ಆತ್ಮಹತ್ಯೆ ಪ್ರಕರಣ ಹೆಚ್ಚಳ; ಮಲೆನಾಡಿನಲ್ಲಿ ಕಳವಳ

By Kannadaprabha NewsFirst Published Sep 19, 2019, 11:13 AM IST
Highlights

ಮಲೆನಾಡು ಪ್ರದೇಶಗಳಲ್ಲಿ ಹೆಚ್ಚಿನ ಆತ್ಮಹತ್ಯೆ ಪ್ರಕರಣಗಳು ವರದಿಯಾಗುತ್ತಿದ್ದು ಇದು ಆತಂಕಕ್ಕೆ ಕಾರಣವಾಗಿದೆ. 

ಗೋಪಾಲ್‌ ಯಡಗೆರೆ

ಶಿವಮೊಗ್ಗ [ಸೆ.19]:  ಸುಸಂಸ್ಕೃತ ನಾಡು, ಪ್ರಜ್ಞಾವಂತರ ಜಿಲ್ಲೆ ಎಂದು ಹೇಳಲಾಗುವ ಶಿವಮೊಗ್ಗ ಜಿಲ್ಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಆತ್ಮಹತ್ಯೆ ಪ್ರಕರಣಗಳಲ್ಲಿ ಹೆಚ್ಚಳ ಕಂಡು ಬಂದಿದೆ.

ಆರೋಗ್ಯವಂತ ಸಮಾಜಕ್ಕೆ ಕಪ್ಪು ಚುಕ್ಕೆ ಎಂದೇ ಭಾವಿಸುವ ಹಾಗೂ ಇದನ್ನು ನಿಯಂತ್ರಿಸುವ ಸವಾಲನ್ನು ಎದುರಿಸುತ್ತಿರುವ ಹೊತ್ತಿನಲ್ಲಿಯೇ ಆತ್ಮಹತ್ಯೆಗೆ ಹೆಚ್ಚಿನ ಪ್ರಮಾಣದಲ್ಲಿ ಯುವ ಜನತೆ ಈಡಾಗುತ್ತಿರುವುದು ಆತಂಕಕಾರಿಯಾಗಿದೆ.

ಇದಕ್ಕೆ ನಿದರ್ಶನ ಎಂಬಂತೆ 2017ರಲ್ಲಿ ಜಿಲ್ಲೆಯಾದ್ಯಂತ ಒಟ್ಟು 492 ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದರೆ, 2018ರಲ್ಲಿ 504 ಹಾಗೂ ಪ್ರಸಕ್ತ ಸಾಲಿನ ಸೆ.9 ರ ತನಕ 294 ಪ್ರಕರಣ ದಾಖಲಾಗಿವೆ. ಪೊಲೀಸ್‌ ಇಲಾಖೆ ಮೂಲಗಳ ಪ್ರಕಾರ ಹೆಚ್ಚಿನ ಪ್ರಮಾಣದ ಆತ್ಮಹತ್ಯೆ ಪ್ರಕರಣಗಳು ವಿಷ ಸೇವನೆಯಿಂದ ಸಂಭವಿಸುತ್ತಿವೆ. ನೇಣು ಬಿಗಿದುಕೊಂಡು ಹಾಗೂ ನೀರಿಗೆ ಹಾರಿ ಸಾಯುತ್ತಿರುವುದು ಕೂಡ ಸಾಮಾನ್ಯವಾಗಿದೆ. ಆದರೆ ಜಿಲ್ಲೆಯಲ್ಲಿ ಮೈಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಕಡಿಮೆ ಇದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಸೆ.9ರಂದು ವಿಶ್ವ ಆತ್ಮಹತ್ಯಾ ತಡೆ ದಿನವನ್ನಾಗಿ ಆಚರಿಸಲಾಗಿದೆ. ಆತ್ಮಹತ್ಯೆ ತಡೆಯುವ ನಿಟ್ಟಿನಲ್ಲಿ ಒಟ್ಟಾಗಿ ಕೆಲಸ ಮಾಡುವುದು ಈ ಸಾಲಿನ ವಿಶ್ವ ಆತ್ಮಹತ್ಯೆ ತಡೆ ದಿನದ ಮುಖ್ಯ ಧ್ಯೇಯವಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳು ಜಿಲ್ಲೆಯಾದ್ಯಂತ ಆತ್ಮಹತ್ಯೆ ತಡೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿವೆ. ಅದರಲ್ಲೂ ವಿಶೇಷವಾಗಿ ಯುವ ಸಮುದಾಯವನ್ನು ಮುಖ್ಯವಾಗಿಟ್ಟುಕೊಂಡು ಕಾರ್ಯಕ್ರಮ ರೂಪಿಸುತ್ತಿವೆ.

