ಸೋಮವಾರಪೇಟೆ (ಜೂನ್ 20): ಸೇನಾ ಪಿತಾಮಹ ಜನಿಸಿದ, ಯೋಧರ ತವರೂರೆಂದೇ ಖ್ಯಾತಿವೆತ್ತ ಜಿಲ್ಲೆಯಲ್ಲಿ ಯೋಧರೊಬ್ಬರ ಕುಟುಂಬವನ್ನು ಸಾಮಾಜಿಕ ಬಹಿಷ್ಕಾರಕ್ಕೊಳಪಡಿಸಿದ ಅಮಾನವೀಯ ಘಟನೆ ತಾಲೂಕು ಕೇಂದ್ರದಿಂದ ಕೂಗಳತೆ ದೂರದಲ್ಲಿರುವ ಯಡೂರು ಗ್ರಾಮದಲ್ಲಿ ನಡೆದಿದೆ. ಸಮಸ್ಯೆ ಪರಿಹರಿಸುವಂತೆ ಕೂರ್ಗ್ ರೆಜಿಮೆಂಟ್‌ನ ಸೇನಾಧಿಕಾರಿಗಳು ಜಿಲ್ಲಾಡಳಿತ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ದೊರಕದ್ದರಿಂದ ಯೋಧನ ಪತ್ನಿ ಮತ್ತು ಕುಟುಂಬ ಆತಂಕಕ್ಕೊಳಗಾಗಿದೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಯಡೂರು ಗ್ರಾಮದಲ್ಲಿ ಗ್ರಾಮ ಸಮಿತಿಯಿಂದ ಬಹಿಷ್ಕಾರಕ್ಕೊಳಗಾದ ಪಂಜಾಬ್‌ನ ಕೂರ್ಗ್ ರೆಜಿಮಂಟ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧ ಸಂಜಯ್ ಕುಟುಂಬ ಅಕ್ಷರಶಃ ಪ್ರತ್ಯೇಕವಾಗಿದೆ. ಯಾವುದೇ ಸಭೆ, ಸಮಾರಂಭಗಳಿಗೆ ಅದರಲ್ಲೂ ಗ್ರಾಮದ ಧಾರ್ಮಿಕ ಕಾರ್ಯಕ್ರಮಗಳಿಗೂ ಪಾಲ್ಗೊಳ್ಳಲು ಸಾಧ್ಯವಾಗದೇ ಯೋಧ ಖಿನ್ನತೆಗೆ ಒಳಗಾಗಿದ್ದು, ಪತ್ನಿ ಕೂಡ ಸಂಜಯ್‌ನ ಆರೋಗ್ಯದ ಕುರಿತು ಆತಂಕಕ್ಕೊಳಗಾಗಿದ್ದರಲ್ಲದೇ, ಇಡೀ ಕುಟುಂಬವೇ ಕಣ್ಣಿರಲ್ಲಿ ಕೈತೊಳೆಯುವಂತಾಗಿದೆ.
AGNIPATH SCHEME; ಅಗ್ನಿವೀರರಿಗೆ ಜಾಬ್ ಆಫರ್ ನೀಡಿದ ಆನಂದ್ ಮಹೀಂದ್ರಾ
ಇದರಿಂದ ನೊಂದ ಯೋಧ ಲ್ಯಾನ್ಸ್ ಹವಾಲ್ದಾರ್ ಸಂಜಯ್ ನೀಡಿರುವ ದೂರಿನ ಮೇರೆಗೆ ಕೂರ್ಗ್ ರೆಜಿಮಂಟ್‌ನ ಅಧಿಕಾರಿ ಲೆ. ಕರ್ನಲ್ ಮಹೇಶ್ ಕುಮಾರ್ ಪಾಂಡೆ ಅವರು ಕೊಡಗು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸೈನಿಕ ಕಲ್ಯಾಣ ಮಂಡಳಿಗೆ ಪತ್ರ ಬರೆದು ಸಮಸ್ಯೆ ಬಗೆಹರಿಸಿಕೊಡುವಂತೆ ಮನವಿ ಮಾಡಿದೆ. ಹೀಗಿದ್ದರೂ ಜಿಲ್ಲಾಡಳಿತ ಇಂತಹ ಗಂಭೀರ ಪ್ರಕರಣವೊಂದನ್ನು ಪರಿಹರಿಸಲು ಮುಂದಾಗದೇ ಮೌನ ವಹಿಸಿರುವುದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ!.
