ಇದೇ ಕ್ಷೇತ್ರ ನಂಬಿದ್ದವರ ಬುದುಕು ಮೂರಾಬಟ್ಟೆ| ಆರಂಭವಾಗದ ಡೈರಿ, ಕ್ಯಾಲೆಂಡರ್ ಪ್ರಿಂಟ್ ಮಾಡುತ್ತಿದ್ದ ಮುದ್ರಣಾಲಯಗಳು| 90 ವರ್ಷಗಳ ಇತಿಹಾಸವಿರುವ ಗದಗ ಮುದ್ರಣ ಕ್ಷೇತ್ರ ಲಾಕ್‌ಡೌನ್ ಪೂರ್ವದಲ್ಲಿ ಪ್ರತಿ ತಿಂಗಳು 5 ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿತ್ತು| ಇದೀಗ ಕೇವಲ 50 ಲಕ್ಷದಷ್ಟು ವಹಿವಾಟು ನಡೆಯುತ್ತಿಲ್ಲ|
ಶಿವಕುಮಾರ ಕುಷ್ಟಗಿ
ಗದಗ(ಸೆ.13): ಕೊರೋನಾ ಅಟ್ಟಹಾಸಕ್ಕೆ ಮುದ್ರಣ ಕಾಶಿ ಎನ್ನುವ ಹೆಗ್ಗಳಿಕೆ ಪಡೆದಿದ್ದ ಗದಗ ನಗರದ ಮುದ್ರಣಾಲಯಗಳು ತತ್ತರಿಸಿ ಹೋಗಿದ್ದು, ಆರ್ಥಿಕ ಸುಧಾರಣೆಯ ಭಾಗವಾಗಿ ಸರ್ಕಾರ ಸಂಪೂರ್ಣ ಅನ್‌ಲಾಕ್ ಮಾಡಿದ್ದರೂ ಮುದ್ರಣ ಕ್ಷೇತ್ರದಲ್ಲಿ ಮಾತ್ರ ಸುಧಾರಣೆ ಕಂಡಿಲ್ಲ.
ಸಣ್ಣ ಮತ್ತು ಮಧ್ಯಮ ಮುದ್ರಣಾಲಯಗಳು ಬಂದ್ ಆಗಿವೆ. ಪ್ರಿಟಿಂಗ್ ಕೆಲಸದ ಮೂಲಕ ಬದುಕು ಕಟ್ಟಿಕೊಂಡವರ ಬದುಕಂತೂ ಪೂರ್ತಿ ಮೂರಾಬಟ್ಟೆಯಾಗಿದೆ. ಅವರಿಗೆ ಬೇರೆ ಕೆಲಸ ಬರಲ್ಲ, ಮುದ್ರಣ ಯಂತ್ರಗಳು ಮಾತ್ರ ಪ್ರಾರಂಭವಾಗುತ್ತಿಲ್ಲ. ಸಂಪೂರ್ಣ ಅನ್‌ಲಾಕ್ ಆದರೂ ಇವರ ಬದುಕು ಮಾತ್ರ ಬದಲಾಗಿಲ್ಲ. ಎಲ್ಲ ಕ್ಷೇತ್ರಗಳಲ್ಲಿ ನಿಧಾನವಾಗಿ ಸುಧಾರಣೆ ಕಂಡು ಬರುತ್ತಿದೆಯಾದರೂ ಮುದ್ರಣ ಕ್ಷೇತ್ರದಲ್ಲಿ ಮಾತ್ರ ಕನಿಷ್ಠ 10 ರಷ್ಟು ಪ್ರಗತಿಯಾಗಿಲ್ಲ.