ಕಾರಣವೇನು:  ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಆತ್ಮಹತ್ಯೆಗೆ ಕೌಟುಂಬಿಕ ಕಲಹ, ದೀರ್ಘಕಾಲದ ಅನಾರೋಗ್ಯ, ಆಸ್ತಿ ವಿವಾದ, ಪ್ರೇಮ ವೈಫಲ್ಯ, ಶಾಲಾ-ಕಾಲೇಜು ಪರೀಕ್ಷೆಯಲ್ಲಿ ಫೇಲಾಗುವುದು, ಇಲ್ಲವೇ ಕಡಿಮೆ ಅಂಕ ತೆಗೆದುಕೊಳ್ಳುವುದು ಕಂಡು ಬರುತ್ತದೆ. ಇದರ ಹೊರತಾಗಿ ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳದಿರುವುದು, ವಿಪರೀತ ಒತ್ತಡಕ್ಕೊಳಗಾಗುವುದು, ಸ್ಕಿಜೋಪ್ರೇನಿಯಾ, ಆರ್ಥಿಕ ಮುಗ್ಗಟ್ಟು, ವರದಕ್ಷಿಣೆ ಕಿರುಕುಳ, ಕೌಟುಂಬಿಕ ಕಿರುಕುಳ, ತೀವ್ರತರಹದ ಭಾವನೆಗೊಳಗಾಗುವುದು ಮೊದಲಾದ ಅಂಶಗಳೂ ಆತ್ಮಹತ್ಯೆಗೆ ಪ್ರಮುಖ ಕಾರಣವಾಗಿರುವುದು ಕಂಡು ಬಂದಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತರಾಜು ವಿವರಿಸುತ್ತಾರೆ.

ಭದ್ರಾವತಿಯ ಮನೋರೋಗ ತಜ್ಞ ಡಾ. ಹರೀಶ್‌ ದೇಲಂತಬೆಟ್ಟು ಅವರ ಪ್ರಕಾರ, ಹೆಚ್ಚುತ್ತಿರುವ ಮದ್ಯಸೇವನೆ ಹಾಗೂ ಇತರೆ ಚಟಗಳು, ಮಾನಸಿಕ ಕಾಯಿಲೆಗಳು, ಒಂಟಿತನ, ಆಪ್ತರನ್ನು ಕಳೆದುಕೊಂಡ ನಂತರದ ತೊಳಲಾಟವೂ ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳಲು ಮುಖ್ಯ ಕಾರಣ ಎನ್ನಲಾಗಿದೆ.

ರೈತ ಆತ್ಮಹತ್ಯೆ ಇಳಿಮುಖ:  ಸಂಸತದ ವಿಷಯ ಎಂದರೆ ಕೃಷಿ ಹಾಗೂ ತೋಟಗಾರಿಕೆ ಪ್ರಧಾನವಾದ ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಇಳಿಮುಖ ಕಂಡುಬಂದಿದೆ. ಇದಕ್ಕೆ ನಿದರ್ಶನ ಎಂಬಂತೆ ಕಳೆದ ಮೂರು ವರ್ಷದಲ್ಲಿ 99 ಜನ ರೈತರು ಆತ್ಮಹತ್ಯೆಗೀಡಾಗಿದ್ದಾರೆ. 2016-17ರಲ್ಲಿ 42 ಹಾಗೂ 2017-18ರಲ್ಲಿ 53 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರೆ, 2018-19ರಲ್ಲಿ ಕೇವಲ 4 ಜನ ರೈತರು ಆತ್ಮಹತ್ಯೆಗೀಡಾಗಿದ್ದಾರೆ. ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್‌ ಪ್ರಕಾರ, ರೈತರ ಆತ್ಮಹತ್ಯೆ ತಡೆ ನಿಟ್ಟಿನಲ್ಲಿ ಸಂಘಟನೆ ವತಿಯಿಂದ ಹೋಬಳಿ ಹಾಗೂ ತಾಲೂಕು ಮಟ್ಟದಲ್ಲಿ ಆರಂಭಿಸಲಾಗಿರುವ ಆಪ್ತ ಸಮಾಲೋಚನಾ ಘಟಕಗಳು ಸಹಕಾರಿಯಾಗಿವೆ. ಕೊಳವೆ ಬಾವಿಯ ವೈಫಲ್ಯ, ಬೆಳೆನಷ್ಟ, ಆರ್ಥಿಕ ಮುಗ್ಗಟ್ಟು ಮತ್ತಿತರ ಕಾರಣಗಳಿಗೆ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇಂತಹ ಸಂದರ್ಭದಲ್ಲಿ ಆಪ್ತ ಸಮಾಲೋಚನಾ ಘಟಕಗಳ ಸಕಾಲಿಕ ನೈತಿಕ ಬೆಂಬಲ ಮತ್ತು ಧೈರ್ಯದ ಮಾತುಗಳಿಂದ ರೈತರಲ್ಲಿ ಆತ್ಮಶಕ್ತಿ ಹೆಚ್ಚಿ ಆತ್ಮಹತ್ಯೆಯಂತಹ ನಿರ್ಧಾರದಿಂದ ಹೊರ ಬರುತ್ತಾರೆ.

