ಹಾವೇರಿ ಜಿಲ್ಲೆ ಗ್ರೀನ್ ಝೋನ್‌ನಲ್ಲಿ ಇರುವುದರಿಂದ ಲಾಕ್‌ಡೌನ್ ಸಡಿಲಿಕೆ| ನಗರಗಳಲ್ಲಿ ಹಾಕಿದ್ದ ಬ್ಯಾರಿಕೇಡ್ ತೆರವುಗೊಳಿಸಿದ ಪೊಲೀಸರು| ಸಾಮಾಜಿಕ ಅಂತರದ ನಿಯಮ ಪಾಲಿಸುವುದನ್ನು ಮರೆಯುತ್ತಿರುವ ಜನ|
ಹಾವೇರಿ(ಮೇ.01): ಕೊರೋನಾ ಪಾಸಿಟಿವ್ ಪ್ರಕರಣವಿಲ್ಲದ ಜಿಲ್ಲೆಗಳಲ್ಲಿ ಆರ್ಥಿಕ ಚಟುವಟಿಕೆ ಆರಂಭಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ನೀಡಿರುವ ಹಿನ್ನೆಲೆಯಲ್ಲಿ ಸುಮಾರು 40 ದಿನಗಳ ಬಳಿಕ ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟು ಪುನಾರಂಭಗೊಂಡಿದೆ.
ಅಲ್ಲಲ್ಲಿ ರಸ್ತೆ ಮಧ್ಯೆ ಹಾಕಿದ್ದ ಬ್ಯಾರಿಕೇಡ್‌ಗಳನ್ನು ಪೊಲೀಸರು ತೆರವುಗೊಳಿಸಿದ್ದು, ಸಾರ್ವಜನಿಕರ ಮುಕ್ತ ಸಂಚಾರಕ್ಕೆ ಅನುಕೂಲವಾಗಿದೆ. ಆದರೆ, ಇನ್ನಷ್ಟುದಿನ ಮುಂಜಾಗೃತೆ ಅಗತ್ಯವಿದೆ ಎನ್ನುವುದನ್ನು ಮರೆತಂತೆ ಜನತೆ ವರ್ತಿಸುತ್ತಿದ್ದಾರೆ.
ಆರ್ಥಿಕ ಚಟುವಟಿಕೆ ಆರಂಭಕ್ಕೆ ಸರ್ಕಾರ ಎರಡು ದಿನಗಳ ಹಿಂದೆಯೇ ಆದೇಶ ಮಾಡಿದ್ದರೂ ಕೆಲವೊಂದು ಅಂಗಡಿಗಳ ವಿಷಯದಲ್ಲಿ ಗೊಂದಲ ಮಾಡಿಕೊಂಡು ಇಲ್ಲಿಯ ಪೊಲೀಸರು ಬುಧವಾರ ಚಿನ್ನಾಭರಣ, ಬಟ್ಟೆ, ರೆಡಿಮೇಡ್ ಗಾರ್ಮೆಂಟ್ಸ್ ಮಳಿಗೆ ತೆರೆಯಲು ಅವಕಾಶ ನೀಡಿರಲಿಲ್ಲ. ಆದರೆ, ಜಿಲ್ಲಾಧಿಕಾರಿಗಳು ಈ ಬಗ್ಗೆ ಮತ್ತೊಂದು ಆದೇಶ ಹೊರಡಿಸಿ, ಹಲವು ಶರತ್ತುಗಳನ್ನು ವಿಧಿಸಿ ಅಂಗಡಿ ತೆರೆಯಲು ಅವಕಾಶ ಕಲ್ಪಿಸಿದ್ದಾರೆ. ಇದರಿಂದ ಗುರುವಾರ ಹಲವು ಅಂಗಡಿಗಳು ಬಾಗಿಲು ತೆರೆದಿವೆ.
'ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ಬಗ್ಗೆ ಸುಳ್ಳು ಸುದ್ದಿ ಹರಡಿದ್ರೆ ಕಠಿಣ ಕ್ರಮ'
ದಿನಸಿ, ತರಕಾರಿ, ಮೆಡಿಕಲ್ ಶಾಪ್‌ಗಳು ಮಾತ್ರ ಲಾಕ್‌ಡೌನ್ ಆರಂಭವಾದಾಗಿನಿಂದಲೂ ಜಿಲ್ಲಾದ್ಯಂತ ಎಂದಿನಂತೆ ಕಾರ್ಯನಿರ್ವಹಿಸುತ್ತಿದ್ದವು. ಆದರೆ. ಉಳಿದ ಯಾವ ಅಂಗಡಿಗಳನ್ನು ತೆರೆಯಲು ಅವಕಾಶ ಇರಲಿಲ್ಲ. ಮಾ. 22ರಿಂದ ಬರೋಬ್ಬರಿ 40 ದಿನಗಳ ಕಾಲ ವ್ಯಾಪಾರ ವಹಿವಾಟಿಗೆ ಅವಕಾಶ ಸಿಕ್ಕಿರಲಿಲ್ಲ. ಈಗ ನಿಯಮ ಸಡಿಲಗೊಳಿಸಿರುವುದು ಹಾಗೂ ಕೆಲವೊಂದು ವ್ಯಾಪಾರಕ್ಕೆ ಅವಕಾಶ ನೀಡಿರುವುದರಿಂದ ಆರ್ಥಿಕ ಚಟುವಟಿಕೆ ಗರಿಗೆದರಿವೆ. ಇಲೆಕ್ಟ್ರಿಕಲ್ಸ್, ಎಲೆಕ್ಟ್ರಾನಿಕ್ಸ್, ಚಪ್ಪಲಿ, ಹಾರ್ಡ್‌ವೇರ್, ಮೊಬೈಲ್ ರಿಪೇರಿ, ಜ್ಯುವೆಲರಿ ಶಾಪ್, ಜವಳಿ ಅಂಗಡಿಗಳು ತೆರೆದಿವೆ. ಹೋಟೆಲ್‌ಗಳು ಅರ್ಧ ಬಾಗಿಲು ತೆಗೆದುಕೊಂಡು ಪಾರ್ಸಲ್ ಸೇವೆಯನ್ನಷ್ಟೇ ನೀಡುತ್ತಿವೆ. ಇದರಿಂದ ಜನರಿಗೆ ಅಗತ್ಯ ಸಾಮಗ್ರಿ ಖರೀದಿಗೆ ಅನುಕೂಲವಾಗಿದ್ದು, ಹಸಿರು ವಲಯದಲ್ಲಿರುವುದರ ಪ್ರಯೋಜನ ಸಿಕ್ಕಂತಾಗಿದೆ.
ಪಾಲನೆಯಾಗದ ನಿಯಮ:
ಲಾಕ್‌ಡೌನ್ ಸಡಿಲಿಕೆಯಾದರೂ ಹಲವು ನಿಯಮಗಳು ಕಡ್ಡಾಯವಾಗಿವೆ. ಆದರೆ, ಅನೇಕರು ಈಗಲೇ ನಿಯಮ ಗಾಳಿಗೆ ತೂರುತ್ತಿದ್ದಾರೆ. ಅಂಗಡಿಗಳ ಎದುರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸಾಮಗ್ರಿ ಖರೀದಿಯಲ್ಲಿ ತೊಡಗಿದ್ದಾರೆ. ಅದರಲ್ಲೂ ಮಾರುಕಟ್ಟೆ ದೇಶದಲ್ಲಿ ಬೇಕಾಬಿಟ್ಟಿಯಾಗಿ ಸಂಚರಿಸುತ್ತಿದ್ದಾರೆ. ಮಾಸ್ಕ್ ಕೂಡ ಹಾಕಿಕೊಳ್ಳದೇ ಓಡಾಡುತ್ತಿದ್ದಾರೆ. ಅಂಗಡಿ ಮಾಲೀಕರು ಈ ಬಗ್ಗೆ ತಿಳಿಹೇಳಿದರೂ ಕೇಳುತ್ತಿಲ್ಲ. ಏನಾದರೂ ಹೆಚ್ಚುಕಮ್ಮಿಯಾಗಿ ಪಾಸಿಟಿವ್ ಕೇಸ್ ಬಂದರೆ ಮತ್ತೆ ಎಲ್ಲರೂ ಸಮಸ್ಯೆ ಎದುರಿಸಬೇಕಾಗಿ ಬಂದರೂ ಬರಬಹುದು ಎಂದು ಅನೇಕರು ಹೇಳುತ್ತಿದ್ದಾರೆ.
