ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿರುವ ಸಾಂತ್ವನ ಕೇಂದ್ರಗಳಿಗೆ ಪ್ರತೀ ತಿಂಗಳೂ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು ಅವರು ಜಿಲ್ಲೆಯ ಎಲ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಚನೆ ನೀಡಿದರು.
ತುಮಕೂರು : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ನಡೆಸಲಾಗುತ್ತಿರುವ ಸಾಂತ್ವನ ಕೇಂದ್ರಗಳಿಗೆ ಪ್ರತೀ ತಿಂಗಳೂ ಖುದ್ದು ಭೇಟಿ ನೀಡಿ ಪರಿಶೀಲಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ.ಪ್ರಭು ಅವರು ಜಿಲ್ಲೆಯ ಎಲ್ಲ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ವಿವಿಧ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಸಾಂತ್ವನ ಯೋಜನೆ, ಮಹಿಳೆಯರ ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆ ಯೋಜನೆ ಹಾಗೂ ಸ್ತ್ರೀಶಕ್ತಿ ಯೋಜನೆಗಳ ಪ್ರಗತಿ ಪರಿಶೀಲಿಸಿ ಮಾತನಾಡಿದರು.
ವರದಕ್ಷಿಣೆ ಕಿರುಕುಳ, ಕೌಟುಂಬಿಕ ದೌರ್ಜನ್ಯ, ಅತ್ಯಾಚಾರ ಹಾಗೂ ಕಿರುಕುಳ ಸೇರಿದಂತೆ ವಿವಿಧ ರೀತಿಯ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಸಮಾಲೋಚನೆ ಮತ್ತು ಅಗತ್ಯ ಕಾನೂನು ನೆರವು ಒದಗಿಸಲು ಜಿಲ್ಲೆಯಲ್ಲಿರುವ ಸಾಂತ್ವನ ಕೇಂದ್ರಗಳಿಗೆ ಆಯಾ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಪ್ರತೀ ತಿಂಗಳು 2 ಬಾರಿ ಖುದ್ದಾಗಿ ಭೇಟಿ ನೀಡಿ ವರದಿಯಾದ ಮಹಿಳಾ ದೌರ್ಜನ್ಯ ಪ್ರಕರಣಗಳ ಇತ್ಯರ್ಥ, ಬಾಕಿಯಿರುವ ಪ್ರಕರಣಗಳ ಸಂಖ್ಯೆ ಹಾಗೂ ಬಾಕಿ ಉಳಿಕೆಗೆ ಕಾರಣ, ಕೇಂದ್ರದಲ್ಲಿ ಮೂಲಭೂತ ಸೌಕರ್ಯಗಳು, ಕೇಂದ್ರಕ್ಕೆ ನೇಮಕವಾಗಿರುವ ಸಮಾಲೋಚಕರು ಹಾಗೂ ಸಮಾಜ ಸೇವಾ ಕಾರ್ಯಕರ್ತರ ಹಾಜರಾತಿ ಬಗ್ಗೆ ಪರಿಶೀಲಿಸಬೇಕೆಂದು ಅವರು ನಿರ್ದೇಶನ ನೀಡಿದರು.
