ಮುಂಗಾರು: ಪ್ರವಾಹ ನಿಯಂತ್ರಣಕ್ಕೆ ಸನ್ನದ್ಧರಾಗಿ

By Kannadaprabha News  |  First Published May 26, 2023, 10:28 PM IST

ಕಲಬುರಗಿಗೆ ಕಾಲಿಡುತ್ತಿದೆ ಮಳೆಗಾಲ- ಜಿಲ್ಲಾಡಳಿತದಿಂದ ತಾಲೀಮು ಆರಂಭ, ಮಳೆಗಾಲ ಮತ್ತು ಪ್ರವಾಹ ನಿಯಂತ್ರಣಕ್ಕೆ ಸನ್ನದ್ಧರಾಗಿ: ಅಧಿಕಾರಿಗಳ ಸಭೆಯಲ್ಲಿ ಡಿ.ಸಿ. ಯಶವಂತ ವಿ. ಗುರುಕರ್‌ ಸೂಚನೆ


ಕಲಬುರಗಿ(ಮೇ.26):  ವಾಡಿಕೆಯಂತೆ ಜೂನ್‌ ಮೊದಲನೇ ವಾರದಲ್ಲಿ ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಲಿದ್ದು, ಮಳೆ ಮತ್ತು ಪ್ರವಾಹದಿಂದ ಉಂಟಾಗುವ ಅವಾಂತರ ತಡೆಗಟ್ಟಲು ಈಗಿನಿಂದಲೆ ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಮತ್ತು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಯಶವಂತ ಗುರುಕರ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಗುರುವಾರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ ನಡೆಸಿದ ಅವರು, ಮಳೆಗಾಲದಲ್ಲಿ ಯಾವುದೇ ರೀತಿಯ ಮಾನವ ಪ್ರಾಣ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಆದ್ಯತೆಯಾಗಲಿ ಎಂದರು.

ಅಫಜಲ್ಪುರ, ಜೇವರ್ಗಿ ಹಾಗೂ ಚಿತ್ತಾಪುರ ತಾಲೂಕಿನ ನದಿ ದಂಡೆಯಲ್ಲಿ ವಾಸಿಸುವ ಗ್ರಾಮಸ್ಥರನ್ನು ಅಗತ್ಯವಿದ್ದಲ್ಲಿ ಸ್ಥಳಾಂತರಕ್ಕೆ ಬೇಕಾದ ಅಗತ್ಯ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಒಳಗೊಂಡ ರೆಸ್ಕೂ್ಯ ತಂಡಗಳನ್ನು ರಚಿಸಬೇಕು. ಬೋಟಿಂಗ್‌ ವ್ಯವಸ್ಥೆ ಮಾಡಿಕೊಳ್ಳಬೇಕು. ಮಳೆಗಾಲ ಸಂದರ್ಭದಲ್ಲಿ ಉದ್ಬವಹಿಸಬಹುದಾದ ಸಾಂಕ್ರಾಮಿಕ ರೋಗಗಳು ಹರಡದಂತೆ ವಿಶೇಷವಾಗಿ ಹಾವು ಕಚ್ಚಿದಲ್ಲಿ ಅದರ ಚಿಕಿತ್ಸೆಗೆ ಬೇಕಾಗುವ ಅಗತ್ಯ ಔಷಧಿಗಳನ್ನು ಪಿ.ಎಚ್‌.ಸಿ.ಗಳಲ್ಲಿ ದಾಸ್ತಾನು ಮಾಡಿಕೊಳ್ಳಬೇಕು ಎಂದರು.

Tap to resize

Latest Videos

undefined

ಕಲಬುರಗಿ ಜಿಲ್ಲೆಯಲ್ಲಿ 8.87 ಲಕ್ಷ ಹೆಕ್ಟೇರ್‌ ಬಿತ್ತನೆ ಗುರಿ

ಸಭೆಯಲ್ಲಿ ಡಿಸಿ ಗುರುಕರ್‌ ನೀಡಿದ ಖಡಕ್‌ ಸೂಚನೆಗಳಿವು:

