ಇಂದಿನಿಂದ ಮೆಕ್ಕೆಜೋಳ ಖರೀದಿ ಆರಂಭ: ಸಂಸದ ರಾಘವೇಂದ್ರ

By Kannadaprabha NewsFirst Published May 12, 2020, 9:37 AM IST
Highlights

ಕೇಂದ್ರ ಸರ್ಕಾರ ನಿಗದಿಪಡಿಸಿದ ದರದಲ್ಲಿ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಮಂಗಳವಾರದಿಂದ ಆರಂಭಗೊಳ್ಳಲಿದೆ ಎಂದು ಶಿವಮೊಗ್ಗ ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಶಿವಮೊಗ್ಗ(ಮೇ.12): ಸರ್ಕಾರ ಕೆಎಂಎಫ್‌ ಮುಖಂಡರ ಜೊತೆಗೆ ಸಮಾಲೋಚನೆ ಮಾಡಿದ್ದರ ಫಲಶೃತಿಯಿಂದಾಗಿ ರಾಜ್ಯದ ಎಲ್ಲಾ ಪಶು ಆಹಾರ ಉತ್ಪನ್ನ ಘಟಕಗಳಲ್ಲಿ ಕೇಂದ್ರ ಸರ್ಕಾರ ನಿಗದಿಪಡಿಸಿದ ದರದಲ್ಲಿ ಮೆಕ್ಕೆಜೋಳ ಖರೀದಿ ಪ್ರಕ್ರಿಯೆ ಮಂಗಳವಾರದಿಂದ ಆರಂಭಗೊಳ್ಳಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿರುವ ಚಿತ್ರದುರ್ಗ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳನ್ನೊಳಗೊಂಡ ವ್ಯಾಪ್ತಿಯಲ್ಲಿನ 1250 ಹಾಲು ಉತ್ಪಾದಕರ ಸೊಸೈಟಿಗಳಲ್ಲಿ ಮೆಕ್ಕೆಜೋಳ ಖರೀದಿಸಲಾಗುತ್ತದೆ. ರೈತರು ನೇರವಾಗಿ ಅಥವಾ ಕೆಎಂಎಫ್‌ನ ಪ್ರೂಟ್ಸ್‌ ತಂತ್ರಾಂಶದ ಮೂಲಕ ತಮ್ಮ ಹೆಸರು ವಿವರದೊಂದಿಗೆ ನೋಂದಾಯಿಸಬಹುದು ಎಂದರು.

ಬೆಳೆಗಾರರು ತಮ್ಮ ಹೊಲದಲ್ಲಿ ಬೆಳೆದ ಕೃಷಿ ಉತ್ಪನ್ನವನ್ನು ಪಹಣಿಯಲ್ಲಿ ಗುರುತಿಸಿಕೊಂಡಿರಬೇಕು. ಒಂದು ವೇಳೆ ನಮೂದಾಗಿರದಿದ್ದರೆ ಬೆಳೆದ ಬೆಳೆಯನ್ನು ಗಮನಿಸಿ ದೃಢೀಕರಣ ಪತ್ರ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರತಿ ಕ್ವಿಂಟಲ್‌ಗೆ 2 ಸಾವಿರ ರು. ಇದ್ದ ದರ ಇದೀಗ ಮಾರುಕಟ್ಟೆಯಲ್ಲಿ ಕೇವಲ 1200 ರು.ಗೆ ಬಂದು ನಿಂತಿದೆ. ಇದರಿಂದ ರೈತರು ತೀವ್ರ ನಷ್ಟಮತ್ತು ಸಂಕಷ್ಟಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ರೈತರ ನೆರವಿಗೆ ಧಾವಿಸಿದ್ದು, ಮೆಕ್ಕೆಜೋಳ ಖರೀದಿಗೆ ಮುಂದಾಗಿದೆ ಎಂದು ಹೇಳಿದರು.

ಯಾವುದೇ ಮದ್ಯವರ್ತಿಗಳಿಗೆ ಅವಕಾಶವಿಲ್ಲದಂತೆ ಮೆಕ್ಕೆಜೋಳ ಬೆಳೆಗಾರರು ಅದರಲ್ಲೂ ಸಣ್ಣ ಮತ್ತು ಅತಿ ಸಣ್ಣ ಹಿಡುವಳಿದಾರರು ಗರಿಷ್ಟ50 ಕ್ವಿಂಟಲ್‌ವರೆಗಿನ ಮೆಕ್ಕೆಜೋಳವನ್ನು ಪಶು ಆಹಾರ ಉತ್ಪನ್ನ ಘಟಕ ಕೇಂದ್ರಗಳಲ್ಲಿ ಮಾರಾಟ ಮಾಡಬಹುದು ಎಂದು ತಿಳಿಸಿದರು.