ರೈತರ ಆತ್ಮಹತ್ಯೆಯನ್ನು ಸಂಪೂರ್ಣವಾಗಿ ತಡೆಗಟ್ಟಬೇಕಾದಲ್ಲಿ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು. ಆಗ ಅವರ ಜೀವನ ಮಟ್ಟಸುಧಾರಣೆಗೊಂಡು ಉತ್ತಮವಾಗಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ. ಒಟ್ಟಾರೆಯಾಗಿ ರೈತರ ಆತ್ಮಹತ್ಯೆ ಹೊರತಾಗಿ ಮುಂದುವರಿದಿರುವ ಯುವ ಸಮುದಾಯದ ಆತ್ಮಹತ್ಯೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸ್ವಯಂ ಸೇವಾ ಸಂಸ್ಥೆಗಳು ಇನ್ನಷ್ಟುಪರಿಣಾಮಕಾರಿಯಾಗಿ ಕೆಲಸ ನಿರ್ವನಿರ್ವಹಿಸಬೇಕಿದೆ.

ಆತ್ಮಹತ್ಯೆ ಯೋಚನೆ ವ್ಯಕ್ತಿಯ ಮನಸ್ಸು ಪರಿವರ್ತಿಸಿ

ಯಾವುದೇ ವ್ಯಕ್ತಿ ಆತ್ಮಹತ್ಯೆಯ ಯೋಚನೆ ಒಂದೇ ದಿನದಲ್ಲಿ ಮಾಡಿ ಕಾರ್ಯಗತಗೊಳಿಸುವುದಿಲ್ಲ. ಹಲವು ದಿನಗಳಿಂದ ಈ ತುಡಿತ ನಿಧಾನವಾಗಿ ಬಲಿಯತೊಡಗುತ್ತದೆ. ಇದನ್ನು ಆತ ತನಗೆ ಗೊತ್ತಿಲ್ಲದಂತೆ ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸುತ್ತಾ ಹೋಗುತ್ತಾನೆ. ಇದನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡ ಕುಟುಂಬದವರು ಆತನನ್ನು ಆ ಯೋಚನೆಯಿಂದ ಹೊರ ತಂದರೆ ಒಂದು ಜೀವ ಉಳಿಯುತ್ತದೆ ಎನ್ನುತ್ತಾರೆ ಮನಃಶಾಸ್ತ್ರಜ್ಞರು. ತಂದೆ- ತಾಯಿ, ಗುರು, ಹಿರಿಯರು, ಸ್ನೇಹಿತರು, ಬಂಧುಗಳ ಮಾರ್ಗದರ್ಶನ, ಆತ್ಮವಿಶ್ವಾಸ ಹೆಚ್ಚಿಸುವ ಮಾತುಗಳು ಯಾವುದೇ ವ್ಯಕ್ತಿ ಕಷ್ಟದಲ್ಲಿದ್ದಾಗ ಸಾಂತ್ವನ ನೀಡಿ ಧೈರ್ಯ ತುಂಬಬಲ್ಲವು.

ಯುವ ಜನತೆ ಆತ್ಮಹತ್ಯೆಯತ್ತ ಹೊರಳಲು ಚಿಕ್ಕಂದಿನಿಂದ ಅವರನ್ನು ಕವಚದಲ್ಲಿ ಬೆಳೆಸುತ್ತಿರುವುದು ಪ್ರಮುಖ ಕಾರಣವಾಗಿದೆ. ಅವರಿಗೆ ಯಾವುದೇ ಸನ್ನಿವೇಶವನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವೇ ಇಲ್ಲವಾಗಿದೆ. ನಿರಾಶೆಯನ್ನು ಎದುರಿಸುವ ತಾಕತ್ತೇ ಇಲ್ಲದಂತೆ ಬೆಳೆಸಲಾಗಿದೆ. ಹೀಗಾಗಿ ಚಿಕ್ಕ ಚಿಕ್ಕ ನಿರಾಶೆಗೂ ಜೀವನವನ್ನು ಕೊನೆಗಾಣಿಸುವ ಪ್ರಯತ್ನಕ್ಕೆ ಮುಂದಾಗುತ್ತಾರೆ. ಎಲ್ಲ ಸಮಸ್ಯೆಗೂ ಒಂದು ಪರಿಹಾರ ಇರುತ್ತದೆ ಎನ್ನುವುದನ್ನು ಅವರಿಗೆ ಕಲಿಸಬೇಕು

ಡಾ. ಹರೀಶ್‌ ದೇಲಂತಬೆಟ್ಟು, ಮನೋರೋಗ ತಜ್ಞ

click me!