ಕೊರೋನಾ ಹಾವಳಿಯಿಂದ ಖಾಸಗಿ ಶಾಲೆಗಳು ತತ್ತರಿಸಿದ್ದು, ಸಂಪೂರ್ಣ ಆರ್ಥಿಕ ದುಸ್ಥಿತಿ ಎದುರಿಸುತ್ತಿವೆ. ಶಿಕ್ಷಷಕರು ಸಂಬಳವಿಲ್ಲದೇ ಸಖಷ್ಟ ಎದುರಿಸುತ್ತಿದ್ದಾರೆ.
ವರದಿ : ಸತ್ಯರಾಜ್ ಜೆ.
ಕೋಲಾರ(ಆ.31): ಜಾಗತಿಕವಾಗಿ ಸವಾಲಾಗಿರುವ ಕೋವಿಡ್‌ನಿಂದಾಗಿ ಖಾಸಗಿ ಶಾಲೆಗಳು ತತ್ತರಿಸಿ ಹೋಗಿವೆ. ಬೋಧನಾ ಶುಲ್ಕ ಬಾಕಿ ಹಾಗೂ ಸರ್ಕಾರದ ಆರ್‌ಟಿಇ ಯೋಜನೆಯಡಿ ಬಾಕಿ ಇರುವ ಶುಲ್ಕವನ್ನು ಮರುಪಾವತಿ ಮಾಡದ ಕಾರಣ ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂದಿ ಹೊಟ್ಟೆಯ ಮೇಲೆ ತಣ್ಣೀರು ಬಟ್ಟೆಹಾಕಿಕೊಂಡು ಬದುಕುವ ಪರಿಸ್ಥಿತಿ ಎದುರಾಗಿದೆ.
ಸರ್ಕಾರಿ ಶಾಲೆಗಳ ಜೊತೆಗೆ ಖಾಸಗಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಸರ್ಕಾರಿ ಶಾಲೆಗಳಿಗಿಂತ ಖಾಸಗಿ ಶಾಲೆಗಳೆಂದರೆ ಪೋಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಎಲ್ಲಿಲ್ಲದ ವ್ಯಾಮೋಹ. ಖಾಸಗಿ ಶಾಲೆಗಳು ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಗಳಿಗೆ ಸೆಡ್ಡು ಹೊಡೆಯುತ್ತಿದ್ದವು. ಆದರೆ ಜಾಗತಿಕ ಮಟ್ಟದಲ್ಲಿ ತಲ್ಲಣಗೊಳಿಸಿರುವ ಕೋವಿಡ್ ಹೊಡೆದ ಖಾಸಗಿ ಶಾಲೆಗಳಿಗೂ ತಟ್ಟಿದೆ. ಕೋವಿಡ್ ತಲ್ಲಣದಿಂದಾಗಿ ಖಾಸಗಿ ಶಾಲೆಗಳು ತೀವ್ರ ಆರ್ಥಿಕ ದುಸ್ಥಿತಿಯಲ್ಲಿವೆ.
ಬೋಧನಾ ಶುಲ್ಕ ಪಾವತಿಸಿಲ್ಲ
ಮಾಚ್‌ರ್ ತಿಂಗಳಲ್ಲಿ ಪರೀಕ್ಷೆ ನಡೆಯುವ ವೇಳೆಗೆ ಕೇಂದ್ರ ಸರ್ಕಾರ ಲಾಕ್‌ಡೌನ್ ಘೋಷಣೆ ಮಾಡಿತ್ತು ಮತ್ತೊಂದು ಕಡೆ ಕೋವಿಡ್ ಸೋಂಕಿನ ಬಯದಿಂದಾಗಿ ಪೋಷಕರು ಹಾಗೂ ವಿದ್ಯಾರ್ಥಿಗಳು ಶಾಲೆಗಳ ಕಡೆ ಮುಖ ಮಾಡಲಿಲ್ಲ. ಇದರಿಂದ ಅನಿವಾರ್ಯವಾಗಿ ಖಾಸಗಿ ಶಾಲೆಗಳು ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಪರೀಕ್ಷೆಗಳು ನಡೆಸದ ಕಾರಣ ಶೇಕಡ 40ರಷ್ಟುಬೋಧನಾ ಶುಲ್ಕ ಎಲ್ಲಾ ಖಾಸಗಿ ಶಾಲೆಗಳಲ್ಲಿ ಬಾಕಿ ಉಳಿದುಕೊಂಡಿವೆ.
