ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದೂಗಳ ಹಿತರಕ್ಷಣೆ ಮಾಡದಿದ್ದರೆ; ಈ ಸರ್ಕಾರಗಳನ್ನು ಕಿತ್ತೊಗೆಯುವ ಅಭಿಯಾನ ನಡೆಸಲಾಗುವುದು ಅಂತ ಪ್ರಮೋದ್ ಮುತಾಲಿಕ್ ಹೇಳಿದರು.
ಹೊಸಪೇಟೆ(ಜು.15): ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಗೋಹತ್ಯೆ ಹಾಗೂ ಮತಾಂತರ ನಿಷೇಧ ಕಾಯ್ದೆಗಳನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದೂಗಳ ಹಿತರಕ್ಷಣೆ ಮಾಡದಿದ್ದರೆ, ಈ ಸರ್ಕಾರಗಳನ್ನು ಕಿತ್ತೊಗೆಯುವ ಅಭಿಯಾನ ನಡೆಸಲಾಗುವುದು ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು. ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಿಂದ ವಾರ್ಷಿಕ 30 ಸಾವಿರ ಕೋಟಿ ಮೊತ್ತದ ಗೋಮಾಂಸ ವಿದೇಶಕ್ಕೆ ರಫ್ತಾಗುತ್ತದೆ. ಕೇಂದ್ರ ಸರ್ಕಾರ ಈ ಬಗ್ಗೆ ಕಠಿಣ ಕ್ರಮವಹಿಸಬೇಕು. ಜಗತ್ತಿನ ಎರಡನೇ ಅತಿದೊಡ್ಡ ದನಗಳ ಸಂತೆ ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿಯಲ್ಲಿ ನಡೆಯುತ್ತದೆ. ರಾಜ್ಯದಲ್ಲಿ ಸಾವಿರಾರು ಅಕ್ರಮ ಕಸಾಯಿಖಾನೆಗಳಿವೆ. ಆದರೂ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಕಣ್ಣುಮುಚ್ಚಿಕುಳಿತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಸರ್ಕಾರದಲ್ಲೇ ಹಿಂದೂಗಳ ರಕ್ಷಣೆ ಆಗುತ್ತಿಲ್ಲ. ಹಿಂದೂ ಕಾರ್ಯಕರ್ತ ಹರ್ಷ ಕೊಲೆ ಆರೋಪಿಗಳಿಗೆ ಜೈಲಲ್ಲಿ ಬಿರಿಯಾನಿ ಹಾಕಲಾಗುತ್ತಿದೆ. ಅವರ ಕೈಯಲ್ಲಿ ಮೊಬೈಲ್ ಹೇಗೆ ಬಂತು? ಹರ್ಷನ ತಾಯಿ ಹಾಗೂ ಅಕ್ಕ ಗೃಹಮಂತ್ರಿ ಅವರನ್ನು ಭೇಟಿಯಾಗಿ ನ್ಯಾಯ ಕೇಳಿದರೆ ಸರಿಯಾಗಿ ನಡೆದುಕೊಂಡಿಲ್ಲ. ಇದನ್ನು ಶ್ರೀರಾಮಸೇನೆ ಬಲವಾಗಿ ಖಂಡಿಸುತ್ತದೆ ಎಂದರು.
undefined
ಕಾಳಿಕಾ ದೇವಿಗೆ ಅವಮಾನ: ಮುತಾಲಿಕ್ ಆಕ್ರೋಶ
ಅಕ್ರಮ ಕಸಾಯಿಖಾನೆಗಳನ್ನು ಕಿತ್ತೊಗೆಯಲು ಬುಲ್ಡೋಜರ್ ಹಚ್ಚಬೇಕು. ಗೋವುಗಳ ರಕ್ಷಣೆಗೆ ಒತ್ತು ನೀಡಬೇಕು. ಈ ಕಾರ್ಯ ಬಿಜೆಪಿ ಸರ್ಕಾರದಿಂದ ಆಗುತ್ತಿಲ್ಲ. 25 ಮಠಾಧೀಶರು ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ. ಉತ್ತರಪ್ರದೇಶ ಮಾದರಿಯಲ್ಲಿ ಸ್ವಾಮೀಜಿಯೊಬ್ಬರು ರಾಜ್ಯದಲ್ಲಿ ಮುಖ್ಯಮಂತ್ರಿ ಆಗಬೇಕು. ಆಗಲೇ ಎಲ್ಲ ಸಮಸ್ಯೆ ಬಗೆಹರಿಯಲಿದೆ ಎಂದರು.
