ಲೋಕಕಲ್ಯಾಣಕ್ಕಾಗಿ ಪಾದಯಾತ್ರೆ, 121ಅಡಿ ಉದ್ದದ ಧ್ವಜದೊಂದಿಗೆ ಹೋಗುವುದೇ ಸವಾಲು

By Suvarna News  |  First Published Mar 20, 2022, 5:42 PM IST

* ಲೋಕಕಲ್ಯಾಣಕ್ಕಾಗಿ ಶ್ರೀಶೈಲಕ್ಕೆ ಬೃಹತ್ ಪಾದಯಾತ್ರೆ.. 
* 121ಅಡಿ ಉದ್ದದ ಧ್ವಜದೊಂದಿಗೆ 350ಕ್ಕೂ ಹೆಚ್ಚು ಕಿ.ಲೋ ಮೀಟರ್ ಪಾದಯಾತ್ರೆ
 * ಪಾದಯಾತ್ರೆ ಕೈಗೊಂಡ ಸಂಡೂರು ತಾಲೂಕಿನ ಅಂತಪುರ ಗ್ರಾಮದ ಭಕ್ತಾದಿಗಳು


ವರದಿ ; ನರಸಿಂಹ ಮೂರ್ತಿ ಕುಲಕರ್ಣಿ


ಬಳ್ಳಾರಿ, (ಮಾ.20): ಲೋಕ ಕಲ್ಯಾಣಕ್ಕಾಗಿ  ಕುಮಾರ ಪಂಡಿತಾರಾಧ್ಯ ಸ್ವಾಮಿಗಳ ನೇತೃತ್ವದಲ್ಲಿ121ಅಡಿ ಉದ್ದನೆಯ ಧ್ವಜದೊಂದಿಗೆ ಸಂಡೂರು ತಾಲೂಕಿನ ಅಂತಪುರ ಗ್ರಾಮದ ಭಕ್ತಾದಿಗಳು ಶ್ರೀಶೈಲಕ್ಕೆ ಪಾದಯಾತ್ರೆ ಮಾಡ್ತಿದ್ದಾರೆ.

Tap to resize

Latest Videos

ಬಿರುಬಿಸಿಲಿನಿಂದ ಬಳಲುತ್ತಿದ್ರೂ ಶ್ರೀಶೈಲ ಜ್ಯೋತಿರ್ಲಿಂಗ ದರ್ಶನಕ್ಕಾಗಿ  350ಕ್ಕೂ ಹೆಚ್ಚು ಕಿಲೋ ಮೀಟರ್ ಪಾದಯಾತ್ರೆ ಕೈಗೊಂಡಿದ್ದಾರೆ..  ಅತಿವೃಷ್ಟಿ ಅನಾವೃಷ್ಟಿ ಸೇರಿದಂತೆ ವಿವಿಧ ತೊಂದರೆಗಳಿಂದ ಬಳಲುತ್ತಿರೋ ಜನರ ನೆಮ್ಮದಿಯ ಬದುಕಿಗಾಗಿ ಅಂದ್ರೇ ಲೋಕ ಕಲ್ಯಾಣಕ್ಕೆ ಈ ಪಾದಯಾತ್ರೆ ಅನ್ನೋದು ಇದರ ವಿಶೇಷವಾಗಿದೆ. ದಿನಕ್ಕೆ 20-30 ಕಿ.ಮೀ. ನಡೆಯುವ ಭಕ್ತಾಧಿಗಳು ರಾತ್ರಿಯ ವೇಳೆ ಅಲ್ಲಲ್ಲಿ ಸಿಗುವ ದೇವಸ್ಥಾನಗಳಲ್ಲಿ ವಸತಿ ಮಾಡಿಕೊಳ್ಳುತ್ತಾರೆ.. 