ಇನ್ನೂ ಯಾವುದೇ ಬಾಕಿ ಉಳಿಸಿಕೊಳ್ಳದ ಪೋಷಕರು ತಮ್ಮ ಮಕ್ಕಳನ್ನು ಆನ್‌ಲೈನ್ ತರಗತಿಗೆ ಕಳುಹಿಸುತ್ತಿದ್ದಾರೆ. ಬಾಕಿ ಉಳಿಸಿಕೊಂಡಿರುವ ಪೋಷಕರು ಶಾಲೆಗಳತ್ತ ಮುಖ ಮಾಡುತ್ತಿಲ್ಲ. ಈಗಾಗಲೇ ಎರಡುವರೆ ತಿಂಗಳು ಕಳೆದಿವೆ. ಇನ್ನೇನು ಶಾಲೆಗಳು ಪ್ರಾರಂಭವಾಗುವುದಿಲ್ಲ ಎಂಬ ಗುಂಗಿನಲ್ಲಿ ಪೋಷಕರು ಇದ್ದಾರೆ. ಒಂದು ಕಡೆ ಬೋಧನಾ ಶುಲ್ಕ ಬಾಕಿ ಮತ್ತೊಂದು ಕಡೆ ಶಾಲೆಗಳನ್ನು ತೆರೆಯದ ಕಾರಣ ಖಾಸಗಿ ಶಾಲೆಗಳು ಆತಂಕದಲ್ಲಿವೆ.
ಆರ್‌ಟಿಇ ಬಾಕಿಯೇ 50 ಲಕ್ಷ : ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು, ವ್ಯಾನ್ ಡ್ರೈವರ್ಸ್, ಸಹಾಯಕರು ಹಾಗೂ ಕಚೇರಿಯ ಸಿಬ್ಬಂದಿಗೆ ವೇತನ ಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಕೆಲವು ಆಡಳಿತ ಮಂಡಳಿಗಳು ಸಾಲಸೋಲ ಮಾಡಿ ಅರ್ಧ ಸಂಬಳ ನೀಡಿವೆ. ಇನ್ನೂ ಕೆಲವು ಶಾಲಾಡಳಿತ ಮಂಡಳಿ ಬೋಧನಾ ಶುಲ್ಕ ಮತ್ತು ಆರ್‌ಟಿಇ ಶುಲ್ಕವನ್ನು ರಾಜ್ಯ ಸರ್ಕಾರ ಪಾವತಿ ಮಾಡದ ಕಾರಣ ಸಿಬ್ಬಂದಿಗೆ ವೇತನ ಪಾವತಿ ಮಾಡಿಲ್ಲ. ಕೋಲಾರ ತಾಲೂಕು ಒಂದರಲ್ಲೇ ಸುಮಾರು 50 ಲಕ್ಷ ರು. ಆರ್‌ಟಿಇ ಶುಲ್ಕವನ್ನು ಸರ್ಕಾರ ಬಾಕಿ ಉಳಿಸಿಕೊಂಡಿದೆ.
