ಉಡುಪಿ ಕೃಷ್ಣ ಮಠದಲ್ಲಿ ಸರಳ ಸಾಂಪ್ರದಾಯಿಕ ಕೃಷ್ಣಾಷ್ಟಮಿ

By Kannadaprabha News  |  First Published Aug 30, 2021, 7:20 AM IST

*  ಉಂಡೆ - ಚಕ್ಕುಲಿ, ಗುರ್ಜಿ-ಮಡಿಕೆ ಸಿದ್ಧ
*  ಹೂವಿನ ವ್ಯಾಪಾರಿಗಳಿಗೆ ನಿರಾಸೆ
*  ಮಂಗಳವಾರ ಮಧ್ಯಾಹ್ನ ರಥಬೀದಿಯಲ್ಲಿ ಸಂಪ್ರದಾಯದಂತೆ ರಥೋತ್ಸವ 


ಉಡುಪಿ(ಆ.30):  ಕೋವಿಡ್‌ ನಿರ್ಬಂಧದಿಂದಾಗಿ ಉಡುಪಿ ಕೃಷ್ಣಮಠದಲ್ಲಿ ಸೋಮವಾರ ಮತ್ತು ಮಂಗಳವಾರ ಯು ಸಾರ್ವಜನಿಕರ ಭಾಗವಹಿಸುವಿಕೆ ಇಲ್ಲದೆ ಸರಳವಾಗಿ, ಆದರೆ ಮಠದ ಧಾರ್ಮಿಕ ಸಂಪ್ರದಾಯದಂತೆ ನಡೆಯಲಿದೆ.

ಸೋಮವಾರ ಬೆಳಗ್ಗೆ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ಕೃಷ್ಣನಿಗೆ ಲಕ್ಷತುಳಸಿ ಅರ್ಚನೆ ನಡೆಸಲಿದ್ದಾರೆ. ಮಧ್ಯರಾತ್ರಿ 12.30ಕ್ಕೆ ಪರ್ಯಾಯ ಮಠಾಧೀಶ ಶ್ರೀ ಈಶಪ್ರಿಯ ತೀರ್ಥರು ಗರ್ಭಗುಡಿಯಲ್ಲಿ ಕೃಷ್ಣನಿಗೆ ಅಘ್ರ್ಯಪ್ರದಾನ ಮಾಡಲಿದ್ದಾರೆ. ನಂತರ ಭಕ್ತರು ಕನಕನ ಕಿಂಡಿಯ ಮುಂಭಾಗದಲ್ಲಿ ಮತ್ತು ವಸಂತ ಮಂಟಪದಲ್ಲಿ ಅಘ್ರ್ಯಪ್ರದಾನ ಮಾಡುವುದಕ್ಕೆ ವ್ಯವಸ್ಥೆ ಮಾಡಲಾಗಿದೆ.

Latest Videos

undefined

ವಿಟ್ಲಪಿಂಡಿ ಉತ್ಸವ: 

ಮಂಗಳವಾರ ಮಧ್ಯಾಹ್ನ ರಥಬೀದಿಯಲ್ಲಿ ಸಂಪ್ರದಾಯದಂತೆ ರಥೋತ್ಸವ - ವಿಟ್ಲಪಿಂಡಿ ಉತ್ಸವ ನಡೆಯಲಿದೆ. ಆದರೆ ಈ ಉತ್ಸವಗಳಿಗೆ ಸಾರ್ವಜನಿಕರಿಗೆ ಪ್ರವೇಶ ಇಲ್ಲ. ಸೋಮವಾರ ಬೆಳಗ್ಗೆ 8.30ರಿಂದ ಸಂಜೆ 6ರವರೆಗೆ ಸಾರ್ವಜನಿಕರಿಗೆ ಕೃಷ್ಣನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಂಗಳವಾರ ಬೆಳಗ್ಗೆ 7.30ರಿಂದ 1 ಗಂಟೆಯ ವರೆಗೆ, ನಂತರ ರಥೋತ್ಸವ ಮುಗಿದ ಮೇಲೆ ಸಂಜೆ 5 ಗಂಟೆವರೆಗೆ ಕೃಷ್ಣದರ್ಶನಕ್ಕೆ ಅವಕಾಶ ಇದೆ. ಭಕ್ತರು ಕಡ್ಡಾಯವಾಗಿ ಮಾಸ್ಕ್‌ ಧರಿಸಿ, ವೈಯುಕ್ತಿಕ ಅಂತರ ಪಾಲಿಸಿ ದರ್ಶನ ಪಡೆಯಬೇಕು ಎಂದು ಕೋರಲಾಗಿದೆ.

