* ಸರ್ಕಾರ ಉತ್ತರ ಕನ್ನಡ ಜಿಲ್ಲೆಯ ನಿಸರ್ಗಕಕ್ಕೆ ಹೊಡೆತ ನೀಡುವುದಕ್ಕೆ ವಿರೋಧ
* ಜನಾಂದೋಲನದ ಮೂಲಕ ಇದನ್ನು ವಿರೋಧಿಸಬೇಕು ಎಂದು ನಿಶ್ಚಯಿಸಲಾಗಿದೆ
* ಪರಿಸರವಾದಿಗಳು ಹಾಗೂ ಜಿಲ್ಲೆಯ ಪ್ರಮುಖರಿಂದ ತೀವ್ರ ವಿರೋಧ
ವರದಿ: ಗಿರೀಶ್ ನಾಯ್ಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಕಾರವಾರ(ಜು.01): ಕರಾವಳಿ, ಬಯಲುಸೀಮೆ, ಮಲೆನಾಡು ಪ್ರದೇಶಗಳನ್ನು ಹೊಂದಿರುವ ಅತ್ಯುತ್ತಮ ಜಿಲ್ಲೆಯಂದ್ರೆ ಅದು ಉತ್ತರ ಕನ್ನಡ ಜಿಲ್ಲೆ. ಅಪರೂಪರ ಪ್ರಾಣಿ ಪಕ್ಷಿಗಳು, ಜಲಚರಗಳ ಸಂಗಮ ಇದಾಗಿದ್ದು, ಇಲ್ಲಿನ ಭೌಗೋಳಿಕೆ ವೈಶಿಷ್ಠ್ಯತೆ ಬೇರೆಲ್ಲೂ ಕಾಣ ಸಿಗುವುದಿಲ್ಲ.
undefined
ಇಂತಹ ಪ್ರಕೃತಿಯ ನಾಡಿಗೆ ನದಿ ತಿರುವು ಜೋಡಣೆ ಎಂಬ ಯೋಜನೆಯನ್ನು ತರಲು ಸರ್ಕಾರ ತಯಾರಿ ನಡೆಸಿದ್ದು, ಸ್ವಾಮೀಜಿಗಳು, ಪರಿಸರವಾದಿಗಳು ಹಾಗೂ ಜಿಲ್ಲೆಯ ಪ್ರಮುಖರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಎತ್ತಿನ ಹೊಳೆ ಯೋಜನೆಯಂತೆ ಇದು ಕೂಡಾ ಹಣ ಮಾಡೋ ಯೋಜನೆ ಎಂಬ ಆಕ್ರೋಶ ವ್ಯಕ್ತವಾಗುತ್ತಿದೆ.
ಭಟ್ಕಳ ಪುರಸಭೆ: ವಿವಾದಿತ ಉರ್ದು ನಾಮಫಲಕ ತೆರವು
ಹೌದು, ಪ್ರಕೃತಿ ಮಾತೆ ಹಸಿರನ್ನೇ ಹೊದ್ದು ಮಲಗಿರುವಂತೆ ಕಾಣುವ ಉತ್ತರಕನ್ನಡ ಜಿಲ್ಲೆಯ ಸೌಂದರ್ಯವನ್ನು ಸರಕಾರ ಇದೀಗ ಹಾಳುಗೆಡವಲು ಹೊರಟಿದೆ. ಜಿಲ್ಲೆಯಲ್ಲಿ ಸ್ಚಚ್ಛಂದವಾಗಿ ಹರಿದು ಸಾವಿರಾರು ಜನರನ್ನು ಪೋಷಿಸುವ ನದಿ ಹಾಗೂ ಹೊಳೆಯ ನೀರನ್ನು ಹೊರ ಜಿಲ್ಲೆಗೆ ತೆಗೆದುಕೊಂಡು ಹೋಗಲು ಈಗಾಗಲೇ ಸರ್ಕಾರ ಮಟ್ಟದಲ್ಲಿ ಡಿಪಿಆರ್ ಸಿದ್ಧಪಡಿಸಲಾಗಿದೆ. ಯಲ್ಲಾಪುರದ ಬೇಡ್ತಿ ನದಿ ಹಾಗೂ ಶಿರಸಿಯ ಪಟ್ಟಣದ ಹೊಳೆ ನೀರನ್ನು ವರದಾ ನದಿಗೆ ಜೋಡಿಸಿ ಅದನ್ನು ಪಂಪ್ ಮಾಡಿ ತುಂಗಭದ್ರಾ ನದಿಯ ಎಡದಂಡೆ ಕಾಲುವೆ ಪ್ರದೇಶಗಳಿಗೆ ನೀರು ಹರಿಸುವ ಯೋಜನೆ ಇದಾಗಿದೆ. ಆದರೆ, ಹಿಂದಿನ ಸರ್ಕಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ರೀತಿ ಎತ್ತಿನಹೊಳೆ ಯೋಜನೆ ಕೈಗೊಂಡಿತ್ತಾದರೂ ಹಲವು ವರ್ಷಗಳೇ ಕಳೆದರೂ ಒಂದು ಹನಿ ನೀರನ್ನೂ ನೀಡಲು ಕೂಡ ಸಾಧ್ಯವಾಗಿಲ್ಲ. ಇದೀಗ ಪುನಃ ಅದೇ ರೀತಿಯ ಯೋಜನೆ ತಂದಿರುವ ಪ್ರಸ್ತುತ ಸರ್ಕಾರ ಉತ್ತರ ಕನ್ನಡ ಜಿಲ್ಲೆಯ ನಿಸರ್ಗಕ್ಕೂ ಹೊಡೆತ ನೀಡುವುದಕ್ಕೆ ವಿರೋಧ ವ್ಯಕ್ತವಾಗಿದ್ದು, ಜನಾಂದೋಲನದ ಮೂಲಕ ಇದನ್ನು ವಿರೋಧಿಸಬೇಕು ಎಂದು ನಿಶ್ಚಯಿಸಲಾಗಿದೆ ಅಂತ ಸ್ವರ್ಣವಲ್ಲೀ ಮಠ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿ ತಿಳಿಸಿದ್ದಾರೆ.