ಉತ್ತಮ ಧಾರಣೆಯೊಂದಿಗೆ ಅಡಿಕೆ ವ್ಯವಹಾರ ಆರಂಭ

ರಾಜ್ಯದ ಬಾಗಲಕೋಟೆ, ಬಳ್ಳಾರಿ, ಬೆಳಗಾವಿ, ಚಿತ್ರದುರ್ಗ, ಧಾರವಾಡ, ಗದಗ, ಹಾಸನ, ಹಾವೇರಿ ಮತ್ತು ಶಿವಮೊಗ್ಗದ ಕೇಂದ್ರಗಳಲ್ಲಿ ಸುಮಾರು 22,000 ಮೆಟ್ರಿಕ್‌ ಟನ್‌ನಷ್ಟುಮೆಕ್ಕೆಜೋಳ ಖರೀದಿಸುವ ಉದ್ದೇಶ ಹೊಂದಲಾಗಿದೆ. ರೈತರು ಹಿಂಗಾರು, ಮುಂಗಾರು ಮತ್ತು ಬೇಸಿಗೆ ಹಂಗಾಮು ಸೇರಿ ರಾಜ್ಯದ 13.14 ಲಕ್ಷ ಹೆಕ್ಟೇರ್‌ ಭೂ ಪ್ರದೇಶದಲ್ಲಿ 43.97000 ಮೆಟ್ರಿಕ್‌ ಟನ್‌ನಷ್ಟುಮೆಕ್ಕೆಜೋಳ ಬೆಳೆದಿದ್ದಾರೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಎಲ್ಲಾ ಹಂಗಾಮುಗಳು ಸೇರಿದಂತೆ 57.105 ಹೆಕ್ಟೇರ್‌ ಭೂ ಪ್ರದೇಶದಲ್ಲಿ 2.78 ಲಕ್ಷ ಮೆಟ್ರಿಕ್‌ ಟನ್‌ ಮೆಕ್ಕೆಜೋಳ ಬೆಳೆದಿದ್ದಾರೆ. ಒಂದು ಅಂದಾಜು ಸಮೀಕ್ಷೆಯಂತೆ 2,75,000 ಕ್ವಿಂಟಾಲ್‌ ಮೆಕ್ಕೆಜೋಳ ಇನ್ನೂ ಮಾರಾಟವಾಗದ ಇನ್ನೂ ರೈತರಲ್ಲಿಯೇ ಉಳಿದಿದೆ. ಶಿಕಾರಿಪುರ ಸಂಡದ ಪಶು ಆಹಾರ ಉತ್ಪಾದನಾ ಘಟಕದಲ್ಲಿ ಪ್ರತಿ ಕ್ವಿಂಟಾಲ್‌ಗೆ 1750 ರು. ದರದಲ್ಲಿ ಸುಮಾರು 80,000 ಕ್ವಿಂಟಾಲ್‌ ಮೆಕ್ಕೆಜೋಳ ಖರೀದಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಕೊರೋನಾ ಸಂಬಂಧ ಸರ್ಕಾರ ಲಾಕ್‌ಡೌನ್‌ ಘೋಷಿಸಿದ ಹಿನ್ನೆಲೆ ರಾಜ್ಯ ಹೂವಿನ ಬೆಳೆಗಾರರು ತಮ್ಮ ಉತ್ಪನ್ನವನ್ನು ಮಾರಾಟ ಮಾಡಲು ಸಾಧ್ಯವಾಗದೆ ನಷ್ಟಅನುಭವಿಸುತ್ತಿರುವುದು ನೋವಿನ ಸಂಗತಿ. ಈ ಸಂದರ್ಭದಲ್ಲಿ ಸರ್ಕಾರವು ಪುಷ್ಪ ಕೃಷಿಕರಿಗೆ ಪ್ರತಿ ಹೆಕ್ಟೇರ್‌ಗೆ 25 ಸಾವಿರ ರು. ಸಹಾಯಧನವನ್ನು ನೀಡಲು ಉದ್ದೇಶಿಸಿರುವುದು ಸ್ವಾಗತಾರ್ಹ. ಜಿಲ್ಲೆಯಲ್ಲಿ 151 ಹೆ. ಪ್ರದೇಶದಲ್ಲಿ ಹೂವು ಬೆಳೆದ 330 ಪುಷ್ಪ ಬೆಳೆಗಾರರು ಈ ಯೋಜನೆಯಡಿ ಸಹಾಯಧನ ಪಡೆಯಲಿದ್ದಾರೆ ಎಂದು ತಿಳಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌, ರಾಜ್ಯ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ಎಸ್‌. ದತ್ತಾತ್ರಿ ಇದ್ದರು.
 

click me!