ಶಿವಾನಂದ ಗೊಂಬಿ
ಹುಬ್ಬಳ್ಳಿ (ಅ.15) : ಹೆಸರು ಬೆಳೆದ ರೈತರಿಗೆ ಅನುಕೂಲವಾಗಲೆಂದು ಸರ್ಕಾರ ಬೆಂಬಲ ಬೆಲೆಯಲ್ಲಿ ಹೆಸರು ಖರೀದಿಸಲೆಂದು ಧಾರವಾಡ ಜಿಲ್ಲೆಯಲ್ಲಿ ತೆರೆಯಲಾಗಿದ್ದ ಕೇಂದ್ರಗಳು ಬಾಗಿಲು ಮುಚ್ಚಿದ್ದು, ರೈತರಲ್ಲಿ ಆತಂಕ ಮನೆ ಮಾಡಿದೆ. ಈ ಖರೀದಿ ಕೇಂದ್ರ ತೆರೆಯುವಂತೆ ರೈತರು ಹೋರಾಟ ಮಾಡಿದ್ದರು. ಇನ್ನೇನು ಖರೀದಿ ಆರಂಭವಾಗಬೇಕು ಎನ್ನುವ ಹೊತ್ತಿನಲ್ಲಿ ಮಳೆ ಶುರುವಾಗಿದ್ದರಿಂದ ಸರ್ಕಾರ ನಿಗದಿಪಡಿಸಿದ ತೇವಾಂಶ ಸಿಗುತ್ತಿಲ್ಲ ಎಂದು ಖರೀದಿ ಮಾಡುತ್ತಿಲ್ಲ.
undefined
ಧಾರವಾಡದಲ್ಲಿ ಹೆಸರು ಹಾಗೂ ಉದ್ದಿನ ಕಾಳು ಖರೀದಿ ಕೇಂದ್ರ ಆರಂಭ
ಕಳೆದ ಎರಡು ವಾರಗಳಿಂದ ಮಳೆ ಸುರಿಯುತ್ತಿದ್ದರಿಂದ ನಿತ್ಯವೂ ಹೆಸರು ರಾಶಿಯನ್ನು ರಕ್ಷಿಸುವುದೇ ರೈತರಿಗೆ ದೊಡ್ಡ ಸಾಹಸವಾಗಿದೆ. ತುಸುವೇ ಮೈಮರೆತರೂ ಇಡೀ ರಾಶಿಯೇ ನೆನೆದು ಮೊಳಕೆಯೊಡೆಯುತ್ತದೆ. ಈ ಭಯದಿಂದ ರೈತರು ನಿತ್ಯವೂ ಹೆಸರು ಒಣಗಿಸುವ, ಸಂರಕ್ಷಿಸುವ ಕೆಲಸದಲ್ಲಿ ನಿರತರಾಗಿದ್ದರೆ, ಕೆಲವರು ಅನಿವಾರ್ಯವಾಗಿ ಖಾಸಗಿ ವ್ಯಾಪಾರಸ್ಥರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
18 ಖರೀದಿ ಕೇಂದ್ರ:
ಧಾರವಾಡ ಜಿಲ್ಲೆಯಲ್ಲಿ 18 ಖರೀದಿ ಕೇಂದ್ರ ತೆರೆಯಲಾಗಿದೆ ಎಂಬುದು ಮಾರಾಟ ಮಹಾಮಂಡಲದ ಹೇಳಿದೆ. ಆದರೆ ಕೆಲವೆಡೆ ವಾರದಿಂದಲೇ ಕೇಂದ್ರಗಳ ಬಾಗಿಲು ಮುಚ್ಚಿವೆ ಎಂಬುದು ರೈತರ ಆರೋಪ. ಇನ್ನೂ ಮಾರುಕಟ್ಟೆಯಲ್ಲಿ ಕ್ವಿಂಟಲ್‌ಗೆ . 5800ರಿಂದ . 6400 ಇದೆ. ಖರೀದಿ ಕೇಂದ್ರದಲ್ಲಿ . 7700 ನಿಗದಿ ಮಾಡಿದ್ದರೂ ಖರೀದಿಸುತ್ತಿಲ್ಲವಂತೆ.
ಸರ್ಕಾರದ ನಿಯಮದಂತೆ ಹೆಸರು ಖರೀದಿಸಬೇಕೆಂದರೆ ಶೇ. 12ರಷ್ಟುತೇವಾಂಶವಿರಬೇಕು. ಆದರೆ ಮಳೆ ಆಗಾಗ ಸುರಿಯುತ್ತಿರುವ ಕಾರಣ ಶೇ. 14ರಷ್ಟುತೇವಾಂಶ ಬರುತ್ತಿದೆ. ಹೀಗಾಗಿ ಖರೀದಿ ಕೇಂದ್ರದಲ್ಲಿ ಖರೀದಿಸುತ್ತಿಲ್ಲ.
