HIV ಮಕ್ಕಳ ಪಾಲಿನ ‘ಅಮ್ಮ’ ತಬಸ್ಸುಮ್‌..! ಅನಾಥರಾದ ಕಂದಮ್ಮಗಳಿಗೆ ಈಕೆಯೇ ತಾಯಿ

By Kannadaprabha NewsFirst Published Feb 20, 2020, 12:47 PM IST
Highlights

ಎಚ್‌ಐವಿ/ ಏಡ್ಸ್‌ ಬಾಧಿತ ಮಕ್ಕಳನ್ನು ತಾಯಿಯಂತೆ ಸಲಹುವ ಮೂಲಕ ಮಾನವೀಯ ಸೇವೆ ಮಾಡುತ್ತಿರುವ ತಬಸ್ಸುಮ್‌ ಅವರು ಮಂಗಳೂರು ಪ್ರೆಸ್‌ ಕ್ಲಬ್‌ನ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಮಂಗಳೂರು(ಫೆ.20): ಎಚ್‌ಐವಿ/ ಏಡ್ಸ್‌ ಬಾಧಿತ ಮಕ್ಕಳನ್ನು ತಾಯಿಯಂತೆ ಸಲಹುವ ಮೂಲಕ ಮಾನವೀಯ ಸೇವೆ ಮಾಡುತ್ತಿರುವ ತಬಸ್ಸುಮ್‌ ಅವರು ಮಂಗಳೂರು ಪ್ರೆಸ್‌ ಕ್ಲಬ್‌ನ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಬಹುತೇಕ ಪ್ರಕರಣಗಳಲ್ಲಿ ತಂದೆ- ತಾಯಿಯನ್ನು ಕಳೆದುಕೊಂಡಿರುವ ಅನಾಥ ಮಕ್ಕಳನ್ನು ಸಲಹುತ್ತಿರುವವರು ತಬಸ್ಸುಮ್‌, ಅದಕ್ಕಾಗಿಯೇ ಸ್ನೇಹದೀಪ್‌ ಎನ್ನುವ ಸಂಸ್ಥೆಯನ್ನೇ ಹುಟ್ಟುಹಾಕಿದ್ದಾರೆ. ಇಲ್ಲಿ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳ, ಎಲ್ಲ ಜಾತಿ- ಧರ್ಮಗಳ 26 ಮಕ್ಕಳು ಇದ್ದಾರೆ. ಅವರಿಗೆ ಶಿಕ್ಷಣ, ಊಟ, ವಸತಿ, ಆರೋಗ್ಯದ ಸೇವೆಯನ್ನು ತನ್ನ ಮೂವರು ಸಿಬ್ಬಂದಿ ಜತೆ ತಬಸ್ಸುಮ್‌ ಒದಗಿಸುತ್ತಿದ್ದಾರೆ.

ಮಂಗಳೂರು- ಅಥಣಿ ನೂತನ ನಾನ್‌ ಎಸಿ ಸ್ಲೀಪರ್‌ ಸಾರಿಗೆ ಆರಂಭ

ತಬಸ್ಸುಮ್‌ ಅವರು ಅಂಗಡಿಯೊಂದನ್ನು ನಡೆಸುತ್ತಿದ್ದು, ಅದರಿಂದ ಬಂದ ಆದಾಯವನ್ನು ಸ್ನೇಹದೀಪ ಸಂಸ್ಥೆಗೆ ಖರ್ಚು ಮಾಡುತ್ತಿದ್ದಾರೆ. ಜತೆಗೆ ಸ್ಥಳೀಯ ಸಹೃದಯಿ ದಾನಿಗಳಿಂದ ಸಹಾಯ ಪಡೆದು ಸಂಸ್ಥೆ ನಡೆಸುತ್ತಿದ್ದಾರೆ.

