ರಾಮನಗರ ಜಿಲ್ಲೆಗೆ ಹೊಸ ಹೆಸರು!?

By Kannadaprabha News  |  First Published Jan 4, 2020, 8:45 AM IST

ರಾಮನಗರ ಜಿಲ್ಲೆ ಇನ್ನು ಹೊಸ ಹೆಸರು?| ಮರುನಾಮಕರಣಕ್ಕೆ ಸರ್ಕಾರದ ಮಟ್ಟದಲ್ಲಿ ಚರ್ಚೆ| ನವಬೆಂಗಳೂರಿಗೆ ರಾಮನಗರವೇ ಜಿಲ್ಲಾ ಕೇಂದ್ರ ಸಂಭವ


ರಾಮ​ನ​ಗರ[ಜ.04]: ದೇಶ- ವಿದೇ​ಶ​ಗಳ ಬಂಡ​ವಾಳದಾರ​ರನ್ನು ಸೆಳೆ​ಯುವ ನಿಟ್ಟಿ​ನಲ್ಲಿ ರಾಮ​ನ​ಗರ ಜಿಲ್ಲೆ​ಯ ಹೆಸ​ರನ್ನು ನವ ಬೆಂಗ​ಳೂರು ಮರು ನಾಮ​ಕ​ರಣ ಮಾಡುವ ಚರ್ಚೆ ಆರಂಭ​ವಾ​ಗಿದೆ.

ಬೆಂಗ​ಳೂರು ಗ್ರಾಮಾಂತರ ಜಿಲ್ಲೆಯ ವ್ಯಾಪ್ತಿ​ಯ​ಲ್ಲಿದ್ದ ಕೆಲ ಭಾಗ​ಗ​ಳನ್ನು ರಾಮ​ನ​ಗ​ರಕ್ಕೆ ಸೇರಿಸಿ ಪ್ರತ್ಯೇ​ಕ​ವಾ​ಗಿ ರಾಮ​ನ​ಗರ ಜಿಲ್ಲೆ​ಯನ್ನು ಅಸ್ತಿ​ತ್ವಕ್ಕೆ ತರ​ಲಾ​ಗಿತ್ತು. ಜಿಲ್ಲೆಯಾಗಿ 13 ವರ್ಷ ಕಳೆ​ದರೂ ಅಭಿ​ವೃದ್ಧಿ ಕಾಣದ ಹಿನ್ನೆ​ಲೆ​ಯಲ್ಲಿ ರಾಮ​ನ​ಗ​ರ​ವನ್ನು ನವ ಬೆಂಗ​ಳೂರು ಎಂದು ಮರು ನಾಮ​ಕ​ರಣ ಮಾಡುವ ಪ್ರಸ್ತಾ​ವ​ನೆ ರಾಜ್ಯ​ಸ​ರ್ಕಾ​ರದ ಮುಂದೆ ಬಂದಿದೆ. ಇದೀಗ ಆ ಪ್ರಸ್ತಾ​ವ​ನೆ ಜಿಲ್ಲಾ​ಡ​ಳಿ​ತಕ್ಕೆ ರವಾ​ನೆ​ಯಾ​ಗಿ​ದೆ.