ಏಕೆ ಬಹಿಷ್ಕಾರ?: ದೆಹಲಿ ಮೂಲದ ಹಣಕಾಸು ಸಂಸ್ಥೆ ಪಿಎಸಿಎಲ್ (ಪಲ್ಸ್ ಆಗ್ರೋ ಕಾರ್ಪೊರೇಷನ್ ಲಿಮಿಟೆಡ್) ಸಂಸ್ಥೆಯು ದೇಶಾದ್ಯಂತ ಗ್ರಾಹಕರಿಂದ ಹಣವನ್ನು ಸಂಗ್ರಹಿಸಿತ್ತು. ಈ ಸಂಸ್ಥೆಯಲ್ಲಿ ಹತ್ತು ವರ್ಷಗಳ ಹಿಂದೆ ಏಜೆಂಟ್ ಆಗಿ ಯೋಧನ ತಂದೆ ಹಾಗೂ ಈ ಹಿಂದೆ ಇದೇ ಗ್ರಾಮ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಲಿಂಗರಾಜು ಮತ್ತು ತಾಯಿ ಪಾರ್ವತಿ, ಗ್ರಾಮಸ್ಥರಿಂದ ಹಣ ಸಂಗ್ರಹಿಸಿ, ಆ ಹಣವನ್ನು ಮೈಸೂರಿನಲ್ಲಿದ್ದ ಸಂಸ್ಥೆಯ ಕಚೇರಿಗೆ ಪಾವತಿಸಿ ಅದರ ರಶೀದಿಯನ್ನು ಗ್ರಾಹಕರಿಗೆ ನೀಡಿದ್ದರು. ನಂತರ 2013ರಲ್ಲಿ ಪಿಎಸಿಎಲ್ ಸಂಸ್ಥೆ ಆರ್‌ಬಿಐ ನಿಯಾಮಾವಳಿಯನ್ನು ಉಲ್ಲಂಘಿಸಿ ಹಣ ಸಂಗ್ರಹಿಸಿರುವ ಅರೋಪದಡಿ ಸೆಕ್ಯುರಿಟಿ ಆ್ಯಂಡ್ ಎಕ್ಸ್‌ಚೇಂಚ್ ಬೋರ್ಡ್ ಆಫ್ ಇಂಡಿಯಾ(ಸೆಬಿ) ಪ್ರಕರಣ ದಾಖಲಿಸಿ ಸಂಸ್ಥೆಯ ಎಲ್ಲ ಹಣಕಾಸು ವ್ಯವಹಾರಗಳನ್ನು ಮುಟ್ಟುಗೋಲು ಹಾಕಿತ್ತು. ಸಿಬಿಐನಿಂದಲೂ ವಿಚಾರಣೆ ನಡೆದಿದೆ.
