ತಮ್ಮ ಸುತ್ತಮುತ್ತಲ ವಾರ್ಡ್‌ಗಳಲ್ಲಿಯೇ ಪಾಠ| ಮಕ್ಕಳು ಅಡ್ಡಹಾದಿ ಹಿಡಿಯದಿರಲಿ ಎಂದು ಶಿಕ್ಷಕರ ಈ ಹಾದಿ| ಕೊಪ್ಪಳ ತಾಲೂಕಿನ ಗೋಶಲದೊಡ್ಡಿ, ಕಿನ್ನಾಳ, ಬೆಟಗೇರಿ ಹಾಗೂ ಕುಷ್ಟಗಿ, ಯಲಬುರ್ಗಾ, ಗಂಗಾವತಿ ತಾಲೂಕಿನಲ್ಲಿಯೂ ಈ ರೀತಿಯಾಗಿ ಪಾಠ ಮಾಡುತ್ತಿರುವುದು ಕಂಡು ಬರುತ್ತಿದೆ|
ಕೊಪ್ಪಳ(ಜು.24): ಕೊರೋನಾ ಅಟ್ಟಹಾಸದಿಂದ ಶಾಲೆಗಳು ಇನ್ನೂ ತೆರೆಯದೆ ಇರುವುದರಿಂದ ವಿದ್ಯಾರ್ಥಿಗಳು ಅತಂತ್ರವಾಗಿದ್ದಾರೆ. ಅವರು ಅಡ್ಡ ಹಾದಿ ಹಿಡಿಯುವ ಸಾಧ್ಯತೆ ಇರುತ್ತದೆ. ಅದನ್ನು ತಡೆಗಟ್ಟಲು ಪ್ರಾಥಮಿಕ ಶಾಲೆಯ ಶಿಕ್ಷಕರು ವಠಾರ ಶಾಲೆಯನ್ನು ಪ್ರಾರಂಭಿಸಿದ್ದಾರೆ. ತಾವು ವಾಸ ಇರುವಲ್ಲಿಯೇ ಸುತ್ತಮುತ್ತಲ ಮಕ್ಕಳನ್ನು ಸೇರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಪಾಠ ಮಾಡುತ್ತಿದ್ದಾರೆ.
ಈ ರೀತಿ ಸರ್ಕಾರ ಆದೇಶ ಮಾಡಿಲ್ಲ. ಆದರೆ, ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೌಖಿಕವಾಗಿ ನೀಡಿರುವ ಸೂಚನೆಯನ್ನೇ ಅನೇಕ ಶಿಕ್ಷಕರು ಕಟ್ಟುನಿಟ್ಟಾಗಿ ಪಾಲನೆ ಮಾಡುತ್ತಿದ್ದಾರೆ. ಕೆಲವರು ಸ್ವಯಂ ಪ್ರೇರಿತವಾಗಿಯೇ ಈಗಾಗಲೇ ಜಿಲ್ಲಾದ್ಯಂತ ಅಲ್ಲಲ್ಲಿ ವಠಾರ ಶಾಲೆಯನ್ನು ಪ್ರಾರಂಭಿಸಿದ್ದಾರೆ.
ಗಂಗಾವತಿ: ಭತ್ತ ನಾಟಿಯ ವೇಳೆ ಸಾಮಾಜಿಕ ಅಂತರ ಕಾಪಾಡಿದ ಮಹಿಳೆಯರು..!
ಏನಿದು ವಠಾರ ಶಾಲೆ?
ತಾವೂ ವಾಸಿಸುವ ಸ್ಥಳದ ಸುತ್ತಮುತ್ತಲಿನ ಮಕ್ಕಳನ್ನು ಗುರುತಿಸಿ ಅವರನ್ನು ಒಂದೆಡೆ ಸೇರಿಸಿ, ಸಾಮಾಜಿಕ ಅಂತರ ಕಾಪಾಡಿಕೊಂಡು ಅವರ ತರಗತಿಗೆ ಅನುಗುಣವಾಗಿ ಪಾಠ ಮಾಡಲಾಗುತ್ತದೆ. ಗೋಶಲದೊಡ್ಡಿ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕ ಶರಣಪ್ಪ ಎಚ್. ಅವರು ವಾಸಿಸುತ್ತಿರುವ ಇರಕಲ್‌ಗಡ ಗ್ರಾಮದಲ್ಲಿಯೇ ಪಾಠ ಮಾಡುತ್ತಿದ್ದಾರೆ. ಸುಮಾರು 15 ವಿದ್ಯಾರ್ಥಿಗಳು ನಿತ್ಯವೂ ಇವರ ಪಾಠಕ್ಕೆ ಬರುತ್ತಾರೆ.
