ಭತ್ತ ಬೆಳೆದ ರೈತರಿಗೆ ಈಗ ತಲೆ ನೋವು ಶುರುವಾಗಿದೆ. ಭತ್ತ ಖರೀದಿ ಮಾಡಲು ಕೆಲವೊಂದು ನಿಯಮಗಳನ್ನು ರೂಪಿಸಿದ್ದು ಇದರಿಂದ ಸಾಕಷ್ಟು ಸಮಸ್ಯೆ ಉಂಟಾಗಿದೆ.
ದಾವಣಗೆರೆ [ಜ.09]: ಕನಿಷ್ಟಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳಲ್ಲಿ ಭತ್ತ ಖರೀದಿಗೆ ಸಾಕಷ್ಟುನಿಯಮ ಹೇರಿರುವುದು ರೈತರಿಗೆ ತೀವ್ರ ತಲೆ ನೋವಾಗಿದ್ದು, ರೈತರಿಂದ ಅನಿಯಮಿತವಾಗಿ ಭತ್ತ ಖರೀದಿಗೆ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಎಪಿಎಂಸಿ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಬಿ.ಎಂ.ಸತೀಶ ಕೊಳೇನಹಳ್ಳಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಬಲ ಬೆಲೆಯಡಿ ರೈತರಿಗೆ ಯಾವುದೇ ನಿಯಮಗಳನ್ನು ಹೇರದೇ, ಎಲ್ಲಾ ರೈತರಿಂದಲೂ ತಕ್ಷಣವೇ ಅನಿಯಮಿತವಾಗಿ ಭತ್ತ ಖರೀದಿಸಬೇಕು ಎಂದರು. ತಂತ್ರಾಂಶದಲ್ಲಿ ನೋಂದಣಿಗೆ ಸಾಕಷ್ಟುದಾಖಲೆ ಕೇಳುತ್ತಿದ್ದು, ಇದರಿಂದ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಅಲ್ಲದೇ, ಒಬ್ಬ ರೈತನಿಂದ ಗರಿಷ್ಟ40 ಕ್ವಿಂಟಾಲ್ ಮಾತ್ರ ಭತ್ತ ಖರೀದಿಸಲು ನಿರ್ಧರಿಸಿರುವುದು ಸರಿಯಲ್ಲ. ರೈತರು ಸಾಮಾನ್ಯವಾಗಿ 75 ಕೆಜಿ ಸಾಮರ್ಥ್ಯದ ಗೋಣಿ ಚೀಲದಲ್ಲಿ ಬತ್ತ ತುಂಬುತ್ತಾರೆ ಎಂದು ತಿಳಿಸಿದರು.
undefined
ಆದರೆ, 50 ಕೆಜಿ ಚೀಲದಲ್ಲೇ ಭತ್ತ ತುಂಬಿಕೊಂಡು ಸ್ವಂತ ಖರ್ಚಿನಲ್ಲಿ ಖರೀದಿ ಕೇಂದ್ರಕ್ಕೆ ತರಬೇಕೆಂಬ ನಿಯಮವೂ ಅವಾಸ್ತವಿಕವಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಸರಿಪಡಿಸುವ ಕೆಲಸವಾಗಬೇಕು. ಭತ್ತ ಖರೀದಿ ಅವದಿಯನ್ನು ಜೂ.31ರವರೆಗೂ ವಿಸ್ತರಿಸಿದರೆ ಬೇಸಿಗೆ ಹಂಗಾಮಿನ ಬೆಳೆಗೂ ಅನುಕೂಲವಾಗುತ್ತದೆ ಎಂದು ಹೇಳಿದರು.
ಭತ್ತ ಬೆಳೆಗಾರರಿಗೆ BSY ಸರ್ಕಾರ ಗುಡ್ ನ್ಯೂಸ್: ಬೆಂಬಲ ಬೆಲೆ ಘೋಷಣೆ...
