ಕಡೂರು ಮತ್ತು ಮೂಡಿಗೆರೆ ತಾಲ್ಲೂಕಿನಲ್ಲಿ ನಡೆದಿರುವ ಅಕ್ರಮ ಭೂ ಮಂಜೂರಾತಿ ಪ್ರಕರಣವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಅತ್ಯಂತ ಸೂಕ್ಷ್ಮವಾಗಿ ತನಿಖೆ ನಡೆಸಲಾಗುತ್ತಿದೆ. ನಿಜವಾಗಿಯೂ ಅರ್ಹರಿರುವ ಯಾವುದೇ ಫಲಾನುಭವಿಗಳಿಗೆ ತೊಂದರೆಯಾಗಲು ಬಿಡುವುದಿಲ್ಲ: ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು(ಸೆ.05): ರಾಜ್ಯದಲ್ಲೇ ಅತೀ ದೊಡ್ಡ ಭೂ ಹಗರಣ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರದಿಂದ ತನಿಖೆ ನಡೆಯುತ್ತಿದ್ದು ಬಹುಪಾಲು ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯ ತಿಳಿಸಿದ್ದಾರೆ.
undefined
ಇಂದು(ಮಂಗಳವಾರ) ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದ್ದ ಅವರು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಧ ಕಾರ್ಯಕ್ರಮಗಳ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಡೂರು ಮತ್ತು ಮೂಡಿಗೆರೆ ತಾಲ್ಲೂಕಿನಲ್ಲಿ ನಡೆದಿರುವ ಅಕ್ರಮ ಭೂ ಮಂಜೂರಾತಿ ಪ್ರಕರಣವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದು, ಅತ್ಯಂತ ಸೂಕ್ಷ್ಮವಾಗಿ ತನಿಖೆ ನಡೆಸಲಾಗುತ್ತಿದೆ. ನಿಜವಾಗಿಯೂ ಅರ್ಹರಿರುವ ಯಾವುದೇ ಫಲಾನುಭವಿಗಳಿಗೆ ತೊಂದರೆಯಾಗಲು ಬಿಡುವುದಿಲ್ಲವೆಂದು ತಿಳಿಸಿದರು.
ಅಧಿಕಾರದ ಅಂತಸ್ತು ಬೆಳೆದಂತೆ ನೀತಿಯ ಅಂತಸ್ತು ಬೆಳೆಯಬೇಕು: ರಂಭಾಪುರಿ ಶ್ರೀ
ಯಾರೇ ತಪ್ಪು ಮಾಡಿದ್ದರೂ ಸುಮ್ಮನೆ ಬಿಡುವುದಿಲ್ಲ
ಕಡೂರು ಮತ್ತು ಮೂಡಿಗೆರೆ ತಾಲ್ಲೂಕಿನಲ್ಲಿ ಅಕ್ರಮವಾಗಿ ಭೂಮಂಜೂರಾತಿ ಮಾಡಿರುವ ವಿಷಯ ಬೆಳಕಿಗೆ ಬಂದ ನಂತರ ಸುಮಾರು 15 ವಿಶೇಷ ಅಧಿಕಾರಿಗಳ ತಂಡ 1 ತಿಂಗಳಿಂದ ಸಮಗ್ರ ತನಿಖೆ ನಡೆಸುತ್ತಿದೆ. ಸರ್ಕಾರ ಈ ಹಗರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಯಾರೇ ತಪ್ಪು ಮಾಡಿದ್ದರೂ ಸುಮ್ಮನೆ ಬಿಡುವುದಿಲ್ಲ ಶಿಕ್ಷೆ ನೀಡುವ ಜೊತೆಗೆ ಸರ್ಕಾರಿ ಜಮೀನನ್ನು ಯಾರ ಪಾಲಿಗೂ ಬಿಟ್ಟು ಕೊಡುವುದಿಲ್ಲ ಎಂದು ಎಚ್ಚರಿಸಿದರು.