1) ಗ್ರಾಮ ಲೆಕ್ಕಾಧಿಕಾರಿಗಳು ಗ್ರಾಮದಲ್ಲಿಯೇ ಠಿಕಾಣಿ ಹೂಡಬೇಕು
2) ಗ್ರಾಮದ ನಕ್ಷೆ, ಜನಸಂಖ್ಯೆ, ಜಾನುವಾರಿಗಳ ಸಂಖ್ಯೆ, ಬೆಳೆಯಲಾದ ಬೆಳೆ ಮಾಹಿತಿ ಇಟ್ಟುಕೊಳ್ಳಬೇಕು
3) ಕಲಬುರಗಿ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಸುವ ಪೈಪಲೈನ್‌ ಯೋಗಕ್ಷೇಮ ಪರಿಶೀಲಿಸಬೇಕು
4) ಕುಡಿಯುವ ನೀರಿನೊಂದಿಗೆ ಚರಂಡಿ ಸೇರದಂತೆ ಎಚ್ಚರ ವಹಿಸಬೇಕು.
5) ಪೌರ ಸಂಸ್ಥೆಗಳು ಮತ್ತು ಗ್ರಾಪಂಗಳು ನೀರು ಸರಾಗವಾಗಿ ಹೋಗಲು ಚರಂಡಿಗಳನ್ನು ಸ್ವಚ್ಛವಾಗಿಟ್ಟಿಕೊಳ್ಳಬೇಕು.
6) ರಸ್ತೆ ಬದಿಯಲ್ಲಿ ವಿದ್ಯುತ್‌ ಕಂಬಗಳಿಗೆ ಹತ್ತಿಕೊಂಡು ಗಿಡಗಳಿದಲ್ಲಿ ಅದನು ಭಾಗಶ ಕತ್ತರಿಸಿ ವಿದ್ಯುತ್‌ ಅವಘಡವಾಗದಂತೆ ನೋಡಿಕೊಳ್ಳಬೇಕು.
7) ಬೀಳುವ ಹಂತದಲ್ಲಿರುವ ವಿದ್ಯುತ್‌ ಕಂಬಗಳನ್ನು ಕೂಡಲೆ ಬದಲಾಯಿಸಬೇಕು
8) ಜಿಲ್ಲೆಯಾದ್ಯಂತ ಕುಡಿಯುವ ನೀರು ಪೂರೈಕೆ ಮಾಡುವ ಟ್ಯಾಂಕಗಳನ್ನು ಸ್ಚಚ್ಚಗೊಳಿಸಬೇಕು.
9) ಮಳೆ ಸಂತ್ರಸ್ತರಿಗೆ 24 ಗಂಟೆಯಲ್ಲಿಯೇ ಪರಿಹಾರ ನೀಡಬೇಕು
10) ಪರಿಹಾರದ ಕುರಿತ ವಿವರವನ್ನು ಆಯಾ ಗ್ರಾಮದ ಚಾವಡಿ ಮತ್ತು ಪಟ್ಟಣಗಳ ವಾರ್ಡ್‌ವಾರು ಸಾರ್ವಜನಿಕವಾಗಿ ಪ್ರಕಟಿಸಬೇಕು.
11) ಬೆಳೆ ಪರಿಹಾರ ಪ್ರಕರಣದಲ್ಲಿ ಗ್ರಾಮ ಲೆಕ್ಕಿಗರು ಕ್ಷೇತ್ರಕ್ಕೆ ಬೇಟಿ ನೀಡಿ ವಾಸ್ತವ ಮಾಹಿತಿ ಸಂಗ್ರಹಿಸಬೇಕು

ಶಿಥಿಲ ಕಟ್ಟಡಗಳ ದುರಸ್ತಿ ಕೈಗೊಳ್ಳಿ:

ಜಿಲ್ಲೆಯಾದ್ಯಂತ ಎಲ್ಲಾ ಸರ್ಕಾರಿ ಶಾಲೆಗಳ ಕಟ್ಟಡಗಳು ಮಳೆಯಿಂದ ಸೋರಿಕೆ ಆಗುತ್ತಿದ್ದಲ್ಲಿ ಕೂಡಲೆ ಅಂತಹ ಕಟ್ಟಡಗಳನ್ನು ಗುರುತಿಸಿ ದುರಸ್ತಿ ಕೈಗೊಳ್ಳಬೇಕು. ವಿಪತ್ತು ಪರಿಹಾರ ನಿಧಿಯಲ್ಲಿ ಇದಕ್ಕೆ ಅನುದಾನ ನೀಡಲಾಗುವುದು. ಇದೇ ರೀತಿ ಖಾಸಗಿ ಶಾಲೆ ಮೇಲೆಯೂ ನಿಗಾ ವಹಿಸಬೇಕು. ಮೇಲ್ಚಾವಣಿ ಕುಸಿದು ಮಕ್ಕಳಿಗೆ ಹಾನಿ ಪ್ರಕರಣ ಎಲ್ಲಿಯೂ ವರದಿಯಾಗಬಾರದು. ಕೂಡಲೆ ಎಚ್ಚೆತ್ತುಕೊಂಡು ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಇದೇ ರೀತಿಯ ಅಂಗನವಾಡಿ ಕಟ್ಟಡಗಳ ಬಗ್ಗೆಯೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಪಂ ಸಿಇಓ ಡಾ.ಗಿರೀಶ್‌ ಡಿ. ಬದೋಲೆ, ಹೆಚ್ಚುವರಿ ಎಸ್‌.ಪಿ. ಶ್ರೀನಿಧಿ, ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್‌, ಸಹಾಯಕ ಆಯುಕ್ತೆ ಮಮತಾ ಕುಮಾರಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ತಾಲೂಕಿನ ತಹಶೀಲ್ದಾರರು, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಇದ್ದರು.

click me!