ ಗ್ರಾಮದ ಕೆಲ ಪ್ರಮುಖರು ಹಾಗೂ ಶಿಕ್ಷಕರು ವಾಹನ ಖರೀದಿಸುವ ಬಗ್ಗೆ ಚಿಂತನೆ ನಡೆಸಿದರು. ಬಳಿಕ ಹಳೇ ವಿದ್ಯಾರ್ಥಿಗಳು, ಪ್ರಮುಖರಿಂದ ಸಂಪನ್ಮೂಲ ಸಂಗ್ರಹಿಸಲು ನಿರ್ಧರಿಸಿದರು. ತಕ್ಷಣಕ್ಕೆ ಹಣ ಇಲ್ಲದ್ದರಿಂದ ಮುಖ್ಯಾಧ್ಯಾಪಕರೇ .3 ಲಕ್ಷ ಸಾಲ ಮಾಡಿ ಕಳೆದ ಆಗಸ್ಟ್‌ನಲ್ಲಿ ಸೆಕೆಂಡ್ ಹ್ಯಾಂಡ್ ಮಿನಿಬಸ್ ಖರೀದಿಸಿದ್ದಾರೆ. ಸುಮಾರು 3-4 ಕಿ.ಮೀ. ದೂರದ ಮಕ್ಕಳು ಶಾಲೆಗೆ ಪ್ರವೇಶ ಪಡೆದಿದ್ದರೂ ಅವರಿಗೆ ಬರಲು ಸರಿಯಾದ ವಾಹನ ಸೌಲಭ್ಯ ಇರಲಿಲ್ಲ. ಹೀಗಾಗಿ ಶಾಲೆಗೆ ಕಳೆದ ವರ್ಷ 1ನೇ ತರಗತಿಗೆ ಕೇವಲ 9 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದರು. ಆದರೆ, ವಾಹನ ವ್ಯವಸ್ಥೆ ಮಾಡಿರುವುದರಿಂದ ಈಗಾಗಲೇ 20ಕ್ಕೂ ಹೆಚ್ಚು ಪಾಲಕರು ಮಕ್ಕಳನ್ನು ಸೇರಿಸಲು ಆಸಕ್ತಿ ತೋರಿದ್ದಾರೆ. ಸದ್ಯ ಶಾಲೆಯಲ್ಲಿ 170 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಈ ವರ್ಷ ಮಕ್ಕಳ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿದೆ.
ದಾನಿಗಳಿಂದ ಹಣ ಸಂಗ್ರಹಿಸಿ ನಿರ್ವಹಣೆ:
ಪ್ರತಿ ತಿಂಗಳು ಬಸ್ಸಿಗೆ ಬೇಕಾಗುವ ಡೀಸೆಲ್ ಖರ್ಚು, ಡ್ರೈವರ್ ಸಂಬಳಕ್ಕೆ ಅಗತ್ಯವಿರುವ ಹಣವನ್ನು ವಿದ್ಯಾರ್ಥಿಗಳಿಂದ ಪಡೆಯಲಾಗುತ್ತಿದೆ. ಆದರೆ, ಕೆಲ ಬಡ ವಿದ್ಯಾರ್ಥಿಗಳು ಅದನ್ನೂ ನೀಡುತ್ತಿಲ್ಲ. ದಾನಿಗಳಿಂದ ಹಣ ಸಂಗ್ರಹಿಸಿ ಬಸ್ ನಿರ್ವಹಣೆ ಮಾಡಲಾಗುತ್ತಿದೆ. ಕೆಲ ತಿಂಗಳು ಶಿಕ್ಷಕರೇ ತಮ್ಮ ಕಿಸೆಯಿಂದ ಹಣ ಹಾಕಿದ್ದೂ ಇದೆ. ಪಾರದರ್ಶಕತೆ ಕಾಯ್ದುಕೊಳ್ಳಲು ಇದಕ್ಕಾಗಿಯೇ ಪಾಲಕರ ಸಮಿತಿಯನ್ನು ರಚಿಸಲಾಗಿದ್ದು, ಹಣಕಾಸಿನ ನಿರ್ವಹಣೆಯನ್ನು ಸಮಿತಿಯಿಂದಲೇ ಮಾಡಲಾಗುತ್ತಿದೆ. ಡೀಸೆಲ್, ನಿರ್ವಹಣೆ, ಡ್ರೈವರ್ ಸಂಬಳ, ವಿಮೆ ಸೇರಿದಂತೆ ವರ್ಷಕ್ಕೆ . 1.25 ಲಕ್ಷ ಖರ್ಚು ಬರುತ್ತಿದೆ.
ಸ್ಮಾರ್ಟ್ ಕ್ಲಾಸ್, ಸಿಸಿಟಿವಿ:
ಈ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲ ತರಗತಿ ಕೊಠಡಿ, ಅಡುಗೆ ಮನೆಗೆ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ. ಶೌಚಾಲಯ, ನೀರಿಗಾಗಿ ಬೋರ್‌ವೆಲ್ ಸೌಲಭ್ಯ ಕಲ್ಪಿಸಲಾಗಿದೆ. ಶುದ್ಧ ಕುಡಿವ ನೀರು ಕಲ್ಪಿಸಲು ಶೀಘ್ರದಲ್ಲೇ ಆರ್‌ಓ ಪ್ಲಾಂಟ್ ಅಳವಡಿಸಲು ಕೂಡ ಎಸ್‌ಡಿಎಂಸಿ ಚಿಂತನೆ ನಡೆಸಿದೆ. ಇದಕ್ಕೆಲ್ಲ ಇದೇ ಶಾಲೆಯ ಹಳೇ ವಿದ್ಯಾರ್ಥಿಯೂ ಆಗಿರುವ ಮುಖ್ಯಾಧ್ಯಾಪಕ ಎಸ್.ಡಿ.ಲಮಾಣಿ ಅವರ ಶ್ರಮ ಸಾಕಷ್ಟಿದೆ ಎನ್ನುತ್ತಾರೆ ಗ್ರಾಮಸ್ಥರು.
ಕೆಲ ಮಕ್ಕಳಿಗೆ ಶಾಲೆ 2 ಕಿ.ಮೀ.ಗಿಂತ ದೂರವಾಗುತ್ತಿತ್ತು. ಇದರಿಂದ ಬಡ ಕುಟುಂಬಗಳ ಮಕ್ಕಳು ಸರಿಯಾಗಿ ಶಾಲೆಗೆ ಬರುತ್ತಿರಲಿಲ್ಲ. ಅದಕ್ಕಾಗಿ ಬಸ್ ಖರೀದಿಸಲಾಗಿದೆ. ವಾಹನ ವ್ಯವಸ್ಥೆಗಿಂತ ಗುಣಮಟ್ಟದ ಶಿಕ್ಷಣ ನಮ್ಮ ಮೂಲ ಉದ್ದೇಶ. ಈ ನಿಟ್ಟಿನಲ್ಲಿ ಎಲ್ಲ ರೀತಿಯಲ್ಲೂ ಶ್ರಮಿಸಲಾಗುತ್ತಿದೆ.
-ಎಸ್.ಡಿ.ಲಮಾಣಿ, ಮೂಸೂರು ಶಾಲೆ ಮುಖ್ಯ ಶಿಕ್ಷಕರು