ಶಿವಮೊಗ್ಗ ಸೆಂಟ್ರಲ್ ಜೈಲಿನಲ್ಲಿ ಸಾವಿರ ರುಪಾಯಿ ಸರದಾರ, ಏನಿದು ಜೈಲಿನ ಸರದಾರ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.
ಶಿವಮೊಗ್ಗ [ನ.28]: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಕನ್ನಡದ ಕೋಟ್ಯಧಿಪತಿ ಮಾದರಿಯಲ್ಲಿ ಇಲ್ಲಿನ ಸೆಂಟ್ರಲ್ ಜೈಲ್‌ನಲ್ಲಿ ಸಜಾಬಂಧಿ ಕೈದಿಗಳಿಗೆ ‘ಸಾವಿರ ರುಪಾಯಿ ಸರದಾರ’ ಎಂಬ ವಿನೂತನ ಕಾರ್ಯಕ್ರಮವೊಂದನ್ನು ರೂಪಿಸಲಾಗಿದೆ.
ಜ್ಞಾನಾವೃದ್ಧಿ ಮತ್ತು ಮಾನಸಿಕ ಬದಲಾವಣೆ ದೂರದೃಷ್ಟಿಯನ್ನು ಇಟ್ಟುಕೊಂಡು ಈ ಕಾರ್ಯಕ್ರಮ ರೂಪಿಸಲಾಗಿದ್ದು, ಈ ಮೂಲಕ ವಿವಿಧ ಕಾರಣ ಗಳಿಂದಾಗಿ ಜೈಲುಹಕ್ಕಿಗಳಾಗಿರುವವ ಮನ ಪರಿವರ್ತನೆಯ ಪ್ರಯತ್ನವೊಂದನ್ನು ನಡೆಸಲಾಗುತ್ತಿದೆ. ಕಷ್ಟಪಟ್ಟರೆ ತಾವೂ ಇಂತಹದೊಂದು ಸಾಧನೆ ಮಾಡಬಹುದು ಎಂಬುದನ್ನು ಇಲ್ಲಿ ಕಲಿಸಲಾಗುತ್ತದೆ.
ಸಂವಿಧಾನ ದಿನಾಚರಣೆ ಅಂಗವಾಗಿ ಮಂಗಳವಾರ ಇಲ್ಲಿನ ಕೇಂದ್ರ ಕಾರಾಗೃಹದಲ್ಲಿನ ಸಜಾ ಬಂಧಿಗಳಿಗೆ ಈ ಕಾರ್ಯಕ್ರಮ ನಡೆಸಲಾಯಿತು. ಪ್ರತಿ ತಿಂಗಳೂ ಈ ರೀತಿಯ ಕಾರ್ಯಕ್ರಮ ನಡೆಯುತ್ತದೆ. ಗೆದ್ದವರು ಹಣ ಗಳಿಸುತ್ತಾರೆ. ಆ ಹಣ ಅವರ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಸಂವಿಧಾನದ ರಚನೆ, ಹಿನ್ನೆಲೆ, ಶಿಕ್ಷೆಯ ಸ್ವರೂಪ, ಸಂವಿಧಾನದಲ್ಲಿರುವ ವಿಧಿಗಳ ಸಂಖ್ಯೆ, ಪಾಲಿಸಬೇಕಾದ ಕರ್ತವ್ಯಗಳ ಸಂಖ್ಯೆ, ಸಂವಿಧಾನದ ಅನುಚ್ಛೇದ ಸೇರಿದಂತೆ ಸಂವಿಧಾನದ ಕುರಿತಂತೆ ಪ್ರಶ್ನೆಗಳನ್ನು ಕೇಳಲಾಯಿತು. ಇದರ ಮಧ್ಯದಲ್ಲಿ ಸಂವಿಧಾನ ರಚನೆಯ ಸಂದರ್ಭ ಕುರಿತ ವಿಡಿಯೋಗಳ ತುಣುಕುಗಳನ್ನು ಕೂಡ ಕೈದಿಗಳಿಗೆ ಪ್ರದರ್ಶಿಸಲಾಯಿತು.