ತನಿಖೆ ಪ್ರಕ್ರಿಯೆ ಮುಂದುವರೆದಿದ್ದು ಇನ್ನೂ ಕೂಡ ಮಧ್ಯಂತರ ವರದಿ ಬಂದಿಲ್ಲ. ಈ ಮಧ್ಯೆ ತಮಗೆ ಮಾಹಿತಿ ಕೊರತೆಯಿದ್ದು ಬಹುಪಾಲು ಅಕ್ರಮ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಹಗರಣದ ತನಿಖೆಯನ್ನು ಎಲ್ಲಾ ದೃಷ್ಠಿಕೋನಗಳಿಂದ ಪರಿಶೀಲಿಸಲಾಗುತ್ತಿದೆ. ಒಬ್ಬ ವ್ಯಕ್ತಿಯಿಂದ ಇಂತಹ ಹಗರಣಗಳು ನಡೆಯಲು ಸಾಧ್ಯವಿಲ್ಲ. ಈ ಹಗರಣದಲ್ಲಿ ಭಾಗಿಯಾಗಿರುವ ಎಲ್ಲರನ್ನೂ ಗುರಿಪಡಿಸುವ ನಿಟ್ಟಿನಲ್ಲಿ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ಸೂಕ್ತ ದಾಖಲೆಗಳಿಲ್ಲದೆ ಭೂಮಿ ಮಂಜೂರು
ಈಗ ತಮಗೆ ಲಭ್ಯವಿರುವ ಮಾಹಿತಿ ಪ್ರಕಾರ ಕಡೂರು ತಾಲ್ಲೂಕಿನಲ್ಲಿ 1320 ಪ್ರಕರಣಗಳಲ್ಲಿ 3700 ಎಕರೆ ಸೂಕ್ತ ದಾಖಲೆಗಳಿಲ್ಲದೆ ಮಂಜೂರು ಮಾಡಲಾಗಿದೆ. ಕೆಲವು ಕಡತಗಳು ನಾಪತ್ತೆಯಾಗಿವೆ. ಅದೇ ರೀತಿ ಮೂಡಿಗೆರೆ ತಾಲ್ಲೂಕಿನಲ್ಲಿ 1030ಪ್ರಕರಣಗಳಲ್ಲಿ 2500 ಎಕರೆ ಭೂಮಿ ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂದರು. ಈ ಎಲ್ಲಾ ಪ್ರಕರಣಗಳಲ್ಲಿ 2 ಗುಂಪುಗಳಾಗಿ ವಿಂಗಡಿಸಿ ಪಟ್ಟಿ ಮಾಡಲಾಗಿದೆ. ಸಂಪೂರ್ಣವಾಗಿ ಕಾನೂನು ಉಲ್ಲಂಘಿಸಿ ಮಂಜೂರು ಮಾಡಿರುವ ಒಂದು ಪಟ್ಟಿ ಹಾಗೂ ಅನುಮಾನಾಸ್ಪದವಾಗಿರುವ ಪ್ರಕರಣಗಳನ್ನು ಒಂದು ಪಟ್ಟಿಯನ್ನಾಗಿ ಮಾಡಲಾಗಿದೆ ಸಂಪೂರ್ಣವಾಗಿ ಕಾನೂನು ಬಾಹಿರವಾಗಿರುವ ಎಲ್ಲಾ ಪ್ರಕರಣಗಳನ್ನು ಸರ್ಕಾರಕ್ಕೆ ವಶಪಡಿಸಿಕೊಳ್ಳಲಾಗುವುದು ಎಂದರು.
ಅನುಮಾನಾಸ್ಪದವಾಗಿರುವ ಪ್ರಕರಣಗಳಲ್ಲಿ ನಿಜವಾದ ಅರ್ಹ ಫಲಾನುಭವಿಗಳಿಗೆ ಭೂಮಿಯನ್ನು ಮಂಜೂರು ಮಾಡದಂತೆ ವರದಿ ನೀಡಲು ತನಿಖಾ ತಂಡಕ್ಕೆ ಸೂಚನೆ ನೀಡಲಾಗಿದೆಯೆ. ಸಾಧ್ಯವಾದಷ್ಟು ಪ್ರಮಾಣದಲ್ಲಿ ಅರ್ಹತೆ ಇರುವ ಎಲ್ಲ ರೈತರಿಗೆ ಅನುಕೂಲ ಮಾಡಿಕೊಡಲು ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಇಂದು ಬೆಳಗ್ಗೆಯಿಂದ ಜಿಲ್ಲೆಗೆ ಸಂಬಂಧಿಸಿದಂತೆ ಮೂರು ನಾಲ್ಕು ವಿಷಯಗಳಲ್ಲಿ ಚರ್ಚಿಸಲಾಗಿದ್ದು, ಪ್ರಮುಖವಾಗಿ ಅರಣ್ಯ ಮತ್ತು ಕಂದಾಯ ಭೂಮಿಯ ಗೊಂದಲ ಸರಿಪಡಿಸುವ ನಿಟ್ಟಿನಲ್ಲಿ ಜಂಟಿ ಸರ್ವೆ ನಡೆಸಲು ಸಿದ್ಧತೆ ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಈ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ತಂಡವೊಂದನ್ನು ರಚಿಸಿದ್ದು, ಸರ್ವೆ ನಡೆಸಲು ಬೇಕಾದ ಸಿದ್ಧತೆಗಳು, ಸಿಬ್ಬಂದಿಗಳು ಮುಂತಾದ ತಂತ್ರಜ್ಞಾನ ಬಳಸಿಕೊಳ್ಳುವ ಬಗ್ಗೆ ಆದೇಶಿಸಲಾಗಿದೆ ಎಂದು ಹೇಳಿದರು. ಇನ್ನೂ 3 ತಿಂಗಳೊಳಗಾಗಿ ಜಂಟಿ ಸರ್ವೆ ನಡೆಸುವ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡು ಪ್ರಾಯೋಗಿಕವಾಗಿ ಮೂಡಿಗೆರೆ ತಾಲ್ಲೂಕಿನಿಂದ ಜಂಟಿ ಸರ್ವೆ ನಡೆಸಲಾಗುವುದು ಎಂದರು.
