* ಮಳೆಗಾಲ ಎದುರಿಸಲು ಚಿಕ್ಕಮಗಳೂರು ಜಿಲ್ಲಾಡಳಿತ ಸರ್ವಸನ್ನದ್ಧ
* 31 ಭೂ ಕುಸಿತ ಪ್ರದೇಶಗಳನ್ನು ಗುರುತಿಸಿರುವ ಜಿಲ್ಲಾಡಳಿತ
* ಮೂಡಿಗೆರೆ ತಾಲ್ಲೂಕು ವ್ಯಾಪ್ತಿಯಲ್ಲಿ ಸಂಭವಿಸುವ ಭೂ ಕುಸಿತದ ಸ್ಥಳ ಪಟ್ಟಿ
* ಮಳೆಗಾಲದಲ್ಲಿ ಉಂಟಾಗುವ ಅವಘಡಗಳನ್ನು ತಡೆಯಲು ಪ್ಲಾನ್
ವರದಿ : ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು
ಚಿಕ್ಕಮಗಳೂರು, (ಜೂನ್.05): ಚಿಕ್ಕಮಗಳೂರು ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭಕ್ಕೆ ಕಾಲ ಸನ್ನಿಹಿತವಾಗಿದೆ. ಮಳೆಯಿಂದ ಭೂಕುಸಿತ ಸಂಭವಿಸಬಹುದಾದ 31 ಪ್ರದೇಶಗಳನ್ನು ಗುರುತಿಸಿದ್ದು, ಅವಘಡ ಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಗಣಿ ಮತ್ತು ಭೂವಿಜ್ಞಾನ ಇಲಾಖೆ ಎಚ್ಚರಿಕೆ ವಹಿಸಿದೆ.
ಜಿಲ್ಲಾಡಳಿತದಿಂದ ಮುನ್ನಚ್ಚೇರಿಕೆ ಕ್ರಮ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲೆ ಹೆಚ್ಚು 31 ಭೂಕುಸಿತ ಪ್ರದೇಶಗಳನ್ನು ಗುರುತಿಸಲಾಗಿದ್ದು, ಭೂಕುಸಿತ ಉಂಟಾಗದಂತೆ ಜಿಲ್ಲಾಡಳಿತ ಕಟ್ಟೆಚ್ಚರವಹಿಸಿದೆ. 2019-20ನೇ ಸಾಲಿನಲ್ಲಿ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಹಾಮಳೆ ಅನಾಹುತ ಸೃಷ್ಟಿಸಿತ್ತು. ಭೂಕುಸಿತ ಸಂಭವಿಸಿ ಅಪಾರ ಪ್ರಮಾಣ ಆಸ್ತಿಪಾಸ್ತಿ, ಮನೆ, ಜೀವಹಾನಿ ಸಂಭವಿಸಿತ್ತು. ಅಲ್ಲಿಂದ ಎಚ್ಚೇತ್ತುಕೊಂಡ ಜಿಲ್ಲಾಡಳಿತ ಸಂಭವಿಸಬಹುದಾದ ಅವಘಡವನ್ನು ತಪ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮುಂಜಾಗೃತ ಕ್ರಮಗಳನ್ನು ಕೈಗೊಂಡಿದೆ.
ಚಿಕ್ಕಮಗಳೂರು: ಮಳೆಗಾಲ ಎದುರಿಸಲು ಜಿಲ್ಲಾಡಳಿತ ಸರ್ವಸನ್ನ
ಕೊಟ್ಟಿಗೆಹಾರ ಚಾರ್ಮಾಡಿಘಾಟಿ, ಅಲೇಖಾನ್ಹೊರಟ್ಟಿ, ಹಳ್ಳಿಕೆರೆ, ಚನ್ನಹಡ್ಲು, ಬಾಳೂರುಹೊರಟ್ಟಿ,ಭೂತನಕಾಡು, ಮಲೆಮನೆ, ಮೇಗೂರು, ಜಾವಳಿ, ಮಧುಗುಂಡಿ, ಬಲಿಗೆ, ದುರ್ಗದಹಳ್ಳಿ, ಆವತಿಹೊಸಳ್ಳಿ, ಶಿರವಾಸೆ, ಚನ್ನಡ್ಲುಕಾಫಿ ಎಸ್ಟೇಟ್(ಮಲ್ಲೇಶ್ವರಗುಡ್ಡ) ಬೂದಿಗುಂಡಿ, ಯಡೂರು,ಯಳಂದೂರು, ಕೋಟೆಮಕ್ಕಿ, ಹೆಮ್ಮಕ್ಕಿ, ಕಸ್ಕೆಬೈಲು, ದೇವವೃಂದ, ಅತ್ತಿಗೆರೆ, ಕೆಳಗೂರು, ಕೆಳಗೂರು ಕಾಫಿಎಸ್ಟೇಟ್, ಮಸ್ತಿಖಾನ್ಕಾಫಿತೋಟ ಸುಂಕಸಾಲೆ, ಬದನೆಖಾನ್ಕಾಫಿಎಸ್ಟೇಟ್, ಕುಣಿಯಳ್ಳಿ,ಬಲ್ಲಾಳರಾಯನದುರ್ಗ, ದುರ್ಗದಹಳ್ಳಿಗಳ ಗ್ರಾಮಗಳನ್ನು ಪಟ್ಟಿಮಾಡಲಾಗಿದೆ.
