ಅರ್ಧಕ್ಕರ್ಧ ಊರೇ ಗುಳೆ: ಇನ್ನೊಂದು ವಾರದಲ್ಲೇ ಇಡೀ ಗ್ರಾಮವೇ ಖಾಲಿ!

By Web DeskFirst Published Nov 24, 2018, 7:44 AM IST
Highlights

ಹುಣಸಿಹಾಳ ತಾಂಡಾದಲ್ಲಿ ಈಗಾಗಲೇ ಬಹುತೇಕರು ಗುಳೆ ಹೋಗಿದ್ದು, ಮತ್ತಷ್ಟುಮಂದಿ ಊರಿನಿಂದ ವಲಸೆ ಹೋಗುತ್ತಲೇ ಇದ್ದಾರೆ. ಹೀಗಾಗಿ ಇನ್ನೊಂದು ವಾರದಲ್ಲಿ ಇಡೀ ಊರೇ ಖಾಲಿಯಾಗುವುದರಲ್ಲಿ ಅನುಮಾನವೇ ಇಲ್ಲ. ಮುಂಗಾರು ಕೈಕೊಟ್ಟಿದೆ. ಹಿಂಗಾರು ಮುನಿಸಿಕೊಂಡಿದೆ. ಜಿಲ್ಲಾದ್ಯಂತ ಭೀಕರ ಬರ ಆವರಿಸಿದೆ. ಇದರಿಂದ ತತ್ತರಿಸಿರುವ ಕೃಷಿ ಕೂಲಿಕಾರರು ತುತ್ತಿನ ಚೀಲ ತುಂಬಿಕೊಳ್ಳಲು ಗುಳೆ ಹೊರಟಿದ್ದಾರೆ.

ಕೊಪ್ಪಳ[ನ.24]: ಬಹುತೇಕ ಮನೆಗಳು ಬಾಗಿಲು ಮುಚ್ಚಿವೆ. ತೆರೆದ ಮನೆಯಲ್ಲಿ ಮಕ್ಕಳು ಮತ್ತು ದನಕರು ನೋಡಿಕೊಳ್ಳಲು ವಯೋವೃದ್ಧರು ಮಾತ್ರ ಉಳಿದುಕೊಂಡಿದ್ದಾರೆ. ಗ್ರಾಮದ ಯಾವ ರಸ್ತೆಯಲ್ಲಿಯೂ ಕಳೆ ಇಲ್ಲ.

ಇದು ಯಲಬುರ್ಗಾ ತಾಲೂಕಿನ ಹುಣಸಿಹಾಳ ತಾಂಡಾದ ಸದ್ಯದ ಚಿತ್ರಣ. ಈಗಾಗಲೇ ಬಹುತೇಕರು ಗುಳೆ ಹೋಗಿದ್ದು, ಮತ್ತಷ್ಟುಮಂದಿ ಊರಿನಿಂದ ವಲಸೆ ಹೋಗುತ್ತಲೇ ಇದ್ದಾರೆ. ಹೀಗಾಗಿ ಇನ್ನೊಂದು ವಾರದಲ್ಲಿ ಇಡೀ ಊರೇ ಖಾಲಿಯಾಗುವುದರಲ್ಲಿ ಅನುಮಾನವೇ ಇಲ್ಲ. ಮುಂಗಾರು ಕೈಕೊಟ್ಟಿದೆ. ಹಿಂಗಾರು ಮುನಿಸಿಕೊಂಡಿದೆ. ಜಿಲ್ಲಾದ್ಯಂತ ಭೀಕರ ಬರ ಆವರಿಸಿದೆ. ಇದರಿಂದ ತತ್ತರಿಸಿರುವ ಕೃಷಿ ಕೂಲಿಕಾರರು ತುತ್ತಿನ ಚೀಲ ತುಂಬಿಕೊಳ್ಳಲು ಗುಳೆ ಹೊರಟಿದ್ದಾರೆ.

ಹುಣಸಿಹಾಳ ಗ್ರಾಮಕ್ಕೆ ಹೊಂದಿಕೊಂಡು ಎರಡು ತಾಂಡಾಗಳಿವೆ. ಈ ಎರಡನ್ನೂ ಹುಣಸಿಹಾಳ ತಾಂಡಾ ಎಂದೇ ಕರೆಯಲಾಗುತ್ತಿದ್ದು, ಎರಡು ಸಾವಿರ ಜನಸಂಖ್ಯೆ ಇದೆ. ಇದರಲ್ಲಿ ಅರ್ಧದಷ್ಟುಜನರು ಗುಳೆ ಹೋಗಿದ್ದರಿಂದ ಗ್ರಾಮ ಬಣಬಣ ಎನ್ನುತ್ತಿದೆ. ಗ್ರಾಮದ ಬೀದಿಯಲ್ಲಿ ಸುತ್ತಾಡಿದರೆ ಬಹುತೇಕ ಖಾಲಿ ಖಾಲಿ. ಅನೇಕರು ಬೀಗ ಜಡಿದುಕೊಂಡು ತುತ್ತಿನ ಚೀಲ ತುಂಬಿಕೊಳ್ಳಲು ಊರು ತೊರೆದಿದ್ದರೆ, ಇನ್ನು ಕೆಲವರು ಊರು ಬಿಟ್ಟು ಹೋಗಲು ಆಗದೆ ಸುತ್ತಮುತ್ತಲ ಗ್ರಾಮಗಳಿಗೆ ಹೋಗಿ, ಕೂಲಿ ಕೆಲಸ ಮಾಡಿ ರಾತ್ರಿ ಮನೆಗೆ ಬರುತ್ತಿದ್ದಾರೆ. ಹೀಗಾಗಿ, ಇಡೀ ಗ್ರಾಮದಲ್ಲಿ ಹಗಲು ವೇಳೆ ಸ್ಮಶಾನ ಮೌನ ಆವರಿಸುತ್ತಿದೆ. ಇದು, ಕೇವಲ ಇದೊಂದೇ ಗ್ರಾಮದ ಸ್ಥಿತಿಯಲ್ಲ. ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿಯೂ ಇಂಥ ಸ್ಥಿತಿ ಕಂಡುಬರುತ್ತಿದೆ.