ಈಗಾಗಲೇ ಸರ್ಕಾರಿ ಶಾಲೆಗಳನ್ನು ತೆರೆದು ವಿದ್ಯಾಗಮನ ಕಾರ್ಯಕ್ರಮದ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ. ಸಾಮಾಜಿಕ ಅಂತರ ಕಾಪಾಡಿಕೊಂಡು ವಿದ್ಯಾರ್ಥಿಗಳು ಇರುವ ಸ್ಥಳದಲ್ಲಿ ಬೋಧನೆ ಮಾಡಬೇಕು ಎಂಬುದು ಸರ್ಕಾರದ ಆಶಯ. ಆದರೆ ಈಗಾಗಲೇ ಕೆಲವು ಶಾಲೆಗಳಲ್ಲಿ ಕೊಠಡಿಗಳಲ್ಲೇ ವಿದ್ಯಾರ್ಥಿಗಳಿಗೆ ಬೋಧನೆ ಮಾಡಲಾಗುತ್ತಿದೆ. ಸರ್ಕಾರ ಸಹ ಖಾಸಗಿ ಶಾಲೆಗಳ ಸಮಸ್ಯೆಗಳನ್ನು ಬಗೆಹರಿಸುವ ಬದಲು ದಮನ ಮಾಡುತ್ತಿದೆ ಎಂದು ಖಾಸಗಿ ಸಂಸ್ಥೆಗಳವರು ಆರೋಪಿಸಿದ್ದಾರೆ.
ಖಾಸಗಿ ಶಾಲೆಗಳಿಗೆ ನೆರವು ನೀಡಲಿ : ಸರ್ಕಾರ ಅಸಂಘಟಿತ ಕಾರ್ಮಿಕರಿಗೆ ಹಾಗೂ ಇತರ ವರ್ಗಗಳಿಗೆ ಕೋವಿಡ್ ಪ್ಯಾಕೇಜ್ ಘೋಷಿಸಿದೆ. ಖಾಸಗಿ ಶಾಲೆಗಳು ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದು ಸರ್ಕಾರ ನೆರವಾಗಬೇಕೆಂದು ಒತ್ತಾಯಿಸಿ ಕೋಲಾರದಲ್ಲಿ ಎರಡು ತಿಂಗಳ ಹಿಂದೆ ಸಾರ್ವಜನಿಕ ಶಿಕ್ಷಣ ಇಲಾಖೆ ಮುಂದೆ ಖಾಸಗಿ ಶಾಲೆಗಳ ಶಿಕ್ಷಕರು ಪ್ರತಿಭಟನೆ ನಡೆಸಿದರು. ಅಂದು ಮಾತನಾಡಿದ ವಿಧಾನಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು, ಖಾಸಗಿ ಶಾಲೆಯ ಶಿಕ್ಷಕರು ಸಂಬಳವಿಲ್ಲದೆ ಸಂಕಟದಲ್ಲಿದ್ದಾರೆ. ರಾಜ್ಯದಲ್ಲಿ ನಾಲ್ಕುರಿಂದ ಎಂಟು ಲಕ್ಷ ಶಿಕ್ಷಕರು ಖಾಸಗಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರ ಕರ್ತವ್ಯವೆಂದು ಬಾವಿಸಿ ಅವರಿಗೆ ನೆರವಾಗಬೇಕೆಂದು ಒತ್ತಾಯಿಸಿದರು.
ಕಳೆದ ಮೂರ್ನಾಲ್ಕು ದಿನಗಳಿಂದ ಖಾಸಗಿ ಶಾಲಾಡಳಿತ ಮಂಡಳಿಗಳು ಬೆಂಗಳೂರಿನಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಸ್ತಿವೆ. ಶಿಕ್ಷಕರಿಗೆ ಸಂಬಳ ನೀಡಲು ಸರ್ಕಾರ ನೆರವಾಗಬೇಕು ಮತ್ತು ಶಾಲೆಗಳನ್ನು ತೆರೆಯಲು ಅನುಮತಿ ನೀಡಬೇಕೆಂದು ಖಾಸಗಿ ಸಂಸ್ಥೆಗಳವರು ಒತ್ತಾಯಿಸಿದ್ದಾರೆ.