ಅಧಿಕಾರಿಗಳ ತಂಡಯಿಂದ ಸರ್ವೇ ಕಾರ್ಯ
ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ಅಧಿಕಾರಿಗಳ ತಂಡ ಜಿಲ್ಲೆಯ ಭೂ ಕುಸಿತ ಪ್ರದೇಶಗಳಿಗೆ ಭೇಟಿನೀಡಿ ಪರಿಶೀಲಿಸಿ ಅಗತ್ಯಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಡಳಿತ ಸಲಹೆ ನೀಡಿದ್ದು, ಅದರಂತೆ ಸಭೆ ನಡೆಸಿದ ಜಿಲ್ಲಾಧಿಕಾರಿಗಳು ಸಂಬಂಧಿಸಿ ಇಲಾಖೆ ಅಧಿಕಾರಿಗಳಿಗೆ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದರಿಂದ ಕಳೆದ ಬಾರಿ ಹೇಳಿಕೊಳ್ಳುವಂತಹ ಭೂ ಕುಸಿತ ಸಂಭವಿಸಿರಲಿಲ್ಲ. ಜೊತೆಗೆ ಜಿಯಾಲಜಿಕಲ್ ಸರ್ವೆ ಆಫ್ ಇಂಡಿಯಾ ತಂಡವು ನೀಡಿದ ಸಲಹೆಗಳನ್ನು ಜಿಲ್ಲಾಡಳಿತ ಚಾಚು ತಪ್ಪದೆ ಪಾಲಿಸಲಾಗಿತ್ತು. ಈ ಸಲದ ಮಳೆಗಾಲದಲ್ಲಿ ಅವಘಡಗಳು ಸಂಭವಿಸದಂತೆ ಕ್ರಮಕೈಗೊಳ್ಳಲು ಲೋಕೋಪಯೋಗಿ ಇಲಾಖೆ, ಪಂ ಚಾಯತ್ ರಾಜ್ ಇಲಾಖೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
ಇನ್ನೇನು ಮುಂಗಾರು ಮಳೆ ಆರಂಭದ ದಿನಗಳು ಹತ್ತಿರವಾಗುತ್ತಿದೆ. ಈ ವರ್ಷದ ಮುಂಗಾರು ಮಳೆಯಿಂದ ಸಂಭವಿಸಬಹುದಾದ ಅನಾಹುತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಮತ್ತು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮಕೈಗೊಳ್ಳ ಲಾಗಿದೆ.2019 _20ನೇ ಸಾಲಿನಲ್ಲಿ ಸಂಭವಿಸಿದ ಅನಾಹುತ ಪ್ರದೇಶಗಳಿಗೆ ಕಳೆದ ವರ್ಷ ಜಿಯಾ ಲಾಜಿಕಲ್ ಸರ್ವೇ ಆಫ್ ಇಂಡಿಯಾ ಅಧಿಕಾರಿಗಳ ತಂಡ ಬೇಟಿನೀಡಿ ಪರಿಶೀಲನೆ ನಡೆಸಿ ಕೆಲವು ಸೂಚನೆಗಳನ್ನು ನೀಡಿದ್ದರು. ಅದರಂತೆ ಭೂ ಕುಸಿತ ಪ್ರದೇಶಗಳನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗಿದೆ.
ಇದರಿಂದ ಕಳೆದ ವರ್ಷ ಹೆಚ್ಚಿನ ಅನಾಹುತ ಸಂಭವಿಸಿರಲಿಲ್ಲ. ಅದರಂತೆ ಈ ವರ್ಷವು ವಿವಿಧ ಇಲಾಖೆಗಳ ಸಹಕಾರದೊಂದಿಗೆ ಸೂಕ್ತ ಕ್ರಮಕೈಗೊಳ್ಳಲಾಗಿದೆ ಎಂದು ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿಂಧ್ಯಾ ತಿಳಿಸಿದರು. ಅಲ್ಲದೆ 2019ರಲ್ಲಿ ಅತಿವೃಷ್ಟಿಯಿಂದ ಬೀದಿಗೆ ಬಿದ್ದ ಬಹುತೇಕ ಕುಟುಂಬಗಳು ಎರಡು ವರ್ಷಗಳಾದರೂ ಸರ್ಕಾರದಿಂದ ಸೌಲಭ್ಯ ಸಿಗದೆ ನೆಮ್ಮದಿಯ ಜೀವನ ನಡೆಸಲು ಸಂತ್ರಸ್ತರಿಗೆ ಅಸಾಧ್ಯವಾಗಿದ್ದು, ನಿರುಂಬಳವಾಗಿ ಜೀವನ ಸಾಗಿಸುವುದು ಕಷ್ಟಸಾಧ್ಯವಾಗಿದೆ.