"

ಕೊಣಾಜೆ ಸಮೀಪದ ಆರ್ಥಿಕವಾಗಿ ಹಿಂದುಳಿದ ತುಂಬು ಸದಸ್ಯರ ಕುಟುಂಬದ ಅಬ್ದುಲ್‌ ಸಮದ್‌ ಮತ್ತು ಖೈರುನ್ನಿಸಾ ದಂಪತಿ ಪುತ್ರಿ ತಬಸ್ಸುಮ್‌. ಶಾಲೆ ಕಾಲೇಜಿನ ಓದಿನಲ್ಲಿ ಮುಂಚೂಣಿಯಲ್ಲಿ ಮಾತ್ರವಲ್ಲ, ಎಲ್ಲ ಪರೀಕ್ಷೆಗಳಲ್ಲೂ ಪ್ರಥಮ ಸ್ಥಾನವನ್ನೇ ಪಡೆಯುತ್ತಿದ್ದರು. ಜೀವನದಲ್ಲಿ ದೊಡ್ಡ ಸಾಧನೆ ಮಾಡಬೇಕು ಎಂಬ ಕನಸುಗಳಿದ್ದರೂ, ಮನೆಯಿಂದ ಪೂರಕ ಸಹಕಾರ ಸಿಗುತ್ತಿರಲಿಲ್ಲ. ಪದವಿ ತರಗತಿ ಆರಂಭಿಸುವಾಗಲೇ ಮದುವೆ ಮಾಡಿಕೊಡಲಾಗಿತ್ತು. ಕೌಟುಂಬಿಕ ಜೀವನದ ನಡುವೆ, ಸಮಾಜಕ್ಕೆ ಏನಾದರೊಂದು ಮಾಡಬೇಕು ಎಂಬ ಅವರ ಹಠಸಾಧನೆಯಿಂದಲೇ ಇವತ್ತು ಎಚ್‌ಐವಿ/ ಏಡ್ಸ್‌ ಬಾಧಿತ ಹೆಣ್ಮಕ್ಕಳನ್ನು ಸಾಕಿ ಸಲಹುವ ಸ್ನೇಹದೀಪ್‌ ಸಂಸ್ಥೆ ಕಾರ್ಯಾಚರಿಸುವಂತಾಗಿದೆ. 2011ರಲ್ಲಿ ಅವರು ಸ್ನೇಹ ದೀಪ್‌ ಸಂಸ್ಥೆಯನ್ನು ಹುಟ್ಟು ಹಾಕಿದ್ದಾರೆ.

ಗೆಳತಿ ಸಾವಿನ ದುಃಖ ಪ್ರೇರಣೆ:

ತನ್ನ ಗೆಳತಿಯೊಬ್ಬಳು ಏಡ್ಸ್‌ಗೆ ತುತ್ತಾಗಿ ಸಾವನ್ನಪ್ಪಿ, ಅವರ ಮಕ್ಕಳು ಅನಾಥರಾಗಿದ್ದನ್ನು ಕಂಡು ಬಹಳ ಬೇಸರಗೊಂಡಿದ್ದ ತಬಸ್ಸುಮ್‌, ಅಂದೇ ಎಚ್‌ಐವಿ/ ಏಡ್ಸ್‌ ಪೀಡಿತ ಹೆಣ್ಣು ಮಕ್ಕಳ ಸಂಸ್ಥೆ ಸ್ಥಾಪಿಸುವ ಯೋಜನೆ ಹಾಕಿಕೊಂಡಿದ್ದರು. ಆರಂಭದಲ್ಲಿ ಎಚ್‌ಐವಿ/ ಏಡ್ಸ್‌ ಬಾಧಿತ ಮಕ್ಕಳ ಸೇವೆ ಮಾಡುವ ಸಂಸ್ಥೆಯನ್ನು ಸೇರಿದ್ದ ಅವರು, ಮುಂದೆ ತನ್ನಲ್ಲಿದ್ದ ಅಲ್ಪ ದುಡ್ಡಿನಲ್ಲೇ ಸ್ನೇಹದೀಪ್‌ ಸಂಸ್ಥೆಯನ್ನು ಹುಟ್ಟುಹಾಕಿದ್ದರು. ಮಂಗಳೂರಿನ ಬಿಜೈ ಬಳಿ ಕಾರ್ಯಾಚರಿಸುತ್ತಿರುವ ಈ ಸಂಸ್ಥೆಯಲ್ಲಿ ಎಚ್‌ಐವಿ/ ಏಡ್ಸ್‌ನಿಂದ ತಂದೆ- ತಾಯಿಗಳನ್ನು ಕಳೆದುಕೊಂಡಿರುವ ಒಂದು ವರ್ಷದಿಂದ 10-15 ವರ್ಷದ ಮಕ್ಕಳಿದ್ದಾರೆ. ಬೀದಿ ಪಾಲಾಗಲಿದ್ದ ಎಷ್ಟೋ ಮಕ್ಕಳಿಗೆ ಮಾತೃ ವಾತ್ಸಲ್ಯ ನೀಡಿ ಹೊಸ ಬದುಕು ಕಟ್ಟುವ ಕೆಲಸವನ್ನು ತಬಸ್ಸುಮ್‌ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡುತ್ತಿದ್ದಾರೆ.

