ಕಾರ್ಯಕರ್ತೆ ಹುದ್ದೆ ನೇಮಕದಲ್ಲಿ ನಡೆದಿದೆ ಎನ್ನಲಾದ ಈ ಅಂಗನವಾಡಿಯ ಅಕ್ರಮ ಹೊರಬಿದ್ದ ಬೆನ್ನಲ್ಲೇ ಒಂದಲ್ಲ, ಎರಡಲ್ಲ ಬರೋಬ್ಬರಿ 20 ವರ್ಷಕ್ಕೂ ಹೆಚ್ಚು ಕಾಲ ಪರಿಶಿಷ್ಟ ಜಾತಿ ಮಕ್ಕಳಿಗೆ ಪ್ರವೇಶಾತಿ ನಿಷೇಧಿಸಿರುವ ಕಳಂಕ ಮೆತ್ತಿಕೊಂಡಿದೆ. ಈ ಮೂಲಕ ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದ್ದ ಹುಳುಕು ಇದೀಗ ಬಯಲಾಗಿದೆ.
ರವಿ ಕಾಂಬಳೆ
ಹುಕ್ಕೇರಿ(ಸೆ.14): ಅಕ್ರಮ ನೇಮಕಾತಿ ವಿವಾದದ ಸುಳಿಗೆ ಸಿಲುಕಿರುವ ಹುಕ್ಕೇರಿ ತಾಲೂಕಿನ ಸಾರಾಪುರ ಗ್ರಾಮದ ಅಂಗನವಾಡಿ ಕೇಂದ್ರದ ಮತ್ತೊಂದು ಕರಾಳ ಮುಖವಾಡ ಇದೀಗ ಕಳಚಿ ಬಿದ್ದಿದೆ. ಕಾರ್ಯಕರ್ತೆ ಹುದ್ದೆ ನೇಮಕದಲ್ಲಿ ನಡೆದಿದೆ ಎನ್ನಲಾದ ಈ ಅಂಗನವಾಡಿಯ ಅಕ್ರಮ ಹೊರಬಿದ್ದ ಬೆನ್ನಲ್ಲೇ ಒಂದಲ್ಲ, ಎರಡಲ್ಲ ಬರೋಬ್ಬರಿ 20 ವರ್ಷಕ್ಕೂ ಹೆಚ್ಚು ಕಾಲ ಪರಿಶಿಷ್ಟ ಜಾತಿ ಮಕ್ಕಳಿಗೆ ಪ್ರವೇಶಾತಿ ನಿಷೇಧಿಸಿರುವ ಕಳಂಕ ಮೆತ್ತಿಕೊಂಡಿದೆ. ಈ ಮೂಲಕ ತನ್ನ ಒಡಲಲ್ಲಿ ಬಚ್ಚಿಟ್ಟುಕೊಂಡಿದ್ದ ಹುಳುಕು ಇದೀಗ ಬಯಲಾಗಿದೆ.
ಸಾರಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿರುವ ಈ ಅಂಗನವಾಡಿ 102/1ರ ಕೇಂದ್ರದಲ್ಲಿ ಪರಿಶಿಷ್ಟ ಜಾತಿ (ಎಸ್ಸಿ) ಮಕ್ಕಳ ಕಲಿಕೆಗೆ ಪ್ರವೇಶ ನಿರಾಕರಣೆಯ ಅಲಿಖಿತ ನಿಯಮ ಜಾರಿಯಲ್ಲಿದೆ. ತನ್ಮೂಲಕ ಆಧುನಿಕ ಯುಗದಲ್ಲಿಯೂ ಜಾತಿ ಪದ್ಧತಿ ಇನ್ನೂ ಜೀವಂತವಿದ್ದು ಪರೋಕ್ಷವಾಗಿ ಪರಿಶಿಷ್ಟರ ಮೇಲೆ ಸಾಮಾಜಿಕ ಬಹಿಷ್ಕಾರ ಹೇರಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ವಿದ್ಯಾರ್ಥಿಗಳ ಭವಿಷ್ಯದ "ಶಕ್ತಿ" ಕಳೆದ ಯೋಜನೆ: ಬಸ್‌ಗಾಗಿ ವಿದ್ಯಾರ್ಥಿಗಳ ಪರದಾಟ..!