ಮುಂಗಾರು ವಿಫಲ:

ಮುಂಗಾರು ಸಂಪೂರ್ಣ ವಿಫಲವಾಗಿದೆ. ಬಿತ್ತನೆ ಮಾಡಿದ 2,52,500 ಹೆಕ್ಟೇರ್‌ ಪೈಕಿ ಬಹುತೇಕ ಪ್ರದೇಶ ಹಾನಿಯಾಗಿದೆ ಎಂದು ಕೃಷಿ ಇಲಾಖೆಯೇ ವರದಿ ಸಲ್ಲಿಸಿದೆ. ಈಗ ಹಾನಿಯ ಲೆಕ್ಕಾಚಾರ ನಡೆದಿದೆ. ಇದಾದ ಆನಂತರ ಹಿಂಗಾರು ಮುನಿಸಿಕೊಂಡಿದ್ದರಿಂದ ರೈತ ಸಮುದಾಯ ತತ್ತರಿಸಿದೆ. 2,25,000 ಹೆಕ್ಟೇರ್‌ ಬಿತ್ತನೆಯ ಗುರಿ ಹೊಂದಿದ್ದರೂ ಕೇವಲ ಶೇ.10ರಷ್ಟುಬಿತ್ತನೆಯಾಗಿಲ್ಲ. ಹೀಗಾಗಿ ಕೃಷಿ ವಲಯದಲ್ಲಿ ಕೆಲಸವೇ ಇಲ್ಲ. ಕೃಷಿ ಕೂಲಿಕಾರ್ಮಿಕರು ಬದುಕು ಕಟ್ಟಿಕೊಳ್ಳಲು, ಮಂಗಳೂರು, ಗೋವಾ, ಬೆಂಗಳೂರು ಸೇರಿದಂತೆ ವಿವಿಧ ನಗರದ ಕಡೆಗೆ ಪ್ರಯಾಣಿಸುತ್ತಿದ್ದಾರೆ.

ಉದ್ಯೋಗ ಖಾತ್ರಿ ವಿಫಲ:

ಜಿಲ್ಲಾದ್ಯಂತ ಅಲ್ಲಲ್ಲಿ ಉದ್ಯೋಗ ಖಾತ್ರಿ ಕಾಮಗಾರಿಗಳನ್ನು ಪ್ರಾರಂಭಿಸಲಾಗಿದ್ದರೂ ಸರಿಯಾಗಿ ಕೂಲಿ ನೀಡದೆ ಇರುವುದರಿಂದ ಸಮಸ್ಯೆಯಾಗಿದೆ. ಹೀಗಾಗಿ, ಕೃಷಿ ಕೂಲಿಕಾರರು ಅಲ್ಲಿ ಹೋಗಿ ಕೆಲಸ ಮಾಡುವುದಕ್ಕೆ ಹಿಂದೇಟು ಹಾಕುತ್ತಿದ್ದಾರೆ. ಸರಿಯಾಗಿ ಕೆಲಸವನ್ನೂ ನೀಡುವುದಿಲ್ಲ ಮತ್ತು ನೀಡಿದ ಕೆಲಸಕ್ಕೆ ಕೂಲಿಯನ್ನೂ ಸರಿಯಾಗಿ ಕೊಡುವುದಿಲ್ಲ. ಕೂಲಿಗಾಗಿ ತಿಂಗಳುಗಟ್ಟಲೇ ಕಾಯಬೇಕು. ನಿತ್ಯವೂ ಸಂತೆ ಮಾಡಿ, ಜೀವನ ಮಾಡುವ ನಾವು ತಿಂಗಳು, ಆರು ತಿಂಗಳ ಕೂಲಿಗಾಗಿ ಕಾಯಬೇಕು ಎಂದರೆ ಹೇಗೆ ಸಾಧ್ಯ? ಹೀಗಾಗಿ, ಅನಿವಾರ್ಯವಾಗಿ ಗುಳೆ ಹೋಗುತ್ತೇವೆ ಎನ್ನುವುದು ಇಲ್ಲಿನ ಜನರ ಅಳಲು.

click me!