ಶಿಕ್ಷಣ ಇಲಾಖೆ ನೀಡಿರುವ ಆನ್‌ಲೈನ್ ತರಗತಿಗಳು ಸೇರಿದಂತೆ ನಾನಾ ಕಾರ್ಯಗಳ ಹೊರತಾಗಿಯೂ ಈ ರೀತಿ ಪಾಠ ಮಾಡುತ್ತಿರುವ ಅನೇಕ ಶಿಕ್ಷಕರು ಇದ್ದಾರೆ. ಕೊಪ್ಪಳ ತಾಲೂಕಿನ ಗೋಶಲದೊಡ್ಡಿ, ಕಿನ್ನಾಳ, ಬೆಟಗೇರಿ ಹಾಗೂ ಕುಷ್ಟಗಿ, ಯಲಬುರ್ಗಾ, ಗಂಗಾವತಿ ತಾಲೂಕಿನಲ್ಲಿಯೂ ಈ ರೀತಿಯಾಗಿ ಪಾಠ ಮಾಡುತ್ತಿರುವುದು ಕಂಡು ಬರುತ್ತಿದೆ.
ಯಾಕೇ ಈ ರೀತಿ
ಮನೆಯಲ್ಲಿ ಕುಳಿತು ಸುಮ್ಮನೇ ವೇತನ ಪಡೆಯುವುದು ಮುಜುಗರವಾಗುತ್ತಿದೆ. ಈಗಾಗಿ, ನಮ್ಮ ಸುತ್ತಮುತ್ತ ಇದ್ದ ಮಕ್ಕಳಿಗಾದರೂ ಪಾಠ ಮಾಡಿದರೆ ನಮಗೂ ನೆಮ್ಮದಿ ದೊರೆಯುತ್ತದೆ. ಅಲ್ಲದೆ ನಮ್ಮ ಕಣ್ಣೆದುರಿಗೆ ಮಕ್ಕಳು ಓದು, ಬರೆಹ ಬಿಟ್ಟು, ನಾನಾ ಚಟುವಟಿಕೆಯಲ್ಲಿ ತೊಡಗುವುದರಿಂದ ಮುಂದೆ ಆ ಮಕ್ಕಳು ಶಾಲೆಯಿಂದ ವಿಮುಖರಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ, ನಾವು ಇರುವ ಸ್ಥಳದಲ್ಲಿಯೇ ಸುತ್ತಮುತ್ತಲ ಮಕ್ಕಳಿಗೆ ಪಾಠ ಮಾಡಿದರೆ ಅನುಕೂಲವಾಗುತ್ತದೆ. ವಿದ್ಯಾರ್ಥಿಗಳು ತಾವೂ ಇರುವ ಸ್ಥಳದಲ್ಲಿಯೇ ಪಾಠ ಆಲಿಸುವುದರಿಂದ ಸಮಸ್ಯೆಯಾಗುವುದಿಲ್ಲ ಎನ್ನುತ್ತಾರೆ ಶಿಕ್ಷಕರು.
ಅನೇಕ ಶಾಲೆಯ ಶಿಕ್ಷಕರು ಈ ರೀತಿ ವಠಾರ ಪಾಠವನ್ನು ಪ್ರಾರಂಭಿಸಿದ್ದಾರೆ. ವಿದ್ಯಾರ್ಥಿಗಳು ಆಗಮಿಸುತ್ತಿದ್ದು, ಸಾಮಾಜಿಕ ಅಂತರ ಕಾಯ್ದುಕೊಂಡು ಪಾಠ ಮಾಡುತ್ತಿದ್ದಾರೆ ಎಂದು ಸಮೂಹ ಸಂಪನ್ಮೂಲ ವ್ಯಕ್ತಿ ಸುರೇಶ ಕಂಬಳಿ ಅವರು ತಿಳಿಸಿದ್ದಾರೆ.
ಕೊರೋನಾ ಇರುವುದರಿಂದ ಶಾಲೆಯನ್ನು ಪ್ರಾರಂಭಿಸಿಲ್ಲ. ಹೀಗಾಗಿ, ಸುತ್ತಮುತ್ತಲ ಇರುವ ವಿದ್ಯಾರ್ಥಿಗಳನ್ನೇ ಸಾಮಾಜಿಕ ಅಂತರ ಕಾಯ್ದುಕೊಂಡು ಪಾಠ ಮಾಡಲಾಗುತ್ತದೆ ಎಂದು ಶಿಕ್ಷಕ ಶರಣಪ್ಪ ಎಚ್ ಅವರು ತಿಳಿಸಿದ್ದಾರೆ.