19 ಮಕ್ಕಳು ಕೈಯಲ್ಲೇ ಪ್ರಾಣಬಿಟ್ಟವು:

ಇಲ್ಲಿರುವ ಒಂದೊಂದು ಮಗುವಿನ ಹಿಂದೆಯೂ ಕಣ್ಣೀರ ಕಥೆಗಳಿವೆ. ಕೆಲವು ಮಕ್ಕಳ ಜೀವನದ ಅಂತಿಮ ಕ್ಷಣದಲ್ಲಿ ಹತ್ತಿರವಿದ್ದುಕೊಂಡು ತನ್ನ ಸೇವೆ ಮಾಡುತ್ತಿದ್ದಾರೆ. 19 ಮಕ್ಕಳು ಅವರ ಕೈಯಲ್ಲೇ ಪ್ರಾಣ ಬಿಟ್ಟಿದ್ದು, ಅದನ್ನು ನೆನಪಿಸುವಾಗ ತಬಸ್ಸುಮ್‌ ದುಃಖ ತಡೆದುಕೊಳ್ಳದೇ ಕಣ್ಣೀರು ಸುರಿಸುತ್ತಾರೆ. ಕನಿಷ್ಠ ಪಕ್ಷ ಆ ಮಕ್ಕಳಿಗೆ ಪ್ರೀತಿ, ವಾತ್ಸಲ್ಯದಿಂದ ಜೀವ ಬಿಡುವ ವ್ಯವಸ್ಥೆ ಮಾಡಿದ ತೃಪ್ತಿ ತಬಸ್ಸುಮ್‌ ಅವರದ್ದು. ಅಲ್ಲದೆ, ಆಯಾ ಮಕ್ಕಳಿಗೆ ಅವರವರ ಧರ್ಮಕ್ಕನುಗುಣವಾಗಿ ಗೌರವಯುತ ಅಂತಿಮ ಸಂಸ್ಕಾರ ಮಾಡಿಸುವ ಜವಾಬ್ದಾರಿ ನಿರ್ವಹಿಸಿ ಕೃತಾರ್ಥರಾಗುತ್ತಿದ್ದಾರೆ.

ಫೆ.29ರಂದು ಪ್ರಶಸ್ತಿ ಪ್ರದಾನ

ಉರ್ವ ರಾಧಾಕೃಷ್ಣ ಮಂದಿರದ ಸಭಾಂಗಣದಲ್ಲಿ ಫೆಬ್ರವರಿ 29ರಂದು ನಡೆಯಲಿರುವ ಪ್ರೆಸ್‌ ಕ್ಲಬ್‌ ದಿನಾಚರಣೆಯಂದು ತಬಸ್ಸುಮ್‌ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರೊ.ಬಾಲಕೃಷ್ಣ ಗಟ್ಟಿ, ಡಾ.ವಸಂತ ಕುಮಾರ್‌ ಪೆರ್ಲ ಮತ್ತು ಡಾ.ನಾಗವೇಣಿ ಮಂಚಿ ನೇತೃತ್ವದ ಆಯ್ಕೆ ಸಮಿತಿಯು ಈ ಆಯ್ಕೆ ಮಾಡಿದೆ.

click me!