Latest Videos

undefined

ರಾಮ​ನ​ಗರ ಜಿಲ್ಲೆ​ಯಲ್ಲಿ ಬಿಡದಿ ಹಾಗೂ ಹಾರೋ​ಹಳ್ಳಿ ಕೈಗಾ​ರಿಕಾ ಪ್ರದೇ​ಶ​ಗ​ಳಿವೆ. ಆದರೂ ಜಿಲ್ಲೆಯು ನಿರೀ​ಕ್ಷಿ​ಸಿ​ದಷ್ಟುಅಭಿ​ವೃದ್ಧಿ ಹೊಂದಿಲ್ಲ. ಅಲ್ಲದೆ, ನಿರೀ​ಕ್ಷಿತ ಮಟ್ಟ​ದಲ್ಲಿ ಕೈಗಾ​ರಿಕಾ ಬೆಳ​ವ​ಣಿ​ಗೆಯೂ ಆಗಿಲ್ಲ. ಇದಕ್ಕೆ ರಾಮ​ನ​ಗರ ಎಂಬ ಹೆಸರೇ ಕಾರಣ ಎನ್ನ​ಲಾ​ಗು​ತ್ತಿ​ದೆ. ಈ ಉದ್ದೇ​ಶ​ದಿಂದಲೇ ರಾಮ​ನ​ಗರ ಪಟ್ಟಣ ಅಥವಾ ರಾಮ​ನ​ಗರ ಜಿಲ್ಲೆ​ಯನ್ನು ನವ ಬೆಂಗ​ಳೂರು ಎಂದು ಮರು ನಾಮ​ಕ​ರಣ ಮಾಡುವ ಚಿಂತನೆ ಸರ್ಕಾ​ರದ ಮಟ್ಟ​ದಲ್ಲಿ ನಡೆ​ದಿ​ದೆ. ಖುದ್ದು ರಾಮನಗರ ಜಿಲ್ಲಾ ಉಸ್ತುವಾರಿಯೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರೇ ಈ ಬಗ್ಗೆ ಆಸಕ್ತಿ ವಹಿಸಿ ಪ್ರಯತ್ನ ಆರಂಭಿಸಿದ್ದಾರೆ ಎನ್ನಲಾಗಿದೆ.

ಮಂಗಳೂರು ಜಿಲ್ಲಾ ಕೇಂದ್ರವಾಗಿದ್ದರೂ, ದಕ್ಷಿಣ ಕನ್ನಡ ಜಿಲ್ಲೆಯ ಹೆಸರಿದೆ. ಉತ್ತರ ಕನ್ನಡ ಜಿಲ್ಲೆಯಾಗಿದ್ದರೂ, ಜಿಲ್ಲಾ ಕೇಂದ್ರ ಕಾರವಾರವಾಗಿದೆ. ಇನ್ನು ದೆಹಲಿಯ ಹೆಸರು ನವ ದೆಹಲಿ, ಬಾಂಬೆ ಹೆಸರು ಮುಂಬೈ ಆಗಿ ಬದಲಾಗಿವೆ. ರಾಮನಗರ ಜಿಲ್ಲೆಯ ಬದಲಿಗೆ ನವ ಬೆಂಗಳೂರು ಎಂಬ ಹೆಸರು ಘೋಷಣೆ ಮಾಡ​ಬೇ​ಕೆಂಬ ಸಲ​ಹೆ​ಗಳು ಕೇಳಿ ಬರು​ತ್ತಲೇ ಇತ್ತು.

ಐಟಿ​-ಬಿಟಿ ಸಿಟಿ ಎಂದೇ ಬೆಂಗ​ಳೂರು ಪ್ರಖ್ಯಾತಿ ಹೊಂದಿದೆ. ಅದರ ಸನಿ​ಹ​ದ​ಲ್ಲಿಯೇ ಇರುವ ರಾಮ​ನ​ಗರ ಮಾತ್ರ ಅಭಿ​ವೃದ್ಧಿಯಿಂದ ವಂಚಿ​ತ​ವಾ​ಗಿದೆ. ವಿದೇಶಿ ಕಂಪ​ನಿ​ಗಳು ಮಾತ್ರ​ವ​ಲ್ಲದೆ ನೆರೆಯ ರಾಜ್ಯ​ಗಳ ಕಾರ್ಖಾ​ನೆ​ಗಳು ರಾಮ​ನ​ಗ​ರ​ದಲ್ಲಿ ಬಂಡ​ವಾಳ ಹೂಡಲು ಮುಂದೆ ಬರು​ತ್ತಿಲ್ಲ. ರಾಮ​ನಗರವು ಜಿಲ್ಲೆ ಎಂಬ ಮನೋ​ಭಾ​ವ​ನೆಯೇ ಬಂದಿಲ್ಲ.