ರೋಣ: ಶಾಲೆಯೊಳಗೆ ನುಗ್ಗಿದ ಮಳೆ ನೀರು, ನೀರು ಪಾಲಾದ ಸಾಮಗ್ರಿ
ಮುದ್ರಣವೇ ಸ್ಥಗಿತ:
ಗದಗ ನಗರದಲ್ಲಿಯೇ 75ಕ್ಕೂ ಅಧಿಕ ಬೃಹತ್ ಮುದ್ರಣಾಲಯಗಳಿವೆ. ತ್ವರಿತ, ಚೈತನ್ಯ, ಸಂಕೇಶ್ವರ, ವಿಕ್ರಮ, ಪಾರು, ವಿದ್ಯಾನಿಧಿ ಪ್ರಕಾಶನ, ಶಾಬಾದಿಮಠ. ಹೀಗೆ ಹಲವು ಮುದ್ರಣಾಲಯಗಳು ರಾಜ್ಯ ಮತ್ತು ಹೊರ ರಾಜ್ಯಗಳಲ್ಲಿ ಹೆಸರು ಮಾಡಿವೆ. ಬಹುತೇಕ ವಿಶ್ವವಿದ್ಯಾಲಯಗಳ ಪುಸ್ತಕಗಳು, ಕ್ಯಾಲೆಂಡರ್, ಡೈರಿಗಳು, ಪಂಚಾಂಗ, ಸಾಹಿತಿಗಳ ಪುಸ್ತಕಗಳು ಸೇರಿದಂತೆ ಸಾರ್ವಜನಿಕರ ಬದುಕಿನಲ್ಲಿ ನಿತ್ಯವೂ ಹಾಸುಹೊಕ್ಕಾಗಿರುವ ಪುಸ್ತಕಗಳ ಮುದ್ರಣ ಇಲ್ಲಿಯೇ ಆಗುತ್ತಿತ್ತು. ಆದರೀಗ ಎಲ್ಲವೂ ಸ್ಥಗಿತಗೊಂಡಿದೆ. ಜಾತ್ರೆ, ಮದುವೆ ಮುಂತಾದ ಕಾರ್ಯಕ್ರಮಗಳಿಗೆ ನಿಬಂಧನೆ ಹೇರಿರುವ ಕಾರಣ ಹ್ಯಾಂಡ್‌ಬಿಲ್, ಆಮಂತ್ರಣ ಪತ್ರಿಕೆಗಳ ಮುದ್ರಣ ಮಾಡಿಸುವವರು ಇಲ್ಲವಾಗಿದ್ದಾರೆ. ಇದು ಸಹ ಮುದ್ರಣ ಕ್ಷೇತ್ರದ ಮೇಲೆ ಪರಿಣಾಮ ಬೀರಿದೆ.
5 ಕೋಟಿ ವಹಿವಾಟು 50 ಲಕ್ಷಕ್ಕೆ ಇಳಿಕೆ
ಸಣ್ಣ ಮತ್ತು ಮಧ್ಯಮ ತರಗತಿಯಲ್ಲಿ ನಡೆಯುತ್ತಿದ್ದ ಪ್ರಿಟಿಂಗ್ ಪ್ರೆಸ್‌ಗಳು, ಸ್ಕ್ರೀನ್ ಪ್ರಿಟಿಂಗ್ ಸೇರಿದಂತೆ ಕೈಯಲ್ಲಿಯೇ ಕೆಲಸ ಮಾಡುವ ಎಲ್ಲ ಮುದ್ರಣ ವಿಭಾಗಗಳು ಸಂಪೂರ್ಣ ಬಾಗಿಲು ಮುಚ್ಚಿವೆ. 90 ವರ್ಷಗಳ ಇತಿಹಾಸವಿರುವ ಗದಗ ಮುದ್ರಣ ಕ್ಷೇತ್ರ ಲಾಕ್‌ಡೌನ್ ಪೂರ್ವದಲ್ಲಿ ಪ್ರತಿ ತಿಂಗಳು 5 ಕೋಟಿಗೂ ಅಧಿಕ ವಹಿವಾಟು ನಡೆಸುತ್ತಿತ್ತು. ಆದರೆ, ಇದೀಗ ಕೇವಲ 50 ಲಕ್ಷದಷ್ಟು ವಹಿವಾಟು ನಡೆಯುತ್ತಿಲ್ಲ.