Agnipath Scheme; ಜೂನ್ 24 ರಂದು ನೇಮಕಾತಿಗೆ ಅಧಿಸೂಚನೆ , ಜುಲೈ 24 ರಂದು ಪರೀಕ್ಷೆ
ನಂತರ ಸಮಗ್ರ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯ 2022ರ ಫೆ.2 ರಂದು ನಿವೃತ್ತ ಮುಖ್ಯ ನ್ಯಾಯಮೂರ್ತಿ ಆರ್.ಎಂ.ಲೋಧಿ ಅವರ ನೇತೃತ್ವದ 8 ಸದಸ್ಯರ ಸಮಿತಿಯನ್ನು ರಚಿಸಿ ಪಿಎಸಿಎಲ್‌ಗೆ ಸೇರಿದ ಎಲ್ಲ ಆಸ್ತಿಗಳನ್ನು ಮಾರಾಟ ಮಾಡಿ ಅದರಿಂದ ಬರುವ ಹಣದಲ್ಲಿ ಹೂಡಿಕೆದಾರರಿಗೆ ಹಿಂತಿರುಗಿಸುವಂತೆ ಆದೇಶ ನೀಡಿದೆ. ನ್ಯಾ.ಲೋಧಿ ಸಮಿತಿ ಮಾ.27ರಂದು ಪ್ರಕಟಣೆ ಹೊರಡಿಸಿ ಹಣ ಹೂಡಿಕೆ ಮಾಡಿರುವವರ ದಾಖಲಾತಿಗಳನ್ನು ಪರಿಶೀಲಿಸಿದ್ದು, ಗ್ರಾಹಕರ ಮೊಬೈಲ್‌ಗಳಿಗೆ ಸಂದೇಶ ಬಂದ ಕೂಡಲೇ ಮೂಲ ಸರ್ಟಿಫಿಕೇಟ್‌ಗಳನ್ನು ಕಳುಹಿಸಿಕೊಡಲು ಗ್ರಾಹಕರಿಗೆ ಏಪ್ರಿಲ್ 1ರಿಂದ ಜೂನ್ 30ರ ವರೆಗೆ ಅವಕಾಶ ನೀಡಿದೆ.
ಸುಗ್ಗಿಗೂ ಬರದಂತೆ ಬಹಿಷ್ಕಾರ! : ಇಷ್ಟೆಲ್ಲಾ ವಿಚಾರಗಳು ನಡೆಯುತ್ತಿದ್ದರೂ ಯಡೂರು ಗ್ರಾಮದ 20 ಮಂದಿ ಗ್ರಾಹಕರು ತಮ್ಮ ಹಣ ಪಡೆಯಲು ಸಂಸ್ಥೆಗೆ ಒತ್ತಡ ಹಾಕದೆ, ಹಣ ಸಂಗ್ರಹಿಸಿದ ಲಿಂಗರಾಜು ದಂಪತಿಯ ಮೇಲೆ ಹಣ ನೀಡುವಂತೆ ಒತ್ತಾಯ ಮಾಡಿದ್ದಾರೆ. ಆದರೆ ಲಿಂಗರಾಜು ತಾವು ಸಂಗ್ರಹಿಸಿದ ಹಣವನ್ನು ಪಿಎಸಿಎಲ್ ಸಂಸ್ಥೆಗೆ ಕಟ್ಟಿದ್ದೇವೆ. ಅಲ್ಲದೇ ಅದಕ್ಕೆ ಸಂಬಂಧಿಸಿದ ರಶೀದಿಗಳನ್ನು ಸಂಬಂಧಿಸಿದ ಗ್ರಾಹಕರಿಗೆ ನೀಡಿದ್ದೇವೆ. ಹೀಗಾಗಿ ತಾವೂ ಹಣ ಪಾವತಿಸಲು ಸಾಧ್ಯವಿಲ್ಲ ಎಂದು ಸುಗ್ಗಿಗೆ ಸಂಬಂಧಿಸಿ ಗ್ರಾಮ ಸಮಿತಿ ಏ.10ರಂದು ಕರೆಯಲಾಗಿದ್ದ ಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಇದರಿಂದ ಕುಪಿತರಾದ ಗ್ರಾಮ ಸಮಿತಿ, ಏ.22ರಂದು ಗ್ರಾಮದಲ್ಲಿ ಆಯೋಜಿಸಿದ್ದ ಸುಗ್ಗಿ ಹಬ್ಬಕ್ಕೆ ಲಿಂಗರಾಜು ಅವರ ಕುಟುಂಬಕ್ಕೆ ಬಹಿಷ್ಕಾರ ಹಾಕಿದೆ. ಅದರಲ್ಲಿ ಇಡೀ ಕುಟುಂಬವನ್ನು ಯಾವುದೇ ಸಭೆ ಸಮಾರಂಭಗಳಿಗೆ ಆಹ್ವಾನಿಸುವಂತಿಲ್ಲ, ಲಿಂಗರಾಜು ಕುಟುಂಬವೂ ಕೂಡ ಯಾವುದೇ ಸಮಾರಂಭಗಳಿಗೆ ಹೋಗುವಂತಿಲ್ಲ, ಅವರ ತೋಟಕ್ಕೆ ಯಾವುದೇ ಕಾರ್ಮಿಕರೂ ಕೂಡ ಹೋಗುವಂತಿಲ್ಲ, ಅನಾರೋಗ್ಯವಾದರೂ ಕೂಡ ಯಾರೂ ಸ್ಪಂದಿಸಬಾರದೆಂಬ ಹಲವು ನಿಯಮಗಳನ್ನು ಹೇರಿದ್ದಾರೆ.