ಈ ಅಂಗನವಾಡಿಯಲ್ಲಿ ಪರಿಶಿಷ್ಟ ಮಕ್ಕಳಿಗೆ ಪ್ರವೇಶ ನಿಷೇಧಿಸಿ ಬಾಲ್ಯಾವಸ್ಥೆಯಲ್ಲೇ ಮೇಲ್ವರ್ಗದ ಮಕ್ಕಳ ಮನಸ್ಸಿನಲ್ಲಿ ಜಾತಿ ತಾರತಮ್ಯದ ವಿಷಬೀಜ ಬಿತ್ತುವ ವ್ಯವಸ್ಥಿತ ಕಾರ್ಯಸೂಚಿ ನಡೆದಿದೆ. ಅಲ್ಲದೇ ಪರಿಶಿಷ್ಟ ಮಕ್ಕಳು ಮೇಲ್ವರ್ಗದ ಮಕ್ಕಳೊಂದಿಗೆ ಬೆರೆಯದಂತೆ ನೋಡಿಕೊಂಡಿರುವ ವ್ಯವಸ್ಥೆಯ ಹಿಂದಿರುವ ಹುನ್ನಾರವೂ ಇದೀಗ ಅನಾವರಣಗೊಂಡಿದೆ.
ಒಂದರ್ಥದಲ್ಲಿ ಇಲ್ಲಿ ಅಮಾನವೀಯ ಅಸ್ಪಶ್ಯತೆ ಆಚರಿಸಲಾಗುತ್ತಿದ್ದು ನಾಗರಿಕ ಸಮಾಜ ತಲೆತಗ್ಗಿಸುವಂಥ ಪದ್ಧತಿ ರೂಢಿಯಲ್ಲಿದೆ. ಈ ವಿದ್ಯಮಾನ ಸಮಸಮಾಜದ ಬೆಳವಣಿಗೆಗೆ ಸರಿಯಲ್ಲ ಎಂಬ ಅಭಿಪ್ರಾಯಗಳು ಸಾರ್ವತ್ರಿಕವಾಗಿವೆ.
ಪ್ರವೇಶ ನಿರಾಕರಣೆಯಿಂದ ಈ ಅಂಗನವಾಡಿ ವ್ಯಾಪ್ತಿಯ ಸನೀಹದ ಸುಮಾರು 50ಕ್ಕೂ ಹೆಚ್ಚು ಪರಿಶಿಷ್ಟರ ಕುಟುಂಬಗಳ ಮಕ್ಕಳು ಪೂರ್ವ ಪ್ರಾಥಮಿಕ ಶಿಕ್ಷಣದಿಂದ ವಂಚಿತರಾಗುತ್ತಿದ್ದು ಭದ್ರಬುನಾದಿಯಂತಿರುವ ಶಿಕ್ಷಣ ಮರೀಚಿಕೆಯಾಗಿದೆ. ಜತೆಗೆ ದೂರದ ಅಂಗನವಾಡಿಗೆ ತೆರಳಿ ಕಲಿಯಬೇಕಿರುವ ಅನಿವಾರ್ಯತೆಯಿದೆ.
ದಾಖಲೆಗಳ ಪ್ರಕಾರ ಎರಡು ದಶಕಕ್ಕೂ ಹೆಚ್ಚು ಕಾಲ ಈ ಅಂಗನವಾಡಿಗೆ ಪರಿಶಿಷ್ಟ ಜಾತಿಯ ಒಂದೇ ಒಂದು ಮಗುವಿಗೆ ಪ್ರವೇಶ ನೀಡಿಲ್ಲ. ಪರಿಶಿಷ್ಟ ಮಕ್ಕಳನ್ನು ಕೇಂದ್ರದಿಂದ ದೂರು ಇಟ್ಟಿರುವ ಈ ಅಂಶ ವ್ಯವಸ್ಥೆಯನ್ನು ಅಣಕಿಸುವಂತಿದೆ. ಇದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲಾಧಿಕಾರಿಗಳ ಗಮನಕ್ಕೆ ಬಂದಿಲ್ಲವೋ?, ಅಥವಾ ಕಾರ್ಯಕರ್ತೆಯ ಉದ್ದೇಶಪೂರ್ವಕ ಕೃತ್ಯವೋ? ಎಂಬುದು ತನಿಖೆಯಾಗಬೇಕಿದೆ.