ಎಲ್ಲ ಸಾಂತ್ವನ ಕೇಂದ್ರಗಳಲ್ಲಿ ವಿಸಿಟರ್ಸ್ ವಹಿಯನ್ನು ನಿರ್ವಹಣೆ ಮಾಡಬೇಕು. ಕೇಂದ್ರಗಳಿಗೆ ಭೇಟಿ ನೀಡಿದ ಅಧಿಕಾರಿಗಳು ಸಾಂತ್ವನ ಕೇಂದ್ರಗಳಲ್ಲಿ ಲೋಪಗಳಿದ್ದಲ್ಲಿ ವಿಸಿಟರ್ಸ್ ವಹಿಯಲ್ಲಿ ದಾಖಲಿಸಬೇಕು. ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಯಾವುದೇ ಸಮಸ್ಯೆಗಳಿಲ್ಲದಿರುವ ಬಗ್ಗೆ ಪ್ರತಿ ತಿಂಗಳೂ ಸಾಂತ್ವನ ಕೇಂದ್ರಗಳ ಸಮಾಲೋಚಕರಿಂದ ದೃಢೀಕರ ಣಪತ್ರ ಪಡೆಯಬೇಕೆಂದು ಸೂಚನೆ ನೀಡಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಮಾತನಾಡಿ, ಮಹಿಳಾ ದೌರ್ಜನ್ಯ ಪ್ರಕರಣಗಳ ಬಗ್ಗೆ ನ್ಯಾಯಾಲಯದ ಮೆಟ್ಟಿಲೇರುವ ಬದಲು ಸಾಂತ್ವನ ಕೇಂದ್ರಗಳಲ್ಲಿಯೇ ಸಮಸ್ಯೆಯನ್ನು ಬಗೆಹರಿಸಬೇಕು. ಈ ಕೇಂದ್ರದಲ್ಲಿ ನೊಂದ ಮಹಿಳೆಯರಿಗೆ ಸಾಂತ್ವನ ದೊರೆಯಬೇಕು. ಸಮಸ್ಯೆ ಗಂಭೀರ ಸ್ಥಿತಿ ತಲುಪಿದಾಗ ಮಾತ್ರ ಸಂತ್ರಸ್ತರಿಗೆ ನ್ಯಾಯಾಲಯದ ಮೊರೆ ಹೋಗಲು ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು
ನಂತರ ಸಮಾಲೋಚಕರಿಂದ ಜಿಲ್ಲೆಯ ಎಲ್ಲ ಸಾಂತ್ವನ ಕೇಂದ್ರಗಳ ಕಾರ್ಯನಿರ್ವಹಣೆ ಬಗ್ಗೆ ಮಾಹಿತಿ ಪಡೆದು ಮಾತನಾಡಿದ ಜಿ. ಪ್ರಭು ಇತ್ಯರ್ಥವಾದ ಮಹಿಳಾ ದೌರ್ಜನ್ಯ ಪ್ರಕರಣಗಳ ಸಂತ್ರಸ್ತೆಯರೊಂದಿಗೆ ಸಂಪರ್ಕದಲ್ಲಿದ್ದು, ಅನುಸರಣೆ ಮಾಡಬೇಕೆಂದರಲ್ಲದೆ ದೌರ್ಜನ್ಯ ಪ್ರಕರಣಗಳು ಮತ್ತೆ ಮರುಕಳಿಸದಂತೆ ನಿಗಾವಹಿಸಬೇಕೆಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳಿಗೆ ಸೂಚನೆ ನೀಡಿದರು.
ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರತಿ ತಿಂಗಳು ಗ್ರಾಮ ಸಭೆ ನಡೆಸಬೇಕು ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದರಲ್ಲದೆ ಗ್ರಾಮ ಪಂಚಾಯತಿ ಮಟ್ಟದ ಒಕ್ಕೂಟದಡಿ ಈವರೆಗೂ ನೋಂದಾಯಿಸದೆ ಬಾಕಿ ಉಳಿಸಿಕೊಂಡಿರುವ ಜಿಲ್ಲೆಯ 1875 ಸ್ತ್ರೀಶಕ್ತಿ ಗುಂಪುಗಳನ್ನು ಆಗಸ್ಟ್ 5ರೊಳಗಾಗಿ ನೋಂದಾಯಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಧರ್ ಮಾತನಾಡಿ ವಿವಿಧ ರೀತಿಯಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ದಿನದ 24 ಗಂಟೆಗಳ ಕಾಲ ಅಗತ್ಯ ಕಾನೂನು ನೆರವು ನೀಡಲು ತುರುವೇಕೆರೆ ಹೊರತುಪಡಿಸಿ ಜಿಲ್ಲೆಯ 10 ತಾಲೂಕುಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲಕ ತಲಾ 1 ಸಾಂತ್ವನ ಕೇಂದ್ರಗಳು ಕಾರ್ಯನಿರ್ವಹಿಸುತ್ತಿ ವೆ. ಕಳೆದ 4ನೇ ತ್ರೈಮಾಸಿಕದಲ್ಲಿ ವರದಿಯಾಗಿ ಬಾಕಿಯಿದ್ದ 27 ಹಾಗೂ 2023ರ ಏಪ್ರಿಲ್ ಮಾಹೆಯಿಂದ ಜೂನ್ ಮಾಹೆ ಅಂತ್ಯದವರೆಗೆ 392 ಸೇರಿದಂತೆ ಒಟ್ಟು 419 ಪ್ರಕರಣ ಗಳು ದಾಖಲಾಗಿವೆ. ಈ ಪೈಕಿ 391 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, 28 ಪ್ರಕರಣಗಳು ಬಾಕಿ ಉಳಿದಿವೆ ಎಂದು ಸಭೆಗೆ ಮಾಹಿತಿ ನೀಡಿದರು.
ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಈವರೆಗೂ ಯಾವುದೇ ಪ್ರಕರಣಗಳು ವರದಿಯಾಗಿರುವುದಿಲ್ಲ. ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ 2023-24ನೇ ಸಾಲಿನಲ್ಲಿ ಈವರೆಗೂ 284 ಗ್ರಾಮ ಸಭೆಗಳನ್ನು ನಡೆಸಲಾಗಿದೆಯಲ್ಲದೆ ಗ್ರಾಮ ಪಂಚಾಯತಿ ಮಟ್ಟದಲ್ಲಿ 330, ತಾಲೂಕು ಮಟ್ಟದಲ್ಲಿ 11 ಹಾಗೂ ಜಿಲ್ಲಾ ಮಟ್ಟದಲ್ಲಿ 1 ಕಾವಲು ಸಮಿತಿಯನ್ನು ರಚಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 2010 ಪರಿಶಿಷ್ಟಜಾತಿ, 920 ಪರಿಶಿಷ್ಟಪಂಗಡ, 301 ಅಲ್ಪಸಂಖ್ಯಾತ ಹಾಗು 7809 ಇತರೆ ವರ್ಗ ಸೇರಿದಂತೆ ಒಟ್ಟು 11040 ಸ್ತ್ರೀಶಕ್ತಿ ಸ್ವ-ಸಹಾಯ ಗುಂಪುಗಳು ರಚನೆಯಾಗಿದ್ದು, ಸದರಿ ಗುಂಪುಗಳಲ್ಲಿ ಒಟ್ಟು 1,77,077 ಸದಸ್ಯರಿದ್ದಾರೆ. ಅಮೃತ ಸ್ವ-ಸಹಾಯ ಕಿರು ಉದ್ದಿಮೆ ಯೋಜನೆಯಡಿ ಸ್ತ್ರೀಶಕ್ತಿ ಗುಂಪುಗಳಿಗೆ ತರಬೇತಿ ಹಾಗೂ ಆದಾಯೋತ್ಪನ್ನ ಚಟುವಟಿಕೆಗಳಲ್ಲಿ ತೊಡಗಿರುವ ಸ್ತ್ರೀಶಕ್ತಿ ಗುಂಪುಗಳಿಗೆ ಲೇಬಲಿಂಗ್ ಮತ್ತು ಪ್ಯಾಕಿಂಗ್ ತರಬೇತಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಆರೋಗ್ಯ, ಕೃಷಿ, ರೇಷ್ಮೆ ಇಲಾಖೆ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು, ವಿವಿಧ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮತ್ತಿತರರು ಹಾಜರಿದ್ದರು.