ಹೈದ್ರಾಬಾದ್ ಪಶುವೈದ್ಯೆ ಮೇಲಿನ ಗ್ಯಾಂಗ್ ರೇಪ್ ಹಾಗೂ ಹತ್ಯೆ ಪ್ರಕರಣ| ಕರ್ನಾಟಕ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಆಕ್ರೋಶ| ಇಡಿ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ ಇಡಿ ಅಧಿಕಾರಿಗಳು ಮತ್ತೆ ವಿಚಾರಣೆಗೆ ಕರೆದರೆ ಹೋಗಲೇಬೇಕು| ಇದಕ್ಕೆ ರಾಜಕೀಯ ಪಿತೂರಿ ಎಂದು ಆರೋಪಿಸುವುದು ಸರಿಯಲ್ಲ|
ಹುನಗುಂದ[ಡಿ. 04]: ಹೈದ್ರಾಬಾದ್ ಪಶುವೈದ್ಯೆ ಮೇಲಿನ ಗ್ಯಾಂಗ್ ರೇಪ್ ಹಾಗೂ ಹತ್ಯೆ ಪ್ರಕರಣ ಮಾನವೀಯತೆ ಇಲ್ಲದ ಕ್ರೂರ ಕೃತ್ಯ. ಈ ಘಟನೆಗೆ ಕಾರಣರಾದ ಕಾಮುಕರಿಗೆ ಗಲ್ಲುಶಿಕ್ಷೆಯೇ ಆಗಬೇಕು ಎಂದು ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಹುನಗುಂದದಲ್ಲಿ ಈ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಶಿಕ್ಷೆ ಬಿಟ್ಟು ಬೇರಾರಯವ ಶಿಕ್ಷೆ ನೀಡಿದರೂ ಸರಿಯಾದ ಕ್ರಮವಲ್ಲ. ತೀರ್ಪು ಪ್ರಕಟವಾಗಲು ವಿಳಂಬವೂ ಆಗಕೂಡದು. ವಿಳಂಬವಾದಷ್ಟು ಅದರ ಮಹತ್ವ ಕಡಿಮೆಯಾಗುತ್ತಾ ಹೋಗುತ್ತದೆ ಎಂದು ಪ್ರತಿಕ್ರಿಯಿಸಿದರು.
ಇಡಿ ವಿಚಾರಣೆ ಎದುರಿಸುತ್ತಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ ಇಡಿ ಅಧಿಕಾರಿಗಳು ಮತ್ತೆ ವಿಚಾರಣೆಗೆ ಕರೆದರೆ ಹೋಗಲೇಬೇಕು. ಇದಕ್ಕೆ ರಾಜಕೀಯ ಪಿತೂರಿ ಎಂದು ಆರೋಪಿಸುವುದು ಸರಿಯಲ್ಲ. ತಪ್ಪು ಮಾಡಿದ ಆರೋಪದ ಮೇಲೆ ಈ ಪ್ರಕ್ರಿಯೆಗಳು ನಡೆಯುತ್ತವೆ. ಇಡಿ ಅಧಿಕಾರಿಗಳ ನೋಟಿಸ್ ಮತ್ತು ಆದೇಶದಂತೆ ವಿಚಾರಣೆ ಎದುರಿಸುವವರು ನಡೆದುಕೊಳ್ಳಲೇಬೇಕು ಎಂದರು.
ಸ್ವಾಯತ್ತ ಸಂಸ್ಥೆಯಾದ ಇಡಿಯನ್ನು ಬಿಜೆಪಿ ಸರ್ಕಾರ ದುರುಪಯೋಗಪಡಿಸಿಕೊಳ್ಳುತ್ತಿದೆ ಎಂಬ ಕಾಂಗ್ರೆಸ್ ಮುಖಂಡರ ಆರೋಪದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ನೀವು ಅಧಿಕಾರದಲ್ಲಿದ್ದಾಗ ಮಾಡಿಲ್ಲವೇನ್ರಿ ಅಂತ ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಹೀಗಾಗಿ ನಾನು ಯಾವುದೇ ಪ್ರತಿಕ್ರಿಯೆ ನೀಡಲಾರೆ ಎಂದು ಹೇಳಿದರು.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ರಾಮಮಂದಿರ ತೀರ್ಪು ಐತಿಹಾಸಿಕ ತೀರ್ಪು. ಅದು ಸರಿಯೋ, ತಪ್ಪೋ ಎಂದು ನಾನು ಪರಾಮರ್ಶೆ ಮಾಡಲಾರೆ. ಇದು ದೇಶದ ಶಾಂತಿಗಾಗಿ ಕೊಟ್ಟ ತೀರ್ಪು. ಇದನ್ನು ನಾವು ಪಾಲಿಸಲೇಬೇಕು. ಇದರಲ್ಲಿ ಪ್ರತಿಭಟನೆಯೂ ಬೇಡ, ಸಂಭ್ರಮವೂ ಬೇಡ. ಈ ತೀರ್ಪಿನ ಮರುಪರಿಶೀಲನೆಗೆ ಒತ್ತಾಯಿಸುವವರಿಗೆ ಶಾಂತಿ ಬೇಕಾಗಿಲ್ಲ. ಇದರಲ್ಲಿ ಯಾರದು ಸ್ವಂತ ಆಸ್ತಿ ಹೋಗಿಲ್ಲ. ಕಾರಣ ದೇಶದಲ್ಲಿ ಶಾಂತಿ ಕಾಪಾಡುವ ದೃಷ್ಟಿಯಿಂದ ಈ ತೀರ್ಪನ್ನು ಎಲ್ಲರೂ ಪಾಲಿಸೋಣ ಎಂದು ಹೇಳಿದ್ದಾರೆ.