ಅಂದಹಾಗೆ, ಈ ಹಿಂದೆ ನದಿ ಜೋಡಣೆಯ ಯೋಜನೆಗೆ ಸಂಬಂಧಿಸಿ ಸಮೀಕ್ಷೆ ನಡೆಸಲೂ ಸಹ ಜಿಲ್ಲೆಯ ಬೇಡ್ತಿ-ಅಘನಾಶಿನಿ ಸಂರಕ್ಷಣಾ ಸಮಿತಿಯಿಂದ ಅವಕಾಶ ನೀಡಿರಲಿಲ್ಲ. ಬೇಡ್ತಿಯಿಂದ ವರದಾ, ಬೇಡ್ತಿಯಿಂದ ಧರ್ಮಾ ಜಲಾಶಯಕ್ಕೆ ಸೇರಿಸುವ ಯೋಜನೆಯಿದ್ದು, ಈ ಯೋಜನೆಗೆ ಸಂಬಂಧಿಸಿ ಪೂರ್ಣ ಮಾಹಿತಿಯುಳ್ಳ ಡಿಪಿಆರ್ ( ವಿಸ್ತ್ರತ ಯೋಜನಾ ವರದಿ ) ತಯಾರಿಸಿಲ್ಲ. ಇದು ಸಂಪೂರ್ಣ ಸುಳ್ಳಿನಿಂದ ಕೂಡಿದ ಯೋಜನೆಯಾಗಿದ್ದು, ಇದರ ಅಗತ್ಯತೆ ಇಲ್ಲ ಎಂಬುದು ಸ್ಥಳೀಯರ ವಾದ. ಆದರೆ, ಜಿಲ್ಲೆಯ ಪ್ರಮುಖ ರಾಜಕೀಯ ಮುಖಂಡರ ಪ್ರಕಾರ, ಜಿಲ್ಲೆಯಲ್ಲಿ ಹರಿಯುವ ನದಿಗಳ ನೀರನ್ನು ಮೊದಲು ಜಿಲ್ಲೆ ಜನರಿಗೆ ಕುಡಿಯಲು, ಕೃಷಿ ಹಾಗೂ ಇತರ ಚಟುವಟಿಕೆಗಳಿಗೆ ಪೂರೈಸಬೇಕು. ಬೇರೆ ಜಿಲ್ಲೆಗಳಿಗೆ ಕುಡಿಯಲು ನೀರು ನೀಡುವುದಿಲ್ಲ ಎಂದು ನಾವೆಂದಿಗೂ ಹೇಳುವುದಿಲ್ಲ. ಆದರೆ, ಮೊದಲು ಜಿಲ್ಲೆಯ ಜನರ ಸಮಸ್ಯೆಗಳಿಗೆ ಪರಿಹಾರ ಒದಗಿಸಿ ಬಳಿಕ ಮಿಕ್ಕಿದ ನೀರನ್ನು ಉಳಿದ ಜಿಲ್ಲೆಗಳಿಗೆ ಕುಡಿಯಲು ನೀಡುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಅಂತ ಮಾಜಿ ಸಚಿವ ಆರ್. ವಿ. ದೇಶ್‌ಪಾಂಡೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ನದಿ ತಿರುವು ಜೋಡಣೆಯ ಯೋಜನೆ ಅನುಷ್ಠಾನಕ್ಕೆ ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಯಲ್ಲಾಪುರದ ಮಂಚಿಕೇರಿಯಲ್ಲಿ ಯೋಜನೆ ವಿರುದ್ಧ ಬೃಹತ್ ಸಮಾವೇಶ ನಡೆಸಿ ನಿರ್ಣಯ ಕೂಡಾ ಕೈಗೊಳ್ಳಲಾಗಿದೆ. ಅಲ್ಲದೇ, ಸಚಿವ ಶಿವರಾಮ ಹೆಬ್ಬಾರ್ ಮತ್ತು ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಪ್ರತಿನಿಧಿಸುವ ಕ್ಷೇತ್ರ ಕೂಡಾ ಇದಾಗಿರೋದ್ರಿಂದ ಯಾವ ಕಾರಣಕ್ಕೂ ಯೋಜನೆ ಅನುಷ್ಠಾನಗೊಳ್ಳದಂತೆ ಸರ್ಕಾರ ಮಟ್ಟದಲ್ಲಿ ಪ್ರಯತ್ನಿಸಬೇಕು ಎಂದು ಜನರ ಒತ್ತಾಯ.