ಜಿಲ್ಲೆಯಲ್ಲಿ ಸುಮಾರು 1.5 ಲಕ್ಷ ಎಕರೆ ಪ್ರದೇಶದಲ್ಲಿ ಭತ್ತ ಬೆಳೆಯುತ್ತಿದ್ದು, ಸುಮಾರು 4 ಲಕ್ಷ ಟನ್ ಇಳುವರಿ ಬರುತ್ತದೆ. ಈಗಾಗಲೇ ಶೇ.79 ರೈತರು ಕಡಿಮೆ ದರಕ್ಕೆ ಭತ್ತದ ಉತ್ಪನ್ನ ಮಾರಾಟ ಮಾಡಿದ್ದಾರೆ. ಜಿಲ್ಲಾಧಿಕಾರಿ ಅಧ್ಯಕ್ಷತೆಯ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಖರೀದಿ ಕೇಂದ್ರ ತೆರೆಯಲು ತೀರ್ಮಾನಿಸಿ, 20 ದಿನ ಕಳೆದರೂ ಒಂದೇ ಒಂದು ಕ್ವಿಂಟಾಲ್ ಭತ್ತ ಸಹ ಖರೀದಿಸಿಲ್ಲ ಎಂದು ಕಿಡಿಕಾರಿದರು.
ಟಾಸ್ಕ್ ಫೋರ್ಸ್ ಸಮಿತಿ ಸಭೆಯ ತೀರ್ಮಾನ ಕೇವಲ ಕಡತಗಳಿಗೆ ಮಾತ್ರವೇ ಸೀಮಿತವಾಗಿ ಉಳಿದಿದೆ. ಈ ಹಿನ್ನೆಲೆಯಲ್ಲಿ ಖರೀದಿಗೆ ನಿಗದಿಪಡಿಸಿದ ನಿಯಮಗಳನ್ನು ಸರಳೀಕರಣ ಮಾಡಿ, ತಕ್ಷಣದಿಂದಲೇ ಖರೀದಿ ಪ್ರಕ್ರಿಯೆ ಆರಂಭಿಸಬೇಕು. ಪ್ರತಿ ಕ್ವಿಂಟಾಲ್ ಬತ್ತಕ್ಕೆ ಕೇಂದ್ರ ಸರ್ಕಾರ 1835 ರು. ಬೆಂಬಲ ಬೆಲೆ, ರಾಜ್ಯ ಸರ್ಕಾರದ 200 ರು. ಪ್ರೋತ್ಸಾಹ ಧನ ಸೇರಿಸಿ, ಒಟ್ಟು 2035 ರು.ಗೆ ಬತ್ತ ಖರೀದಿ ಪ್ರಕ್ರಿಯೆ ಆರಂಭಿಸಿ ಎಂದು ಒತ್ತಾಯಿಸಿದರು.
ಎ ಗ್ರೇಡ್ ಬತ್ತಕ್ಕೆ 1835 ರು., ಸಾಮಾನ್ಯ ಭತ್ತಕ್ಕೆ 1815 ರು. ನಿಗದಿಪಡಿಸಿದೆ. ಇದರೊಂದಿಗೆ ಪ್ರೋತ್ಸಾಹಧನ ಸೇರಿಸಿ, ಎ ಗ್ರೇಡ್ ಬತ್ತಕ್ಕೆ 2035 ರು., ಸಾಮಾನ್ಯ ಬತ್ತಕ್ಕೆ 2015 ರು. ನೀಡೇಕು. ಸಾಮಾನ್ಯ ಬತ್ತವೆಂದರೆ ದಪ್ಪ ಭತ್ತ, ಎ ಗ್ರೇಡ್ ಬತ್ತವೆಂದರೆ ಸಣ್ಣ ಬತ್ತವಾಗಿದೆ. ನಮ್ಮ ಜಿಲ್ಲೆಯ ಬಹುತೇಕ ರೈತರು ಸಣ್ಣ ಭತ್ತದ ತಳಿಗಳಾದ ಆರ್‌ಎನ್‌ಆರ್, ಮಾಮೂಲಿ ಸೋನಾ, ಕಾವೇರಿ ಸೋನಾ ಇತರೆ ತಳಿ ಬೆಳೆದಿದ್ದಾರೆ. ಇವು ಎ ಗ್ರೇಡ್ ಭತ್ತವಾಗಿದೆ ಎಂದು ತಿಳಿಸಿದರು.