ಇನ್ನೆರಡು ಮೂರು ದಿನಗಳಲ್ಲಿ ಅಕ್ರಮ ಸಕ್ರಮ ಸಮಿತಿ
ಜಿಲ್ಲೆಯಲ್ಲಿ ಈ ಹಿಂದೆ ಒಂದು ಲಕ್ಷದ ಹದಿನಾಲ್ಕು ಸಾವಿರ ಹೆಕ್ಟೇರ್ ಪ್ರದೇಶವನ್ನು ಪರಿಭಾವಿತ ಅರಣ್ಯ ಎಂದು ಗುರುತಿಸಲಾಗಿದ್ದು, ಇತ್ತೀಚಿನ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಸುಮಾರು 52,000 ಹೆಕ್ಟೇರ್ ಪರಿಭಾವಿತ ಅರಣ್ಯವಾಗಿ ಉಳಿದಿದ್ದು, ಉಳಿದ ಪ್ರದೇಶವನ್ನು ಕಂದಾಯ ಇಲಾಖೆಗೆ ವಾಪಸ್ ನೀಡಲಗಿದೆ. ಈ ಜಮೀನಿನಲ್ಲಿ ಸರ್ಕಾರದ ವಿವಿಧ ಯೋಜನೆಗಳಲ್ಲಿ ಜಮೀನು ಮಂಜೂರಾತಿ ಕೋರಿ ಅರ್ಜಿ ಸಲ್ಲಿಸಿದ್ದವರಿಗೆ ಇನ್ನೆರಡು ಮೂರು ದಿನಗಳಲ್ಲಿ ಅಕ್ರಮ ಸಕ್ರಮ ಸಮಿತಿ ರಚಿಸಲಾಗುವುದು. ಅರ್ಹ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡುವ ಎಲ್ಲ ಪ್ರಕ್ರಿಯೆ ಆರಂಭವಾಗಲಿದೆ ಎಂದರು.
ಗೃಹಲಕ್ಷ್ಮೀ ಎಫೆಕ್ಟ್; ಬ್ಯಾಂಕ್ ಮುಂದೆ ನೂರಾರು ಮಹಿಳೆಯರು ಕ್ಯೂ!
ಭೂಮಿ ಸಾಗುವಳಿಯ ನೈಜತೆಯನ್ನು ಪರಿಶೀಲಿಸುವ ಸಲುವಾಗಿ ಮೊಬೈಲ್ ಆಪ್ವೊಂದನ್ನು ಸಿದ್ಧಪಡಿಸಿದ್ದು, ಉಪಗ್ರಹದ ಮೂಲಕ ಸಮೀಕ್ಷೆ ನಡೆಸಿ ಆ ಆಧಾರದಲ್ಲಿ ನಿಜವಾದ ಫಲಾನುಭವಿಗಳಿಗೆ ಭೂಮಿ ಮಂಜೂರು ಮಾಡಲಾಗುವುದು. ಅದೇ ರೀತಿ ಕಂದಾಯ ಭೂಮಿಯ ವಿವರವನ್ನು ಸಂಗ್ರಹಿಸುವ ಸಲುವಾಗಿ ಸಧ್ಯದಲ್ಲಿ ``ರೆವಿನ್ಯೂ ಬೀಟ್'' ವ್ಯವಸ್ಥೆಯನ್ನು ಜಾರಿಗೆ ತರಲಿದ್ದು, ಉಪಗ್ರಹ ಆಧಾರಿತ ಮೊಬೈಲ್ ಆಪ್ ಬಳಸಿ ಪ್ರತಿ ಮೂರು ತಿಂಗಳಿಗೊಮ್ಮೆ ಜಮೀನಿನ ಸ್ಥಿತಿಗತಿಯನ್ನು ದಾಖಲಿಸುವ ವ್ಯವಸ್ಥೆ ಮಾಡಲಾಗುವುದೆಂದರು.
ಕಾಡಾನೆ ಹಾವಳಿ ಬಗ್ಗೆ ಗಮನ ಸೆಳೆದಾಗ ಈ ಸಂಬಂಧ ಜಿಲ್ಲಾಧಿಕಾರಿ ಮತ್ತು ಅರಣ್ಯಾಧಿಕಾರಿಗಳೊಂದಿಗೆ ಚರ್ಚಿಸಿದ್ದು, ಅರಣ್ಯದ ಮಧ್ಯದಲ್ಲಿರುವ ಅತ್ಯಂತ ಚಿಕ್ಕ ಗ್ರಾಮಗಳನ್ನು ಸ್ಥಳಾಂತರಿಸುವ ಕುರಿತು ಯೋಜನೆ ರೂಪಿಸುವಂತೆ ಸೂಚನೆ ನೀಡಲಾಗುವುದೆಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಉಪಸ್ಥಿತರಿದ್ದರು.