ಹಿಂದೂಗಳ ಹತ್ಯೆ ನಡೆದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕತ್ತೆ ಕಾಯುತ್ತಿವೆಯಾ? ಜೈಲಲ್ಲಿ ಬಿರಿಯಾನಿ ಕೊಡ್ತಾ ಇದ್ದಾರೆ. ಹಿಂದೂಗಳ ಹಿತಕ್ಕಾಗಿ ಮೊದಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಹಿಂದುತ್ವದ ಮೇಲೆ ಅಧಿಕಾರಕ್ಕೆ ಬಂದಿರುವ ಬಿಜೆಪಿ ಸರ್ಕಾರ ಹಿಂದೂಗಳನ್ನು ಕಡೆಗಣಿಸಿದೆ. ದಶಕಗಳಿಂದ ಹೋರಾಟ ಮಾಡುತ್ತಾ ಬರುತ್ತಿರುವ ನಮ್ಮಂಥವರಿಗೆ ಅಧಿಕಾರ ಕೊಡಲಿ ನೋಡೋಣ. ರಾಜ್ಯಸಭೆಗೆ ಆದರೂ ಕಳುಹಿಸಲಿ. ಆ ಕೆಲಸವನ್ನು ಬಿಜೆಪಿ ಸರ್ಕಾರ ಮೊದಲು ಮಾಡಲಿ. ಹಿಂದೂಗಳ ಹಿತ ರಕ್ಷಣೆಯಲ್ಲಿ ಎಡವಿದರೆ ಬೀದಿಗೆ ಇಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ನವಬೃಂದಾವನ ಕುರಿತು ಪದೇ ಪದೇ ವಿವಾದ ಆಗುವುದು ಸರಿಯಲ್ಲ. ಬೀದರ್‌ನ ಮಳಖೇಡದಲ್ಲಿ ಜಯತೀರ್ಥರ ಮೂಲ ಬೃಂದಾವನ ಇದೆ. ಆದರೂ ಈಗ ಗಂಗಾವತಿಯಲ್ಲಿದೆ ಎಂದು ವಿವಾದ ಎಬ್ಬಿಸಲಾಗುತ್ತಿದೆ. ಮಂತ್ರಾಲಯಶ್ರೀ, ಉತ್ತರಾದಿಮಠದ ಯತಿಗಳು ಸಂಘರ್ಷಕ್ಕೆ ಎಡೆಮಾಡಿಕೊಡದೆ ಸೌಹಾರ್ದಯುತವಾಗಿ ಈ ಸಮಸ್ಯೆ ಬಗೆಹರಿಸಬೇಕು. ನವಬೃಂದಾನದಲ್ಲಿನ ವಿವಾದ ಆಸ್ತಿಗಾಗಿ ನಡೆಯುತ್ತಿಲ್ಲ. ಪೂಜೆಗಾಗಿ ನಡೆಯುತ್ತಿದೆ. ಇದು ಹಿಂದೂಗಳ ಮನೆ ವಿಷಯ, ಸೌಹಾರ್ದತೆಯಿಂದ ಬಗೆಹರಿದರೆ ಉತ್ತಮ. ಇಬ್ಬರು ಯತಿಗಳು ಒಪ್ಪಿದರೆ ಸಂಧಾನಕಾರನ ಪಾತ್ರ ಕೂಡ ವಹಿಸುವೆ ಎಂದರು. ಉತ್ತರಾದಿಮಠದ ಗೋಪಾಲ ಆಲೂರು, ಶ್ರೀರಾಮಸೇನೆಯ ಸಂಜೀವ ಮರಡಿ, ಜಗದೀಶ ಕಾಮಟಗಿ, ರವಿ ಬಡಿಗೇರ್, ಸೂರಿ ಬಂಗಾರು, ಅನೂಪ್ ಇದ್ದರು.