ಗ್ರಾ.ಪಂ. ಸದಸ್ಯೆಗೂ ಬಹಿಷ್ಕಾರ!: ಲಿಂಗರಾಜು ಅವರ ತೋಟದಲ್ಲಿ ಕೆಲಸ ಮಾಡುತ್ತಿರುವ ಗ್ರಾ.ಪಂ. ಸದಸ್ಯೆ ಲಲಿತಾ ಅವರಿಗೂ ನಿರ್ಬಂಧ ಹೇರಲಾಗಿದೆ. ಲಿಂಗರಾಜು ಬಳಿ ತಾವು ಸಾಲ ಮಾಡಿದ್ದೂ, ಸಾಲ ತೀರಿಸಲು ಅನಿವಾರ್ಯವಾಗಿ ಅವರ ಮನೆಗೆ ಕೆಲಸಕ್ಕೆ ಹೋಗಲೇಬೇಕಾದ ಅನಿವಾರ್ಯತೆ ಇದೆ. ಆದರೆ ಇದೀಗ ಅಲ್ಲೂ ಹೋಗುವ ಆಗಿಲ್ಲ, ಬೇರೆಯವರೂ ಕೆಲಸ ಕೊಡುವುದಿಲ್ಲ, ನಮ್ಮ ಕುಟುಂಬ ಬದುಕು ಸಾಗಿಸುವದೂ ಹೇಗೆ ಎಂದು ಲಲಿತಾ ಮತ್ತು ಆಕೆಯ ಪತಿ ರಾಮಣ್ಣ ಬೇಸರ ವ್ಯಕ್ತಪಡಿಸಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಂದು ವೇಳೆ ಲಿಂಗರಾಜು ಕುಟುಂಬ ಮೋಸ ಮಾಡಿದ್ದಾರೆ ಎಂದಾದಲ್ಲಿ, ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಬಹುದು. ಅಥವಾ ನ್ಯಾಯಾಲಯದ ಮೋರೆ ಹೋಗಬಹುದು. ಅದನ್ನು ಬಿಟ್ಟು ಏಕಾಏಕಿ ಗ್ರಾಮದಿಂದ ಬಹಿಷ್ಕಾರ ಹಾಕಲು ಸಾಧ್ಯವಿಲ್ಲ. ಗ್ರಾಮದಲ್ಲಿ ಸನ್ನಡತೆಯಿಂದ ಉತ್ತಮ ಸೇವಾಮನೋಭಾದಿಂದ, ತಾವು ಅಧ್ಯಕ್ಷರಾಗಿ ಕೆಲಸ ಮಾಡಿದ ಅದೇ ಗ್ರಾಮ ಸಮಿತಿಯಿಂದ ಬಹಿಷ್ಕಾರಕ್ಕೊಳಗಾಗಿರುವುದು ಬೇಸರ ತಂದಿದೆ ಎಂದು ಲಿಂಗರಾಜು ಕಣ್ಣೀರು ಹಾಕುತ್ತಾರೆ.