ಪಲ್ಲಕ್ಕಿ ಧ್ವಜ ಒಯ್ಯೋದೇ ದೊಡ್ಡ ಸವಾಲಿನ ಕೆಲಸ 

ಯುಗಾದಿಯ ದಿನದಂದು ಮಲ್ಲಿಕಾರ್ಜುನನ ದರ್ಶನ ಪಡೆಯೋ ನಿಟ್ಟಿನಲ್ಲಿ ಹೊರಟಿರೋ ಈ ಪಾದಯಾತ್ರೆ ಯೂದ್ದಕ್ಕೂ 121 ಅಡಿ ಧ್ವಜದ ಜೊತೆಗೆ ಪಲ್ಲಕ್ಕಿ ಹೊತ್ತುಕೊಂಡು ಹೋಗೋದು ಸವಾಲಿನ ಕೆಲಸವಾಗಿದೆ. ಯಾಕಂದ್ರೇ  ರಸ್ತೆಯೂದ್ದಕ್ಕೂ ಧ್ವಜವನ್ನು ಹಿಡಿದುಕೊಂಡು ಹೋಗೋದ್ರಿಂದ ಸಾಕಷ್ಟು ತೊಂದರೆಗಳಾಗ್ತವೆ. ಜೊತೆಗೆ ಪಲ್ಲಕ್ಕಿ ಕೂಡ ಭಾರ ಇರೋದ್ರಿಂದ ಕಷ್ಟ ಎನ್ನಲಾಗ್ತಿದೆ. ಇನ್ನೂ ಈ ಧ್ವಜವನ್ನು ಕೊನೆಗೆ ಶ್ರೀಶೈಲ ಜಗದ್ಗುರುಗಳಿಗೆ ಹಸ್ತಾಂತರ ಮಾಡಲಾಗುತ್ತದೆ. ಪಾದಯಾತ್ರೆಯಲ್ಲಿ 250ಕ್ಕೂ ಹೆಚ್ಚು ‌ಭಕ್ತಾಧಿಗಳು ಪಾಲ್ಗೊಂಡಿದ್ದು ಮುಂದೆ ಇನ್ನಷ್ಟು ಹೆಚ್ಚಾಗ್ತಾರೆ ಎನ್ನಲಾಗ್ತಿದೆ.. 

ಶ್ರೀಶೈಲ ಯಾತ್ರೆ ಬಗ್ಗೆ
ಶ್ರೀಶೈಲ ಎನ್ನುತ್ತಿದ್ದಂತೆ ನೆನಪಾಗುವುದು ಅಲ್ಲಿ ಯುಗಾದಿ ಪಾಡ್ಯದಂದು ಸಂಜೆ ನಡೆಯುವ ವೈಭವದ ರಥೋತ್ಸವ. ಜಾತ್ರೆ ವೈಭವವನ್ನು ಕಣ್ತುಂಬಿಕೊಳ್ಳುವ ಭಕ್ತಸಾಗರವೇ ಸೇರುತ್ತದೆ. ಉತ್ತತ್ತಿ, ಹಣ್ಣು, ನಾಣ್ಯಗಳನ್ನು ರಥಕ್ಕೆ ಸಮರ್ಪಿಸಿ ಭಕ್ತರು ಹರಕೆ ತೀರಿಸುತ್ತಾರೆ. ಉತ್ತರ ಕರ್ನಾಟಕದ ವಿವಿಧ ಭಾಗಗಳ ಸಾವಿರಾರು ಭಕ್ತರು ಪಾದಯಾತ್ರೆ ಮೂಲಕ ಬಂದು ರಥೋತ್ಸವದ ಸೊಬಗನ್ನು ಕಣ್ತುಂಬಿಕೊಳ್ಳುತ್ತಾರೆ.

ಹೋಳಿ ಹುಣ್ಣಿಮೆ ದಿನ ಕಾಮದಹನದ ನಂತರ ತಮ್ಮ ಊರುಗಳಿಂದ ಪಾದಯಾತ್ರೆ ಆರಂಭಿಸುವ ಭಕ್ತರು ಯುಗಾದಿ ಹಿಂದಿನ ದಿನ ಶ್ರೀಶೈಲ ಸೇರುತ್ತಾರೆ. ಪ್ರತಿದಿನ 60 ಕಿ.ಮೀ.ನಂತೆ 600ಕ್ಕೂ ಹೆಚ್ಚು ಕಿಮೀ. ನಡೆದು ಶ್ರೀಶೈಲ ತಲುಪಿ ದೇವರ ದರ್ಶನ ಪಡೆದಾಗ ಉಂಟಾಗುವ ಸಂತೃಪ್ತಿ ವರ್ಣನಾತೀತ ಎನ್ನುತ್ತಾರೆ ಪಾದಯಾತ್ರಿಕರು. ಅಂದಾಜು 70ಕಿ.ಮೀ.ಕಾಡು ದಾರಿಯಲ್ಲಿ ನಡೆಯಬೇಕು.