ಈಗಲೂ ಬಂಡ​ವಾಳದಾರರು ಬೆಂಗ​ಳೂ​ರಿ​ನಲ್ಲಿ ಸಾವಿ​ರಾರು ಕೋಟಿ ರುಪಾಯಿ ಹೂಡಿಕೆ ಮಾಡಲು ಸಿದ್ಧ​ರಾ​ಗಿ​ದ್ದಾರೆ. ಹೀಗಾಗಿ ಅವ​ರನ್ನು ರಾಮ​ನ​ಗರ ಜಿಲ್ಲೆ​ಯತ್ತ ಸೆಳೆ​ಯುವ ಚಿಂತನೆ ರಾಜ್ಯ​ ಸ​ರ್ಕಾ​ರ​ದ್ದಾ​ಗಿದೆ. ಆದ್ದ​ರಿಂದ ರಾಮ​ನ​ಗರ ಜಿಲ್ಲೆ ಎಂಬ ಹೆಸ​ರನ್ನು ನವ ಬೆಂಗ​ಳೂರು ಎಂದು ಮರು ನಾಮ​ಕ​ರಣ ಮಾಡುವ ಆಲೋ​ಚನೆ ನಡೆ​ಯು​ತ್ತಿ​ದೆ.

ನೂತನ ತಾಲೂಕಾಗಿ ಘೋಷ​ಣೆ​ಯಾ​ಗಿ​ರುವ ಹಾರೋಹಳ್ಳಿ ಸೇರಿದಂತೆ ಇನ್ನುಳಿದ ನಾಲ್ಕು ತಾಲೂಕುಗಳು ತನ್ನ ಹೆಸರನ್ನು ಹಾಗೆಯೇ ಉಳಿಸಿಕೊಳ್ಳಲಿವೆ. ರಾಮನಗರ ತಾಲೂಕು ಸಹ ಹಾಗೆಯೇ ಇರಲಿದೆ. ಜಿಲ್ಲಾ ಕೇಂದ್ರವು ರಾಮನಗರ ಪಟ್ಟಣವೇ ಇರಲಿದೆ. ಆದರೆ, ಜಿಲ್ಲೆಯ ಹೆಸರನ್ನು ಮಾತ್ರ ರಾಮನಗರದ ಬದಲಿಗೆ ನವ ಬೆಂಗಳೂರು ಎಂದು ಬದಲಾಯಿಸಲಾ​ಗು​ತ್ತಿ​ದೆ. ಅಲ್ಲದೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕೆಲ ತಾಲೂಕುಗಳು ಸಹ ಈ ನವ ಬೆಂಗಳೂರು ಜಿಲ್ಲೆಗೆ ಸೇರಿಸಬೇಕೆ, ಬೇಡವೇ ಎಂಬುದರ ಬಗ್ಗೆಯೂ ಚರ್ಚೆ​ಗಳು ನಡೆ​ದಿವೆ.

ಲಾಭ​ ಏನು?

ಜಿಲ್ಲೆ​ಯಲ್ಲಿ ದೇಶ, ವಿದೇಶಗಳ ಕಂಪನಿಗಳು ಬಂಡವಾಳ ಹೂಡಿಕೆ ಮಾಡ​ಲಿವೆ. ಜಿಲ್ಲೆಯು ಸರ್ವತೋಮುಖವಾಗಿ ಅಭಿ​ವೃದ್ಧಿ ಹೊಂದ​ಲಿದೆ. ಬೆಂಗಳೂರು ಮಾದರಿಯಲ್ಲಿಯೇ ಜಿಲ್ಲೆ ಐಟಿ ಹಬ್‌ ಆಗಲಿದೆ. ರೈತರ ಭೂಮಿಗೆ ಚಿನ್ನದ ಬೆಲೆ ದೊರೆಯಲಿದೆ. ಸಾವಿರಾರು ನಿರುದ್ಯೋಗಿಗಳಿಗೆ ಉದ್ಯೊಗ ದೊರೆಯಲಿದೆ. ಪ್ರವಾಸೋದ್ಯಮ ಅಭಿವೃದ್ಧಿಯಾಗಲು ಸಹ​ಕಾ​ರಿ​ಯಾ​ಗ​ಲಿದೆ

click me!