ಈ ಕಾರ್ಯಕ್ರಮಕ್ಕೋಸ್ಕರ ಈ ಮಾಹಿತಿಯನ್ನೆಲ್ಲಾ ಪಡೆದ ಕೈದಿಗಳ ಮುಖದಲ್ಲಿ ಅಚ್ಚರಿ ಕಾಣಿಸುತ್ತಿತ್ತು. ಒಂದು ದೇಶದ ವ್ಯವಸ್ಥೆಯ ಹಿಂದೆ ಇಷ್ಟೆಲ್ಲಾ ಇದೆಯಾ ಎಂಬ ಉದ್ಗಾರಅವರಲ್ಲಿಯೇ ವಿನಿಮಯವಾಗುತ್ತಿತ್ತು.
ಹೇಗಿರುತ್ತೆ ಈ ಕ್ವಿಜ್?: ಪ್ರತಿ ತಿಂಗಳೂ ಒಂದೊಂದು ವಿಷಯದ ಕುರಿತು ಕ್ವಿಜ್ ಕಾರ್ಯಕ್ರಮ ನಡೆಯುತ್ತದೆ. ಪ್ರತಿ ರೌಂಡ್‌ನಲ್ಲಿ 10 ಮಂದಿಯ ತಂಡದಿಂದಒಬ್ಬರು ಹಾಟ್‌ಸೀಟ್‌ಗೆ ಬರುತ್ತಾರೆ. ಈ ರೀತಿ ಹಾಟ್ ಸೀಟ್‌ಗೆ ಆಯ್ಕೆಯಾಗಲು ಕೇಳಲಾಗುವ ಪ್ರಶ್ನೆಗೆ ಯಾರು ಮೊದಲು ಬಜರ್ ಮೂಲಕ ಸರಿಯುತ್ತರ ನೀಡುತ್ತಾರೋ ಅವರು ಆಯ್ಕೆಯಾಗುತ್ತಾರೆ. ಹೀಗೆ ಆಯ್ಕೆಯಾದ ವ್ಯಕ್ತಿಗೆ ಹಾಟ್‌ಸೀಟ್‌ನಲ್ಲಿ ಪ್ರಶ್ನೆ ಕೇಳಲಾಗುತ್ತದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಜೈಲು ಸಿಬ್ಬಂದಿ ಮತ್ತು ಶಿಕ್ಷಕರು ಇಲ್ಲಿ ನಿರೂಪಕರಾಗಿರುತ್ತಾರೆ. ಎದುರಿಗೆ ಕುಳಿತ ಕೈದಿಗಳಿಗೆ ಪರದೆಯ ಮೇಲೆ ಪ್ರಶ್ನೆ ಮೂಡುತ್ತದೆ. ಪ್ರತಿಸರಿಯುತ್ತರಕ್ಕೆ 100 ರು. ಬಹುಮಾನ. ಒಟ್ಟು 10 ಪ್ರಶ್ನೆಗಳು. ಸಾವಿರ ರು. ಗೆಲ್ಲುವ ಅವಕಾಶ. ವಿಷಯವನ್ನು ಮೊದಲೇ ತಿಳಿಸಲಾಗುತ್ತಿದ್ದು, ಈ ವಿಷಯದ ಕುರಿತು ಮಾಹಿತಿ ಪಡೆಯಲು ಕೈದಿಗಳು ಜೈಲಿನ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಅಧ್ಯಯನ ನಡೆಸುತ್ತಾರೆ.
ಇದೇ ರೀತಿ ಹಲವು ಸುತ್ತುಗಳ ಮೂಲಕ ಎಲ್ಲ ಕೈದಿಗಳಿಗೂ ಅವಕಾಶ ನೀಡುವ ಪ್ರಯತ್ನ ಮಾಡಲಾಗುತ್ತದೆ. ಇಲ್ಲಿ ಹಣದ ಗಳಿಕೆಗಿಂತ ಅವರ ಜ್ಞಾನ ವೃದ್ಧಿಯೇ ಮುಖ್ಯ ಎನ್ನುತ್ತಾರೆ ಜೈಲ್ ಸೂಪರಿಂಟೆಂಡೆಂಟ್ ಡಾ. ರಂಗನಾಥ್.