ಮುಖ್ಯಮಂತ್ರಿ ತವರು ಕ್ಷೇತ್ರ ಶಿವಮೊಗ್ಗದಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಸ್ಥಾನ ಅಲುಗಾಡಲಾರಂಭಿಸಿದೆ. ಆದರೆ ಪರಿಸ್ಥಿತಿಯ ಲಾಭ ಪಡೆಯಲು ಬಿಜೆಪಿ ಹಿಂದೆ-ಮುಂದೆ ನೋಡಲಾರಂಭಿಸಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
- ಗೋಪಾಲ್ ಯಡಗೆರೆ, ಕನ್ನಡಪ್ರಭ
ಶಿವಮೊಗ್ಗ(ಮೇ.14): ಮುಖ್ಯಮಂತ್ರಿಗಳ ತವರು ಕ್ಷೇತ್ರದಲ್ಲಿ ಜಿಪಂ ಅಧಿಕಾರವನ್ನು ಬಿಜೆಪಿ ಮಡಿಲಿಗೆ ಹಾಕಲು ವಿಪಕ್ಷಗಳು ಸಿದ್ಧತೆ ನಡೆಸಿದ್ದರೆ, ಸ್ವತಃ ಬಿಜೆಪಿಯೇ ಇದನ್ನು ನಿರಾಕರಿಸುತ್ತಿರುವ ಮಹತ್ವದ ಸಂಗತಿ ನಡೆಯುತ್ತಿದೆ. ಜಿಪಂ ನಲ್ಲಿ ಆಡಳಿತರೂಢ ಪಕ್ಷದ ಸದಸ್ಯರೊಳಗಿನ ಅಸಮಾಧಾನದ ಬಿರುಗಾಳಿಯನ್ನು ದಾಳವಾಗಿ ಮಾಡಿಕೊಳ್ಳಲು ಬಿಜೆಪಿ ಹವಣಿಸುತ್ತಿದೆ.
ಜಿಪಂನಲ್ಲಿ ಹೆಚ್ಚು ಸ್ಥಾನ ಪಡೆದ ಬಿಜೆಪಿ ಮತ್ತು ಕಾಂಗ್ರೆಸ್ ಅಧಿಕಾರ ಪಡೆದಿಲ್ಲ. ಬದಲಾಗಿ ಜೆಡಿಎಸ್ ಅಧ್ಯಕ್ಷ ಸ್ಥಾನ ಪಡೆದಿದ್ದರೆ, ಏಕೈಕ ಪಕ್ಷೇತರ ಅಭ್ಯರ್ಥಿ ಉಪಾದ್ಯಕ್ಷ ಸ್ಥಾನ ಪಡೆದಿದ್ದಾರೆ. ಇದೇ ರೀತಿ ಕಳೆದ ನಾಲ್ಕು ವರ್ಷಗಳ ಕಾಲ ನಡೆದಿದ್ದು, ಕೊನೆಯ 10 ತಿಂಗಳು ಉಳಿದಿರುವಾಗ ಜಿಪಂನಲ್ಲೀಗ ರಾಜಕೀಯ ಬಿರುಗಾಳಿ ಬೀಸುತ್ತಿದೆ.
31 ಸದಸ್ಯರ ಜಿಪಂನಲ್ಲಿ ಬಿಜೆಪಿ 15, ಕಾಂಗ್ರೆಸ್ 8, ಜೆಡಿಎಸ್ 7 ಮತ್ತು ಪಕ್ಷೇತರ ಅಭ್ಯರ್ಥಿ ಒಬ್ಬರಿದ್ದಾರೆ. ಬಿಜೆಪಿಗೆ ಒಂದು ಸ್ಥಾನದ ಕೊರತೆಯಾಗಿ ಅಧಿಕಾರ ಕೈತಪ್ಪಿತು. ಆ ವೇಳೆಯಲ್ಲಿ ಪಕ್ಷೇತರ ಅಭ್ಯರ್ಥಿ ವೇದಾ ವಿಜಯಕುಮಾರ್ ಅವರನ್ನು ಸೆಳೆಯುವ ಎಲ್ಲ ಪ್ರಯತ್ನಗಳು ವಿಫಲವಾದ ನಂತರ ವಿಪಕ್ಷ ಸ್ಥಾನದಲ್ಲಿ ಕುಳಿತುಕೊಳ್ಳಲು ನಿರ್ಧರಿಸಿತು.