ಆಧುನಿಕತೆ ಬೆಳೆದಂತೆ ಸಮಾಜದ ಅನಿಷ್ಟದಂತಿರುವ ಜಾತಿ ವ್ಯವಸ್ಥೆ ಹೋಗಬೇಕಿದೆ. ಆದರೆ, ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜೀವಂತವಿದೆ ಎನ್ನುವುದಕ್ಕೆ ಈ ಪ್ರಕರಣ ಉದಾಹರಣೆಯಾಗಿದೆ. ಈ ಅಂಗನವಾಡಿಗೆ ಪರಿಶಿಷ್ಟ ಮಕ್ಕಳ ಪ್ರವೇಶಕ್ಕೆ ಹೋರಾಟ ನಡೆಯುವ ದಟ್ಟ ಸೂಚನೆಗಳಿವೆ.
ದೇವೇಗೌಡ-ಅಮಿತ್ ಶಾ ಭೇಟಿ: ಯಾರೆಲ್ಲ ಒಂದಾದರೂ ಕಾಂಗ್ರೆಸ್‌ಗೆ ಭಯವಿಲ್ಲ, ರಾಜು ಕಾಗೆ
ಹೊಸ ಕಟ್ಟಡದ ಕೂಗು
ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ 1991ರಲ್ಲಿ ಸಾರಾಪುರ ಗ್ರಾಮದಲ್ಲಿ ಆರಂಭವಾದ 102/1 ರ ಅಂಗನವಾಡಿ ಕೇಂದ್ರ ಪ್ರಾಥಮಿಕ ಶಾಲಾ ಆವರಣದಲ್ಲಿ 2004ರಲ್ಲಿ ಸ್ವಂತ ಕಟ್ಟಡದ ನೆಲೆ ಕಂಡುಕೊಂಡಿದೆ. ಸದ್ಯ ಒಟ್ಟು 98 ಮಕ್ಕಳ ದಾಖಲಾತಿಯಿದೆ. ಕಟ್ಟಡ ಶಿಥಿಲಾವಸ್ಥೆಗೆ ತಲುಪಿದ್ದು ಅಲ್ಲಲ್ಲಿ ಬಿರುಕು ಬಿಟ್ಟು ಅಪಾಯದ ಮುನ್ಸೂಚನೆ ನೀಡಿದೆ. ಹಾಗಾಗಿ ಹೊಸ ಕಟ್ಟಡ ನಿರ್ಮಿಸಬೇಕೆನ್ನುವ ಕೂಗು ಕೇಳಿ ಬಂದಿದೆ.
ಮಕ್ಕಳ ಭವಿಷ್ಯ ಬಾಲ್ಯಾವಸ್ಥೆಯಿಂದಲೇ ಆಶಾದಾಯಕವಾಗಲು ಭದ್ರಬುನಾದಿ ಹಾಕುವ ದೃಷ್ಟಿಯಿಂದ ಅಂಗನವಾಡಿ ಆರಂಭಿಸಲಾಗಿದೆ. ಎಲ್ಲ ಸಮುದಾಯಗಳ ಮಕ್ಕಳ ಪ್ರವೇಶಕ್ಕೆ ಅವಕಾಶವಿದ್ದು ಯಾವುದೇ ಜಾತಿ ತಾರತಮ್ಯದ ಪ್ರಶ್ನೆಯೇ ಬರದು. ಸಾರಾಪುರ ಅಂಗನವಾಡಿಯಲ್ಲಿ ಎಸ್ಸಿ ಮಕ್ಕಳಿಗೆ ಪ್ರವೇಶ ನಿರಾಕರಿಸಿರುವ ಕುರಿತು ತನಿಖೆ ನಡೆಸಲಾಗುವುದು ಎಂದು ಬೆಳಗಾವಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಆರ್.ನಾಗರಾಜು ತಿಳಿಸಿದ್ದಾರೆ.