ವಹಿವಾಟು ಕಡಿಮೆ:
ಆರ್ಥಿಕ ಚಟುವಟಿಕೆಗೆ ಅವಕಾಶ ಸಿಕ್ಕಿದ್ದರಿಂದ ಅಂಗಡಿ ಮಾಲೀಕರು ಬಾಗಿಲು ತೆರೆದು ಕೂತಿದ್ದಾರೆ. ಆದರೆ, ಗ್ರಾಹಕರ ಸಂಖ್ಯೆ ಕಡಿಮೆ. ಗ್ರಾಮೀಣ ಭಾಗಗಳಿಂದ ಜನರು ಬರಲು ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ವಹಿವಾಟು ನಡೆಯುತ್ತಿಲ್ಲ. ತಿಂಗಳಿಂದ ಅಂಗಡಿ ತೆರೆಯದೇ ಧೂಳು ಹಿಡಿದಿದ್ದ ಸಾಮಗ್ರಿಗಳನ್ನು ಒರೆಸುತ್ತ ಕಾಲ ಕಳೆಯುತ್ತಿದ್ದಾರೆ. ಇಷ್ಟುದಿನ ತಳ್ಳುಗಾಡಿಯಲ್ಲಿ ತರಕಾರಿ, ಸೊಪ್ಪು, ಹಣ್ಣು ಮಾರುತ್ತಿದ್ದವರು ಈಗ ದೈನಂದಿನ ಮಾರುಕಟ್ಟೆಯಲ್ಲಿ ಕೂತಿದ್ದಾರೆ. ಅಲ್ಲಿ ಜನರ ಓಡಾಟ ಹೆಚ್ಚಿದೆ. ಬಟ್ಟೆ, ಜ್ಯುವೆಲರಿ ಶಾಪ್‌ಗಳಲ್ಲಿ ಗ್ರಾಹಕರ ಸಂಖ್ಯೆ ವಿರಳವಾಗಿದೆ. ಆದರೂ ಬಹಳ ದಿನಗಳ ತರುವಾಯ ಮಾರುಕಟ್ಟೆಯಲ್ಲಿ ಅಲ್ಪಮಟ್ಟಿನ ಜೀವಂತಿಕೆ ಬಂದಂತಾಗಿದೆ. ಬಸ್, ಆಟೋ ರಿಕ್ಷಾ ಸಂಚಾರಕ್ಕೆ ಅವಕಾಶ ಸಿಗದ್ದರಿಂದ ಬಂದ್ ರೀತಿಯ ವಾತಾವರಣವೇ ಇದೆ.
ಲಾಕ್‌ಡೌನ್ ನಿಯಮ ಸಡಿಲಿಸಿದ್ದರಿಂದ ಅನುಕೂಲವಾಗಿದೆ. ಆದರೆ, ಇನ್ನೂ ವ್ಯಾಪಾರ ಸರಿದಾರಿಗೆ ಬರಲು ಹಲವು ದಿನಗಳೇ ಬೇಕು. ಜನರ ತುರ್ತು ಅಗತ್ಯತೆಗಳು ಕಡಿಮೆಯಾಗಿವೆ. ದಿನಸಿ, ಔಷಧ ಬಿಟ್ಟರೆ ಬೇರೆ ಯಾವುದನ್ನು ಖರೀದಿಸುವ ಶಕ್ತಿ ಜನರಿಗಿಲ್ಲ. ಇದರಿಂದ ವ್ಯಾಪಾರ ಅಷ್ಟಕ್ಕಷ್ಟೇ ಎಂದು ಹಾವೇರಿಯ ವ್ಯಾಪಾರಸ್ಥ ಪೂರ್ಣಯ್ಯ ಹೆಬ್ಬಾರ ಅವರು ಹೇಳಿದ್ದಾರೆ.