ಜೆಡಿಎಸ್ ಮುರಿದ ಒಳ ಒಪ್ಪಂದ:
ಬಿಜೆಪಿಗೆ ಅಧಿಕಾರ ಸಿಗಬಾರದು ಎಂಬ ಒಂದೇ ಕಾರಣಕ್ಕೆ ವಿಪಕ್ಷಗಳಲ್ಲಿ ಅತಿ ಹೆಚ್ಚು ಸ್ಥಾನ ಇದ್ದಾಗ್ಯೂ ಕಾಂಗ್ರೆಸ್ ಪಕ್ಷ ಜೆಡಿಎಸ್‌ಗೆ ಅಧ್ಯಕ್ಷ ಸ್ಥಾನ ಮತ್ತು ಪಕ್ಷೇತರ ಅಭ್ಯರ್ಥಿಗೆ ಉಪಾಧ್ಯಕ್ಷ ಸ್ಥಾನ ಬಿಟ್ಟುಕೊಟ್ಟಿತು. ಆದರೆ ಈ ಸಂದರ್ಭದಲ್ಲಿ ಎರಡನೇ ಅವಧಿಗೆ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ಗೆ ಮತ್ತು ಮೂರನೇ ಅವಧಿಗೆ ಪಕ್ಷೇತರ ಅಭ್ಯರ್ಥಿಗೆ ಬಿಟ್ಟುಕೊಡಬೇಕೆಂಬ ಮಾತುಕತೆ ರಾಜ್ಯ ಕಾಂಗ್ರೆಸ್ ಮುಖಂಡರ ಸಮ್ಮುಖದಲ್ಲಿಯೇ ನಡೆದಿತ್ತು. ಆದರೆ ಅಧಿಕಾರ ಪಡೆದ ಜೆಡಿಎಸ್ ಈ ಎಲ್ಲ ಮಾತನ್ನು ಮುರಿಯಿತು. ಆದಾಗ್ಯೂ ಒಂದು ಸ್ಥಾನ ಹೆಚ್ಚು ಕಡಿಮೆಯಾದರೂ ಬಿಜೆಪಿಗೆ ಅಧಿಕಾರ ಹೋಗುತ್ತದೆ ಎಂದು ಕಾಂಗ್ರೆಸ್ ತುಟಿಪಿಟಿಕ್ ಎನ್ನದೆ ಎಲ್ಲವನ್ನೂ ಸಹಿಸಿಕೊಂಡಿತು.
ವಿರೋಧದ ನಡುವೆಯೂ ಎಪಿಎಂಸಿ ಸುಗ್ರೀವಾಜ್ಞೆಗೆ ಸಂಪುಟ ಅಸ್ತು?
ಈ ನಡುವೆ ಜಿಪಂ ಅಧ್ಯಕ್ಷೆ ಜ್ಯೋತಿ ಎಸ್. ಕುಮಾರ್ ಅವರ ಪತಿ ಕುಮಾರ್ ಭದ್ರಾವತಿಯಲ್ಲಿ ಶಾಸಕ ಅಪ್ಪಾಜಿಗೌಡ ಜೊತೆ ಮುನಿಸಿ ಕೊಂಡಿದ್ದಾರೆ. ನಾಯಕರಾದ ಮಧು ಬಂಗಾರಪ್ಪ, ಆರ್. ಎಂ. ಮಂಜುನಾಥಗೌಡರ ಜೊತೆ ಮಾತ್ರವಲ್ಲ, ಜಿಪಂನ ಜೆಡಿಎಸ್ ಸದಸ್ಯರಿಗೂ ಅಪಥ್ಯ ಎನಿಸಿಕೊಂಡಿದ್ದಾರೆ. ಹೀಗಾಗಿ ಕೊನೆ ಗಳಿಗೆಯಲ್ಲಿ ಕಾಂಗ್ರೆಸ್, ಜೆಡಿಎಸ್‌ನ ಕೆಲ ನಾಯಕರು ಹಾಗೂ ಪಕ್ಷೇತರ ಅಭ್ಯರ್ಥಿ ವೇದಾ ವಿಜಯಕುಮಾರ್ ಪತಿ ವಿಜಯಕುಮಾರ್ ಜೊತೆ ಸೇರಿ ಹೊಸ ದಾಳ ಉರುಳಿಸಲು ನಿರ್ಧರಿಸಿದ್ದಾರೆ. ಇವರುಗಳು ಬಿಜೆಪಿ ನಾಯಕರುಗಳಲ್ಲಿ ಜಿಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಕೈಗೊಳ್ಳಲು ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಆದರೆ ಬಿಜೆಪಿ ಇದನ್ನು ಒಪ್ಪಿಕೊಂಡೂ ಇಲ್ಲ, ಅತ್ತ ತಿರಸ್ಕರಿಸಲೂ ಇಲ್ಲ.ಬದಲಾಗಿ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ.