ಕೆಲವು ಭಕ್ತರು ಕಂಬಿಗಳನ್ನು ಹೊತ್ತು ನಡೆಯುತ್ತಾರೆ. ಪ್ರತಿದಿನ ಅದಕ್ಕೆ ಎರಡು ಬಾರಿ ಪೂಜೆ ನಡೆಯಬೇಕು ಎಂಬ ನಿಯಮವಿರುತ್ತದೆ. ಕೆಲವರು ಬರಿಗಾಲಿನಿಂದ ನಡೆಯುವ ಹರಕೆ ಹೊತ್ತಿದ್ದರೆ ಮತ್ತೆ ಕೆಲವರು ಮರಗಾಲು ಕಟ್ಟಿಕೊಂಡು ನಡೆಯುತ್ತಾರೆ. ಸಾಮಾನ್ಯ ನಡಿಗೆಗಿಂತ ಇದು ಇನ್ನೂ ಕಷ್ಟ. ಕರ್ನೂಲು ದಾಟುತ್ತಿದ್ದಂತೆ ಬೆಟ್ಟ ಗುಡ್ಡಗಳ ನಡುವೆ ಇವರ ನಡಿಗೆ ಕಠಿಣವಾಗುತ್ತದೆ. ಇಂಥ ದುರ್ಗಮ ದಾರಿ ತುಳಿದು ಮಲ್ಲಯ್ಯನ ದರ್ಶನ ಪಡೆದು ರಥೋತ್ಸವದಲ್ಲಿ ಪಾಲ್ಗೊಳ್ಳುತ್ತಿದ್ದಂತೆ ನಡೆದು ಬಂದ ಆಯಾಸವೆಲ್ಲ ಮರೆತು ಹೋಗುತ್ತದೆ.

ಮೈಮನಗಳು ಹಗುರವಾಗಿ ಇನ್ನಿಲ್ಲದ ಚೈತನ್ಯ ಬರುತ್ತದೆ ಎಂಬುದು ಪಾದಯಾತ್ರಿಗಳ ಅನುಭವ. ಮಳೆ ಬೆಳೆ ಚೆನ್ನಾಗಿ ಬಂದು ರೈತರ ಬದುಕು ಹಸನಾಗಲಿ ಎಂದು ಹರಕೆ ಹೊತ್ತ ಕೆಲವು ಭಕ್ತರು ಧಾನ್ಯದ ಮೂಟೆಯನ್ನು ಹೆಗಲ ಮೇಲೆ ಹೊತ್ತು ಸಾಗುತ್ತಾರೆ. ಮಲ್ಲಯ್ಯನ ಸನ್ನಿಧಿಗೆ ಬಂದು ಸಾಮೂಹಿಕ ದಾಸೋಹಕ್ಕೆ ಈ ಧಾನ್ಯದ ಮೂಟೆ ಸಮರ್ಪಿಸುತ್ತಾರೆ. ಇದಂತೂ ಮೈನವಿರೇಳಿಸುವ ದೇಹ ದಂಡನೆ. 'ಮಲ್ಲಯ್ಯನ ಸೇವೆ, ನಮ್ಮ ನಂಬಿಕೆ, ಹತ್ತಾರು ವರ್ಷಗಳಿಂದ ಯಾತ್ರೆ ನಡೆಯುತ್ತಿದೆ. ನಮಗೆ ಯಾವ ತೊಂದರೆಯಾಗಿಲ್ಲ. ಈ ಯಾತ್ರೆ ನಮ್ಮ ಮನದ ಕೊಳೆ ತೊಳೆಯುತ್ತದೆ. ಸುಂದರ ಬದುಕು ರೂಪಿಸಿಕೊಳ್ಳಲು ಪಾಠವಾಗುತ್ತದೆ. ಭಕ್ತಿ ಸಮರ್ಪಣೆಗೊಂದು ಅವಕಾಶ ಕಲ್ಪಿಸುತ್ತದೆ' ಎನ್ನುತ್ತಾರೆ ಪಾದಯಾತ್ರಿಕರು. ಇವರೊಂದಿಗೆ ಕುದುರೆ, ಎತ್ತುಗಳೂ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತವೆ. ಕೆಲವು ಬಾರಿ ಈ ಪ್ರಾಣಿಗಳೇ ಮುಂದೆ ಸಾಗುತ್ತ ಹೊಸ ಯಾತ್ರಿಕರಿಗೆ ದಾರಿ ತೋರುತ್ತವೆ ಎಂಬುದು ವಿಶೇಷ.

click me!