ಕೃಷ್ಣಾಷ್ಟಮಿ: ಶ್ರೀ ಕೃಷ್ಣ, ಕೊಳಲಿನ ಕುರಿತು ಆಸಕ್ತಿಕರ ವಿಷಯಗಳು

ಕೊರೋನಾ ನಿಯಮಾವಳಿಯ ಪ್ರಕಾರ ಹುಲಿ ವೇಷಗಳಾಗಲಿ, ಇತರ ವೇಷಗಳ ಪ್ರದರ್ಶನ, ತಿರುಗಾಟಕ್ಕೆ ಜಿಲ್ಲಾಡಳಿತ ಅವಕಾಶ ನೀಡಿಲ್ಲ. ಅನಾರೋಗ್ಯ ಪೀಡಿತ 6 ಮಕ್ಕಳ ಚಿಕಿತ್ಸೆಯ ವೆಚ್ಚಕ್ಕಾಗಿ ಸಮಾಜಸೇವಕ ಕಟಪಾಡಿ ರವಿ ಅವರಿಗೆ ಮಾತ್ರ ವೇಷ ಹಾಕುವುದಕ್ಕೆ ಜಿಲ್ಲಾಡಳಿತ ಷರತ್ತುಗಳನ್ನು ವಿಧಿಸಿ ವಿಶೇಷ ಅನುಮತಿ ನೀಡಿದೆ. ಜನ ಸೇರುವುದನ್ನು ತಡೆಯುವುದಕ್ಕಾಗಿ, ಈ ವರ್ಷ ಮುದ್ದುಕೃಷ್ಣ ಸ್ಪರ್ಧೆ ಮತ್ತು ಇತರ ಸಾಂಸ್ಕೃತಿಕ - ದೇಸಿ ಕ್ರೀಡಾ ಸ್ಪರ್ಧೆಗಳನ್ನೂ ರದ್ದುಪಡಿಸಲಾಗಿದೆ. ಅನ್ನ ಸಂತರ್ಪಣೆಗೂ ಅವಕಾಶ ಇಲ್ಲವಾಗಿದೆ.

ಉಂಡೆ - ಚಕ್ಕುಲಿ, ಗುರ್ಜಿ-ಮಡಿಕೆ ಸಿದ್ಧ

ಕೃಷ್ಣನ ನೈವೇದ್ಯಕ್ಕೆ, ನಂತರ ಮಠಕ್ಕೆ ಆಗಮಿಸುವ ಭಕ್ತರಿಗೆ ಪ್ರಸಾದದ ರೂಪದಲ್ಲಿ ವಿತರಿಸುವುದಕ್ಕಾಗಿ ಪ್ರತಿವರ್ಷದಂತೆ, 40 ಸಾವಿರ ಉಂಡೆ ಮತ್ತು 40 ಸಾವಿರ ಚಕ್ಕುಲಿ ಇತ್ಯಾದಿಗಳ ತಯಾರಿ ಕೃಷ್ಣಮಠದಲ್ಲಿ ನಡೆದಿದೆ. ರಥಬೀದಿಯಲ್ಲಿ ಜನರ ಭಾಗಿತ್ವ ಇಲ್ಲದಿದ್ದರೂ, ಸಂಪ್ರದಾಯದಂತೆ ನಡೆಯುವ ಮೊಸರಕುಡಿಕೆ ಉತ್ಸವಕ್ಕಾಗಿ ಮರದ ಗುರ್ಜಿ ಗೋಪುರಗಳನ್ನು ನಿರ್ಮಿಸಲಾಗಿದೆ. ಒಡೆಯುವ ಹೊಸ ಕುಡಿಕೆಗಳಿಗೆ ಬಣ್ಣ ಬಳಿದು ಸಿದ್ದಪಡಿಸಲಾಗಿದೆ.

ಹೂವಿನ ವ್ಯಾಪಾರಿಗಳಿಗೆ ನಿರಾಸೆ

ಉಡುಪಿಯಲ್ಲಿ ಕೃಷ್ಣ ಜನ್ಮಾಷ್ಟಮಿ ಎಂದರೆ ರಥಬೀದಿ ಮತ್ತು ನರಗದ ರಸ್ತೆಯಲ್ಲಿ ಹೂವಿನ ವ್ಯಾಪಾರ ಜೋರಿರುತ್ತದೆ. ದೂರ ಶಿವಮೊಗ್ಗ, ಮಂಡ್ಯ ಕಡೆಯಿಂದ ನೂರಾರು ಮಂದಿ ವ್ಯಾಪಾರಿಗಳು ಚೆಂಡು, ಸೇವಂತಿಕೆ, ಕಾಕಡ ಇತ್ಯಾದಿ ಲಾರಿಗಟ್ಟಲೇ ಹೂವಿನೊಂದಿಗೆ ಬಂದಿಳಿಯುತ್ತಾರೆ. ಆದರೆ ಕಳೆದ ವರ್ಷದಂತೆ ಈ ಬಾರಿಯೂ ಕೊರೋನಾದ ಕಾರಣಕ್ಕೆ ಕೃಷ್ಣ ಜನ್ಮಾಷ್ಟಮಿಯೇ ಕಳೆ ಕಳೆದುಕೊಂಡಿದೆ. ಜನರಲ್ಲಿಯೂ ಉತ್ಸಾಹ ಇಲ್ಲ. ಆದ್ದರಿಂದ ಹೂವು ಕೊಳ್ಳುವವರಿಲ್ಲದೇ ವ್ಯಾಪಾರಿಗಳಿಗೆ ನಿರಾಸೆಯಾಗಿದೆ. 
 

click me!