ಲಾಭವಿಲ್ಲ ಎಂಬ ಲೆಕ್ಕಾಚಾರ:
ಜಿಪಂ ಅಧ್ಯಕ್ಷ ಸ್ಥಾನ ಉಳಿದಿರುವುದೇ 10 ತಿಂಗಳು. ಈಗಾಗಲೇ ಅನುದಾನ ಬಂದು ಖರ್ಚಾಗಿದೆ. ಹೊಸ ಅನುದಾನ ಬರುವ ಯಾವುದೇ ಸಾಧ್ಯತೆ ಇಲ್ಲ. ಕೊರೋನಾದಿಂದಾಗಿ ಆರ್ಥಿಕ ಬಿಕ್ಕಟ್ಟು ಎದುರಾಗಿದೆ. ಈ ಹೊತ್ತಿನಲ್ಲಿ ಅಧಿಕಾರ ಪಡೆಯವುದರಿಂದ ರಾಜಕೀಯವಾಗಿ ಯಾವುದೇ ಲಾಭವಿಲ್ಲ. ಹಣ ಮಾತ್ರ ಖರ್ಚಾಗುತ್ತದೆ ಎಂಬುದು ಆಕಾಂಕ್ಷಿಗಳ ಲೆಕ್ಕಾಚಾರ.
ಜೊತೆಗೆ ಇದೊಂದು ತಪ್ಪು ಸಂದೇಶ ಹೋಗಲು ಕಾರಣವಾಗುತ್ತದೆ ಎಂದು ನಾಯಕರು ಹೇಳಿದ್ದಾರೆ. ತಾನು ಬೆಂಬಲಿಸಬೇಕಾದರೆ ತನಗೆ ಅಧ್ಯಕ್ಷ ಸ್ಥಾನ ನೀಡಿ, ಬಿಜೆಪಿ ಉಪಾಧ್ಯಕ್ಷ ಸ್ಥಾನ ಇಟ್ಟುಕೊಳ್ಳಬೇಕು ಎಂಬುದು ಪಕ್ಷೇತರ ಅಭ್ಯರ್ಥಿಯ ಹಠ. ಉಪಾಧ್ಯಕ್ಷ ಸ್ಥಾನಕ್ಕಾಗಿ ಇಷ್ಟೊಂದು ಕಷ್ಟಪಡಬೇಕಾ ಎಂಬುದು ಬಿಜೆಪಿಯ ಲೆಕ್ಕಾಚಾರ.
ತಪ್ಪು ಸಂದೇಶ ರವಾನೆಯ ಭಯ:
ಇನ್ನೊಂದೆಡೆ ಪಕ್ಷೇತರ ಅಭ್ಯರ್ಥಿ ವೇದಾ ವಿಜಯಕುಮಾರ್ ಅವರ ಪತಿ ವಿಜಯಕುಮಾರ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಪ್ತರು. ಹೊಸ ಸಮೀಕರಣವೇನಾದರೂ ಆಗಿ, ಪಕ್ಷೇತರ ಅಭ್ಯರ್ಥಿ ಅಧ್ಯಕ್ಷ ಸ್ಥಾನ ಅಲಂಕರಿಸಿದರೆ, ಮುಖ್ಯಮಂತ್ರಿಗಳ ತವರಿನಲ್ಲಿ ಡಿಕೆಶಿ ಬೆಂಬಲಿಗರಿಗೆ ಅಧಿಕಾರ ಎಂಬ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬ ಚಿಂತೆಯೂ ಬಿಜೆಪಿ ನಾಯಕರುಗಳಲ್ಲಿದೆ. ಈ ಎಲ್ಲ ಕಾರಣದಿಂದ ಯಾವುದೇ ಆತುರಕ್ಕೆ ಬೀಳದೆ ಕಾದು ನೋಡುವ ತಂತ್ರವನ್ನು ಬಳಸಿಕೊಳ್ಳಲಾಗುತ್ತಿದೆ. ಜೊತೆಗೆ ಜಿಪಂನಲ್ಲಿ ಉಂಟಾಗಿರುವ ಆಂತರಿಕ ಕಲಹವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಯತ್ನಿಸುತ್ತಿದೆ.
ಜಿಪಂನಲ್ಲಿ ಒಟ್ಟು ಸ್ಥಾನ -31
ಬಿಜೆಪಿ - 15
ಕಾಂಗ್ರೆಸ್ - 8
ಜೆಡಿಎಸ್ - 7
ಪಕ್ಷೇತರ - 1