ಎಷ್ಟೆಷ್ಟುಖರೀದಿ:
ಕಳೆದ ವರ್ಷ 13,076 ರೈತರು ಹೆಸರು ನೋಂದಣಿ ಮಾಡಿಸಿದ್ದರು. ಅದರಲ್ಲಿ 9,113 ರೈತರು 51862.5 ಕ್ವಿಂಟಲ್ ಹೆಸರನ್ನು ಕೇಂದ್ರದಲ್ಲಿ ಮಾರಾಟ ಮಾಡಿದ್ದರು. ಈ ವರ್ಷ 13,770 ರೈತರು ನೋಂದಣಿ ಮಾಡಿಸಿದ್ದು 202 ರೈತರಿಂದ 2328.5 ಕ್ವಿಂಟಲ್ ಮಾತ್ರ ಖರೀದಿಸಲಾಗಿದೆ. ಬಹುತೇಕ ರೈತರ ಹೆಸರು ಬೆಳೆ ಶೇ. 12ರಷ್ಟುತೇವಾಂಶ ಬಾರದ ಕಾರಣ ವಾಪಸ್ ಕಳುಹಿಸಲಾಗುತ್ತಿದೆ. ಇದು ನಮಗೆ ಅನಿವಾರ್ಯ ಎಂದು ಖರೀದಿ ಕೇಂದ್ರದ ಸಿಬ್ಬಂದಿ ತಿಳಿಸುತ್ತಾರೆ.
ಈ ವರ್ಷ ಮಳೆ ಹೆಚ್ಚಾಗಿದ್ದು, ತೇವಾಂಶದ ಪ್ರಮಾಣವನ್ನು ಶೇ. 12ರಿಂದ 14 ಅಥವಾ 15ಕ್ಕೆ ಏರಿಸಬೇಕು ಎಂಬ ಬೇಡಿಕೆ ರೈತರದ್ದು. ಇನ್ನು ಕೆಲ ಖರೀದಿ ಕೇಂದ್ರಗಳು ಸಹ ಕಳೆದ ನಾಲ್ಕೈದು ದಿನದಿಂದ ಬಾಗಿಲು ಮುಚ್ಚಿವೆ. ಇದು ನಮಗೆ ಸಮಸ್ಯೆಯಾಗಿದೆ ಎಂಬುದು ರೈತರ ಗೋಳು. ಆದರೆ ಇದನ್ನು ತಳ್ಳಿಹಾಕುವ ಮಾರಾಟ ಮಹಾಮಂಡಳ ಯಾವ ಕೇಂದ್ರವನ್ನು ಬಂದ್ ಮಾಡಿಲ್ಲ. ಎಲ್ಲವೂ ಸಕ್ರಿಯವಾಗಿವೆ ಎಂದು ತಿಳಿಸುತ್ತಾರೆ.
Dharwad: ಸರ್ಕಾರದ ಷರತ್ತು, ರೈತರಿಗೆ ಇಕ್ಕಟ್ಟು..!
ಸರ್ಕಾರದ ನಿಯಮದ ಪ್ರಕಾರ ಶೇ. 12ರಷ್ಟುತೇವಾಂಶ ಇರಬೇಕು. ಆದರೆ ಇದೀಗ ಮಳೆಯಿರುವುದರಿಂದ ಆ ತೇವಾಂಶ ಬರುತ್ತಿಲ್ಲ. ಹೀಗಾಗಿ ಬಹಳಷ್ಟುರೈತರ ಹೆಸರು ತಿರಸ್ಕಾರವಾಗುತ್ತಿವೆ. ಸರ್ಕಾರವೇನಾದರೂ ತೇವಾಂಶದ ಪ್ರಮಾಣ ಹೆಚ್ಚಿಸಿದರೆ ಆ ರೀತಿ ಖರೀದಿಸಲಾಗುವುದು.
ವಿನಯ ಪಾಟೀಲ ವ್ಯವಸ್ಥಾಪಕರು, ಕರ್ನಾಟಕ ಮಾರಾಟ ಮಹಾಮಂಡಳ
ತೇವಾಂಶ ಪ್ರಮಾಣ ಹೆಚ್ಚಿಸಬೇಕು. ನಾನು 50ಕ್ವಿಂಟಲ್ ಹೆಸರು ಬೆಳೆ ಮಾರಾಟ ಮಾಡಲೆಂದು ತಿರ್ಲಾಪೂರ ಕೇಂದ್ರಕ್ಕೆ ಒಯ್ದಿದ್ದೆ. ಆದರೆ ತೇವಾಂಶ ಶೇ. 15 ಬಂದಿತ್ತು. ಎರಡು ದಿನ ಅಲ್ಲೇ ಉಳಿದು ಕಾಲುವೆ ದಂಡೆಯಲ್ಲೇ ಒಣಗಿಸಲು ಹಾಕಿದರೂ ಶೇ.14ಕ್ಕಿಂತ ಕಡಿಮೆ ಬರಲಿಲ್ಲ. ಹೀಗಾಗಿ ಖಾಸಗಿಯಲ್ಲಿ . 6400ಗೆ ಕ್ವಿಂಟಲ್ ಮಾರಾಟ ಮಾಡಿ ಬಂದೆ.
ಬಡಪ್ಪ ತಳವಾರ, ಕರ್ಲವಾಡ ರೈತ